ಹಾಲೋ ನೀರೋ?

ಹಾಲೋ ನೀರೋ?

 ಹಾಲೋ ನೀರೋ?
ಮಿಲ್ಕ್‌ಆರ್‌ವಾಟರ್ ಎನ್ನುವ http://milkorwater.com ತಾಣ,ಶೇರು ವಹಿವಾಟು ನಡೆಸುವವರಿಗೆ ಪ್ರಿಯವಾಗಬಲ್ಲುದು.ಈ ತಾಣದಲ್ಲಿ ಶೇರು ವಹಿವಾಟದ ಬಗ್ಗೆ ಭವಿಷ್ಯ ನುಡಿವ ಪರಿಣತರ ಹಿಂದಿನ ಭವಿಷ್ಯವಾಣಿಗಳ ಯಶಸ್ಸಿನ ಪ್ರಮಾಣ ಹೇಗಿತ್ತು ಎಂಬಂತಹ ವಿವರಗಳು ಲಭ್ಯ.ಶೇರುಗಳನ್ನು ಖರೀದಿಸಲು,ಮಾರಲು ಸಲಹೆ ಕೊಡುವವರು ಸಾಕಷ್ಟು ಜನ.ಅದರೆ ಅವರ ಶಿಫಾರಸುಗಳ ಅವಸ್ಥೆ ಏನಾಯಿತು? ಅವುಗಳು ಬರೇ ಬೊಗಳೆಯೇ ಅಲ್ಲ ಅವನ್ನು ನಂಬಿದವರು ಕಾಸು ಮಾಡಿಕೊಂಡರೇ ಎನ್ನುವ ಬಗ್ಗೆ ಯಾವ ಮಾಹಿತಿಯೂ ಸಿಗುವುದಿಲ್ಲ.ಈ ಹೊಸ ತಾಣವನ್ನು ವಿಪ್ರೋದ ಮಾಜಿ ಉದ್ಯೋಗಿಯೋರ್ವರು ಅಭಿವೃದ್ಧಿ ಪಡಿಸುತ್ತಿದ್ದು,ಮುಂದಿನ ದಿನಗಳಲ್ಲಿ ಶೇರು ಬಗ್ಗೆ ಮಾತ್ರವಲ್ಲದೆ ಮ್ಯೂಚುವಲ್ ಫಂಡ್,ಸರಕುಗಳು ಇತ್ಯಾದಿಗಳ ಬಗೆಗಿನ ಶಿಫಾರಸುಗಳ ಬಗ್ಗೆಯೂ ಮಾಹಿತಿ ದೊರಕಲಿದೆ.ಹೈದರಾಬಾದಿನ ಅಮರದೀಪ ಲಖ್‌ತಾಕಿಯಾ ಅವರು ಈ ತಾಣ ಆರಂಭಿಸಿ ತಿಂಗಳಿನ್ನೂ ತುಂಬಿಲ್ಲ.ಅವರ ಕುಟುಂಬದವರು ವಿವಿಧ ಶಿಫಾರಸುಗಳ ಬೆನ್ನು ಹಿಡಿದು,ಕೈಸುಟ್ಟುಕೊಂಡದ್ದನ್ನು ನೋಡಿದ ಬಳಿಕ ಅವರಿಗೆ ಈ ಯೋಚನೆ ಬಂತಂತೆ.
