ಹಾರ್ಡ್ ಡಿಸ್ಕ್ ವಿಭಜನೆ ಮತ್ತು ಬೂಟ್ ಲೋಡರ್
ಕಂಪ್ಯೂಟರ್ ನಲ್ಲಿ ಮಾಹಿತಿಯನ್ನು ಚೆನ್ನಾಗಿ ಉಪಯೋಗಿಸಿ ಕೊಳ್ಳಲು ಅಥವ ಒಂದಕ್ಕಿಂತ ಹೆಚ್ಚು OS ಉಪಯೋಗಿಸಲು ಹಾರ್ಡ್ ಡಿಸ್ಕ್ ಅನ್ನು ಭಾಗ ಮಾಡಬೇಕಾಗುತ್ತದೆ.ಆಪರೇಟಿಂಗ್ ಸಿಸ್ಟಮ್ ಇನ್ಸ್ಟಾಲ್ ಮಾಡ್ವಾಗ ಹಾರ್ಡ್ ಡಿಸ್ಕ್ ಪಾರ್ಟಿಷನ್ ಮಾಡೋದೇ ಒಂದು ದೊಡ್ಡ ತಲೆನೋವು, ಏನಾರ ಸಲ್ಪ ಹೆಚ್ಚು ಕಮ್ಮಿ ಆದ್ರೆ ನಮ್ಮ ಮಾಹಿತಿಯೆಲ್ಲಾ ಹೋಗುತ್ತೆ. OS ಇನ್ಸ್ಟಾಲ್ ಎಲ್ಲಾ ಮಾಡ್ವಾಗ ಬೂಟ್ ಫ್ಲಾಪಿ, ಬೂಟ್ ಲೋಡರ್ ಅಂತೆಲ್ಲಾ ಕೇಳಿರ್ಬೋದು, ಆದ್ರೆ ಅದೆಲ್ಲಾ ಹೆಂಗೆ ಕೆಲ್ಸ ಮಾಡುತ್ವೆ ಅಂತ ಗೊತ್ತಿಲ್ಲದೇ ಇರ್ಬೋದು . ಹಾರ್ಡ್ ಡಿಸ್ಕ್ ವಿಭಜನೆ ಮತ್ತು ಬೂಟ್ ಲೋಡರ್ ಬಗ್ಗೆ ತಿಳಿಯಲು ಈ ಲೇಖನ.
ಈ ಲೇಖನ ದಲ್ಲಿ ಕೆಳಗಿನ ಪದಗಳನ್ನು ಬಳಸಿದ್ದೇನೆ.
OS - Operating System
MBR - Master Boot Record
EBR - Extended Boot Record
MBC - Master Boot Code
GRUB - GRand Unified Bootloader
LILO - LInux LOader
FAT-16 - File Allocation Table 16 bit
FAT - 32 - File Allocation Table 32 bit
NTFS - New Technology File System
ext2/ext3 - Extended File Systems
ಕೆಳಗಿನ ಚಿತ್ರದಲ್ಲಿ ತೋರಿಸಿದಂತೆ ಹಾರ್ಡ್ ಡಿಸ್ಕ್ ನ ಮೊದಲ 512 ಬೈಟ್ಸ್ ನಲ್ಲಿ MBR(Master Boot Record) ಇರುತ್ತೆ. MBR ನಲ್ಲಿ ಮೂರು ಭಾಗ ಇರುತ್ತೆ
೧) ಮಾಸ್ಟರ್ ಬೂಟ್ ಕೋಡ್ (MBR ನ ಮೊದಲ 446 bytes )
೨) ಪಾರ್ಟಿಷನ್ ಮ್ಯಾಪ್ (64 bytes)
೩) ಸಿಗ್ನೇಚರ್ (2 bytes)
ಮಾಸ್ಟರ್ ಬೂಟ್ ಕೋಡ್ ಅನ್ನೋದು ಒಂದು ಪ್ರೋಗ್ರಾಮು, ಅದರಲ್ಲಿ ಯಾವ ಬೂಟ್ ಲೋಡರ್ ಅನ್ನು ಲೋಡ್ ಮಾಡ್ಬೇಕು ಅನ್ನೋ ಮಾಹಿತಿ ಇರುತ್ತೆ. ಮುಂದೆ ಇದೇ ಲೇಖನದಲ್ಲಿ ಇದರ ಬಗ್ಗೆ ವಿವರವಾಗಿ ನೋಡೋಣ.
