ಹಾರುವ ಅತೀ ದೊಡ್ಡ ಹಕ್ಕಿ - ಆಲ್ಬಟ್ರಾಸ್
ನಿಮಗೆ ಅತೀ ದೊಡ್ಡ ಪಕ್ಷಿಯಾದ ಉಷ್ಟ್ರ ಪಕ್ಷಿಯ ಬಗ್ಗೆ ಖಂಡಿತವಾಗಿಯೂ ಗೊತ್ತಿರುತ್ತದೆ. ಅದು ಪ್ರಪಂಚದ ಅತೀ ದೊಡ್ಡ ಪಕ್ಷಿಯಾದರೂ ಅದು ಭೂಮಿಯಿಂದ ಮೇಲಕ್ಕೆ ಹಾರಲಾರದು. ಕಾರಣ ಅದರ ಬೃಹತ್ ಗಾತ್ರ ಮತ್ತು ತೂಕ. ಅದರ ರೆಕ್ಕೆಗಳು ಅದರ ಭಾರವನ್ನು ಎತ್ತಿಕೊಂಡು ಹಾರುವಷ್ಟು ಶಕ್ತವಾಗಿಲ್ಲ. ಹಾಗಾದರೆ ಹಾರಾಡುವ ಅತೀ ದೊಡ್ಡ ಹಕ್ಕಿ ಯಾವುದು? ಅದರ ಹೆಸರು ಆಲ್ಬಟ್ರಾಸ್ (Albatross). ಸಾಮಾನ್ಯ ಭಾಷೆಯಲ್ಲಿ ಇವುಗಳನ್ನು ಕಡಲು ಕೋಳಿಗಳು ಎಂದೂ ಕರೆಯುತ್ತಾರೆ.
೧೫ನೇ ಶತಮಾನದಲ್ಲಿ ಸಾಗರದಲ್ಲಿ ಚಲಿಸುವ ಕೆಲವು ಪೋರ್ಚ್ ಗೀಸ್ ನೌಕೆಯ ನಾವಿಕರು ಈ ಪಕ್ಷಿಯನ್ನು ಕಂಡು ಆಲ್ಕಟ್ರಾಸ್ (ಬಿಳಿ ಹಕ್ಕಿ) ಎಂದು ಹೆಸರಿಸಿದ್ದರು. ನಂತರ ಇಂಗ್ಲಿಷ್ ನಾವಿಕರ ಬಾಯಿಯಲ್ಲಿ ಅದು ಆಲ್ಬಟ್ರಾಸ್ ಆಗಿಹೋಯಿತು. ಸಮುದ್ರದ ಮೇಲೆ ಹಾರಾಡಿಕೊಂಡು ತನ್ನ ಬೇಟೆಯನ್ನು ಹಿಡಿದು ಬದುಕುವ ಈ ಹಕ್ಕಿಯ ಮೈಬಣ್ಣ ಬಹುತೇಕ ಬಿಳಿ. ಇದರ ಜೊತೆಗೆ ಸ್ವಲ್ಪ ಕಂದು ಹಾಗೂ ಬೂದು ಬಣ್ಣವೂ ಇರುತ್ತದೆ. ಪ್ರಾಚೀನ ನಾವಿಕರು ಇದನ್ನು ಶುಭ ಶಕುನದ ಹಕ್ಕಿ ಎಂದು ನಂಬುತ್ತಿದ್ದರು. ಅವರು ಇದನ್ನು ಕೊಲ್ಲುತ್ತಿರಲಿಲ್ಲ. ಇದರ ಬಗ್ಗೆ ಅವರಲ್ಲಿ ಪೂಜನೀಯ ಭಾವನೆಗಳಿದ್ದವು. ಈ ಹಕ್ಕಿಗಳು ಅಂಟಾರ್ಟಿಕ್ ವಲಯದಲ್ಲಿ ಹಾಗೂ ಉತ್ತರ ಫೆಸಿಫಿಕ್ ಸಾಗರದ ಬೇರಿಂಗ್ ಸಮುದ್ರದಲ್ಲಿ ಕಂಡು ಬರುತ್ತವೆ.
