ಹಾಲು ಹೂವುಗಳ ಮನೆ

ಹಾಲು ಹೂವುಗಳ ಮನೆ

ನಾನು ಈಗಾಗಲೇ ಹೇಳಿಕೊಂಡಂತೆ ಆನೆಗುಂಡಿಯ ರಾಮಪ್ಪ ಮೇಸ್ತ್ರಿ ಕಾಂಪೌಂಡ್‍ನ ಹುಲ್ಲು ಚಾವಣಿಯ ಮನೆಯಲ್ಲಿ ಹುಟ್ಟಿದ ನನ್ನನ್ನು ಎತ್ತಿ ಆಡಿಸಿದವರು ಆ ವಠಾರದ ಹಿರಿಯ ಕಿರಿಯ ಬಂಧುಗಳು. 1946ರಿಂದ ಕೊಂಚಾಡಿ ಶ್ರೀ ರಾಮಾಶ್ರಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರಾಗಿದ್ದ ನನ್ನ ತಂದೆ ಕೊಂಡಾಣರು ನಾನು ಹುಟ್ಟಿದ ಬಳಿಕ ಚರ್ಚ್‍ನ ಆಡಳಿತಕ್ಕೊಳಪಟ್ಟ ಉರ್ವಾದ ಸಂತ ಅಲೋಶಿಯಸ್ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿದರು. ಈ ಹಿನ್ನೆಲೆಯ ಜೊತೆಗೆ ನಮ್ಮ ಮನೆಯಲ್ಲಿ ಚಿಕ್ಕಪ್ಪ, ಅತ್ತಿಗೆ, ಅಜ್ಜಿ ಇವರೆಲ್ಲರೂ ಇರಬೇಕಾದುದರಿಂದ ದೊಡ್ಡ ಮನೆಯ ಅವಶ್ಯಕತೆ ಇತ್ತು. ಈ ಕಾರಣದಿಂದ ಕಾಪಿಕಾಡ್‍ನಲ್ಲಿದ್ದ ಜುಜೆಫಿನ್ ಫೆರ್ನಾಂಡಿಸ್ ಬಿಡಾರಕ್ಕೆ ಮನೆ ಬದಲಾಯಿಸಿದರು. ಈ ಮನೆ ಇಂದಿನ ಕಾಪಿಕಾಡ್ ರಸ್ತೆಯ ಎರಡನೆ ಅಡ್ಡರಸ್ತೆಯ ತುತ್ತತುದಿಯ ಮನೆಯಾಗಿತ್ತು. ವಿಶಾಲವಾದ ಮನೆ, ಅಂಗಳ, ಹಿತ್ತಿಲುಗಳ ಜೊತೆಗೆ ಮನೆಯಿಂದ ಎಡಕ್ಕೆ ದೊಡ್ಡದಾದ ಗುಡ್ಡವಿತ್ತು. ಈ ಗುಡ್ಡದ ತುದಿಗೆ ವಿಸ್ತಾರವಾಗಿ ಹರಡಿದ್ದ ಪಾೈಸರಗುಡ್ಡೆಯಲ್ಲಿ ಸಂಜೆ ಹೊತ್ತು ಕುಳಿತು ಸೂರ್ಯಾಸ್ತ ನೋಡ ಬಹುದಾಗಿತ್ತು. ಮುಖ್ಯರಸ್ತೆಯಿಂದ ಇಂದು ಅಡ್ಡರಸ್ತೆ ನಿರ್ಮಾಣ ವಾಗಿದೆ. ಆದರೆ ಅಂದು ಜನ, ದನ ಓಡಾಡುವ ದಾರಿ ಮಾತ್ರವಲ್ಲ ನೀರು ಹರಿಯುವ ಓಣಿಯಾಗಿತ್ತು. ಈ ಓಣಿಯ ಒಂದು ಬದಿಯಲ್ಲಿ ಅಧ್ಯಾಪಕರಾದ ಡಿ. ಮಾಧವ ರಾವ್ ಅವರ ಮನೆಯಿದ್ದರೆ, ಇನ್ನೊಂದು ಬದಿಯ ಮನೆಯಲ್ಲಿ ಕ್ರಿಶ್ಚಿಯನ್ ಬಂಧುಗಳಿದ್ದರು. ಅವರ ಮನೆಯಲ್ಲಿ ಪಾರಿವಾಳ ಸಾಕುತ್ತಿದ್ದು ಅವರ ಮನೆಯ ಹುಡುಗರು ಪಾರಿವಾಳ ಹಾರಿಸಿ ಮೋಜು ಮಾಡುತ್ತಿದ್ದರು. ಮಾಧವ ರಾವ್ ಅವರ ಮನೆಯಲ್ಲಿ ವೈವಿಧ್ಯಮಯವಾದ, ಬಣ್ಣ ಬಣ್ಣದ ಹೂಗಳ ಗಿಡ, ಬಳ್ಳಿ, ಪೊದೆಗಳು ಸಾಕಷ್ಟು ಇದ್ದುವು. ಕಣ್ಣುಗಳಿಗೆ ಮುದ ನೀಡುವ ಆ ತೋಟವನ್ನು ನೋಡುವುದಕ್ಕಾಗಿಯೇ ಓಣಿಯಲ್ಲಿ ಕಲ್ಲನ್ನು ಒಂದರ ಮೇಲೊಂದು ಇಟ್ಟು ಹತ್ತಿ ನಿಂತು ಸಂಭ್ರಮಿಸಿದ ದಿನಗಳು ಅವು. ಅವರ ಮೂವರು ಹೆಣ್ಣುಮಕ್ಕಳು ನಮ್ಮ ಜೊತೆಯ ಹಿರಿಯ ಕಿರಿಯ ವಿದ್ಯಾರ್ಥಿಗಳು. ವಿದ್ಯಾವಂತರಾಗಿ, ಉದ್ಯೋಗಿಗಳಾಗಿದ್ದುದರಿಂದ ಹಾಗೆಯೇ ನನ್ನೂರಿನಲ್ಲಿದ್ದ ಬ್ರಾಹ್ಮಣರ ಮನೆಯ ಹೆಣ್ಣುಮಕ್ಕಳನ್ನು ನೆನಪಿಸಿಕೊಂಡರೆ ಆ ಕಾಲಕ್ಕೇ ಶಾಲಾ ಕಾಲೇಜುಗಳಲ್ಲಿ ಕಲಿತು ವಿದ್ಯಾವಂತರಾಗಿದ್ದುದು ವಿಶೇಷವೆಂದೇ ಹೇಳಬೇಕಾಗಿತ್ತು. ಜೊತೆಗೆ ಉದ್ಯೋಗಕ್ಕೆ ಹೋಗುತ್ತಿದ್ದುದು ಕೂಡಾ ನನ್ನೂರಿನ ಮಾದರಿ ಎಂದರೆ ತಪ್ಪಲ್ಲ.
ಈ ಓಣಿಯಿಂದ ಮುಂದೆ ಬಂದಂತೆಯೇ ಎಡಬದಿಯ ಎರಡನೆಯ ದೊಡ್ಡಮನೆ ಲೂವಿಸ್ ಪೊರ್ಬುಗಳದ್ದು. ಮನೆ ಹಿತ್ತಿಲು, ತೆಂಗಿನ ತೋಟ, ಬಿಡಾರಗಳು ಅಲ್ಲದೆ ಎತ್ತರಕ್ಕೆ ಹೋದಂತೆ ಮಲ್ಲಿಗೆ ತೋಟ ಕಂಗೊಳಿಸುತ್ತಿತ್ತು. ಆ ತೋಟದ ಬದಿಗಳಲ್ಲಿ ತೆಂಗಿನ ಮರ, ಬಿಂಬುಳಿ, ಕರಿಬೇವು, ಚಿಕ್ಕು(ಸಪೋಟ), ಪೇರಳೆ ಗಿಡಗಳಿದ್ದವು. ಲೂವಿಸ್ ಪೊರ್ಬುಗಳ ಮನೆಯ ಸಂಪಾದನೆಗೆ ಎರಡು