ಹಾರೋಗೇರಿ ಬಾಂದಾರ - ಗ್ರಾಮೀಣ ಸಮುದಾಯದಿಂದ ಜಲಸಂರಕ್ಷಣೆಯ ಮಾದರಿ

ಹಾರೋಗೇರಿ ಬಾಂದಾರ - ಗ್ರಾಮೀಣ ಸಮುದಾಯದಿಂದ ಜಲಸಂರಕ್ಷಣೆಯ ಮಾದರಿ

ಹಾರೋಗೇರಿ ಬಾಂದಾರದ ಮೇಲೆ ನಿಂತಿದ್ದೆವು. ಅಂದು (೧೮ ಜೂನ್ ೨೦೦೯) ಹುಬ್ಬಳ್ಳಿಯಿಂದ ಹೊರಟು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಅರ್ಧ ತಾಸಿನಲ್ಲಿ ವರೂರು ಮುಟ್ಟಿದ್ದೆವು. ಅಲ್ಲಿಂದ ಬಲಕ್ಕೆ ತಿರುಗಿ, ೬ ಕಿಮೀ ದೂರದ ಸೂರಶೆಟ್ಟಿಕೊಪ್ಪ ಹಾದು ಹಾರೋಗೇರಿ ತಲಪಿದ್ದೆವು. ಕಳೆದೆರಡು ವಾರಗಳಲ್ಲಿ ಬಿದ್ದ ಮಳೆಯ ನೀರು ಬಾಂದಾರದಲ್ಲಿ ಸಂಗ್ರಹವಾಗಿತ್ತು. ಸುತ್ತಲಿನ ಗುಡ್ಡಗಳಲ್ಲಿ ಹಸುರು ಚಿಗುರು ನಗುತ್ತಿತ್ತು.

ಕರ್ನಾಟಕದಲ್ಲಿ ಇಂತಹ ಹಲವು ಬಾಂದಾರಗಳಿವೆ. ಇದರದ್ದೇನು ವಿಶೇಷ? ಇದು ಹಳ್ಳಿಗರು ೩ ತಿಂಗಳ ಶ್ರಮದಾನದಿಂದ ಕಟ್ಟಿದ ಬಾಂದಾರ. ಸರ್ವೋದಯ ಮಹಾಸಂಘದ ಅಧ್ಯಕ್ಷರಾದ ಬಸವಣ್ಣಿಪ್ಪ ಅಂಗಡಿ ಶ್ರಮದಾನದ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾ ಹೇಳಿದರು,"ಇದನ್ನ ನಾವು ಕಟ್ಟಿದ್ದು ೧೯೯೯ರಲ್ಲಿ. ಇಪ್ಪತ್ತೆರಡು ಹಳ್ಳಿಗಳಿಂದ ಜನ ಬರ್ತಿದ್ರು ನೋಡ್ರೀ, ಬುತ್ತಿ ಕಟ್‍ಕೊಂಡ್ ಬರ್ತಿದ್ರು. ಐನೂರು ಆಜೂಬಾಜು ಜನ ಸೇರ್ತಿದ್ರು. ಇಲ್ಲಿ ಜಾತ್ರೆ ಇದ್ದಂಗಿರ್ತಿತ್ತು. ಎಲ್ರೂ ಒಟ್ಟಾಗಿ ಕೆಲ್ಸ ಮಾಡೋರು, ಒಟ್ಟಾಗಿ ಉಣ್ಣೋರು. ಬಾಂದಾರ ಕಟ್ಟಿ ಮುಗಿಸೋದಕ್ಕೆ  ಮೂರು ತಿಂಗಳು ಬೇಕಾಯ್ತು, ನೋಡ್ರೀ."

ಹಳ್ಳಿಗರು ಒಟ್ಟು ಸೇರಿದರೆ ಜಲಸಂರಕ್ಷಣೆ ಹೇಗೆ ಮಾಡಬಹುದೆಂಬುದಕ್ಕೆ ಹಾರೋಗೇರಿ ಬಾಂದಾರ ಒಂದು ಮಾದರಿ. ಅದರ ಉದ್ದ ೧೪೦ ಅಡಿ, ಎತ್ತರ ೧೨ ಅಡಿ. ಅದರಲ್ಲಿ ೨೦ ಲಕ್ಷ ಲೀಟರ್ ನೀರು ಸಂಗ್ರಹಿಸಲು ಸಾಧ್ಯ. ಮೊದಲು ಒಂದು ಇಂಚು ದಪ್ಪದ ಫೆರ್ರೋ ಸಿಮೆಂಟ್ ತಡೆಗೋಡೆ ನಿರ್ಮಿಸಿ, ಅನಂತರ ಅದರ ಎರಡೂ ಬದಿಗಳಲ್ಲಿ ಕಲ್ಲುಮಣ್ಣು ಹೇರಿ ಬಾಂದಾರ ರಚಿಸಲಾಗಿದೆ. ಅದಕ್ಕೆ ತಗಲಿದ ಒಟ್ಟು ವೆಚ್ಚ ರೂಪಾಯಿ ೬೦,೦೦೦.

ಆ ಬಾಂದಾರದ ನೀರಿನಿಂದ ಸುತ್ತಲಿನ ೧೫ ರೈತರಿಗೆ ಕೃಷಿಗೆ ಪ್ರಯೋಜನವಾಗಿದೆ. ಅಲ್ಲಿನ ಬೋರ್‍ವೆಲ್‍ಗಳ ನೀರಿನ ಉತ್ಪತ್ತಿ ಹೆಚ್ಚಿದೆ. ಸರಾಸರಿ ೯೩೯ ಮಿಮೀ ವಾರ್ಷಿಕ ಮಳೆಯ ಆ ಪ್ರದೇಶದಲ್ಲಿ ಅಂತರ್ಜಲ ವೃದ್ಧಿಯಾಗಿದೆ.

