ಹಾರಾಡುವ ಮೀನು ಮತ್ತು ಶಾರ್ಕ್ ಗಳು ! (ಭಾಗ ೨)

ಹಾರಾಡುವ ಮೀನು ಮತ್ತು ಶಾರ್ಕ್ ಗಳು ! (ಭಾಗ ೨)

ಸ್ಯಾಂಡ್ ಟೈಗರ್ ಶಾರ್ಕ್: ಈ ಸ್ಯಾಂಡ್ ಶಾರ್ಕ್ ಮೀನುಗಳನ್ನು “ಸ್ಯಾಂಡ್ ಟೈಗರ್ ಶಾರ್ಕ್" ಎಂದೂ ಕರೆಯುತ್ತಾರೆ. ಇವು ನೋಡಲು ಅತ್ಯಂತ ಭಯಾನಕ ಮೀನುಗಳಾಗಿವೆ. ಇವು ಅತ್ಯಂತ ದೊಡ್ದ ಮೀನುಗಳಾಗಿದ್ದು, ಬಾಯಿ ತುಂಬಾ ಚೂಪಾದ ಹಲ್ಲುಗಳನ್ನೇ ತುಂಬಿಕೊಂಡಿದ್ದು, ಎಲ್ಲ ಕಡೆಗೆ ಹರಡಿಕೊಂಡಿವೆ. ಇವು ಬಾಯಿ ಮುಚ್ಚಿಕೊಂಡಾಗಲೂ ಇದರ ಹಲ್ಲುಗಳು ಹೊರಕ್ಕೆ ಚಾಚಿ ಕೊಂಡಿರುವುದೇ ಇದರ ಒಂದು ವಿಶೇಷ ! ಈ ದಾಳಿಕೋರನಲ್ಲದ ಸ್ಥಿತಪ್ರಜ್ಞ ಶಾರ್ಕ್ ಹಿಂಸಿಸುವ ಮನುಷ್ಯನನ್ನು ಕಂಡಾಗ ಮಾತ್ರ ದಾಳಿ ಮಾಡುತ್ತವೆ.

ಈ ಮೀನುಗಳಿಗೂ ಬೆನ್ನಿನ ಮೇಲೆ ಕಂದು ಮತ್ತು ಬೂದು ಬಣ್ಣದ ಕಲೆಗಳಿದ್ದು, ತಳಭಾಗ ಬಿಳಿಯಾಗಿದೆ. ಶಂಕುವಿನಾಕಾರದ ಮೂತಿಯಿದ್ದು, ಉದ್ದನೆಯ ಬಾಲವನ್ನು ಹೊಂದಿದೆ. ಈ ಮೀನುಗಳು ಸುಮಾರು ೬ ರಿಂದ ೧೦ ಅಡಿ ಉದ್ದವಾಗಿರುತ್ತವೆ. ಈ ಮೀನುಗಳಿಗೆ ‘ಸ್ಯಾಂಡ್ ಟೈಗರ್' ಎಂದು ಹೆಸರು ಬರಲು ಕಾರಣ ಅವುಗಳ ‘ಆಕ್ರಮಣಶೀಲತೆ'. ಸಮುದ್ರದ ದಡದ ಜೀವಿಗಳಿಗೆ ಈ ಶಾರ್ಕ್ ಗಳು ಸಿಂಹಸ್ವಪ್ನ ! ಇವು ಸಮುದ್ರದ ದಡದ ತಳದಲ್ಲಿ ವಾಸಿಸುವ ಜೀವಿಗಳನ್ನು ಹುಲಿಗಳಂತೆ ಬೇಟೆಯಾಡಿಬಿಡುತ್ತವೆ. ಈ ಶಾರ್ಕ್ ಗಳ ವಿಶೇಷವೆಂದರೆ ಇವು ಆಗಾಗ್ಗೆ ಗಾಳಿಗಾಗಿ ಮೇಲೆ ಬಂದು ಗಾಳಿಯನ್ನು ತಮ್ಮ ಹೊಟ್ಟೆಯಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತವೆ. ಇದರಿಂದಾಗಿ ಇವು ನೀರಿನಲ್ಲಿ ಚಲನೆಯಿಲ್ಲದೆ ತೇಲಬಲ್ಲವು. ಅಲ್ಲದೆ ಶ್ರಮವಿಲ್ಲದೆ ಬೇಟೆಯಾಡಿ ಬಿಡಬಲ್ಲವು. ಇತ್ತೀಚೆಗೆ ಇವುಗಳ ಸಂತತಿ ವಿನಾಶದ ಅಂಚಿನಲ್ಲಿದೆ.

ಗೂಳಿ ಶಾರ್ಕ್ ಗಳು: ಈ ಗೂಳಿ ಶಾರ್ಕ್ ಗಳು ಪ್ರಪಂಚದಲ್ಲೇ ಅತ್ಯಂತ ಭಯಾನಕ ಶಾರ್ಕ್ ಮೀನುಗಳು ! ಇವು ಉಷ್ಣವಲಯದ ಸಮುದ್ರದ ತೀರದಲ್ಲಿ ವಾಸಿಸುತ್ತದೆ. ಸಾಮಾನ್ಯವಾಗಿ ನದಿಗಳು ಸಮುದ್ರವನ್ನು ಸೇರುವ ಪ್ರದೇಶಗಳಲ್ಲಿ ಮತ್ತು ಹೆಚ್ಚು ಜಲಚರಗಳು ವಾಸಿಸುವ ಪ್ರದೇಶದಲ್ಲಿ ವಾಸಿಸುತ್ತವೆ. ಸಾಮಾನ್ಯವಾಗಿ ಇವು ತಮ್ಮ ಸ್ನೇಹಿತರುಗಳಾದ ಶಾರ್ಕ್ ತಿಮಿಂಗಿಲ, ಟೈಗರ್ ಶಾರ್ಕ್ ಗಳೊಂದಿಗೆ ಜೊತೆಗೂಡಿ ಮನುಷ್ಯರ ಮೇಲೆ ದಾಳಿ ಮಾಡುವುದೂ ಉಂಟು. ಮೇಲಿನ ಮೂರು ಶಾರ್ಕ್ ಗಳಿಗೆ ಹೋಲಿಸಿದರೆ ಈ ಶಾರ್ಕ್ ಗಳ ಗಾತ್ರ ಚಿಕ್ಕದು. ಇವುಗಳ ಎರಡೂ ಪಕ್ಕೆಗಳಲ್ಲಿರುವ ಈಜು ರೆಕ್ಕೆಗಳು ಕೊಂಬಿನಂತೆ ಹಾಗೂ ಇವುಗಳ ಆಕ್ರಮಣಶೀಲತೆಯಿಂದಾಗಿ ಇವುಗಳನ್ನು ‘ಗೂಳಿ ಶಾರ್ಕ್' ಗಳು ಎಂದು ಕರೆಯುತ್ತಾರೆ.

ಈ ಮೇಲಿನ ಎಲ್ಲಾ ಶಾರ್ಕ್ ಗಳನ್ನು ಮಾಂಸಕ್ಕಾಗಿ, ಚರ್ಮಕ್ಕಾಗಿ ಹಾಗೂ ಕೊಬ್ಬು ಮತ್ತು ಎಣ್ಣೆಗಾಗಿ ಮಾನವ ಅವ್ಯಾಹತವಾಗಿ ಇವುಗಳ ಮೇಲೆ ದಾಳಿ ನಡೆಸುತ್ತಿದ್ದಾನೆ. ಈ ಕಾರಣದಿಂದ ಇವುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ.

-ಕೆ. ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