ಹಾಸನಾಂಬ ದೇವಿಯ ವಿಶೇಷ ಚರಿತ್ರೆ

ಹಾಸನಾಂಬ ದೇವಿಯ ವಿಶೇಷ ಚರಿತ್ರೆ

ಹಾಸನದ ನಗರ ದೇವತೆ 'ಹಾಸನಾಂಬೆ.'೧೨ನೇ ಶತಮಾನದಲ್ಲಿ ಪಾಳೆಯಗಾರ ಕೃಷ್ಣಪ್ಪ ನಾಯಕ ಹಾಸನದಲ್ಲಿ ಆಡಳಿತ ನಡೆಸುತ್ತಿದ್ದನು. ಏನೋ ಕಾರ್ಯನಿಮಿತ್ತ ಹೊರಗೆ ಹೊರಟಾಗ ಮೊಲವೊಂದು ಎದುರಿಗೆ ಅಡ್ಡಬಂತೆಂದು, ಅದರಿಂದ ಅಪಶಕುನವಾಯಿತೆಂದೂ ಯೋಚಿಸಿದನು. ಆದಿಶಕ್ತಿ ದೇವತೆ ಕನಸಿನಲ್ಲಿ ಕಾಣಿಸಿಕೊಂಡು ದೇವಸ್ಥಾನ ಕಟ್ಟೆಂದು ಆಜ್ಞಾಪಿಸಿದಳಂತೆ. ಆಗ ಆತ ದೇವಾಲಯ ಕಟ್ಟಿಸಿದನೆಂಬ ಐತಿಹಾಸಿಕ ಪುರಾವೆ ಕುದುರುಗುಂಡಿಯಲ್ಲಿ ದೊರೆತ ಕ್ರಿ.ಶ.೧೧೪ ರ ಶಾಸನದಲ್ಲಿ ಉಲ್ಲೇಖದಲ್ಲಿದೆ. 

ಕಾಶಿಯಿಂದ ಬಂದ ಸಪ್ತಮಾತೃಕೆಯರಲ್ಲಿ ವೈಷ್ಣವಿ, ಇಂದ್ರಾಣಿ, ವಾರಾಹಿ ದೇವಿಯರು ಹುತ್ತದಲ್ಲಿ ನೆಲೆ ನಿಂತ ದಂತಕಥೆಯಿದೆ. ಹಿಂದಿನ ಋಷಿಮುನಿಗಳು ಸ್ತ್ರೀ ಪುರುಷ ಎನ್ನುವ ಭೇದವನ್ನೆಣಿಸದೆ ದೇವರ ಸ್ವರೂಪವನ್ನು ಕಂಡವರು. ಸಿಂಹಾಸನಾರೂಢಳಾದ ಆದಿಶಕ್ತಿ ಸ್ವರೂಪಣಿಯೇ ಹಾಸನಾಂಬೆಯಾದಳು. ಈಕೆ ಅಸುರಸಂಹಾರಿಣಿ, ಮಾತೃಸ್ವರೂಪಿಣಿ. ಭಕ್ತರ ಬೇಡಿಕೆಗೆ ಸ್ಪಂದಿಸಿ ವರ ನೀಡುವಳೆಂಬ ನಂಬಿಕೆ. ಹಾಗೆಯೇ ಇನ್ನೊಂದು ದಂತಕಥೆಯಂತೆ ಅತ್ತೆಯೋರ್ವಳು ತನ್ನ ಸೊಸೆಯ ಶಿರಕ್ಕೆ ಭಗವಂತನ ಎದುರಿಟ್ಟಿದ ಚಂದನದ ಬಟ್ಟಲಿನಿಂದ ಕುಟ್ಟಿದಾಗ, ಸೊಸೆ, 'ಅಯ್ಯೋ,ಕಾಪಾಡು ಹಾಸನಾಂಬೆ' ಎಂದು ಆರ್ತನಾದಗೈದಳಂತೆ. ಅಲ್ಲಿಯೇ ಕಲ್ಲಾಗಿರೆಂದು ದೇವಿ  ಹೇಳಿದಂತೆ ಹಾಸನಾಂಬೆಯ ಪಕ್ಕದಲ್ಲಿ ಕಲ್ಲಾದಳಂತೆ. ಮಡಿವಂತಿಕೆ, ಸ್ವಚ್ಛತೆ, ನಿರ್ಮಲತೆ, ನೇಮ-ನಿಷ್ಠೆ, ಭಕ್ತಿ, ನಂಬಿಕೆಗಳಿದ್ದಲ್ಲಿ ದೇವಿ ಒಲಿದು ರಕ್ಷಿ‌ಸುತ್ತಾಳೆಂಬ ವಿಶ್ವಾಸ ಭಕುತರಿಗೆ.

ಪ್ರತಿವರ್ಷ ಅಶ್ವೀಜ ಮಾಸ ಹುಣ್ಣಿಮೆಯ ಅನಂತರ ಬರುವ ಗುರುವಾರ ಊರ ಪ್ರಮುಖರಾದ ಜಿಲ್ಲಾಧಿಕಾರಿ, ತಹಶೀಲ್ದಾರರು, ಶಾಸಕರು, ಪೋಲೀಸ್ ಕಮೀಷನರ್ ಸಮಕ್ಷಮ ಹಾಸನಾಂಬೆಯ ಬಾಗಿಲು ತೆರೆಯಲಾಗುವುದು. ವರ್ಷದಲ್ಲಿ ಒಂದು ಬಾರಿ ಮಾತ್ರ ಬಾಗಿಲು ತೆರೆಯಲ್ಪಡುವ ಈ ದೇವಸ್ಥಾನದಲ್ಲಿರುವ ದೇವಿಯ ದರ್ಶನಕ್ಕೆ ನೂಕುನುಗ್ಗಲು ಇರುತ್ತದೆ. ಬಾಗಿಲು ತೆರೆದಾಗ ಕಳೆದ ವರ್ಷ ಅಲ್ಲಿರಿಸಿದ್ದ ಅಕ್ಕಿ ಅನ್ನವಾಗಿರುತ್ತದೆ. ಹೂವು ಬಾಡಿರುವುದಿಲ್ಲವಂತೆ. ದೀಪ ಬೆಳಗುತ್ತಾ ಇರುತ್ತದೆ. ಲಕ್ಷಕ್ಕಿಂತಳೂ ಅಧಿಕ ಜನ ವೀಕ್ಷಣೆಗೆ ಬರುವರು. ವರ್ಷದಲ್ಲಿ ಹತ್ತು ದಿನಗಳ ಕಾಲ ಮಾತ್ರ ತೆರೆಯಲ್ಪಡುವ ಈ ದೇವಾಲಯ ಆಸ್ತಿಕರ ಪಾಲಿಗೆ ಹಾಸನಾಂಬೆ ವರಗಳ ನೀಡುವ ದೇವತೆಯಂತೆ.

-ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