ಈ ಸಾಧನೆಗೆ ಕಾರಣ ಬೈಫ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮತ್ತು ಸರ್ವೋದಯ ಮಹಾಸಂಘ. ಕರ್ನಾಟಕದಲ್ಲಿ ಬೈಫ್ ಸಂಸ್ಥೆ ೨೦ ಜಿಲ್ಲೆಗಳಲ್ಲಿ ಗ್ರಾಮ ವಿಕಾಸ ಕೆಲಸಗಳಲ್ಲಿ ತೊಡಗಿದೆ. ಬೈಫ್ ಸಂಸ್ಥೆಯ ಧಾರವಾಡ ವಿಭಾಗವು ಕಲಘಟಗಿ ಮತ್ತು ಹುಬ್ಬಳ್ಳಿ ತಾಲೂಕುಗಳ ಆಯ್ದ ೨೨ ಹಳ್ಳಿಗಳಲ್ಲಿ ಗ್ರಾಮ ವಿಕಾಸ ಕಾರ್ಯ ಕೈಗೆತ್ತಿಕೊಂಡದ್ದು ೧೯೯೭ರಲ್ಲಿ. ಸೂರಶೆಟ್ಟಿಕೊಪ್ಪವನ್ನು ಕೇಂದ್ರವಾಗಿ ಇರಿಸಿಕೊಂಡು, ಸುತ್ತಲಿನ ೨೨ ಹಳ್ಳಿಗಳಲ್ಲಿ ಕಾರ್ಯಗತಗೊಳಿಸಿದ ಯೋಜನೆಯ ಹೆಸರು "ಸುಸ್ಥಿರ ಅಭಿವೃದ್ಧಿಗಾಗಿ ತಂತ್ರಜ್ಞಾನ ವರ್ಗಾವಣೆ." ಇದರ ಎಲ್ಲ ಹಂತಗಳಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಗೆ ಒತ್ತು.

ಯೋಜನಾ ಪ್ರದೇಶದಲ್ಲಿ ೧೫೪ ಸ್ವಸಹಾಯ ಸಂಘಗಳನ್ನು ರಚಿಸಿ ಪೋಷಿಸಲಾಯಿತು. ಇವುಗಳ ಪ್ರತಿನಿಧಿಗಳು ಸೇರಿ ೨೧ ಗ್ರಾಮ ವಿಕಾಸ ಸಮಿತಿಗಳನ್ನು ರಚಿಸಿಕೊಂಡಿದ್ದಾರೆ. ಈ ಸಮಿತಿಗಳ ಪ್ರತಿನಿಧಿಗಳ ಸಂಘಟನೆಯೇ ಸರ್ವೋದಯ ಮಹಾಸಂಘ. ಇದಕ್ಕೆ ಆರಂಭದಿಂದಲೂ ಹಿರಿಯ ಬಸವಣ್ಣಿಪ್ಪ ಅಂಗಡಿ ಅವರ ಮುಂದಾಳುತನ.

ಬೈಫ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಬೆಂಬಲ ಹಾಗೂ ಮಾರ್ಗದರ್ಶನ ಮತ್ತು ಸರ್ವೋದಯ ಮಹಾಸಂಘದ ಒತ್ತಾಸೆ - ಇವುಗಳ ಫಲವಾಗಿ ಅಲ್ಲಿನ ೨೨ ಹಳ್ಳಿಗಳಲ್ಲಿ ಆಗಿರುವ ಅಭಿವೃದ್ಧಿಯ ಪ್ರಕ್ರಿಯೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ ಕಣ್ಣಾರೆ ಕಾಣಬೇಕು. ಹಳ್ಳಿಗರ ಸಂಘಟನೆಯಾದ ಸರ್ವೋದಯ ಮಹಾಸಂಘವು ಸರಕಾರಿ ಅಧಿಕಾರಿಗಳಿಗೆ, ಬ್ಯಾಂಕ್ ಅಧಿಕಾರಿಗಳಿಗೆ, ಸರಕಾರೇತರ ಸಂಸ್ಥೆಗಳ ಕಾರ್ಯಕರ್ತರಿಗೆ ತರಬೇತಿ ನೀಡಲಿಕ್ಕಾಗಿ ೨೦೦೪ರಿಂದ "ಗ್ರಾಮಚೇತನ" ಎಂಬ ತರಬೇತಿ ಸಂಸ್ಥೆಯನ್ನೇ ನಡೆಸುತ್ತಿದೆ!

ಅಲ್ಲಿಗೆ ಹೋಗಿ ನಾನು ಕಣ್ಣಾರೆ ಕಂಡ ಗ್ರಾಮಾಭಿವೃದ್ಧಿಯ ಹತ್ತುಹಲವು ಕೆಲಸಗಳಲ್ಲೊಂದು ಹಾರೋಗೇರಿಯ ಬಾಂದಾರ. ಇದು ಗ್ರಾಮೀಣ ಸಮುದಾಯ ಶಕ್ತಿಯ ಫಲ. ಹಳ್ಳಿಗಳಲ್ಲಿ ಜಲಜಾಗೃತಿ ಹಾಗೂ ಜಲಸಂರಕ್ಷಣೆಗಾಗಿ ಏನು ಮಾಡಬಹುದೆಂದು ತಿಳಿಯಬೇಕಾದರೆ ಹಾರೋಗೇರಿಗೆ ಹೋಗಿ ಬನ್ನಿ.