------------------------------
ನಗರ ಆಪರೇಟಿಂಗ್ ವ್ಯವಸ್ಥೆ

ಕಂಪ್ಯೂಟರ್ ಆಪರೇಟಿಂಗ್ ವ್ಯವಸ್ಥೆ ಬಗ್ಗೆ ನಮಗೆಲ್ಲಾ ಗೊತ್ತು.ಕಂಪ್ಯೂಟರಿನ ಕಾರ್ಯನಿರ್ವಹಣೆಯನ್ನು ನಿಯಂತ್ರಿಸುವ ತಂತ್ರಾಂಶ ವ್ಯವಸ್ಥೆ ವಿಂಡೋಸ್,ಲೀನಕ್ಸ್ ಅಂತೆ ಮುಂದಿನ ದಿನಗಳಲ್ಲಿ ನಮ್ಮ ನಗರಗಳನ್ನು ನಿಯಂತ್ರಿಸಲು,ಅವುಗಳ ಸಾರಿಗೆ,ಜನಸಂಚಾರ,ಪಾರ್ಕಿಂಗ್,ನೀರು,ವಿದ್ಯುತ್,ಇಂಧನ ಪೂರೈಕೆ,ಅಗ್ನಿಶಾಮಕ ವ್ಯವಸ್ಥೆ,ಸುರಕ್ಷತೆ,ಭದ್ರತಾ ವ್ಯವಸ್ಥೆ ಇವೆಲ್ಲವನ್ನೂ ನಿಯಂತ್ರಿಸುವ ಸಮಗ್ರ ತಂತ್ರಾಂಶ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಬಹುದೇ? ಅ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ.ಅಂತಹ ವ್ಯವಸ್ಥೆ ಬಂದರೆ,ಸಕಲ ವ್ಯವಸ್ಥೆಗಳೂ ಸ್ವಯಂಚಾಲಿತವಾಗಿ,ಅವುಗಳು ಸೂಪರ್ ಕಂಪ್ಯೂಟರ್ ಅಂತಹ ವ್ಯವಸ್ಥೆಯ ಸಹಾಯದಿಂದ ಮಾದರಿ ನಗರಗಳನ್ನು ನಿಯಂತ್ರಿಸಲಿವೆ.ಇಂತಹ ವ್ಯವಸ್ಥೆಯಲ್ಲಿ ಸುಮಾರು ಐವತ್ತು ಬಿಲಿಯನ್ ಸಂಪರ್ಕಿತ ಸಾಧನಗಳು ಜತೆಯಾಗಿ ಕೆಲಸ ಮಾದಬೇಕಾಗ ಬರಬಹುದು ಎನ್ನುವ ಅಂದಾಜು ಮಾಡಲಾಗಿದೆ.ಹಲವಾರು ರೀತಿಯ ಸಂವೇದಕಗಳನ್ನು,ನಗರಗಳ ಸುತ್ತ ಸ್ಥಾಪಿಸಿ,ಅವುಗಳ ಸಹಾಯದಿಂದ ವ್ಯವಸ್ಥೆಗಳನ್ನು ನಿಯಂತ್ರಿಸಲು ಕಂಪ್ಯೂಟರುಗಳಿಗೆ ಸಾಧ್ಯವಾಗಲಿದೆಮೆಟ್ರೋ,ರೈಲ್ವೇ,ಬಸ್,ಖಾಸಗಿ ಸಾರಿಗೆ ಇವೆಲ್ಲವೂ ಒಂದೆಡೆಯಿಂದ ನಿಯಂತ್ರಣವಾಗಲಿವೆ.ಹೀಗಾದಾಗ ವ್ಯವಸ್ಥೆಗಳ   ನಡುವಣ ತಾಳಮೇಳ ಹೆಚ್ಚಬಹುದು.ಪೋರ್ಚುಗಲ್‌ನಲ್ಲಿ ಪ್ರಾಯೋಗಿಕ ವ್ಯವಸ್ಥೆಯೊಂದರ ಅಳವಡಿಕೆಯೂ ಆಗಿದೆ.
----------------------------------------------
ಗೂಗಲ್ ವಿಶ್ಲೇಷಕ
ಅಂತರ್ಜಾಲ ತಾಣಕ್ಕೆ ಭೇಟಿ ನೀಡುವವರ ಸಂಖ್ಯೆ,ಅವರ ಮೂಲ ಯಾವುದು,ಅವರು ಎಷ್ಟು ಹೊತ್ತು ತಾಣದಲ್ಲಿ ಸಮಯ ಕಳೆಯುತ್ತಾರೆ,ನಂತರ ಯಾವ ತಾಣದತ್ತ ಹೋದರು ಎಂಬಂತಹ ವಿವರಗಳು ಕುತೂಹಲಿಗಳಿಗೆ ಉತ್ತಮ ಅಹಾರವಾಗುತ್ತದೆ.ಮಾತ್ರವಲ್ಲದೆ ಜನಪ್ರಿಯ ತಾಣಗಳ ನಿರ್ವಾಹಕರಿಗೆ ತಮ್ಮ ತಾಣಕ್ಕೆ ಜನರನ್ನು ಅಕರ್ಷಿಸಲು,ಇವು ಬಹಳ ಸಹಾಯವನ್ನೂ ಮಾಡುತ್ತವೆ.ಇಂತಹ ವಿಶ್ಲೇಷಣೆ ಗೂಗಲ್ ಹಿಂದಿನಿಂದಲೂ ಒದಗಿಸುತ್ತಾ ಬಂದಿದೆಯಾದರೂ,ಉಚಿತ ಸೇವೆಯಲ್ಲಿ ಈ ವಿಶ್ಲೇಷಣೆಯು ಹಳೆಯ ಮಾಹಿತಿಯನ್ನು ಮಾತ್ರಾ ಒದಗಿಸುತ್ತಿತ್ತು.ಇದೀಗ ನೇರವಾಗಿ- ಸದ್ಯ ತಾಣದ ಬಳಕೆ ಹೇಗೆ ನಡೆದಿದೆ ಎನ್ನುವ ತಾಜಾ ಮಾಹಿತಿಗಳನ್ನೂ ಒದಗಿಸಲು ಗೂಗಲ್ ಮುಂದಾಗಿದೆ.ಇದರ ಪಾವತಿ ಸೇವೆಯು ಹೆಚ್ಚು ಸುಧಾರಿತ ರೂಪದ ಸೇವೆಯನ್ನು ನೀಡಲಿದ್ದು,ಉಚಿತವಾಗಿಯೂ ಲೈವ್ ಮಾಹಿತಿ ಲಭ್ಯವಾಗುವುದು ವಿಶೇಷ.
