ಹಾವಿನಿಂದ ಹಾಳಾದ ದ್ವೀಪದ ಜೀವಜಾಲ

ಹಾವಿನಿಂದ ಹಾಳಾದ ದ್ವೀಪದ ಜೀವಜಾಲ

ಶಾಂತಸಾಗರದ ಪಶ್ಚಿಮ ಭಾಗದಲ್ಲೊಂದು ಪುಟ್ಟ ದ್ವೀಪ. ಹವಾಯಿಯಿಂದ ೬,೦೦೦ ಕಿಮೀ ಪಶ್ಚಿಮದಲ್ಲಿ ಮತ್ತು ಜಪಾನಿನಿಂದ ೨,೫೦೦ ಕಿಮೀ ಪೂರ್ವದಲ್ಲಿರುವ ಆ ದ್ವೀಪದ ವಿಸ್ತೀರ್ಣ ೫೫೦ ಚದರ ಕಿಮೀ ಮತ್ತು ಜನಸಂಖ್ಯೆ ಸುಮಾರು ಎರಡು ಲಕ್ಷ. ಅದರ ಹೆಸರು ಗುಆಮ್.

ಅಲ್ಲಿ ಕಂದುಬಣ್ಣದ ಮರಹಾವುಗಳಿಂದಾದ ಹಾವಳಿ ಅಗಾಧ. ರಾತ್ರಿ ಸಂಚರಿಸುವ ಈ ಹಾವುಗಳು (ಪ್ರಾಣಿಶಾಸ್ತ್ರೀಯ ಹೆಸರು: ಬೊಯಿಗಾ ಇರೆಗುಲಾರಿಸ್) ಕಣ್ಣಿಗೆ ಕಾಣಿಸದಂತೆ ಅಡಗಿಕೊಳ್ಳುತ್ತವೆ. ಯಾವುದೇ ಜೀವಿಯನ್ನು ತಿನ್ನುತ್ತವೆ. ಗುಆಮ್‌ನ ಹಕ್ಕಿಗಳನ್ನೂ, ಅವುಗಳ ಮೊಟ್ಟೆಗಳನ್ನೂ ಹಾವುಗಳು ತಿಂದು ತೇಗಿದ ಬಳಿಕ ಅಲ್ಲಿ ಹಕ್ಕಿಗಳ ಹಾಡು ಕೇಳುವುದಿಲ್ಲ. ಅದಲ್ಲದೆ, ಅಲ್ಲಿ ಆಗಾಗ ವಿದ್ಯುತ್ ಸರಬರಾಜು ನಿಲುಗಡೆ. ಯಾಕೆಂದರೆ, ಹಾವುಗಳು ಸಿಕ್ಕಸಿಕ್ಕ ವಿದ್ಯುತ್ ಕಂಬ ಹತ್ತಿ ವಯರುಗಳಲ್ಲಿ ಸರಿದಾಡುವಾಗ ಷಾರ್ಟ್ ಸರ್ಕ್ಯೂಟ್ ಆಗುತ್ತದೆ. ಅಬ್ಬಬ್ಬ, ಮನೆಗಳಲ್ಲೂ ಹಾವುಗಳ ಕಾಟ. ಸಾಕುಪ್ರಾಣಿಗಳನ್ನು ನುಂಗುವುದಲ್ಲದೆ, ಶಿಶುಗಳನ್ನೂ ನುಂಗಲು ಹಾವುಗಳ ಹವಣಿಕೆ! ಅವುಗಳ ವಿಷ ಕ್ಷೀಣ. ಹಾಗಾಗಿ ಎಳೆಮಕ್ಕಳ ಜೀವಹಾನಿಯಾಗಿಲ್ಲ.

ಇದೆಲ್ಲ ಶುರುವಾದದ್ದು ಹೇಗೆ? ೨ನೇ ಜಾಗತಿಕ ಯುದ್ಧದ ಕಾಲದಲ್ಲಿ ನ್ಯೂಗಿನಿಯಾ ಅಥವಾ ಸೊಲೊಮನ್ ದ್ವೀಪಗಳಿಂದ ಗುಆಮ್‌ನಲ್ಲಿದ್ದ ಯುಎಸ್‌ಎ ದೇಶದ ಸೇನಾನೆಲೆಗೆ ಬಂದಿದ್ದ ಸರಕು ಜೊತೆಗೆ ಕೆಲವು ಹಾವುಗಳೂ ಬಂದಿರಬೇಕು.