ಹಾದಿಗಳು. ಒಂದು ಹೈನುಗಾರಿಕೆ ಇನ್ನೊಂದು ಮಲ್ಲಿಗೆ ತೋಟ ಹಾಗೂ ಮಂಗಳೂರಿನ ಹೂ ಮಾರ್ಕೆಟ್ (ಹಳೆಯ ಬಸ್‍ಸ್ಟ್ಯಾಂಡ್ ಬಳಿ)ನಲ್ಲಿ ಹೂವಿನ ವ್ಯಾಪಾರ. ಬಿಜೈ, ಕಾಪಿಕಾಡು, ಬಾಳೆಬೈಲು ಮೊದಲಾದ ಕಡೆಗಳಲ್ಲಿ ಕ್ರಿಶ್ಚಿಯನ್ ಸಮುದಾಯದವರು ಮಲ್ಲಿಗೆ ತೋಟ ಮಾಡಿ ಕೊಂಡಿದ್ದರು. ಅವರೆಲ್ಲಾ ತಾವು ಬೆಳೆದ ಮಲ್ಲಿಗೆಯನ್ನು ಕೊಯ್ದು, ನೇಯ್ದು ಲೂವಿಸ್ ಪೊರ್ಬುಗಳಲ್ಲಿ ತಂದುಕೊಡುತ್ತಿದ್ದರು. ಅವರ ಮನೆಯ ಚಾವಡಿಯಲ್ಲಿ ಬೆಳಗ್ಗೆ ಅನೇಕ ಮಹಿಳೆಯರು ಹೂಮಾಲೆ, ಮಲ್ಲಿಗೆಗಳನ್ನು ಕಟ್ಟುತ್ತಿದ್ದುದನ್ನು ನೋಡುವುದೇ ಚಂದವಾಗಿತ್ತು. ಹೀಗೆ ಕಟ್ಟಿಸಿಕೊಂಡ ಹೂವುಗಳನ್ನು ಬುಟ್ಟಿಯಲ್ಲಿಟ್ಟುಕೊಂಡು ಬೆಳಗ್ಗೆ ಸುಮಾರು 9ರಿಂದ 10.30 ಗಂಟೆಯ ಒಳಗೆ ಲೂಯಿಸ್ ಪೊರ್ಬುಗಳು ಪೇಟೆಗೆ ನಡೆದೇ ಹೋಗುತ್ತಿದ್ದರು. ಮಂಗಳೂರು ಹಾಗೂ ಆಸುಪಾಸಿನ ದೇವಸ್ಥಾನ, ದೈವಸ್ಥಾನಗಳ ಜಾತ್ರೆ, ನೇಮಗಳಿಗೆ ಇವರಿಂದಲೇ ಹೂ ಕೊಂಡು ಹೋಗುವುದು ಸಾಮಾನ್ಯವಾಗಿತ್ತು. ಹೂ ಬೇಕೆಂದು ಅವರಿಗೆ ಮೊದಲೇ ತಿಳಿಸಬೇಕಾಗಿತ್ತು. ಮದುವೆ, ಉಪನಯನ, ಸೀಮಂತಗಳಿಗೂ ಇವರೇ ಎಲ್ಲಾ ರೀತಿಯ ಹೂಗಳನ್ನು ಒದಗಿಸುತ್ತಿದ್ದರು. ಅವರ ಹೂವಿನ ವ್ಯಾಪಾರವೆಂದರೆ ರಖಂ ವ್ಯಾಪಾರ. ಹೂವಿನ ನೇಯ್ಗೆಯೂ ಅಷ್ಟೇ ಚಂದ. ಮಲ್ಲಿಗೆಯ ಜೊತೆಗೆ ಅಬ್ಬಲಿಗೆ, ಪಚ್ಚೆತೆನೆ, ಗುಲಾಬಿ, ಕೇದಗೆ, ಸಂಪಿಗೆ, ಡೇಲಿಯಾ ಇವುಗಳೆಲ್ಲಾ ಅಂದು ಅವರ ಮನೆಯಲ್ಲಿ ಕಾಣಸಿಗುತ್ತಿದ್ದ ರಾಶಿ ರಾಶಿ ಹೂಗಳು. ಬೆಳಗ್ಗೆ ಕೊಯ್ದು ಕಣ್ತಪ್ಪಿನಿಂದ ಉಳಿದ ಮಲ್ಲಿಗೆ ಮೊಗ್ಗುಗಳು ಸಂಜೆಯಾಗುವಾಗ ದೊಡ್ಡದಾಗಿ ಎದ್ದು ಕಾಣುತ್ತವೆ. ಅವುಗಳನ್ನು ಕೊಯ್ದು ಮತ್ತೆ ಸಂಜೆ ಕಟ್ಟುವುದು ಮನೆಯ ಮಕ್ಕಳ ಕೆಲಸ. ಅದು ಅಗತ್ಯವಿದ್ದರೆ ಪೇಟೆಗೆ ಹೋಗುತ್ತಿತ್ತು. ಇಲ್ಲವಾದರೆ ನಮ್ಮಂತಹ ನೆರೆಯವರಿಗೆ ಕಾಸಿಗೋ ಇಲ್ಲ ಉಚಿತವಾಗಿಯೋ ಸಿಗುತ್ತಿತ್ತು. ಹಾಗೆಯೇ ಮಾರಾಟವಾಗದೆ ಉಳಿಯುವ ಹೂಗಳನ್ನು ರಾತ್ರಿ ಹತ್ತು ಗಂಟೆಗೆ ಹಿಂದಿರುಗುವ ಪೊರ್ಬುಗಳು ಹಿಂದೆ ತರುತ್ತಿದ್ದರು. ಅವುಗಳು ಮರುದಿನ ತೆಂಗಿನ ಮರದ ಬುಡದಲ್ಲಿ ಗೊಬ್ಬರವಾಗುತ್ತಿತ್ತು. ಆದರೆ ಅವುಗಳಿಂದಲೂ ಪರಿಮಳ ಸೂಸುವ ಹೂಗಳನ್ನು ಎತ್ತಿ ಮುಡಿಯುವ ಕಾಲ ಅದಾಗಿತ್ತು. ಇಲ್ಲ ಅವರೇ ಬಿಸಾಡದೆ ನನಗಾಗಿ ಎತ್ತಿ ಇಡುತ್ತಿದ್ದರು. ಆಗ ಹೂವುಗಳನ್ನು ಮರುದಿನಕ್ಕೆ ಉಳಿಸಲು ಪ್ರಿಜ್‍ಗಳು ಇರಲಿಲ್ಲ.
ಹೀಗೆ ಸಿಗುತ್ತಿದ್ದ ಮಲ್ಲಿಗೆ, ಜಾಜಿಗಳನ್ನು ನನ್ನ ಗೆಳತಿಯರಿಗೂ ಹಂಚುತ್ತಿದ್ದೆ. ದಿನಾ ಶಾಲೆಗೆ ಹೋಗುವಾಗ ಎರಡು ಜಡೆ ಹಾಕಿಕೊಂಡು ತಲೆ ತುಂಬಾ ಹೂ ಮುಡಿದುಕೊಳ್ಳುವ ಸಂತಸಕ್ಕೆ ಎಣೆಯೇ ಇರುತ್ತಿರಲಿಲ್ಲ. ಲೂವಿಸ್ ಪೊರ್ಬುಗಳ ಮಡದಿ ರೋಜಿಬಾಯಿಯ ಮುಖ್ಯ ಕಾಯಕ ಹೈನುಗಾರಿಕೆ. ಈ ದೊಡ್ಡ ಮನೆಯ ದೊಡ್ಡ ಕೊಟ್ಟಿಗೆಯಲ್ಲಿ ಸುಮಾರು ಹತ್ತು ಹದಿನೈದು ದನ ಕರುಗಳು, ಇನ್ನು ಕೆಲವು ಎಮ್ಮೆಗಳು. ಅವುಗಳ ಕರುಗಳು. ಇವುಗಳ ಆರೈಕೆ, ಹಾಲು ಕರೆಯುವಿಕೆ ಹಾಗೂ ಮಾರಾಟದ ಜವಾಬ್ದಾರಿಯನ್ನು ರೋಜಿಬಾಯಿ ನೋಡಿಕೊಂಡರೂ ಕೆಲವು ತುಂಟ ದನಗಳನ್ನು ಕಟ್ಟಿ ಹಾಕಲು, ಹಾಲು ಕರೆಯಲು ಲೂವಿಸ್ ಪೊರ್ಬುಗಳೇ ಆಗಬೇಕು. ಬೆಳಗೆದ್ದು ದನಗಳಿಗೆ ಹುಲ್ಲು ಹಿಂಡಿ ಹಾಕಿ ಹಾಲು ಕರೆದು ಬಂದವರಿಗೆಲ್ಲಾ ತಂಬಿಗೆ ತಂಬಿಗೆ ಹಾಲು ಕೊಡುತ್ತಿದ್ದಂತೆಯೇ ಹಾಲಿನ ಡಬ್ಬಗಳಲ್ಲಿ ಹಾಲು ತುಂಬುತ್ತಿದ್ದಂತೆಯೇ ಅವರ ಮಕ್ಕಳು ಅವುಗಳನ್ನೆತ್ತಿಕೊಂಡು ತುಂಬಾ ಹಾಲು ಕೊಳ್ಳುವ ಮನೆಗಳಿಗೆ, ಹೊಟೇಲ್‍ಗಳಿಗೆ ಹಾಲು ನೀಡಲು ಹೊರಡುತ್ತಿದ್ದರು. ಈ ಕಡೆ ಹಾಲು ಕರೆದಾದ ಬಳಿಕ ದನ, ಎಮ್ಮೆಗಳ ಹಗ್ಗ ಬಿಚ್ಚಿ ಅವುಗಳನ್ನು ಮೇಯಲು ರಸ್ತೆಗೆ ಬಿಡುತ್ತಿದ್ದರು. ಅವುಗಳು ತಮ್ಮ ಪಾಡಿಗೆ ತಾವೇ ರಸ್ತೆಯುದ್ದಕ್ಕೂ ಮೇಯುತ್ತಾ ಮತ್ತೆ ಮಧ್ಯಾಹ್ನ 3ರಿಂದ 5 ಗಂಟೆಯೊಳಗೆ ಮನೆ ಸೇರುತ್ತಿದ್ದ ಆ ದನಗಳ ಶಿಸ್ತು ಶಾಲೆಗೆ ಹೋಗಿ ಬರುತ್ತಿದ್ದ ನಮ್ಮಲ್ಲೂ ಇತ್ತೋ ಇಲ್ಲವೋ? ಆದರೆ ಕೆಲವೊಮ್ಮೆ ದನ, ಎಮ್ಮೆಗಳು ಸಂಜೆಯಾದರೂ ಬಾರದೆ ಇರುವುದೂ ಇತ್ತು. ಹಾಗೆ ಬಾರದೆ ಇದ್ದಾಗ ಅವುಗಳನ್ನು ಹುಡುಕಿಕೊಂಡು ಹೋಗುವ ಕೆಲಸ ಅವರ ಮನೆಯ ಮಕ್ಕಳದು. ಹೀಗೆ ಹೂ, ಹಾಲು, ತೆಂಗಿನಕಾಯಿಗಳ ಸಂಬಂಧದಿಂದ ನಮ್ಮ ನೆರೆಯ ಸಂಬಂಧ ಕರೆದಾಗ ನೆರೆಯವರು ಎಂಬಂತೆಯೇ ಇತ್ತು.
ಆದರೂ ಒಮ್ಮೊಮ್ಮೆ ನೆರೆಯವರೂ ಕರೆ ಕರೆಯಾಗುವುದೂ ಇತ್ತು. ಲೂವಿಸ್ ಪೊರ್ಬುಗಳ ಮನೆಯವರೊಂದಿಗೆ ಮಾತ್ರ ಈ ಕರೆಕರೆ. ಕಾರಣ ಅದೇ ತುಂಟ ದನಗಳು. ಮೇಯಲು ಬಿಟ್ಟ ದನ ಕರುಗಳು ರಸ್ತೆಗೆ ಹೋಗದೆ ಅವರ ಅಂಗಳದಲ್ಲಿ ಅಥವಾ ಎಲ್ಲರೂ ಓಡಾಡುವ ಓಣಿಯಲ್ಲೇ ಉಳಿಯುವುದೂ ಇತ್ತು. ಅದೇ ದಾರಿಯಲ್ಲಿ ನಾವು ಮಕ್ಕಳು ಮುಖ್ಯವಾಗಿ ನಾನೇ ಶಾಲೆಗೆ, ಅಂಗಡಿಗೆ ಹೋಗಬೇಕಾಗುತ್ತಿದ್ದುದರಿಂದ ಜೊತೆಗೆ ನನಗೆ ದನ, ಕರು, ಎಮ್ಮೆ ಎಂದರೆ ತುಂಬಾ ಭಯ. ನನ್ನ ಭಯಕ್ಕೋ ಅಥವಾ ಅವುಗಳ ಸಹಜ ಸ್ವಭಾವದಿಂದಲೋ ಅವು ಹಾಯುವುದಕ್ಕೆ ಬಂದು ನಾನು ಬಿದ್ದುದೆಷ್ಟು ಬಾರಿಯೋ. ಅಂಗಡಿಯಿಂದ ಅಕ್ಕಿ, ಎಣ್ಣೆ ತರುವಾಗ ಬಿದ್ದು ಅಕ್ಕಿ, ಎಣ್ಣೆ ನೆಲದ ಪಾಲಾದಾಗ ನನ್ನನ್ನು ಹುಡುಕಿಕೊಂಡು ಬಂದ ಅಜ್ಜಿ ಅಥವಾ ಅಮ್ಮ ಲೂವಿಸ್ ಪೊರ್ಬುಗಳ ಮನೆಯವರಿಗೆ ಅಸಮಾಧಾನದಿಂದ ಬೈದು ಸಣ್ಣ ಕೋಳಿ ಜಗಳವಾಗುತ್ತಿತ್ತು. ದನಗಳ ತುಂಟತನ, ಅಶಿಸ್ತಿಗೆ ಜನಗಳು ಬೈಸಿಕೊಳ್ಳಬೇಕಾಗಿತ್ತು. ಆದರೆ ಆಗ ಸಾರ್ವಜನಿಕ ವಾಗಿ ಓಡಾಡುವ ಆ ರಸ್ತೆಯೇ ಸರಿಯಿಲ್ಲದೆ ಅವರಿವರ ಹಿತ್ತಲಲ್ಲಿ ಓಡಾಡುವ ಕಾರಣ ದಿಂದ ಹೀಗಾಗುತ್ತಿತ್ತೇ ವಿನಾಃ ಯಾರೂ ಉದ್ದೇಶಪೂರ್ವಕ ತೊಂದರೆ ಕೊಡಲು ಮಾಡಿದ ಕೆಟ್ಟ ಕೆಲಸವಾಗಿರಲಿಲ್ಲ. ನನ್ನ ಅಜ್ಜಿಗೋ, ಅಮ್ಮನಿಗೋ ಮನೆ ಮಂದಿ ಅಂತಹ ಹೊತ್ತಿನಲ್ಲಿ ತಮ್ಮ ತುಂಟ ದನ, ಕರುಗಳನ್ನು ಕಟ್ಟಿ ಹಾಕಬೇಕು ಎನ್ನುವ ಅಭಿಪ್ರಾಯ. ಈ ಅಸಮಾಧಾನದಿಂದ ಲೂವಿಸ್ ಪೊರ್ಬುಗಳ ಮನೆಯ ಹಾಲಿಗೆ ನಿಷೇಧವಾಗುತ್ತಿತ್ತು. ಅದು ನಾವೇ ತರದೇ ಉಳಿಯುತ್ತಿದ್ದೆವೋ ಅಥವಾ ಅವರೇ ಕೊಡುವುದಕ್ಕೆ ನಿರಾಕರಿಸುತ್ತಿದ್ದರೋ ನೆನಪಿಲ್ಲ. ಆದರೆ ಒಮ್ಮೊಮ್ಮೆ ಈ ಸಿಟ್ಟು ಅಷ್ಟಕ್ಕೇ ನಿಲ್ಲದೆ ಸ್ವಲ್ಪ ಹೆಚ್ಚಿನ ರೂಪ ಪಡಕೊಳ್ಳುತ್ತಿತ್ತು. ನಾವು ಮಕ್ಕಳು ಓಡಾಡುವಾಗ ಒಂದಿಷ್ಟು ಗೇಲಿ ಮಾಡುವ, ಹೂ ಕದ್ದೆವು ಎನ್ನುವ ಸುಳ್ಳು ಅಪವಾದಗಳನ್ನು ಹಾಕುವ ಪ್ರಹಸನಗಳು