ಹಾವನ್ನು ಅದರ ವಿಷವೇ ವಿನಾಶದತ್ತ ಕೊಂಡೊಯ್ಯುತ್ತಿದೆಯೇ?

ಹಾವನ್ನು ಅದರ ವಿಷವೇ ವಿನಾಶದತ್ತ ಕೊಂಡೊಯ್ಯುತ್ತಿದೆಯೇ?

‘ಹಾವು' ಎಂಬ ಪದ ಕೇಳಿದೊಡನೆಯೇ ಎಲ್ಲರೂ ಭಯಬೀಳುತ್ತಾರೆ. ಆ ಹಾವಿನಲ್ಲಿ ವಿಷ ಇದೆಯೋ ಅಥವಾ ಇಲ್ಲವೋ ಎಂಬ ಯಾವ ಕಲ್ಪನೆಯೂ ಇಲ್ಲದೆ ಭಯ ಉಂಟಾಗುತ್ತದೆ. ಏಕೆಂದರೆ ಹಾವನ್ನು ನೋಡಿದಾಗ ಯಾವುದು ವಿಷಯುಕ್ತ ಮತ್ತು ಯಾವುದು ವಿಷ ಇಲ್ಲದ್ದು ಎಂದು ಗುರುತಿಸಲು ಸಾಮಾನ್ಯ ಜನರಿಗೆ ಗೊತ್ತಾಗುವುದಿಲ್ಲ. ಹಾವುಗಳ ಬಗ್ಗೆ ನಮ್ಮ ಹೆದರಿಕೆ ಎಷ್ಟಿದೆ ಎಂದರೆ ಕತ್ತಲಿನಲ್ಲಿ ಹಗ್ಗವನ್ನು ಎಡವಿದರೂ ಹಾವನ್ನು ತುಳಿದಂತೆ ಆಡುತ್ತೇವೆ. ಈ ಭಯ ನಮ್ಮನ್ನು ಹಾವುಗಳನ್ನು ಕೊಲ್ಲುವಂತೆ ಪ್ರಚೋದಿಸುತ್ತದೆ. ನಮ್ಮ ಪರಿಸರದಲ್ಲಿ ಹಾವುಗಳಿರಬೇಕಾದ್ದು ಬಹುಮುಖ್ಯ. ಏಕೆಂದರೆ ಹಾವುಗಳು ಹಲವಾರು ಮಾನವ ಉಪದ್ರವಿ ಜೀವಿಗಳನ್ನು (ಅದರಲ್ಲೂ ಬಹುಮುಖ್ಯವಾದದ್ದು ಇಲಿ) ಹಿಡಿದು ತಿನ್ನುತ್ತವೆ. ಅದೇ ರೀತಿ ಹಾವುಗಳು ಮುಂಗುಸಿ, ಹದ್ದು, ನವಿಲು ಮೊದಲಾದುವುಗಳಿಗೆ ಆಹಾರ. ಇವುಗಳಲ್ಲಿ ಒಂದು ಸರಪಳಿ (ಚೈನ್) ತಪ್ಪಿದರೂ ಪರಿಸರದಲ್ಲಿ ಅಸಮತೋಲನ ಕಾಡುತ್ತದೆ. ಈ ಕಾರಣದಿಂದ ಆಹಾರ ಸರಪಳಿ ಸರಿಯಾಗಿರಲು ಹಾವುಗಳಿರುವುದು ಬಹುಮುಖ್ಯ.

ನಾಗರಹಾವನ್ನು ನಾವು ಪುರಾಣಗಳ ಕಥೆಗಳ ಕಾರಣದಿಂದ ಪೂಜನೀಯ ಭಾವನೆಯಿಂದ ನೋಡುವುದರಿಂದ ಅವುಗಳನ್ನು ಹತ್ಯೆ ಮಾಡುತ್ತಿಲ್ಲ. ಆದರೆ ಈ ನಾಗರ ಹಾವನ್ನು ಪೂಜಿಸುವ ನೆಪದಲ್ಲಿ ನಾಗರ ಪಂಚಮಿ ಹಬ್ಬದಂದು ಹಾಲನ್ನು ಕುಡಿಸುತ್ತೇವೆ. ಹಾಲು ನಾಗರ ಹಾವಿನ ಆಹಾರವಲ್ಲ. ಈ ಕಾರಣದಿಂದ ಹಾವು ಹಾಲನ್ನು ಕುಡಿಯುವುದಿಲ್ಲ. ಬಲವಂತವಾಗಿ ಕುಡಿಸಿದರೆ ಅದರ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಬಲವಂತದ ಹಾಲು ಸೇವನೆಯಿಂದ ಹಾವುಗಳು ನಿಶ್ಯಕ್ತಿಹೊಂದುತ್ತವೆ. ಬಲಹೀನವಾಗುತ್ತವೆ. ಹಾಲು ಹಾವಿನ ಹೊಟ್ಟೆಯನ್ನು ಸೇರುವ ಬದಲು ಅದರ ಶ್ವಾಸಕೋಶವನ್ನು ಸೇರಿ ಸಾವನ್ನಪ್ಪುತ್ತದೆ. 