"ಕೆಲವೇ ಕೆಲವು ಹಾವುಗಳು ತಾನೇ? ಅವುಗಳ ಪಾಡಿಗಿರಲಿ ಬಿಡಿ” ಎಂದು ಆರಂಭದಲ್ಲಿ ಗುಆಮ್ ದ್ವೀಪದ ಜನರಿಂದ ಉಪೇಕ್ಷೆ. ಅವು ಇಲಿಗಳನ್ನು ತಿನ್ನುತ್ತಿದ್ದ ಕಾರಣ ತಮಗೆ ಉಪಕಾರವೇ ಆಯ್ತು ಎಂದುಕೊಂಡವರೂ ಇದ್ದರು. ಅವು ಕ್ಷೀಣ ವಿಷಕಾರಿ ಹಾವುಗಳಾದ್ದರಿಂದ ಚಿಂತೆಗೆ ಕಾರಣವಿಲ್ಲ ಎಂದವರೂ ಇದ್ದರು. ಕ್ರಮೇಣ ಹಾವುಗಳ ಸಂಖ್ಯೆ ಹೆಚ್ಚಿತು. ಅವುಗಳಿಗೆ ಅಲ್ಲಿ ಸ್ವಾಭಾವಿಕ ಶತ್ರುಗಳೂ ಇರಲಿಲ್ಲ. ಹಾಗಾಗಿ ಅಲ್ಲಿ ಕೆಲವೇ ವರುಷಗಳಲ್ಲಿ ಹಾವುಗಳ ಸಂಖ್ಯಾಸ್ಫೋಟ.

ಸಾವಿರಾರು ಹಾವುಗಳಿಗೆ ಆಹಾರ ಬೇಡವೇ? ಸುಲಭ ಬಲಿ ಆದದ್ದು ಆ ದ್ವೀಪದ ಹಕ್ಕಿಗಳು. ಇದರ ಪರಿಣಾಮವಾಗಿ ಅಲ್ಲಿನ ಹಕ್ಕಿಗಳು ನಿರ್ನಾಮ! ಯಾಕೆಂದರೆ, ಗುಆಮ್‌ನಲ್ಲಿ ಅದಕ್ಕಿಂತ ಮುಂಚೆ ಹಾವುಗಳಿರಲಿಲ್ಲ. ಹಾಗಾಗಿ ಅಲ್ಲಿನ ಹಕ್ಕಿಗಳಿಗೆ ಹಾವುಗಳೆಂಬ ಹೊಸ ವೈರಿಗಳಿಂದ ಹೇಗೆ ಪಾರಾಗಬೇಕೆಂಬುದೇ ತಿಳಿದಿರಲಿಲ್ಲ.

ಸ್ಥಳೀಯ ಹಕ್ಕಿಗಳು ಕಣ್ಮರೆ ಆಗುತ್ತಿದ್ದಂತೆ ದ್ವೀಪದಲ್ಲಿ ಹಾಹಾಕಾರ. ೧೯೮೩ರಲ್ಲಿ ದ್ವೀಪದ ಉತ್ತರ ತುದಿಯ ಕಾಡಿನಲ್ಲಿ ಮಾತ್ರ ಬಹುಪಾಲು ಸ್ಥಳೀಯ ಪಕ್ಷಿ ಹಾಗೂ ಪ್ರಾಣಿ ಪ್ರಭೇದಗಳು ಉಳಿದಿರುವುದನ್ನು ತಜ್ನರು ಗುರುತಿಸಿದರು. ನಿರ್ವಂಶವಾಗುತ್ತಿರುವ ಕಾಡಿನ ಹಕ್ಕಿಗಳನ್ನು ಗೂಡಿನಲ್ಲಿ ವಂಶಾಭಿವೃದ್ಧಿ ಮಾಡಲು ಅನಂತರ ತಜ್ನರ ಪ್ರಯತ್ನ ಆರಂಭ.

ಆದರೆ ಕಾಲ ಮಿಂಚಿತ್ತು. ಗುಆಮ್‌ನ ೧೮ ಸ್ಥಳೀಯ ಪಕ್ಷಿ ಪ್ರಭೇದಗಳ ಉಳಿವಿಗೇ ಕುತ್ತು ಬಂದೆರಗಿತ್ತು. ಏಳು ಪ್ರಭೇದಗಳು ಅದಾಗಲೇ ನಿರ್ನಾಮವಾಗಿದ್ದವು. ಇನ್ನೆರಡು ಪ್ರಭೇದಗಳು ಕಾಡಿನಲ್ಲಿ ಅಳಿದು ಹೋಗಿದ್ದವು (ಗುಆಮ್ ರೈಲ್ ಮತ್ತು ಮೈಕ್ರೊನೇಷಿಯನ್ ಮಿಂಚುಳ್ಳಿ ಎಂಬೆರಡು ಪ್ರಭೇದಗಳು ಗೂಡುಗಳಲ್ಲಿ ಮಾತ್ರ ಉಳಿದಿದ್ದವು.) ಇನ್ನು ಆರು ಪ್ರಭೇದಗಳು ಅಪರೂಪವಾಗಿದ್ದರೆ, ಮೂರು ಪ್ರಭೇದಗಳು ವಿರಳವಾಗಿವೆ.

