ಹಾವು (ಡಿ.ಎಚ್.ಲಾರೆನ್ಸ್ ನ snake ಪದ್ಯದ ರೂಪಾಂತರ)

ಹಾವು (ಡಿ.ಎಚ್.ಲಾರೆನ್ಸ್ ನ snake ಪದ್ಯದ ರೂಪಾಂತರ)

ಬರಹ

 

ಹಾವು

ಮಳ್ಳು ಹಿಡಿದ ಹಗಲ ಝಳದಲ್ಲಿ

ಹಾವೊಂದು ನೀರಿಗೆ ಇಳಿಯಿತು

ಕೆರೆಯಲ್ಲಿ ಈಜುತ್ತಿದ್ದ ನನ್ನ ಜೊತೆಗೆ. . . .

 

ಮನೆಯ ಮುಂದೇ ಇರುವ ಈ ಕೆರೆಗೆ

ಮೆಟ್ಟಿಲಿಳಿದು ಈಜಿಗೆ ಬಿದ್ದವನಿಗಡ್ಡಿಪಡಿಸಲಿಲ್ಲ

ಸರದಿ ಬರುವವರೆಗೂ  ಕಾಯಬೇಕೆಂಬ ನಿಯಮ. . . .

 

ಸಣ್ಣಬಿರುಕಿಂದೆಲ್ಲಿಂದಲೋ ತೂರಿಬಂದು

ಹೊನ್ನಬಣ್ಣದ ಮೈಯನ್ನೆಳೆದುಕೊಂಡು

ಮೆಟ್ಟಿಲುಗಳುದ್ದಕ್ಕೂ ಉದ್ದುದ್ದ ಮಲಗಿದ್ದ ಹಾವು. . . .

 

ನನಗಿಂತಲೂ ಮೊದಲೇ ಬಂದು ಕಾದಿದ್ದು ಅದು

ಅದರೆಲ್ಲ ಆಟ ಕಳೆದು ನೀರುಗ್ಗುವುದು ನಿಲ್ಲುವವರೆಗೂ

ಸರದಿ ಬರುವವರೆಗೂ ಕಾಯಬೇಕಿದ್ದವನು ನಾನು. . . . .

 

ನೀರಡಿಕೆ ಹಿಂಗುವವರೆಗೂ ಕತ್ತೆತ್ತದ ಎತ್ತಿನ ಹಾಗೆ

ನೋಡಿಯೂ ನೋಡದ ಘನಸ್ತಿಕೆಯ ಮೆರವಣಿಗೆ

ಧಗೆಯಲ್ಲಿ ಥಳಥಳಿಸುತ್ತಿದ್ದ ಹಳದಿ ಬಣ್ಣ. . . . .

 

ಕೇರೆ ಕಚ್ಚುವುದಿಲ್ಲ, ವಿಷ ಇರುವುದೇ ಇಲ್ಲ

ಗೋಧಿ ಹಳದಿಗೆ ಮೈಯ ತುಂಬ ಬರೀ ಅದೇ,

ಕೋಲೋ ಕಲ್ಲನ್ನೋ ಎತ್ತಿ ಎಸೆದದನ್ನಿಲ್ಲವಾಗಿಸಬೇಕು. . . . .

 

ಸದ್ದುಗದ್ದಲವಿರದೆ ನಿಂತ ನೀರಲ್ಲೀಜಿ

ಮತ್ತೆ ಬಿಲಕ್ಕೆ ತೂರುವ ಸಂತೃಪ್ತ ಸಂತ

ಬಂಡೆದ್ದ ಹೆದರಿಕೆಗೆ ಅನಂತ ಮುಖವಾಡ. . . . .

 

ಭಯ ಎದೆಯೊಳಗಿಳಿದು, ನಿಗೂಢವಡಗಿದರೂ

ಸದ್ಯ ಗೆದ್ದ ಹುರುಪಲ್ಲಿ ಮತ್ತೆ ಮತ್ತೆ ಅದೇ

ಹಾವ ಕೊಲ್ಲುವ ಗರಿ ಹಿರಿದ ಬಯಕೆ. . . .

 

ಆದರೂ ತನ್ನ ಪಾಡಿಗೆ ತಾನು ಉದಾಸೀನದಲಿದ್ದಂತೆ

ಸೀಳುನಾಲಿಗೆಯ ಒಳಹೊರಗಾಡಿಸಿ, ಕತ್ತು

ತಿರುಗಿಸಿ ಮಣ್ಣಬಿಲದೊಳಕ್ಕಿಳಿದ ಸರ್ಪಮಾರ್ಗ. . . .

 

ಬಿರುಕೊಳಕ್ಕೆ ತಲೆ ತೂರಿದ್ದೆ ತಡ ಉಳಿದದ್ದನ್ನೆಲ್ಲ

ಎಳೆದುಕೊಂಡದ್ದದು ಅದೆಷ್ಟು ಬೇಗ?

ನಿಮಿಷದೊಳಗೇ ಎಲ್ಲ ಕಣ್ಣಮಾಯೆಯ ಚಿತ್ರ. . . . .

 

ನನ್ನಂಥವನನ್ನಂತೂ ಕ್ಯಾರೆ ಅನ್ನದ ಧಿಮಾಕು

ಪಾಪ ಅನ್ನಿಸುತ್ತಿದ್ದೆಲ್ಲವನೂ ಬಿಸುಟು

ಕೈಗೆ ಸಿಕ್ಕ ಕಲ್ಲನ್ನೆತ್ತಿ ಎಸೆದೆ. . . . .

 

ಪೆಟ್ಟು ತಗುಲದಿದ್ದರೂ, ಎಚ್ಚರದ ಶಬ್ದಕ್ಕೆ ಹೆದರಿ

ನಿಂತ ನಿಲುವಲ್ಲಲ್ಲೆಲ್ಲೋ ಅಂತರ್ಧಾನವಾದ ರೀತಿ

ಭಯದ ಜೊತೆಜೊತೆಗೇ ಅಸಹ್ಯದನುಭವ. . . .

 

ಹಾವೋ  ಅದು ಗಡೀಪಾರಾಗಿದ್ದ ದೊರೆಯೋ

ಪಾತಾಳಕ್ಕಿಳಿದ ವೀರನಿಗೆ ಇನ್ನು ಪಟ್ಟ ಗಿಟ್ಟುವುದು ಖಾತ್ರಿ

ನಾನು ಈವರೆಗೆ ಕಂಡದ್ದು ಹಗಲುಗನಸೋ?. . . .

 

ಬದುಕ ಕಾಣಿಸಿದ ಈ ಅನುಭವದ ವರಕ್ಕೆ

ಅನುವಾಗದೇ ಸೋತ ನನ್ನ ಸಣ್ಣತನಕ್ಕೆ

ಪ್ರಾಯಶ್ಚಿತ್ತ ಅತ್ಯಗತ್ಯದ ಅನಿವಾರ್ಯ ತಾನೆ?. . . .

 *    *   *   *  *

ಮೂಲ;  ಡಿ.ಎಚ್.ಲಾರೆನ್ಸ್