ಹಾರುವ ಅಂಬ್ಯುಲೆನ್ಸ್! (ಇ-ಲೋಕ-32) (24/7/2007)
ನಗರದ ಜನಸಂದಣಿಯ ಪ್ರದೇಶದಲ್ಲಿ ಬಾಂಬು ಸ್ಫೋಟದಂತಹ ಅನಾಹುತ ಸಂಭವಿಸಿದೆ.ಕೆಲವರು ಗಾಯಗೊಂಡಿದ್ದಾರೆ. ಅವರನ್ನು ಸಾಗಿಸಲು ಸಾಮಾನ್ಯ ಅಂಬ್ಯುಲೆನ್ಸ್ ಕಳುಹಿಸುವ ಪರಿಸ್ಥಿತಿ ಇಲ್ಲ. ಹಾಗಾದರೆ ಎನು ಮಾಡಬಹುದು? ಹಾರುವ ಅಂಬ್ಯುಲೆನ್ಸ್ ಕಳುಹಿಸಿದರೆ ಹೇಗೆ? ಅದಾದರೆ ಅನಾಹುತ ಸಂಭವಿಸಿದ ಪ್ರದೇಶದಲ್ಲಿ ಆಗಸದಲ್ಲಿ ಹಾರಿ ಬಂದು ಇಳಿಯಬಹುದು.ಹೆಲಿಕಾಪ್ಟರನ್ನೇ ಕಳುಹಿಸಬಹುದು. ಹೆಲಿಕಾಪ್ಟರಿನ ತಿರುಗುವ ಬ್ಲೇಡುಗಳು ಜನವಸತಿ ಪ್ರದೇಶಗಳಲ್ಲಿ ಇಳಿಯಲು ತೊಂದರೆ ಕೊಡುವ ಪರಿಸ್ಥಿತಿ ಇದ್ದರೆ, ಅಗ ಹಾರುವ ಅಂಬ್ಯುಲೆನ್ಸ್ ಸೂಕ್ತ. ಇಂತಹ ವಾಹನ ಸದ್ಯ ಲಭ್ಯವಿಲ್ಲ. ರಫಿ ಎನ್ನುವ ವೈಮಾನಿಕ ತಂತ್ರಜ್ಞ ಈ ಆಲೋಚನೆಯುಳ್ಳ ವ್ಯಕ್ತಿ. ಆತ ಬೋಯಿಂಗ್ ಕಂಪೆನಿಯಲ್ಲಿ ದಶಕಗಳ ಕಾಲ ದುಡಿದ ಅನುಭವ ಹೊಂದಿದ್ದಾನೆ.ಕೊಳವೆಯಲ್ಲಿ ಗಾಳಿಯ ಸಾಗಾಟ ಮಾಡಿ, ಹೆಲಿಕಾಪ್ಟರಿನಲ್ಲಿ ಉಂಟಾಗುವ ಬ್ಲೇಡುಗಳ ಚಲನೆಯನ್ನು ಪಡೆಯುವ ವಿನ್ಯಾಸವನ್ನು ಆತ ಮಾಡಿದ್ದಾನೆ. ಇದರಲ್ಲೂ ಹೆಲಿಕಾಪ್ಟರಿನ ತತ್ತ್ವ ಕೆಲಸ ಮಾಡುತ್ತದಾದರೂ, ಬ್ಲೇಡುಗಳು ಹೊರಗೆ ಕಾಣಿಸವು ಮತ್ತವುಗಳ ಗಾತ್ರವೂ ಸಣ್ಣದು. ಈ ವಾಹನವನ್ನು ಪೈಲಟ್ ರಹಿತವಾಗಿ ಮಾಡಿ, ಜಿ.ಪಿ.ಎಸ್. ಎನ್ನುವ ಸ್ಥಾನ ವ್ಯವಸ್ಥೆಯನ್ನಾಧರಿಸಿ ಸ್ವಯಂಚಾಲಿತಗೊಳಿಸುವ ಯೋಚನೆ ಆತನದು. ಹೀಗೆ ಮಾಡಿದರೆ, ಈ ಅಂಬ್ಯುಲೆನ್ಸ್ ಗ್ರೆನೇಡ್ ಎಸೆತ ಮುಂತಾದ ಆಕ್ರಮಣಕ್ಕೀಡಾದ ಸೈನಿಕರ ರಕ್ಷಣೆಗೂ ಕಳಿಸಬಹುದಲ್ಲ ಎನ್ನುವುದವನ ದೂರಾಲೋಚನೆ. ಅಂಬ್ಯುಲೆನ್ಸ್ನಲ್ಲಿ ಎರಡು ಜನ ಗಾಯಾಳುಗಳನ್ನಿಡಲು ಜಾಗವಿರುವಂತೆ ವಿನ್ಯಾಸ ಮಾಡಲಾಗಿದೆ. ಅವರಿಗೆ ಸಮಾಧಾನ ಹೇಳಲು ಮುದ್ರಿತ ಧ್ವನಿ ವ್ಯವಸ್ಥೆಯನ್ನೂ ವಾಹನ ಹೊಂದಿರುತ್ತದೆ. ಗಂಟೆಗೆ ನೂರು ಮೈಲು ವೇಗ ಇದಕ್ಕಿರಬೇಕು ಹಾಗಿದೆ ಇದರ ವಿನ್ಯಾಸ.ದುರ್ಗಮ ಪ್ರದೇಶಗಳಲ್ಲೂ ಇದರ ಬಳಕೆ ಸಾಧ್ಯವಾಗುವಂತೆ ಮಾಡುವುದಿವನ ಮಹತ್ತ್ವಾಕಾಂಕ್ಷೆ.ಈಗ ಮಾದರಿಯ ರಚನೆ ಮಾಡಿ, ಇನ್ನೆರಡು ವರ್ಷಗಳಲ್ಲಿ ಮೊದಲ ವಾಹನ ಮಾರುಕಟ್ಟೆಗೆ ಬಿಡುವುದವನ ಆಲೋಚನೆ.
ಸೈಬರ್ ಜಗತ್ತಿನ ಹೊಸ ಕೆಲಸ-ಬಾಡಿಗೆ ಲೇಖಕ!
ಗಣ್ಯ ವ್ಯಕ್ತಿಗಳು ಅಂತರ್ಜಾಲದ ತಾಣಗಳನ್ನು ಮಾಡಿಕೊಂಡಿರುತ್ತಾರೆ. ಅವರಿಗೆ ದಿನಾಲೂ ನೂರಾರು ಮಿಂಚೋಲೆಗಳು (ಇ-ಮೇಲ್) ಬರುತ್ತವೆ.ಅವುಗಳಿಗೆ ವೈಯುಕ್ತಿಕವಾಗಿ ಪ್ರತಿಕ್ರಿಯಿಸಲು ಪುರುಸೊತ್ತು ಸಿಗುವುದಿಲ್ಲ. ಜತೆಗೆ ತಮ್ಮ ಅಭಿಪ್ರಾಯ,ಯೋಜನೆಗಳನ್ನು ತಮ್ಮ ಅಭಿಮಾನಿಗಳಿಗೆ ತಿಳಿಯಪಡಿಸಲು ಬ್ಲಾಗು ಬರೆಯುತ್ತಿರಬೇಕು. ಅಂತರ್ಜಾಲ ತಾಣವು ಸದಾ ತಾಜಾ ಆಗಿರಬೇಕು-ಅದು ವ್ಯಕ್ತಿಯ ಚಲನವಲನಗಳ ಸರಿಯಾದ ಚಿತ್ರ ನೀಡಬೇಕು. ಇದೆಲ್ಲವನ್ನೂ ಹೊರಗುತ್ತಿಗೆ ನೀಡುವ ಚಾಳಿಯೂ ಈಗ ಆರಂಭವಾಗಿದೆ.ಇಂತಹ ಡಿಜಿಟಲ್ ಬಯೋಗ್ರಾಫರ್ಗಳಿಗೆ ನಿಗದಿತ ಶುಲ್ಕ ನೀಡಿ, ಸೂಚನೆಗಳನ್ನು ನೀಡಿದರೆ ಮುಗಿಇಯಿತು. ಉಳಿದ ತಲೆನೋವನ್ನೆಲ್ಲಾ ಅವರೇ ನಿಭಾಯಿಸುತ್ತಾರೆ.ಭಾಷೆಯ ಮೇಲೆ ಪ್ರಭುತ್ವ,ಸೂಚನೆಗಳನ್ನು ಕಾರ್ಯರೂಪಕ್ಕಿಳಿಸುವ ಸಾಮರ್ಥ್ಯದ ಜತೆಗೆ, ಅಂತರ್ಜಾಲ ಪುಟಗಳನ್ನು ನಿರ್ವಹಿಸುವ ತಾಕತ್ತನ್ನೂ ಇಂತಹ ಕೆಲಸ ಮಾಡುವ ವ್ಯಕ್ತಿಗಳು ಹೊಂದಿರುವುದು ಅಗತ್ಯ.
ಕುರ್ರಿಕಿ ಎಂಬ ಅಂತರ್ಜಾಲ ಕಲಿಕಾಕೇಂದ್ರ
ಮಕ್ಕಳ ಕಲಿಕೆಗೆ ಅಗತ್ಯ ಸಂಪನ್ಮೂಲಗಳನ್ನು ಅಂತರ್ಜಾಲ ತಾಣದ ಮೂಲಕ ಒದಗಿಸುವುದು ಹೊಸ ವಿಷಯವೇನಲ್ಲ. ಎಲ್ಲರಿಗೂ ಮುಕ್ತವಾಗಿ ತಮಗೆ ತಿಳಿದುದನ್ನು ಇತರರಿಗೆ ನೀಡುವ ಅಥವಾ ತಮಗೆ ಬೇಕೆನಿಸಿದ ಮಾಹಿತಿಯನ್ನು ಮುಕ್ತವಾಗಿ ಪಡೆಯುವ ಅವಕಾಶ ಕಲ್ಪಿಸುವ ತಾಣಗಳು ಕಡಿಮೆ. ಕುರ್ರ್ಇಕಿ(curriki.org) ಇಂತಹ ಅವಕಾಶ ಒದಗಿಸುತ್ತದೆ. ಶಿಕ್ಷಕರು, ಅಥವಾ ಆಸಕ್ತರು ತಮ್ಮ ಪಠ್ಯ ಕ್ರಮಗಳನ್ನು,ಟಿಪ್ಪಣಿಗಳನ್ನು ಈ ತಾಣದಲ್ಲಿ ಇಡಬಹುದು. ಅವರು ನಿಗದಿತ ತಂತ್ರಾಂಶ ಬಳಸಿರಬೇಕು ಎಂದಿಲ್ಲ. ಇಲ್ಲಿ ಅವನ್ನು ಬದಲಾಯಿಸಿ,ಇತರ ತಂತ್ರಾಂಶ ಬಳಸುವವರ ಉಪಯೋಗಕ್ಕೂ ಸಿಗುವಂತೆ ಮಾಡಲಾಗುತ್ತದೆ. ಸದ್ಯ ಅಮೆರಿಕಾದ ಮಕ್ಕಳ ಪಠ್ಯಕ್ರಮದ ಪಾಠಗಳೇ ಇಲ್ಲಿ ಹೆಚ್ಚು ಲಭ್ಯವಿರುವುದು ನಿಜವಾದರೂ,ನಮ್ಮವರ ಪೈಕಿಯೂ ತಾಣ ಜನಪ್ರಿಯವಾಗುತ್ತಿರುವುದು, ಇಲ್ಲಿನ ಮಕ್ಕಳ ಪಠ್ಯವಿಷಯಗಳೂ ಸಿಗುವ ವಿಶ್ವಾಸ ಮೂಡಿಸಿದೆ.
ಅಂಟು ಪಟ್ಟಿ ತಯಾರಿಕೆಗೆ ಹಲ್ಲಿ ಸ್ಪೂರ್ತಿ
ಗಾಯಗಳಿಗೆ ಹಾಕಬಹುದಾದ ಬ್ಯಾಂಡೇಜಿನಿಂದ ಹಿಡಿದು, ಸೋರುವ ಟ್ಯಾಂಕ್ಗಳಿಗೆ ಪಟ್ಟಿ ಹಾಕುವಂತಹ ವಿವಿಧ ಉದ್ದೇಶಗಳಿಗೆ ಬಳಸಬಹುದಾದ ಅಂಟುಪಟ್ಟಿ ತಯಾರಿಕೆಗೆ ಸ್ಪೂರ್ತಿ ಹಲ್ಲಿ ಎಂದರೆ ನಂಬುವುದು ಕಷ್ಟ. ಆದರೆ "ನೇಚರ್" ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿರುವ ಸಂಶೋಧನಾ ಲೇಖನದ ಪ್ರಕಾರ ಅದು ನಿಜ. ಹಲ್ಲಿಗಳು ಚಾವಣಿಯ ಮೇಲೆ ತಲೆ ಕೆಳಗಾಗಿ ಓಡಾಡುವುದನ್ನು ಗಮನಿಸಿದ್ದಿರಿ ತಾನೇ? ಅವುಗಳ ಬಿಗಿ ಹಿಡಿತಕ್ಕೆ ಅವುಗಳ ಪಾದದಡಿಯ ಸೂಕ್ಷ್ಮ ರೋಮಗಳು ಉಂಟು ಮಾಡುವ ನಿರ್ವಾತ ಕಾರಣವಂತೆ. ತಮ್ಮ ದೇಹ ತೂಕಕ್ಕಿಂತ ಹೆಚ್ಚಿನ ಬಲ ಬಿದ್ದರೂ ಅವುಗಳ ಬಿಗಿ ಹಿಡಿತ ಸಡಿಲವಾಗದು.ಸಮುದ್ರದ ಇನ್ನೊಂದು ಮೃದ್ವಂಗಿ ಜಾತಿಯ ಜೀವಿಯೂ ಸಂಶೋಧಕರ ಕುತೂಹಲ ಕೆರಳಿಸಿದೆ. ಇದೂ ಕೂಡಾ ತನ್ನ ಬಿಗಿ ಹಿಡಿತಕ್ಕೆ ಹೆಸರುವಾಸಿ. ಈ ಹಿಡಿತಕ್ಕೆ ಕಾರಣ ಅದರ ಪಾದದಿಂದ ಒಸರುವ ದ್ರವ.ಸಂಶೋಧಕರು ಈ ಎರಡು ಜೀವಿಗಳ ಸ್ಪೂರ್ತಿಯಿಂದ ಕೃತಕ ಅಂಟು ಪಟ್ಟಿ ತಯಾರಿಸಲು ಶಕ್ತರಾಗಿದ್ದಾರಂತೆ. ಇದಕ್ಕೆ ಜೆಕ್ಕೆಲ್ ಎಂದು ನಾಮಕರಣವನ್ನೂ ಮಾಡಿದ್ದಾರೆ.ಇಂತಹ ಪಟ್ಟಿಯನ್ನು ಇಲೆಕ್ಟ್ರ್ಆನಿಕ್ ಚಿಪ್ ತಯಾರಿಸುವ ಫೊಟೊಲಿಥೋಟ್ರೆಪ್ಸಿ ಎನ್ನುವ ವಿಧಾನದಿಂದ ತಯಾರಿಸಬೇಕಾಗುತ್ತದೆ.ಭಾರೀ ಸೂಕ್ಷ್ಮದ ರೋಮದಂತಹ ರಚನೆ ಈ ಪಟ್ಟಿಯಲ್ಲಿ ಮಾಡಲು ಈ ವಿಧಾನ ಅನುಕೂಲ ಮಾಡಿಕೊಡುತ್ತದೆ.
*ಅಶೋಕ್ಕುಮಾರ್ ಎ