ನಾವೆಷ್ಟು ಹಾವಿಗೆ ಹೆದರುತ್ತೇವೆಯೋ ಅದರ ನೂರು ಪಾಲು ಹಾವುಗಳು ನಮ್ಮನ್ನು ನೋಡಿ ಹೆದರುತ್ತವೆ. ಅವು ತಮ್ಮ ಬಹುಪಾಲು ಜೀವನವನ್ನು ಶತ್ರುಗಳಿಂದ ರಕ್ಷಿಸಿಕೊಳ್ಳುವುದರಲ್ಲೇ ಕಳೆಯುತ್ತವೆ. ವಿಪರ್ಯಾಸದ ಸಂಗತಿ ಎಂದರೆ ಯಾವ ವಿಷ ಅದರ ಜೀವವನ್ನು ರಕ್ಷಣೆ ಮಾಡಬೇಕಿತ್ತೋ ಅದೇ ವಿಷ ಅದರ ಜೀವನವನ್ನು ನಾಶ ಮಾಡುತ್ತಿದೆ. ವಿಷದ ಹಾವು ಎಂದರೆ ಸಾಕು ಮಾನವ ಅದನ್ನು ಬಡಿದುಕೊಲ್ಲುತ್ತಾನೆ. ಕೆಲವು ಹಾವಿನ ವಿಷಗಳು ಔಷಧಕ್ಕೆ ಬಳಕೆಯಾಗುತ್ತವೆ. ಇದನ್ನು ನುರಿತ ಪರಿಣಿತರು ತೆಗೆದರೆ ಮಾತ್ರ ಹಾವು ಬದುಕುತ್ತದೆ. ಆದರೆ ಕೆಲವು ಹಾವಾಡಿಗರು ಹಾವಿನ ವಿಷದ ಚೀಲ ಅಥವಾ ಹಲ್ಲನ್ನು ಕೀಳಲು ಹೋಗಿ ಅದರ ಜೀವಕ್ಕೇ ಎರವಾಗುತ್ತಾರೆ. 

ನಿಮಗೆ ಗೊತ್ತೇ? ಭಾರತದಲ್ಲಿ ಸುಮಾರು ೨೫೦ ಹಾವುಗಳ ಜಾತಿಗಳನ್ನು ಗುರುತಿಸಲಾಗಿದೆ. ಇದರಲ್ಲಿ ವಿಷಪೂರಿತ ಹಾವುಗಳ ಸಂಖ್ಯೆ ಬಹಳ ಕಡಿಮೆ ಅಂದರೆ ೧೦ಶೇ. ಇರಬಹುದೇನೋ?. ಅಂದರೆ ಬಹು ಸಂಖ್ಯೆಯ ಹಾವುಗಳು ವಿಷಕಾರಿಯಲ್ಲ. ಅವುಗಳು ನಿರುಪದ್ರವಿಗಳು. ಆದರೆ ವಿಷ ಇಲ್ಲದ ಹಾವುಗಳನ್ನು ಗುರುತಿಸಲಾರದೇ ಮಾನವ ಅವುಗಳನ್ನೂ ಹತ್ಯೆ ಮಾಡುತ್ತಾನೆ. ಹಾವಿನ ಕಡಿತದಿಂದ ತೊಂದರೆಯಾಗುವುದಕ್ಕಿಂತಲೂ ಅಧಿಕ ಮಂದಿ ಭಾರತದಲ್ಲಿ ಇಲಿಗಳ ಕಡಿತದಿಂದ ಆಸ್ಪತ್ರೆ ಸೇರುತ್ತಾರೆ. ಹಾವುಗಳ ಪ್ರಮಾಣ ಪ್ರಕೃತಿಯಲ್ಲಿ ಸರಿಯಾಗಿದ್ದರೆ ಮೂಷಿಕಗಳ ಪ್ರಮಾಣ ನಿಯಂತ್ರಣದಲ್ಲಿರುತ್ತದೆ.

