ಹಾಲು ಕರೆಯಲು ಕರು ಹಾಕಲೇ ಬೇಕೆಂದಿಲ್ಲ.
ಕರು ಹಾಕುವುದಿಲ್ಲ, ಹಾಲು ಕೊಡುವುದಿಲ್ಲ ಎಂದು ಹಸು/ ಎಮ್ಮೆಯನ್ನು ಕಟುಕರಿಗೆ ಕೊಡುವ ಬದಲಿಗೆ ಅದರಲ್ಲಿ ಕರು ಇಲ್ಲದೆಯೇ ಹಾಲು ಪಡೆಯುವ ವಿಧಾನ ಇದೆ. ಇದನ್ನು ಬಳಸಿ, ಅವುಗಳಿಂದ ಹಾಲು ಕರೆಯಬಹುದು, ಮತ್ತೆ ಆ ಹಸು ಕರು ಹಾಕುವಂತೆ ಮಾಡಬಹುದು.
ಹಲವು ಕಾರಣಗಳಿಂದ ರಾಸುಗಳು ಬೆದೆಗೆ ಬಾರದೇ ಇರುವುದು, ಬೆದೆಗೆ ಬಂದರೂ ಗರ್ಭ ಕಟ್ಟದೇ ಇರುವುದು, ಗರ್ಭ ಕಟ್ಟಿದರೂ ಪದೇ ಪದೇ ಗರ್ಭಪಾತವಾಗುವುದು ಇತ್ಯಾದಿ ಕಾರಣಗಳಿಂದ ರಾಸುಗಳು ಕರು ಹಾಕಲು ಸಾಧ್ಯವಾಗದೇ ಬರಡು ಜಾನುವಾರುಗಳೆಂದು ಕರೆಯಿಸಿಕೊಳ್ಳುತ್ತವೆ. ಅದಕ್ಕೆ ತಜ್ಞ ವೈದ್ಯರಿಂದ ಆಧುನಿಕ ಚಿಕಿತ್ಸೆಗಳ ಮೂಲಕ ಎಲ್ಲಾ ಪ್ರಯತ್ನಗಳೂ ವಿಫಲವಾದಾಗ ರೈತರು ಹತಾಶೆಯಿಂದ ಮಾರಾಟ ಮಾಡುವುದು ಸರ್ವೇಸಾಮಾನ್ಯ. ಇನ್ನೂ ಕೆಲವು ರಾಸುಗಳು ಅಪಘಾತದಿಂದ ಅಥವಾ ಹುಟ್ಟುವಾಗಲೇ ಕಾಲು ಅಥವಾ ಪೃಷ್ಠಭಾಗದ ನ್ಯೂನತೆಯಿಂದ ಬಳಲುತ್ತಿದ್ದರೆ ಗರ್ಭ ಕಟ್ಟಿಸಲು ಸಾಧ್ಯವಾಗುವುದೇ ಇಲ್ಲ. ಇಂತಹ ಜಾನುವಾರುಗಳ ಮಾಲಿಕರಿಗೊಂದು ಸಂತಸದ ಸುದ್ದಿ ಇದೆ. ಅದೆಂದರೆ ಕೃತಕವಾಗಿ ಇಂತಹ ಜಾನುವಾರುಗಳಿಂದಲೂ ಹಾಲನ್ನು ಉತ್ಪಾದಿಸಬಹುದು.
ಈ ಚಿಕಿತ್ಸೆಯ ಅವಶ್ಯಕತೆ ಯಾವಾಗ ಬರುತ್ತದೆ ? :
* ಮಿಶ್ರತಳಿ ಪಡ್ಡೆ ಅಥವಾ ಮಣಕಗಳು ೫-೬ ವರ್ಷ ವಯಸ್ಸಾದರೂ ಗರ್ಭ ಕಟ್ಟಲು ವಿಫಲವಾದಾಗ
* ಹಾಲು ಕೊಡುವ ರಾಸುಗಳು ೩-೪ ಕರುವಿನ ನಂತರ ಬೆದೆಗೆ ಬಾರದೇ ಬರಡಾದಾಗ.
* ಕೆಲವು ವಾಸಿಯಾಗದ ಗರ್ಭಕೋಶ ಸಂಬಂಧಿ ಕಾಯಿಲೆಗಳಿಂದ ರಾಸುಗಳು ಗರ್ಭ ಕಟ್ಟದಿದ್ದರೆ.
ಈ ಚಿಕಿತ್ಸೆಗೆ ಯಾವ ರಾಸುಗಳನ್ನು ಆಯ್ಕೆ ಮಾಡಬೇಕು ?