ಇಷ್ಟೆಲ್ಲ ಅನಾಹುತವಾದ ಬಳಿಕ ಉತ್ತರ ಗುಆಮ್‌ನಲ್ಲಿ ಹಾವುಗಳ ಸಂಖ್ಯೆ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಯಿತು. ಗೂಡುಗಳಲ್ಲಿ ಬೆಳೆಸಿದ ಗುಆಮ್ ರೈಲ್‌ಹಕ್ಕಿಗಳನ್ನು ಕಾಡಿನಲ್ಲಿ ಬಿಡಲಾಯಿತು - ಅವುಗಳ ಸಂತತಿ ಬೆಳೆಸಲಿಕ್ಕಾಗಿ.

ಅಲ್ಲಿ ಈ ಹಾವುಗಳ ಸಂಖ್ಯಾಸ್ಫೋಟದಿಂದ ತತ್ತರಿಸಿದ್ದು ಪಕ್ಷಿಗಳು ಮಾತ್ರವಲ್ಲ. ಅಲ್ಲಿನ ಸಣ್ಣ ಸಸ್ತನಿಗಳ ಸಂಖ್ಯೆಯೂ ಈ ಹಾವುಗಳ ದಾಳಿಯಿಂದಾಗಿ ಇಳಿಕೆ. ಐದು ಸ್ಥಳೀಯ ಹಲ್ಲಿ ಪ್ರಭೇದಗಳೂ ಈಗ ಉಳಿದಿಲ್ಲ. ಅರಣ್ಯದ ಜೀವಿಪ್ರಭೇದಗಳನ್ನು ನುಂಗಿ ಮುಗಿಸಿದ ನಂತರ ಹಾವುಗಳು ಮನೆಗಳಿಗೆ ನುಗ್ಗತೊಡಗಿದವು; ಸಾಕುಪ್ರಾಣಿಗಳು, ಕೋಳಿಗಳು, ಮೊಟ್ಟೆಗಳನ್ನು ಕಬಳಿಸಲು ಶುರು ಮಾಡಿದವು.

ಪುಟ್ಟ ದ್ವೀಪ ಗುಆಮ್‌ನಲ್ಲಿ ಪ್ರತಿ ಚದರ ಕಿಲೋಮೀಟರ್ ಪ್ರದೇಶದಲ್ಲಿ ೨೦೦೫ರಲ್ಲಿದ್ದ ಹಾವುಗಳ ಸಂಖ್ಯೆ ೨,೦೦೦ ಎಂದು ಅಂದಾಜಿಸಲಾಗಿತ್ತು. ಇದು ಹಾವುಗಳ ಸಂಖ್ಯಾ ನಿಯಂತ್ರಣಕ್ಕೆ ಸರಕಾರ ಕ್ರಮ ಕೈಗೊಂಡ ನಂತರದ ಪರಿಸ್ಥಿತಿ. ಕೆಲವು ಹಕ್ಕಿ ಪ್ರಭೇದಗಳು ಅಳಿದು ಹೋದ ನಂತರ ಹಾವುಗಳ ಸಂಖ್ಯೆಯೂ ಕಡಿಮೆಯಾಯಿತು. ಯಾಕೆಂದರೆ ಹಾವುಗಳಿಗೆ ತಿನ್ನಲು ಏನೂ ಸಿಗಲಿಲ್ಲ! ಈ ಹಾವುಗಳು ಅತ್ಯಧಿಕ ಸಂಖ್ಯೆಯಲ್ಲಿದ್ದಾಗ, ಅವುಗಳ ಸಾಂದ್ರತೆ ಚದರ ಕಿಮೀಗೆ ೫,೦೦೦ದಿಂದ ೧೦,೦೦೦ ಎಂದು ಅಂದಾಜು!