ಇಲಿಗಳು ತಿಂದು ಹಾಕುವ ದವಸ ಧಾನ್ಯಗಳ ಪ್ರಮಾಣ ಅಪಾರ. ಇಲಿಗಳನ್ನು ಹಿಡಿಯುವ ಜೀವಿಗಳಾದ ಹಾವುಗಳು ಮತ್ತು ಗೂಬೆಗಳನ್ನು ನಾವು ನಾಶ ಮಾಡುತ್ತಲೇ ಬಂದಿದ್ದೇವೆ. ಭವಿಷ್ಯದಲ್ಲಿ ಎಲ್ಲಿಯಾದರೂ ಈ ಜೀವಿಗಳು ಅಳಿದುಹೋದಲ್ಲಿ ನಮಗೆ ತಿನ್ನಲು ಆಹಾರ ಸಿಗುವುದೇ ಸಂಶಯ. ಏಕೆಂದರೆ ಇಲಿಗಳ ಸಂಖ್ಯೆ ಹೆಚ್ಚಾಗಿ ಆಹಾರ ವಸ್ತುಗಳನ್ನು ತಿಂದು ಹಾಕಿ ಕೊರತೆ ಕಾಡುತ್ತದೆ. 

ಹಾವುಗಳ ದೇಹರಚನೆಯನ್ನು ಗಮನಿಸಿದರೆ ಅದರ ತಲೆ ಬುರುಡೆ, ಬೆನ್ನುಮೂಳೆ ಮತ್ತು ಪಕ್ಕೆಲುಬುಗಳ ಹಂದರದಲ್ಲಿ ರೂಪುಗೊಂಡಿದೆ. ಹಾವಿನ ಚರ್ಮವು ಎರಡು ಪೊರೆಗಳಿಂದ ರಚನೆ ಆಗಿದೆ. ಒಳಪೊರೆ ಸಜೀವ ಕೋಶಗಳಿಂದ ಕೂಡಿದ್ದು ಬೆಳೆಯುತ್ತಿರುತ್ತದೆ. ಹೊರ ಪೊರೆ ನಿರ್ಜೀವ ಕೋಶಗಳಿಂದ ರಚನೆಯಾಗಿದೆ. ಈ ಕಾರಣದಿಂದ ಕಾಲಕಾಲಕ್ಕೆ ಹಾವು ತನ್ನ ಹೊರ ಪೊರೆಯನ್ನು ಕಳಚಿಕೊಳ್ಳುತ್ತದೆ. ಹಾವಿನ ದವಡೆಗಳ ರಚನೆ ವಿಭಿನ್ನವಾಗಿರುವುದರಿಂದ ಇದು ತನ್ನ ಬಾಯಿಯನ್ನು ಬಹಳ ಅಗಲವಾಗಿ ತೆರೆಯಬಲ್ಲದು. ಈ ಕಾರಣದಿಂದ ಎಷ್ಟೇ ದೊಡ್ಡ ಜೀವಿಯನ್ನಾದರೂ ಅದು ನುಂಗುತ್ತದೆ. ಹಾವಿಗೆ ಶ್ರವಣ ಸಾಮರ್ಥ್ಯ ಇರುವುದಿಲ್ಲ. ಆದರೆ ಭೂಮಿಯ ಮೇಲಿನ ಚಲನೆಗಳ ತರಂಗಗಳಿಗೆ ಸ್ಪಂದಿಸುತ್ತವೆ. ಕಣ್ಣು ಅಷ್ಟೊಂದು ಸ್ಪಷ್ಟವಾಗಿ ಕಾಣಿಸದೇ ಇದ್ದರೂ ಅದರ ನಾಲಗೆ ಬಹಳ ಸೂಕ್ಸ್ಮ. ಹಾವುಗಳ ನಾಲಿಗೆಗೆ ಹೊಂದಿಕೊಂಡಿರುವ ‘ಜಾಕೋಬ್ಸನ್' (Jacobson’s organ) ಎಂಬ ಅಂಗವು ಅತ್ಯಂತ ಸೂಕ್ಷ್ಮವಾದ ವಾಸನೆಯನ್ನೂ ಗ್ರಹಿಸುತ್ತದೆ. ಈ ಕಾರಣದಿಂದಲೇ ಹಾವು ಸದಾಕಾಲ ತನ್ನ ನಾಲಗೆಯನ್ನು ಹೊರ ಚಾಚುತ್ತಿರುತ್ತದೆ. 