ನಡೆಯುತ್ತಿತ್ತು. ಆ ಸಂದರ್ಭಗಳಲ್ಲಿ ಸಂಜೆ ಅವರ ಮಕ್ಕಳ ಜೊತೆಗೆ ಮಲ್ಲಿಗೆ ಕೊಯ್ಯುವ ಕಾರ್ಯಕ್ರಮ ಇಲ್ಲವಾಗುತ್ತಿತ್ತು. ಅವರ ಕೋಳಿ ನಮ್ಮ ಅಂಗಳಕ್ಕೆ ಬಂತು ಎಂದು ನಮ್ಮ ಅಮ್ಮ ಗೊಣಗುತ್ತಿದ್ದರು. ಒಟ್ಟಿನಲ್ಲಿ ಸುಳ್ಳನಿಗೆ ಪಿಳ್ಳೆ ನೆವ ಎನ್ನುವಂತೆ ಎರಡು ಮನೆಯವರು ಮಾತನಾಡದೆ ಉಳಿದಾಗಲೂ ಒಳಗಿಂದೊಳಗೆ ಎಲ್ಲರಿಗೂ ಬೇಸರ. ಈ ಬೇಸರವನ್ನು ಓಡಿಸಲೋ ಎಂಬಂತೆ ಯಾವುದಾದರೂ ಒಂದು ಹಬ್ಬ ಬರುತ್ತಿತ್ತು. ಹಬ್ಬ ಬಂದಾಗ ನಮ್ಮ ಅಮ್ಮ ನೆರೆಯವರಿಗೆಲ್ಲಾ ಕಡುಬು, ಪಾಯಸ, ಚಕ್ಕುಲಿ, ಉಂಡೆ ಹೀಗೆ ಸಾಂದರ್ಭಿಕವಾಗಿ ಹಂಚುತ್ತಿದ್ದರು. ಇವುಗಳನ್ನು ಕೊಂಡು ಹೋಗಿ ಕೊಟ್ಟು ಬರುತ್ತಿದ್ದವಳು ನಾನೇ ಆಗಿರುತ್ತಿದ್ದೆ. ಆಗ ನನಗೆ ಏನೇನೂ ಸಂಕೋಚ ಇರುತ್ತಿರಲಿಲ್ಲ. ಯಾವ ಸಿಟ್ಟೂ ಅಸಮಾಧಾನವೂ ಇಲ್ಲ. ಅವರಿಗೆ ಹಬ್ಬದಡುಗೆ ಕೊಡುವುದೇ ಸಂತೋಷ. ಹೀಗೆ ಹೋದಾಗ ರೋಜಿಬಾಯಿ ನಿನ್ನ ಅಮ್ಮನಿಗೆ ಮಾಡುವುದಕ್ಕೆ ಬೇರೆ ಏನೂ ಕೆಲಸವಿಲ್ಲವೇ ಎಂದು ಹುಸಿ ಮುನಿಸಿನಿಂದ ಕೇಳಿದರೂ ಒಳಗೆ ಇದ್ದ ಮಗಳು ಹಿಲ್ಡಾನನ್ನೋ ಅಥವಾ ತೆಜ್ಜುವನ್ನೋ (ಟ್ರಿಸ್ಸಾ) ಕರೆದು ತೆಗೆದುಕೊಳ್ಳಲು ಹೇಳುತ್ತಿದ್ದರು. ಈ ಸಂದರ್ಭ ಅಲ್ಲದಿದ್ದರೆ, ಆಟಿ ತಿಂಗಳ ಅಮಾವಾಸ್ಯೆಗೆ ಹಾಲೆ ಮರದ ಕೆತ್ತೆಗೆ ಬೆಳೆಗೆದ್ದು ನಾನೇ ಹೋಗಿ ಕೆತ್ತೆ ಕೇಳುತ್ತಿದ್ದೆ. ಲೂವಿಸ್ ಪೊರ್ಬುಗಳು ಅದೆಲ್ಲಿಂದಲೋ ಬೆಳಗೆದ್ದು ಹೋಗಿ ಎಲ್ಲರಿಗೂ ಹಂಚಲಾಗುವಂತೆ ಸಾಕಷ್ಟು ತಂದು ಇಟ್ಟಿರುತ್ತಿದ್ದರು. ಹೀಗೆ ಎರಡು ಮನೆಗಳ ಸಿಟ್ಟು