ಸಾಗರದಲ್ಲಿ ಬೀಸುವ ಎಂಥಹದ್ದೇ ಬಲವಾದ ಬಿರುಗಾಳಿಯಾಗಿರಲಿ, ಚಂಡಮಾರುತವಾಗಿರಲಿ ಅದನ್ನು ಭೇಧಿಸಿ ಮುನ್ನುಗ್ಗುವ ಛಾತಿ ಈ ಹಕ್ಕಿಗೆ ಇದೆ. ತನ್ನ ನೀಳವಾದ ರೆಕ್ಕೆಗಳನ್ನು ಬಳಸಿಕೊಂಡು ಯಾವುದೇ ಪ್ರಕ್ಷುಬ್ಧ ಹವಾಮಾನವನ್ನು ಎದುರಿಸುವ ಚಾಣಾಕ್ಷ ಹಕ್ಕಿ ಇದು. ಇದು ಎಷ್ಟು ಚಾಣಾಕ್ಷ ಹಕ್ಕಿಯೆಂದರೆ ಇದನ್ನು ಎಷ್ಟು ದೂರ ತೆಗೆದುಕೊಂಡು ಹೋಗಿ ಬಿಟ್ಟರೂ ತನ್ನ ಮೂಲ ಸ್ಥಾನಕ್ಕೆ ಹಿಂದಿರುಗುತ್ತದೆ. ಆಕಾಶದಲ್ಲಿ ನಿರಂತರ ಸಾವಿರಾರು ಮೈಲಿ ಹಾರಾಡುವ ಕ್ಷಮತೆಯನ್ನು ಈ ಹಕ್ಕಿ ಹೊಂದಿದೆ. ಹಾರಾಡುವ ಸಮಯದಲ್ಲಿ ವಿಮಾನಗಳಿಗೆ ಢಿಕ್ಕಿಯಾಗಿ ಹಾನಿ ಮಾಡಿದ್ದೂ ಇದೆ. ಗುಂಪಾಗಿ ಹಾರಾಡುವಾಗ ಬಹಳ ಸೊಗಸಾಗಿ ಕಾಣುತ್ತವೆ.
ಆಲ್ಬಟ್ರಾಸ್ ಪಕ್ಷಿಗಳಲ್ಲಿ ಸುಮಾರು ೧೩ ಪ್ರಭೇಧಗಳು ಕಾಣಲು ಸಿಗುತ್ತವೆ. ಅವುಗಳಲ್ಲಿ ಅತೀ ದೊಡ್ಡ ಹಕ್ಕಿಯ ಪ್ರಭೇಧವೆಂದರೆ ವಾಂಡರಿಂಗ್ ಆಲ್ಬಟ್ರಾಸ್ (Wandering Albatross). ಈ ಹಕ್ಕಿಯ ರೆಕ್ಕೆಯ ಹರವು (ಪೂರ್ತಿ ಬಿಡಿಸಿಕೊಂಡಾಗ) ಸುಮಾರು ೧೨ ಅಡಿ. ಈ ಪಕ್ಷಿಯ ರೆಕ್ಕೆ ನೀಳವಾಗಿದ್ದರೂ ಅವುಗಳ ಅಗಲ ಕಿರಿದು, ಬಾಲ ಸಣ್ಣದು. ಇದರ ತಲೆ ದೊಡ್ಡದಾಗಿರುತ್ತದೆ. ಕೊಕ್ಕುಗಳು ಕೊಕ್ಕೆಯಂತೆ ಬಾಗಿವೆ. ಕೊಕ್ಕೆಯ ಎರಡೂ ಬದಿಗಳಲ್ಲಿ ಹೊಳ್ಳೆಗಳಿವೆ. ಆಲ್ಬಟ್ರಾಸ್ ಹಕ್ಕಿಯು ಪೂರ್ತಿ ಬೆಳೆದಾಗ ೧೧ ರಿಂದ ೧೨ ಕೆ.ಜಿ. ತೂಗುತ್ತದೆ. ಇವುಗಳು ತಮ್ಮ ನೀಳವಾದ ರೆಕ್ಕೆಯನ್ನು ಬಿಡಿಸಿ ಹಲವಾರು ತಾಸುಗಳ ಕಾಲ ಸಮುದ್ರದ ಮೇಲೆ ಹಾರಾಡುವ ಸಾಮರ್ಥ್ಯವನ್ನು ಹೊಂದಿವೆ. ಹೀಗೆ ಇವುಗಳು ಆಕಾಶದಲ್ಲಿ ತೇಲುವ ವಿಧಾನವನ್ನು ಅನುಸರಿಸಿ ತೇಲುವ ವಿಮಾನವನ್ನು (Sail Plains) ನಿರ್ಮಿಸಿದ್ದಾರೆ.