ಹಾವಿನ ಬಗ್ಗೆ ಈಗೀಗ ಹಲವಾರು ಮಂದಿ ಉರಗ ಪ್ರೇಮಿಗಳು ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ಎಲ್ಲಾದರೂ ಹಾವು ಅಥವಾ ಅದರ ಮೊಟ್ಟೆಗಳು ಕಂಡು ಬಂದರೆ ಅದನ್ನು ಕಾಪಾಡುತ್ತಾರೆ. ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿನ ಪ್ರದೇಶಕ್ಕೆ ಬಿಟ್ಟು ಬರುವ ಉರಗ ಪ್ರೇಮಿಗಳ ಸಂಖ್ಯೆಯೂ ಅಧಿಕವಾಗುತ್ತಿದೆ. ಮೊಟ್ಟೆಗಳನ್ನು ಕೃತಕ ವಿಧಾನದಲ್ಲಿ ಕಾವು ಕೊಟ್ಟು ಅವುಗಳಿಂದ ಮರಿಗಳು ಹೊರ ಬಂದ ಬಳಿಕ ಸುರಕ್ಷಿತ ತಾಣಕ್ಕೆ ಬಿಟ್ಟು ಬರುವ ಪ್ರಯತ್ನಗಳು ನಡೆಯುತ್ತಿವೆ. ಇವೆಲ್ಲಾ ನಮ್ಮ ಪರಿಸರದ ಸಮತೋಲನ ಕಾಪಾಡಲು ಅತೀ ಅಗತ್ಯ. 

ಈ ಕಾರಣದಿಂದಲೇ ನಿಮ್ಮ ಕಣ್ಣ ಮುಂದೆ ಹಾವು ಕಾಣಿಸಿದರೆ ಅದನ್ನು ಕೊಲ್ಲಲು ಹೋಗಬೇಡಿ. ಅದು ಅದರಷ್ಟಕ್ಕೇ ಹೋಗುತ್ತದೆ. ಮನೆಯೊಳಗೆ ಬಂದರೆ ಉರಗತಜ್ಞರಿಗೆ ಕರೆ ಮಾಡಿ ಅವರು ಅದನ್ನು ಸುರಕ್ಷಿತವಾಗಿ ಹಿಡಿಯುತ್ತಾರೆ. ಹಾವಿಗೆ ಸಿನೆಮಾದಲ್ಲಿ ತೋರಿಸಿದ ಹಾಗೆ ಹನ್ನೆರಡು ವರುಷದ ನೆನಪು ಶಕ್ತಿ ಎಲ್ಲಾ ಇರುವುದಿಲ್ಲ. ಈ ಕಾರಣದಿಂದ ನೀವು ಎಲ್ಲಾದರೂ ತಪ್ಪಿ ಹಾವನ್ನು ತುಳಿದಿದ್ದರೂ ಅದು ಭವಿಷ್ಯದಲ್ಲಿ ನಿಮ್ಮನ್ನು ಗುರುತು ಹಿಡಿದು ಬಂದು ಕಚ್ಚುವ ಸಾಧ್ಯತೆ ಇಲ್ಲ. ವಿನಾಕಾರಣ ಹಾವುಗಳ ನಾಶ ಮಾಡಬೇಡಿ. ನಾಗರ ಹಾವು, ಕಾಳಿಂಗ ಸರ್ಪ, ರಸೆಲ್ ವೈಪರ್ (ಕಂದೋಡಿ ಹಾವು) ಮೊದಲಾದ ಕೆಲವು ಹಾವುಗಳು ಮಾತ್ರ ವಿಷಕಾರಿಯಾಗಿರುತ್ತವೆ. ಉಳಿದಂತೆ ಕೇರೆ ಹಾವು, ಹೆಬ್ಬಾವು, ನೀರು ಹಾವು ಇಂತಹ ಹಾವುಗಳಲ್ಲಿ ವಿಷ ಇಲ್ಲ. ಹಾವುಗಳನ್ನು ಉಳಿಸಿದರೆ ಪ್ರಕೃತಿಯಲ್ಲಿ ಆಹಾರದ ಸರಪಳಿ ಸಹಜ ಸ್ಥಿತಿಯಲ್ಲಿರುತ್ತದೆ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