ಪಾರ್ಟಿಷನ್ ಮ್ಯಾಪ್ ಅಲ್ಲಿ ಪಾರ್ಟಿಷನ್ ನ ವಿವರಗಳಿರುತ್ತವೆ. (ತಲಾ 16 bytes ರಂತೆ ನಾಲ್ಕು ಪ್ರೈಮರಿ ಪಾರ್ಟಿಷನ್ ಗಳಿಗೆ 64 bytes)
ಒಂದು ಹಾರ್ಡ್ ಡಿಸ್ಕ್ ಅಲ್ಲಿ ೪ ಪ್ರೈಮರಿ ಪಾರ್ಟಿಷನ್ ಮಾತ್ರ ಮಾಡಬಹುದು, ಆದರೆ ಕೆಲವೊಮ್ಮೆ ನಾಲ್ಕಕ್ಕಿಂತ ಹೆಚ್ಚು ವಿಭಾಗಗಳು ಬೇಕಾಗುತ್ತವೆ, ಅದಕ್ಕೆ extended ಪಾರ್ಟಿಷನ್ ಅಂತ ಮಾಡಬಹುದು. ಇದರ ಉಪಯೋಗ ಏನೆಂದರೆ, ಈ extended ಪಾರ್ಟಿಷನ್ ಒಳಗೆ ಎಷ್ಟು ಭಾಗ ಬೇಕಾದರೂ ಮಾಡಬಹುದು. ಅದಕ್ಕೆ ಲಾಜಿಕಲ್ ಪಾರ್ಟಿಷನ್ ಅಂತಾರೆ. ಆದರೆ ಒಂದು ಹಾರ್ಡ್ ಡಿಸ್ಕ್ ಅಲ್ಲಿ ಒಂದು extended ಪಾರ್ಟಿಷನ್ ಮಾತ್ರ ಮಾಡಬಹುದು.(ಉದಾಹರಣೆಗೆ ನನ್ನ ಹಾರ್ಡ್ ಡಿಸ್ಕ್ ಅಲ್ಲಿ ೫ ಭಾಗಗಳಿವೆ, ಅದ್ರಲ್ಲಿ ಒಂದು ಪ್ರೈಮರಿ ಮತ್ತು ಒಂದು extended, ಆ extended ಪಾರ್ಟಿಷನ್ ಒಳಗೆ ೪ ಭಾಗಗಳಿವೆ).
ಒಂದು ಹಾರ್ಡ್ ಡಿಸ್ಕ್ ನಲ್ಲಿ MBR ಇರುವಂತೆ, extended ಪಾರ್ಟಿಷನ್ ಅಲ್ಲಿ ಅದರದ್ದೇ ಆದ ಬೂಟ್ ರೆಕಾರ್ಡ್ ಇರುತ್ತೆ ಅದರ ಹೆಸರು Extended Boot Record ಅಂತ. ಇದರಲ್ಲಿ ಲಾಜಿಕಲ್ ಪಾರ್ಟಿಷನ್ ನ ವಿವರಗಳಿರುತ್ತವೆ.
ಯಾವ ಪಾರ್ಟಿಷನ್ ಅಲ್ಲಿ default OS ಇರುತ್ತೋ ಅದನ್ನ active ಪಾರ್ಟಿಷನ್ ಅಂತಾರೆ. default OS ಅಂದರೆ ಕಂಪ್ಯೂಟರ್ ಆನ್ ಮಾಡಿದಾಗ ಯಾವ OS ಪ್ರಾರಂಭ ಆಗುತ್ತದೋ ಅದು.