ಇಲ್ಲವಾಗುತ್ತಿತ್ತು. ಅವರ ಕ್ರಿಸ್ಮಸ್ ಹಬ್ಬದ ವೇಳೆ `ಕುಸ್ವಾರ್' ನಮ್ಮ ಮನೆಗೆ ಬರುತ್ತಿತ್ತು. ಕ್ರಿಸ್ಮಸ್ ಹಬ್ಬದ ಈ ಕುಸ್ವಾರ್ ನಮಗೆ ಪ್ರಿಯವಾದುದೇ. ಆದರೆ ಕ್ರಿಸ್ಮಸ್ ಹಬ್ಬಕ್ಕಾಗಿ ಅವರ ಮನೆಯಲ್ಲಿ ಸಾಕುತ್ತಿದ್ದ ಒಂದು ಹಂದಿ ಸಾಯುತ್ತಿತ್ತು. ಆ ಹಂದಿಯನ್ನು ಕೊಲ್ಲುವ ಅಮಾನುಷ ರೀತಿ ಮಾತ್ರ ನಮಗೆ ಅಸಹನೀಯವಾಗುತ್ತಿತ್ತು. ಹಂದಿಯ ಕಾಲುಗಳನ್ನು ಕಟ್ಟಿ ಅದರ ಮೇಲೆ ಬಿಸಿ ನೀರು ಚೆಲ್ಲಿ ಕೊಲ್ಲುವ ಪ್ರಯತ್ನದಲ್ಲಿ ಅದರ ಅರಚಾಟವನ್ನು ನೋಡಲು ಹೋಗುತ್ತಿರಲಿಲ್ಲವಾದರೂ, ಅದರ ಕೂಗು ಈಗಲೂ ಕಿವಿಗೆ ಕೇಳಿಸುವಂತಿದೆ. ಮಾಂಸಾಹಾರಿಗಳಲ್ಲದ ನಮಗೆ ಅದು ಇನ್ನಷ್ಟು ಬೇಸರ ತರುತ್ತಿತ್ತು. ಆದರೆ ಅನಿವಾರ್ಯ ತಾನೇ! ಇನ್ನೊಂದು ದೃಶ್ಯ ಲೂವಿಸ್ ಪೊರ್ಬುಗಳ ಮನೆಯಲ್ಲಿ ದನ, ಕರು, ಎಮ್ಮೆ ಸತ್ತಾಗ ಅದನ್ನು ನಮ್ಮ ಮನೆಯ ಮುಂದೆಯೇ ಗುಡ್ಡದಲ್ಲಿದ್ದ ಕೊರಗರು ಕೋಲಿಗೆ ಕಟ್ಟಿ ಒಯ್ಯುತ್ತಿದ್ದರು. ಇದು ಕೂಡಾ ಅವರ ಆಹಾರಕ್ಕಾಗಿ. ಅವರು ಇವುಗಳ ಚರ್ಮ ಸುಲಿದು ಒಣಗ ಹಾಕುವುದನ್ನು, ಮಾಂಸ ಒಣಗಿಸುವುದನ್ನು ಅಪರೂಪವಾಗಿ ಆ ದಾರಿಯಲ್ಲಿ ಹೋದಾಗ ನೋಡಿದ್ದೇನೆ. ಇಂದು ದೇಶಾದ್ಯಂತ ನಡೆಯುವ `ಆಹಾರ ರಾಜಕಾರಣ' ಅಂದು ಯಾಕೆ ಇರಲಿಲ್ಲ? ಎನ್ನುವುದು ನನ್ನ ಪ್ರಶ್ನೆಯಾದರೆ, ಕವಿಯೊಬ್ಬರು ಹೇಳಿದಂತೆ, `ಹಂದಿ ದನಗಳ ಮಾಂಸ ಮಂದಿರ ಮಸೀದಿಗೆ ಎಸೆಯುವವರು ಹಸಿದವರ ಮನೆಯ ಅಂಗಳಕ್ಕೆ ಎಸೆಯಿರಿ' ಎನ್ನುವ ಮಾತಿನಲ್ಲಿ ಮಾನವೀಯತೆಯ ಹೊರತು ಬೇರೇನು ಇದೆ. ನೀವೇ ಹೇಳಿ.