ಹಾವು ಏಣಿ ಆಟ

ಹಾವು ಏಣಿ ಆಟ

ಪುಸ್ತಕದ ಲೇಖಕ/ಕವಿಯ ಹೆಸರು
ವಾಸುದೇವ್ ಮೂರ್ತಿ
ಪ್ರಕಾಶಕರು
ಹರಿವು ಬುಕ್ಸ್, ಬಸವನಗುಡಿ, ಬೆಂಗಳೂರು -೫೬೦೦೦೪ಹರಿ
ಪುಸ್ತಕದ ಬೆಲೆ
ರೂ. ೩೦೦.೦೦, ಮುದ್ರಣ : ೨೦೨೫

ಥ್ರಿಲ್ಲರ್ ಕಾದಂಬರಿಗಳನ್ನು ಬರೆಯುವಲ್ಲಿ ಸಿದ್ಧ ಹಸ್ತರಾಗಿರುವ ವಾಸುದೇವ್ ಮೂರ್ತಿಯವರ ನೂತನ ಕಾದಂಬರಿ ‘ಹಾವು ಏಣಿ ಆಟ’ ಈ ರೋಚಕ ಕಾದಂಬರಿಯು ಓದಿ ಮುಗಿಸುವ ತನಕ ಓದುಗರನ್ನು ತುದಿಗಾಲಿನಲ್ಲಿ ನಿಲ್ಲಿಸುವಲ್ಲಿ ಸಫಲವಾಗಿದೆ. ಈ ಕಾದಂಬರಿಯ ಬಗ್ಗೆ ಲೇಖಕರಾದ ವಾಸುದೇವ್ ಮೂರ್ತಿಯವರು ತಮ್ಮ ಮನದಾಳವನ್ನು ಬಿಚ್ಚಿಟ್ಟಿದ್ದಾರೆ. ಅದರಲ್ಲಿ “ಹಾವು ಏಣಿ ಆಟ ಒಂದು ವಿಶಿಷ್ಟ ಕಥಾವಸ್ತು ಹೊಂದಿರುವ ಕಾದಂಬರಿ. ಕನ್ನಡ ಕಾದಂಬರಿ ಲೋಕದಲ್ಲಿ ಒಂದು ಹೊಸ ಪ್ರಯತ್ನ. ಇದೊಂದು "ಮೆಡಿಕೋ ಲೀಗಲ್ ಥ್ರಿಲ್ಲರ್" ಔಷಧ ವಿಜ್ಞಾನದ ಪರ ಮತ್ತು ವಿರುದ್ಧದ ಕಾನೂನಿನ ಹೋರಾಟದ ಕಥೆ. ಈ ಕಾದಂಬರಿಯಲ್ಲಿ ಒಂದು ಕೊಲೆಯ ತನಿಖೆಯಿದೆ. ಅದರ ಹಿಂದಿರುವ ಭಯಾನಕ ಸತ್ಯದ ಅನಾವರಣವಿದೆ. ನಮ್ಮ ನಿಮ್ಮೆಲ್ಲರ ಜೀವನದಲ್ಲಿ ಅವ್ಯಕ್ತವಾಗಿ ಪ್ರವೇಶಿಸಿ, ನಮ್ಮ ಜೀವದ ಜೊತೆ, ಜೀವನದ ಜೊತೆ ಆಟವಾಡುವ ಫಾರ್ಮಾ ಲಾಬಿಯ ದುರಾಸೆಯಿದೆ. ಇದರ ಮಧ್ಯೆ ಅರಿತೊ ಅರಿಯದೆಯೋ ನಲುಗುವ ಜನರ ನೋವಿದೆ. ಆ ನೋವನ್ನೇ ಬಂಡವಾಳ ಮಾಡಿಕೊಳ್ಳುವ ಸ್ವಾರ್ಥವಿದೆ. ಇವೆಲ್ಲದರ ವಿರುದ್ಧ ಕೋರ್ಟ್ನಲ್ಲಿ ನಡೆಸುವ ಹೋರಾಟವಿದೆ.

ಸತ್ಯ ಅನ್ನುವುದು ನಮ್ಮ ನಮ್ಮ ದೃಷ್ಟಿಕೋನವಷ್ಟೇ. ನಮ್ಮ ಕಣ್ಣಿಗೆ ಕಂಡಿದ್ದು, ನಾವು ತಿಳಿದಿರುವುದು ಅಥವಾ ನಾವು ತಿಳಿಯಲೆಂದೇ ಕೊಡುವ ಮಾಹಿತಿಗಳು ಮಾತ್ರವೇ ಸತ್ಯವಲ್ಲ. ಒಮ್ಮೆ ಶೋಧಿಸಲು ಮುಂದಾದಾಗ ಆ ಸತ್ಯದ ಪರದೆಯ ಹಿಂದೆ ಅಡಗಿರುವ ಇನ್ನೊಂದು ಸತ್ಯ ನಮ್ಮ ಮುಂದೆ ಧುತ್ತನೆ ಬಂದು ನಿಂತಾಗ ಅದು ನಮ್ಮ ನಂಬಿಕೆಯ ಬುನಾದಿಯನ್ನೇ ಅಲುಗಾಡಿಸಿ ಯಾರು ಸರಿ ಯಾರು ತಪ್ಪು ಎನ್ನುವ ಪ್ರಶ್ನೆ ಹುಟ್ಟಿಹಾಕುತ್ತದೆ.” ಎಂದಿದ್ದಾರೆ. ಸುಮಾರು ೨೯೦ ಪುಟಗಳ ಈ ಪುಸ್ತಕ ಉತ್ತಮ ರೋಚಕ ಓದಿಗೆ ಸಹಕಾರಿಯಾಗಬಲ್ಲದು.