ವಿಂಡೋಸ್ ನಲ್ಲಿ ಪಾರ್ಟಿಷನ್ ಗಳನ್ನು C:\ D:\ E:\ ಅಂತ ಗುರುತಿಸುತ್ತಾರೆ. ಲಿನಕ್ಸ್ ನಲ್ಲಿ ಹಾರ್ಡ್ ಡಿಸ್ಕ್ ಗೆ hda ಅಥವಾ sda ಅಂತ ಗುರುತಿಸುತ್ತಾರೆ , ಒಂದಕ್ಕಿಂತ ಜಾಸ್ತಿ ಹಾರ್ಡ್ ಡಿಸ್ಕ್ ಇದ್ದರೆ hdb, hdc ಅಥವಾ sdb, sdc ಅಂತ ಗುರುತಿಸುತ್ತಾರೆ.
ಪಾರ್ಟಿಷನ್ ಗಳನ್ನು hda1, hda2 ಅಥವಾ sda1, sda2 ಅಂತ ಹೆಸರಿಸುತ್ತಾರೆ.(hda ಅಥವಾ sda ಅನ್ನೋ ಹೆಸರುಗಳು ಹಾರ್ಡ್ ಡಿಸ್ಕ್ ನ ವಿಧದ ಮೇಲೆ ಅವಲಂಬಿಸಿರುತ್ತೆ, SATA ಹಾರ್ಡ್ ಡಿಸ್ಕ್ ಆಗಿದ್ದರೆ sda)
ಫೈಲ್ ಸಿಸ್ಟಮ್ ವಿಧಗಳು
ಹಾರ್ಡ್ ಡಿಸ್ಕ್ ಅನ್ನು ಭಾಗ ಮಾಡಿದ ಮೇಲೆ OS ಗಳಿಗೆ ಬೇಕಾದ ಫೈಲ್ ಸಿಸ್ಟಮ್ ಅನ್ನು ಮಾಡಬೇಕಾಗುತ್ತೆ. ಬೇರೆ ಬೇರೆ OS ಗಳು ಬೇರೆ ಬೇರೆ ಫೈಲ್ ಸಿಸ್ಟಮ್ ಉಪಯೋಗಿಸ್ತವೆ. FAT-16(File Allocation Table 16 bit), FAT-32(File Allocation Table 32 bit) ಮತ್ತು NTFS(New Technology File System) ಗಳನ್ನು Windows OS ಉಪಯೋಗಿಸುತ್ತೆ. ext2, ext3 ಫೈಲ್ ಸಿಸ್ತಮ್ ಗಳನ್ನ ಲಿನಕ್ಸ್ ಉಪಯೋಗಿಸುತ್ತೆ. RAM ಮೆಮೋರಿ ಕಡಿಮೆ ಇದ್ದಾಗ ಲಿನಕ್ಸ್ OSಗಳು SWAP ಪಾರ್ಟಿಷನ್ ಅನ್ನು RAM ತರಹ ಉಪಯೋಗಿಸುತ್ತವೆ.
ಬೂಟ್ ಲೋಡರ್
ಬೂಟ್ ಲೋಡರ್ ಒಂದು ಪ್ರೋಗ್ರಮ್, ಅದು ಯಾವ OS ಅನ್ನು ಪ್ರಾರಂಬಿಸಬೇಕು ಅಂತ ನಿರ್ದರಿಸುತ್ತೆ. ಈಗ ಕಂಪ್ಯೂಟರ್ ಆನ್ ಮಾಡಿದ ನಂತರ ಏನೇನು ಆಗುತ್ತೆ ಅಂತ ನೋಡೋಣ.