ಈ ಪರಿಯಲ್ಲಿ ಹಾವುಗಳು ಗುಆಮ್ ದ್ವೀಪದಲ್ಲಿ ತುಂಬಿರುವಾಗ ಅವನ್ನು ತೊಡೆದು ಹಾಕುವುದು ಅಸಾಧ್ಯ. ಹೀಗೆ ವಿದೇಶಿ ಜೀವಿಗಳಿಗೆ ಸ್ಥಳೀಯ ಜೀವಿಗಳು ಬಲಿಯಾದ ಪ್ರಕರಣಗಳು ಹೊಸತೇನಲ್ಲ. ಹೀಗಾಗಲು ಬೇರೆಬೇರೆ ಕಾರಣಗಳಿವೆ: ಅಂತರರಾಷ್ಟ್ರೀಯ ವಾಣಿಜ್ಯ, ಆಮದು ವ್ಯವಹಾರ ಮತ್ತು ವಿದೇಶಿ ಜೀವಿಗಳನ್ನು ಕೆಲವು ದೇಶಗಳಲ್ಲಿ ಕೀಟ ನಿಯಂತ್ರಣ ಇತ್ಯಾದಿ ಉದ್ದೇಶಗಳಿಗಾಗಿ ಬಿಡುಗಡೆ ಮಾಡುವುದು.

ವಿದೇಶಿ ಜೀವಿಗಳು ಎಲ್ಲ ಸಂದರ್ಭಗಳಲ್ಲಿ ಹೊಸ ನೆಲೆಯಲ್ಲಿ ಹಾನಿ ಮಾಡುವುದಿಲ್ಲ. ಆದರೆ ಅಂತಹ ಕೆಲವು ಜೀವಿಗಳು ತಮ್ಮ ಸಂಖ್ಯಾಸ್ಫೋಟ ಮಾಡಿಕೊಂಡು ಸ್ಥಳೀಯ ಜೀವಜಾಲವನ್ನೇ ಬುಡಮೇಲು ಮಾಡುತ್ತವೆ. ಮೇಲ್ನೋಟಕ್ಕೆ ಒಂದು ಹಸುರುಗಿಡ ಅಥವಾ ಕಪ್ಪೆಯಂತೆ ಅವು ನಿರುಪದ್ರವಿಯಾಗಿ ಕಾಣಿಸಬಹುದು; ನೋಟಕ್ಕೆ ಚಂದವಿರಬಹುದು. ಆದರೆ ಸ್ಥಳೀಯ ಜೀವಜಗತ್ತನ್ನು ಅವು ಸದ್ದಿಲ್ಲದೆ ಧ್ವಂಸ ಮಾಡಬಲ್ಲವು.

ಭಾರತದ ಆರು ಲಕ್ಷದಷ್ಟು ಹಳ್ಳಿಗಳಲ್ಲಿ ಎಲ್ಲೋ ಒಂದೆಡೆ ಇಂತಹ ಅನಾಹುತ ಆದರೆ ನಮ್ಮ ಗಮನಕ್ಕೆ ಬಂದೀತೇ? ಉಷ್ಟ್ರ ಪಕ್ಷಿಯಂಥ ವಿದೇಶಿ ಪಕ್ಷಿಯನ್ನು ಅಥವಾ ಬಿಟಿ ಹತ್ತಿಯಂಥ ಹೊಸ ತಳಿಯನ್ನು ತಂದು, ನಮ್ಮ ಹೊಲದಲ್ಲಿ ಅಥವಾ ತೋಟದಲ್ಲಿ ಬೆಳೆಸುವುದು ನಮ್ಮ ಹಕ್ಕು ಎಂದು ವಾದಿಸಬಹುದು. ಈ ಹಕ್ಕಿನ ಜೊತೆಗೆ ಹೊಣೆಗಾರಿಕೆಯೂ ಇರುತ್ತದೆಂಬ ಎಚ್ಚರ ನಮಗಿರಬೇಕು. ಅದರ ಪರಿಣಾಮಗಳನ್ನು ಕಣ್ಣುಬಿಟ್ಟು ನೋಡುವುದು ನಮ್ಮ ಹೊಣೆ. ಅದರಿಂದಾಗಿ ಸ್ಥಳೀಯ ಜೀವಿ ಪರಿಸರದ ಸಮತೋಲನ ತಪ್ಪದಂತೆ ಹಾಗೂ ಜೀವಿಸಂಕುಲಕ್ಕೆ ಧಕ್ಕೆಯಾಗದಂತೆ ರಕ್ಷಿಸುವುದು ನಮ್ಮದೇ ಹೊಣೆಗಾರಿಕೆ, ಅಲ್ಲವೇ?

ಫೋಟೋ ೧, ೨, ೩: ಗುಆಮ್ ದ್ವೀಪದ ಕಂದುಬಣ್ಣದ ಮರಹಾವುಗಳು ....ಕೃಪೆ: ವಿಕಿಪೀಡಿಯಾ; ರೀಸರ್ಚ್‌ಗೇಟ್.ನೆಟ್; ರೆಡ್ಡಿಟ್.ಕೋಮ್