* ಮಿಶ್ರತಳಿ ಹಸು ಅಥವಾ ಮೇಲ್ದರ್ಜೀಕರಿಸಿದ ಎಮ್ಮೆಗಳನ್ನು ಆಯ್ಕೆ ಮಾಡಬೇಕು.
* ಇನ್ನು ಕರು ಹಾಕದ ಅಥವಾ ಈಗಾಗಲೇ ಕರು ಹಾಕಿ ನಂತರ ಬರಡಾದ ಜಾನುವಾರುಗಳೂ ಈ ಚಿಕಿತ್ಸೆಗೆ ಅರ್ಹ.
* ಜಾನುವಾರು ಆರೋಗ್ಯದಿಂದಿದ್ದು ಉತ್ತಮ ದೇಹದಾಢ್ಯತೆ ಹೊಂದಿರಬೇಕು.
* ಚಿಕಿತ್ಸೆಗೆ ಒಳಪಡಿಸುವ ರಾಸುಗಳಿಗೆ ಆರೋಗ್ಯವಂತ ಕೆಚ್ಚಲು ಹಾಗೂ ಮೊಲೆತೊಟ್ಟುಗಳಿರಬೇಕು.
* ಗರ್ಭ ಧರಿಸಿದ ಜಾನುವಾರುಗಳಿಗೆ ಈ ಚಿಕಿತ್ಸೆ ನಿಷಿದ್ಧ.
ಈ ಚಿಕಿತ್ಸೆಯಿಂದ ಆಗುವ ಪ್ರಯೋಜನಗಳೇನು ?
ಈ ಚಿಕಿತ್ಸೆಗೆ ಸುಮಾರು ಶೇ. ೮೦ರಷ್ಟು ರಾಸುಗಳು ಸ್ಪಂದಿಸುತ್ತವೆ. ಹಾಗೂ ಸರಾಸರಿ ದಿನಕ್ಕೆ ೭-೧೦ ಲೀಟರ್ ಹಾಲು ಉತ್ಪಾದಿಸುವ ಸಾಧ್ಯತೆ ಇದೆ. ಈ ಚಿಕಿತ್ಸೆಯ ನಂತರ ಶೇ. ೮೦ರಷ್ಟ ಜಾನುವಾರುಗಳು ಗರ್ಭ ಧರಿಸುವ ಸಾಧ್ಯತೆ ಇದೆ.
ಬೆದೆಗೆ ಬಾರದೇ ಇರುವ ರಾಸುಗಳು ಈ ಚಿಕಿತ್ಸೆಯ ನಂತರ ಸಕಾಲದಲ್ಲಿ ಬೆದೆಗೆ ಬರುವ ಸಾಧ್ಯತೆ ಇದೆ. ಈ ಚಿಕಿತ್ಸೆಯಿಂದ ಉತ್ಪತ್ತಿಯಾಗುವ ಹಾಲು ಸಹಜವಾಗಿದ್ದು ಮಾನವ ಉಪಯೋಗಕ್ಕೆ ಸೂಕ್ತವಾಗಿದೆ. ಆದ್ದರಿಂದ ಯಾವುದೇ ಹಿಂಜರಿಕೆ ಅಥವಾ ಹೆದರಿಕೆ ಅಗತ್ಯವಿಲ್ಲ. ಕೃತಕವಾಗಿ ಹಾಲು ತರಿಸಿದ ಜಾನುವಾರುಗಳು ಸತತವಾಗಿ ಸಹಜ ರಾಸುವಿನಂತೆಯೇ ೧೦ ತಿಂಗಳುಗಳವರೆಗೂ ಹಾಲು ಕೊಡುತ್ತವೆ. ಆ ನಂತರ ಕೂಡ ಹಾಲು ಕೊಡುತ್ತವೆಯಾದರೂ ಪ್ರಮಾಣ ಕಡಿಮೆಯಾಗುತ್ತದೆ ಈ ಅವಧಿಯಲ್ಲಿ ರಾಸುಗಳು ಗರ್ಭ ಧರಿಸದೇ ಹೋದರೆ ಹಾಲು ಕರೆಯುವುದನ್ನು ನಿಲ್ಲಿಸಿ ಎರಡು ತಿಂಗಳ ವರೆಗೆ ವಿಶ್ರಾಂತಿ ನೀಡಿದ ಮೇಲೆ ಮತ್ತೆ ಈ ಚಿಕಿತ್ಸೆಗೆ ಒಳಪಡಿಸಬೇಕು. ಎರಡನೇ ಬಾರಿ ಮೊದಲಿಗಿಂತ ಹೆಚ್ಚು ಹಾಲು ಉತ್ಪಾದಿಸುತ್ತವೆ.