ಸೆಪ್ಟೆಂಬರ್ ನಿಂದ ಫೆಬ್ರವರಿ ತಿಂಗಳ ತನಕ ಇವುಗಳ ಪ್ರಣಯದ (ಸಂತಾನೋತ್ಪತ್ತಿ) ಸಮಯ. ಗಂಡು ಪಕ್ಷಿ ಹೆಣ್ಣು ಪಕ್ಷಿಯನ್ನು ಆಕರ್ಷಿಸಿಕೊಳ್ಳಲು ವಿವಿಧ ಭಂಗಿಯಲ್ಲಿ ನೃತ್ಯ ಮಾಡುತ್ತದೆ. ಈ ನೃತ್ಯಗಳನ್ನು ನೋಡಲು ಬಹಳ ಆಕರ್ಷಕವಾಗಿರುತ್ತದೆ. ಈ ರೀತಿ ಹೆಣ್ಣನ್ನು ಆಕರ್ಷಿಸಿದ ಬಳಿಕ ಮೇ ಮತ್ತು ಜೂನ್ ತಿಂಗಳಲ್ಲಿ ಹೆಣ್ಣು ಅಲ್ಬಟ್ರಾಸ್ ಹಕ್ಕಿಯು ಮೊಟ್ಟೆಯಿಡುತ್ತದೆ. ಇವುಗಳು ಮೊಟ್ಟೆ ಇಟ್ಟು ಮರಿ ಮಾಡಲು ಮಾತ್ರ ಭೂಮಿಗೆ ಬರುತ್ತವೆ. ಇದರ ಮೊಟ್ಟೆಯು ಕೋಳಿ ಮೊಟ್ಟೆಗಿಂತ ಆರು ಪಟ್ಟು ದೊಡ್ಡದಾಗಿರುತ್ತದೆ. ಇವುಗಳ ವಿಶೇಷತೆಯೆಂದರೆ ಗಂಡು ಹಾಗೂ ಹೆಣ್ಣು ಎರಡೂ ಹಕ್ಕಿಗಳು ಮೊಟ್ಟೆಗಳಿಗೆ ಕಾವು ಕೊಡುತ್ತವೆ. ಈ ಕಾವು ನೀಡುವ ಅವಧಿ ಸುಮಾರು ೭೭ ರಿಂದ ೮೦ ದಿನಗಳು. ಮೊಟ್ಟೆಯೊಡೆದು ಹೊರಬಂದ ಮರಿಗಳು ತನ್ನ ತಂದೆ ತಾಯಿಯರನ್ನು ಅನುಸರಿಸುತ್ತವೆ. ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಓಡಾಡುವ ಇವುಗಳು ಕ್ರಮೇಣ ರೆಕ್ಕೆ ಬಲಿತಂತೆ ಸಮುದ್ರದ ಮೇಲೆ ಸರಾಗವಾಗಿ ಹಾರಾಡಲು ಪ್ರಾರಂಭಿಸುತ್ತದೆ. ಒಮ್ಮೆ ಮರಿಗಳು ಸ್ವತಂತ್ರವಾಗಿ ಹಾರಾಡಲು ಪ್ರಾರಂಭಿಸಿದ ಬಳಿಕ ಹೆತ್ತ ಹಕ್ಕಿಗಳು ಅವುಗಳನ್ನು ಅದರ ಪಾಡಿಗೆ ಬಿಟ್ಟು ತಮ್ಮ ದಾರಿಯನ್ನು ಹಿಡಿಯುತ್ತವೆ. ಬಹುಪಾಲು ಜೀವನವನ್ನು ಕಡಲಿನ ಮೇಲೆ ಹಾರಾಡಿ, ಈಜಾಡಿ ಕಳೆಯುವ ಹಕ್ಕಿಗಳು ಸಂತಾನೋತ್ಪತ್ತಿಯ ಸಮಯದಲ್ಲಿ ಮೊಟ್ಟೆ ಇಟ್ಟು ಕಾವು ಮಾಡಲು ಮಾತ್ರ ಭೂಮಿಗೆ ಬರುತ್ತವೆ.
ಸಮುದ್ರದಲ್ಲಿರುವ ಮೀನುಗಳನ್ನು ಹಾರಾಡುವಾಗಲೇ ಆಲ್ಬಟ್ರಾಸ್ ಗಳು ಬೇಟೆಯಾಡುವ ಕ್ಷಮತೆಯನ್ನು ಹೊಂದಿವೆ. ಮೀನುಗಳೇ ಇವುಗಳ ಪ್ರಮುಖ ಆಹಾರವಾದರೂ ಕೆಲವು ಬಾರಿ ಪುಟ್ಟ ಪುಟ್ಟ ಜಲಚರಗಳನ್ನೂ ತಿನ್ನುತ್ತವೆ. ಇತ್ತೀಚೆಗೆ ಮಾನವನ ನಿರಂತರ ಆಕ್ರಮಣದಿಂದಾಗಿ ಆಲ್ಬಟ್ರಾಸ್ ಹಕ್ಕಿಗಳ ಸಂತತಿ ಕ್ಷೀಣಿಸತೊಡಗಿದೆ. ಮಾನವ ತನ್ನ ನಾಲಗೆಯ ಚಪಲಕ್ಕಾಗಿ ಅಪರೂಪದ ಹಕ್ಕಿಯೊಂದನ್ನು ನಾಶಪಡಿಸಲು ಹೊರಟಿರುವುದು ದುರಂತವೇ ಸರಿ. ಹೀಗೇ ಈ ಹಕ್ಕಿಯ ಬೇಟೆ ನಿರಂತರವಾಗಿ ನಡೆದರೆ ಭೂಮಿಯಿಂದ ನಶಿಸಿ ಹೋದ ಹಲವಾರು ಜೀವಿಗಳ ಸಾಲಿಗೆ ಈ ಹಕ್ಕಿಯೂ ಸೇರಬಹುದು. ಆದರೆ ಪರಿಸರವಾದಿಗಳು ಹಾಗೂ ಪ್ರಾಣಿ ಪ್ರಿಯರು ಆಲ್ಬಟ್ರಾಸ್ ಹಕ್ಕಿಯನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯತತ್ಪರರಾಗಿದ್ದಾರೆ.
ಚಿತ್ರ ಕೃಪೆ: ಅಂತರ್ಜಾಲ ತಾಣ