ಕಂಪ್ಯೂಟರ್ ಆನ್ ಮಾಡಿದ ತಕ್ಷಣ BIOS(BIOS ಬಗ್ಗೆ ಶಿವ ಪ್ರಕಾಶ್ ಬರೆದಿರೋ ಲೇಖನ) ಶುರು ಆಗುತ್ತೆ,ಅದು ಹಾರ್ಡ್ ಡಿಸ್ಕ್ ಅಲ್ಲಿ MBR ಎಲ್ಲಿದೆ ಅಂತ ಹುಡುಕಿ ಅದರಲ್ಲಿರುವ ಮಾಸ್ಟರ್ ಬೂಟ್ ಕೋಡ್ (MBC) ಅನ್ನು ಲೋಡ್ ಮಾಡುತ್ತೆ. MBC active ಪಾರ್ಟಿಷನ್ ಅನ್ನು ಹುಡುಕಿ ಅದರಲ್ಲಿರುವ ಬೂಟ್ ಲೋಡರ್ ಅನ್ನು execute ಮಾಡುತ್ತೆ. ನಮ್ಮ ಕಂಪ್ಯೂಟರ್ ನಲ್ಲಿ ಒಂದಕ್ಕಿಂತ ಜಾಸ್ತಿ OS ಗಳಿದ್ದರೆ ಅದರ ಮೆನು ತೋರಿಸುತ್ತೆ(ಮೆನು ತೋರಿಸುವ ಪ್ರೋಗ್ರಮ್ default OS ನ ಬೂಟ್ ಲೋಡರ್ ನಲ್ಲಿ ಬರೆದಿರುತ್ತೆ), ಮೆನು ಆಯ್ಕೆ ಮಾಡಿದಾಗ ಆಯಾ OS ನ ಬೂಟ್ ಲೋಡರ್ ಪ್ರೋಗ್ರಮ್ ರನ್ ಆಗಿ OS ಪ್ರಾರಂಭ ಆಗುತ್ತೆ.
ಲಿನಕ್ಸ್ GRUB(GRand Unified Bootloader) ಮತ್ತು LILO(LInux LOader) ಅಂತ ಎರಡು ಬೂಟ್ ಲೋಡರ್ ಗಳಲ್ಲಿ ಯಾವ್ದಾದ್ರು ಒಂದನ್ನ ಉಪಯೋಗಿಸುತ್ತೆ, Win 9x/Me OS ಉಪಯೋಗಿಸೋ ಬೂಟ್ ಲೋಡರ್ ಹೆಸರು bootsect.dos ಮತ್ತು NT/XP ಉಪಯೋಗಿಸೋದು NTLDR ಅಂತ. ಈಗ Win 9x/Me OS ಇನ್ಸ್ಟಾಲ್ ಮಾಡಿದ ಮೇಲೆ XP ಇನ್ಸ್ಟಾಲ್ ಮಾಡಿದ್ರೆ, bootsect.dos ಅನ್ನು backup ಮಾಡಿ ಅದರದ್ದೇ ಆದ NTLDR ಅನ್ನು default ಮಾಡಿ ಬಿಡುತ್ತೆ.(ಅಂದರೆ XP ಇನ್ಸ್ಟಾಲ್ ಆದ ಪಾರ್ಟಿಷನ್ ಅನ್ನು active ಪಾರ್ಟಿಷನ್ ಆಗಿ ಮಾಡುತ್ತೆ, ಈಗ ಕಂಪ್ಯೂಟರ್ ಪ್ರಾರಂಭ ಆದಾಗ NTLDR ರನ್ ಆಗುತ್ತೆ) NTLDR ರನ್ ಆದಾಗ ಈ ಎರಡೂ OS ಗಳ ಮೆನು ತೋರಿಸುತ್ತೆ, Win 9x ಆಯ್ಕೆ ಮಾಡಿದರೆ bootsect.dos ಅನ್ನು ಕಾಲ್ ಮಾಡುತ್ತದೆ, ಆಗ Win 9x ಪ್ರಾರಂಭ ಆಗುತ್ತೆ.