ಈ ಚಿಕಿತ್ಸೆ ವಿಧಾನ ಹೇಗೆ :
ಚಿಕಿತ್ಸೆಗೆ ಆಯ್ಕೆಯಾಗುವ ಜಾನುವಾರುಗಳಿಗೆ ತಜ್ಞರು ಕನಿಷ್ಟ ಏಳು ದಿನ ಹಾಗೂ ಗರಿಷ್ಠ ೧೨ ದಿನಗಳವರೆಗೆ ಹಾರ್ಮೋನುಗಳ ಚಿಕಿತ್ಸೆ ನೀಡುತ್ತಾರೆ. ಅಲ್ಲದೇ ೪-೫ ದಿನಗಳ ವರೆಗೆ ಪೂರಕ ಔಷಧಿಯನ್ನು ಸಹ ನೀಡುತ್ತಾರೆ.
ಚಿಕಿತ್ಸೆಯ ಅವಧಿಯಲ್ಲಿ ಪ್ರತೀ ಎರಡು ಬಾರಿ ಕೆಚ್ಚಲನ್ನು ಮಸಾಜ್ ಮಾಡಬೇಕು.
ಚಿಕಿತ್ಸೆ ಪ್ರಾರಂಭಿಸಿದ ೧೦ನೇ ದಿನ ಹಾಲಿನ ಅಂಶ ಕಂಡುಬರುತ್ತದೆ. ನಂತರದ ೨೦ ದಿನಗಳ ವರೆಗೆ ಕರೆದ ಹಾಲು ಮಾನವನ ಉಪಯೋಗಕ್ಕೆ ಯೋಗ್ಯವಾಗಿರುವುದಿಲ್ಲ. ಮೂವತ್ತು ದಿನಗಳ ನಂತರ ಈ ಹಾಲನ್ನು ಉಪಯೋಗಿಸಬಹುದು.
ಚಿಕಿತ್ಸೆ ನೀಡಿದ ರಾಸುಗಳಲ್ಲಿ ಚಿಕಿತ್ಸೆ ನಂತರ ೬೦ನೇ ದಿನಕ್ಕೆ ಗರಿಷ್ಠ ಹಾಲಿನ ಉತ್ಪಾದನೆ ಕಂಡುಬರುತ್ತದೆ. ಈ ಪದ್ಧತಿಯನ್ನು ತಜ್ಞ ವೈದ್ಯರ ಸೂಕ್ತ ಚಿಕಿತ್ಸೆಯ ನಂತರವೂ ಜಾನುವಾರು ಗರ್ಭ ಧರಿಸಲು ಸಾಧ್ಯವಾಗದೇ ಇದ್ದಾಗ ಮಾತ್ರ ಹಾಲು ಕರೆಯುವ ಪರ್ಯಾಯ ಉಪಾಯವಾಗಿ ಮಾತ್ರ ಬಳಸಬಹುದು. ಇಲ್ಲಿ ನೆನಪಿಡಬೇಕಾದ ಸಂಗತಿಯೆಂದರೆ ಕರು ಹಾಕದೇ ಹಾಲು ಉತ್ಪಾದಿಸುವ ಬರಡು ರಾಸನ್ನು ಗರ್ಭ ಕಟ್ಟಿಸುವುದೇ ಈ ವಿಧಾನದ ಮುಖ್ಯ ಉದ್ದೇಶವಾಗಿದೆ. ನಡುವಿನ ಅವಧಿಯಲ್ಲಿ ರಾಸು ಹಾಲು ಕೊಡುತ್ತಿರುವುದರಿಂದ ರೈತನಿಗೆ ಅಷ್ಟರ ಮಟ್ಟಿಗೆ ನಷ್ಟ ತಪ್ಪುತ್ತದೆ. ಅಲ್ಲದೇ ಈ ರೀತಿಯಲ್ಲಿ ಹಾಲನ್ನು ಉತ್ಪಾದಿಸುವ ವಿಧಾನ ಕೃತಕವೇ ಹೊರತು ಹಾಲು ಕೃತಕವಲ್ಲ. ಹಾಗಾಗಿ ಇಂತಹ ಹಾಲನ್ನು ಮನುಷ್ಯರು ಉಪಯೋಗಿಸಲು ಯಾವುದೇ ತೊಂದರೆಯಿಲ್ಲ.
ಮಾಹಿತಿ: ರಾಧಾಕೃಷ್ಣ ಹೊಳ್ಳ