------------------------------------------------
ಚೀನಾದ ಬಾಹ್ಯಾಕಾಶ ಪ್ರಯೋಗಾಲಯ
ಚೀನಾ ಬಾಹ್ಯಾಕಾಶದಲ್ಲಿ ಮಾನವ ರಹಿತ ಪ್ರಯೋಗಾಲಯದ ಸ್ಥಾಪನೆಗೆ ಮುಂದಾಗಿದೆ.ತಿಯಮ್ಗೋಂಗ್ ಹೆಸರಿನ ಬಾಹ್ಯಾಕಾಶ ಪ್ರಯೋಗಾಲಯವನ್ನು ರಾಕೆಟ್ ಸಹಾಯದಿಂದ ಉಡ್ಡಯಿಸಲಾಯಿತು.ಸುಮಾರು ಮುನ್ನೂರೈವತ್ತು ಕಿಲೋಮೀಟರ್ ಎತ್ತರದ ಕಕ್ಷೆಗೆ ಏರಿದ ಪ್ರಯೋಗಾಲಯ ಭೂಮಿಯ ಸುತ್ತ ತಿರುಗುತ್ತಲಿರುತ್ತದೆ.ಮುಂದೆ ಇದರ ಎರಡನೇ ಕೇಂದ್ರವನ್ನು ಉಡ್ಡಯಿಸಿ,ಮೊದಲಿನದರ ಜೊತೆ ಕೂಡಿಸುವ ಯೋಜನೆಯಿದೆ.ನಂತರ ಬಾಹ್ಯಾಕಾಶಕ್ಕೆ ಯಾತ್ರಿಯನ್ನು ಕಳುಹಿಸಿ,ಅತ ಈ ಪ್ರಯೋಗಾಲಯದಲ್ಲಿ ಉಳಕೊಂಡು ಪ್ರಯೋಗಗಳನ್ನು ಮಾಡುವ ಯೋಜನೆಯೂ ಅನುಷ್ಠಾನಕ್ಕೆ ಬರಬಹುದು.ಎಲ್ಲವು ಲೆಕ್ಕಾಚಾರದಂತೆ ನಡೆದರೆ,2012,ರ ವೇಳೆಗೆ ಈ ಕನಸು ಕೈಗೂಡಬಹುದು.ಅಂತಾರ್ರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಹಾಗೇ ಇದನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಇವು ಮೊದಲ ಹೆಜ್ಜೆಗಳು.
-------------------------------------
ಐಬಿಎಂ ಮೈಕ್ರೋಸಾಫ್ಟ್ ಹಣಾಹಣಿ
ಶೇರು ಬೆಲೆಯ ಅಧಾರದಲ್ಲಿ ಐಬಿಎಂ ಕಂಪೆನಿಯು ಮೈಕ್ರೋಸಾಫ್ಟ್ ಕಂಪೆನಿಯನ್ನು ಹಿಂದಿಕ್ಕಲು ಸಫಲವಾಗಿದೆ.ಈ ವಾರದಲ್ಲಿ ಐಬಿಎಂ ಶೇರಿನ ಒಟ್ಟು ಮಾರುಕಟ್ಟೆ ಮೌಲ್ಯ ಇನ್ನೂರ ಹದಿನಾಲ್ಕು ಬಿಲಿಯನ್ ಆಗಿ,  ಮೈಕ್ರೋಸಾಫ್ಟಿನ ಬೆಲೆಗಿಂತ ಮೇಲೇರಿತ್ತು.ಆಪಲ್ ಕಂಪೆನಿಯು ಇದರ ಮಟ್ಟಿಗೆ ಮೊದಲ ಸ್ಥಾನದಲ್ಲಿದ್ದು,ಅದರ ಶೇರು ಮೌಲ್ಯ,ಸದ್ಯ ಮುನ್ನೂರರೌವತ್ತೆರ್ರಡು ಬಿಲಿಯನ್ ಡಾಲರುಗಳು.