Windows ಇನ್ಸ್ಟಾಲ್ ಮಾಡಿದ ಮೇಲೆ ಲಿನಕ್ಸ್ ಇನ್ಸ್ಟಾಲ್ ಮಾಡಿದರೆ, ಲಿನಕ್ಸ್ ಇನ್ಸ್ಟಾಲ್ ಮಾಡಿದ ಪಾರ್ಟಿಷನ್ active ಪಾರ್ಟಿಷನ್ ಆಗುತ್ತೆ. GRUB ಅಥವಾ LILO ನಲ್ಲಿ ಎಲ್ಲಾ OS ಗಳ ಮೆನು ತೋರಿಸುತ್ತೆ . ಆಯ್ಕೆ ಮಾಡಿದಾಗ ಆಯಾ ಬೂಟ್ ಲೋಡರ್ ಪ್ರೋಗ್ರಾಮ್ ಗಳನ್ನು ರನ್ ಮಾಡುತ್ತೆ.
ಈ ಬೂಟ್ ಲೋಡರ್ ಗಳ ಸಮಸ್ಯೆ ಯಾವಾಗ ಆಗುತ್ತೆ ಅಂದ್ರೆ,
೧) Windows ನಿಂದ ಲಿನಕ್ಸ್ ಪಾರ್ಟಿಷನ್ ಡಿಲೀಟ್ ಮಾಡಿದರೆ, GRUB ಅಥವಾ LILO ಕೂಡ ಡಿಲೀಟ್ ಆಗುತ್ತೆ, Active ಪಾರ್ಟಿಷನ್ reset ಆಗಿರೋಲ್ಲ, ಆಗ MBC ಗೆ Windows ನ ವಿಳಾಸ ತಪ್ಪಿ ಹೋದಂತಾಗುತ್ತೆ. ಇದರಿಂದಾಗಿ ಕಂಪ್ಯೂಟರ್ ಬೂಟ್ ಆಗೋಲ್ಲ. ಇದಕ್ಕೆ ಪರಿಹಾರ Windows ನ ಬೂಟ್ ಫ್ಲಾಪಿ /ಸಿಡಿ ಯಿಂದ recover ಮಾಡಬೇಕು.
೨) ಲಿನಕ್ಸ್ ಇದ್ದ ಕಂಪ್ಯೂಟರ್ ನಲ್ಲಿ ವಿಂಡೋಸ್ ಇನ್ಸ್ಟಾಲ್ ಮಾಡಿದರೆ, ವಿಂಡೋಸ್ ಇನ್ಸ್ಟಾಲ್ ಮಾಡಿದಾಗ NTLDR ಅನ್ನು default ಬೂಟ್ ಲೋಡರ್ ಅನ್ನಾಗಿ ಮಾಡುತ್ತೆ, NTLDR ಗೆ ಲಿನಕ್ಸ್ ನ ಫೈಲ್ ಸಿಸ್ಟಮ್ ಅರ್ಥ ಆಗೋಲ್ಲ. ಇದರಿಂದಾಗಿ ಮೊದಲಿಗೆ ಮೆನು ತೋರಿಸುವಾಗ ಲಿನಕ್ಸ್ ನ ಮೆನು ತೋರಿಸೋದೇ ಇಲ್ಲ,ಲಿನಕ್ಸ್ ಗೆ ಬೂಟ್ ಆಗಕ್ಕೂ ಆಗಲ್ಲ. ಇದಕ್ಕೆ ಪರಿಹಾರ ಎಲ್ಲಾ ಇನ್ಸ್ಟಾಲ್ ಮುಗಿದ ಮೇಲೆ ಲಿನಕ್ಸ್ ಸಿಡಿ ಹಾಕಿ GRUB ಅಥವಾ LILO ನ recover ಮಾಡಬೇಕು.
ಹೇಗಿದೆ ಲೇಖನ ? ನಿಮ್ಮ ಪ್ರತಿಕ್ತಿಯೆ ಸೇರಿಸಿ.
ನಿಮ್ಮವನೇ
ಅರವಿಂದ