ಹಾರೋಬೆಲೆ ಮಹಿಮೆ
ಹಾರೋಬೆಲೆ ಮಹಿಮೆ ಎಂಬ ನಾಟಕ ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮವು ಪುರಾತನ ಕ್ರೈಸ್ತ ಕೇಂದ್ರವಾಗಿದ್ದು ಮಹಿಮೆ ಎಂಬ ನಾಟಕ ಪ್ರದರ್ಶನದಿಂದ ಪ್ರಖ್ಯಾತವಾಗಿದೆ. ೧೯೦೬ರಿಂದಲೂ ನಿರಂತರವಾಗಿ ಪ್ರತಿ ವರ್ಷ ಶುಭಶುಕ್ರವಾರ, ಪವಿತ್ರ ಶನಿವಾರಗಳಂದು ಪ್ರದರ್ಶಿತವಾಗುತ್ತಿರುವ ಈ ನಾಟಕವನ್ನು ಪ್ರಾರಂಭಿಸಿದವರು ಸ್ವಾಮಿ ಲಾಜರ್ ಅವರು. ಇವರು ೧೯೦೦ರಿಂದ ೧೯೨೫ರವರೆಗಿನ ಅವಧಿಯಲ್ಲಿ ಸೋಮನಹಳ್ಳಿ, ಕಾನಕಾನಹಳ್ಳಿ, ಬೆಟ್ಟಹಲಸೂರು, ಮಾರ್ಟಳ್ಳಿ, ಕೌದಳ್ಳಿ, ಪರಸೇಗೌಡನಪಾಳ್ಯ, ಕೊಳ್ಳೆಗಾಲ, ಶಿವಸಮುದ್ರಗಳನ್ನು ಸಂಧಿಸುತ್ತಾ ವರ್ಷದಲ್ಲಿ ಮೂರು ತಿಂಗಳು ಹಾರೋಬೆಲೆಯಲ್ಲಿ ಉಳಿಯುತ್ತಿದ್ದರು. ೧೩-೦೪-೧೯೦೬ ಶುಭಶುಕ್ರವಾರದಂದು ಪ್ರಥಮಭಾರಿಗೆ ಪಂಜಿನ ಬೆಳಕಿನಲ್ಲಿ 'ಯೇಸುಸ್ವಾಮಿಯ ಪಾಡುಗಳ ನಾಟಕ'ವನ್ನು ಪ್ರಯೋಗಿಸಿದರು.
ಹೀಗೆ ಆರು ಮಂದಿ ಪಾತ್ರಧಾರಿಗಳಿಂದ ಆಡಲಾದ ಯೇಸುಕ್ರಿಸ್ತನ ನಾಟಕ ಇಂದು ಹಿರಿಯ ಕಿರಿಯರೆನ್ನದೆ ೬೦ ಪಾತ್ರಧಾರಿಗಳಿಂದ ಎರಡು ಇಡೀ ರಾತ್ರಿ ಆಡಲ್ಪಡುತ್ತದೆ. ಶುಭಶುಕ್ರವಾರ ರಾತ್ರಿ ಪೂಜ್ಯ ಪಾಡುಗಳ ಕುರಿತಂತೆ (ಸಭಾವಂದನೆಯಿಂದ ಪ್ರಾರಂಭವಾಗಿ, ಯೇಸುಸ್ವಾಮಿ ಪವಾಡ ಮೆರೆಯುವ ದೃಶ್ಯದಿಂದ ಮುಂದುವರಿದು, ಯೇಸುವಿನ ಸಮಾಧಿಗೆ ಮುದ್ರೆಹಾಕಿ ಪಹರೆ ನೇಮಿಸುವ ತನಕ ೧ರಿಂದ ೧೭ ದೃಶ್ಯಗಳು), ಪವಿತ್ರಶನಿವಾರದ ರಾತ್ರಿ ಯೇಸು ಪುನರುತ್ಥಾನದ ಕುರಿತಂತೆ(೧೮ರಿಂದ ೨೪ದೃಶ್ಯಗಳು ಕೊನೆಗೆ ಮಂಗಳ) ಹಾಗೂ ಪಾಸ್ಖ ಭಾನುವಾರದ ರಾತ್ರಿ ಯಾವುದಾದರೂ ಧಾರ್ಮಿಕ ಚರಿತ್ರೆಯ ಕುರಿತಂತೆ ನಾಟಕಗಳು ಪ್ರಯೋಗವಾಗುತ್ತವೆ.