-------------------------------------
ಲೀನಕ್ಸ್:ಕೆಲಸ ಖಾಲಿಯಿದೆ
ಲೀನಕ್ಸ್ ಬಲ್ಲವರಿಗೆ ಕೆಲಸ ಸಿಗುವುದು ಸುಲಭ.ವಾರಕ್ಕೆ ಏನಿಲ್ಲವೆಂದರೂ ಹತ್ತು ಸಾವಿರ ಲೀನಕ್ಸ್ ಕೆಲಸಗಳಿಗೆ ಬೇಡಿಕೆಯಿರುತ್ತದೆ ಎಂದು ಅಂದಾಜು.ಮುಕ್ತ ಮತ್ತು ಉಚಿತ ತಂತ್ರಾಂಶ ಯೋಜನೆಗಳಲ್ಲಿ ಕೈಗೂಡಿಸಿ,ಕೆಲಸ ಮಾಡಿ,ಅನುಭವ ಗಳಿಸುವುದು,ಮತ್ತು ತಮ್ಮ ಪ್ರಾಜೆಕ್ಟ್‌ಗಳ ವಿವರಗಳನ್ನು ನೀಡಿ,ಸ್ವವಿವರವನ್ನು ಸಿದ್ಧ ಪಡಿಸಿಟ್ಟುಕೊಳ್ಳುವುದು,ನೌಕರಿ ಬೇಕಾದವರು ಅಗತ್ಯ ಮಾಡಬೇಕಾದ ಕೆಲಸ.ಹೆಚ್ಚು ಅನುಭವ ಪಡೆದಂತೆಲ್ಲಾ, ಬೇಡಿಕೆ ಜಾಸ್ತಿ.ಲೀನಕ್ಸ್ ಬಲ್ಲ ಪರಿಣತರ ಕೊರತೆ ತಂತ್ರಜ್ಞಾನವಲಯವನ್ನು ಸದಾ ಬಾಧಿಸುತ್ತದೆ.ಲೀನಕ್ಸ್‌ನಲ್ಲಿ ಕೈಯಾಡಿಸುವವರು ತಮ್ಮಷ್ಟಕ್ಕೇ ಕಲಿಯುವ ಏಕಲವ್ಯರೇ ಹೆಚ್ಚು.ಹೀಗಾಗಿ,ಅಂತವರು ತಮ್ಮ ವಿವರಗಳನ್ನು ಸರಿಯಾಗಿ ನೀಡಿ,ಕೆಲಸಕ್ಕಾಗಿ ಅರ್ಜಿ ಸಲ್ಲಿಸುವುದು ಮುಖ್ಯವಾಗುತ್ತದೆ.
--------------------------
ತುಷಾರ:ವಾರ್ಷಿಕ  ಚಂದಾ ಗೆಲ್ಲಿ!
ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಶೋಭಾ ಮೋಹನ್,ಬೆಂಗಳೂರು.
*ಸೈಬರ್ ಬ್ರೌಸಿಂಗ್ ಕೇಂದ್ರಗಳ ನಿಯಂತ್ರಣಕ್ಕೆ ಲಭ್ಯವಿರುವ ಉಚಿತ ತಂತ್ರಾಂಶ ಯಾವುದು?
(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS50 ನಮೂದಿಸಿ.)
ಕಳೆದ ವಾರದ ಬಹುಮಾನಿತ ಉತ್ತರ:
*ಮುಂದಿನ ಮಿನಿಡೆಬಿಯನ್ ಕಾನ್ಫರೆನ್ಸ್ ನಡೆಯುವ ಸ್ಥಳ ನಿಟ್ಟೆ ಎನ್ ಎಂ ಎ ಎಂ ಐ ಟಿ.ಅಕ್ಟೋಬರ್ 28,29,2011ಬಹುಮಾನ ವಿಜೇತರು ಜ್ಯೋತಿಕಾ ಭಟ್.ಅಭಿನಂದನೆಗಳು.



Udayavani
*ಅಶೋಕ್‌ಕುಮಾರ್ ಎ

Comments