ಹಾ ಮ ಸತೀಶ್ ಅವರ ಗಝಲ್ ಗಳ ಜಗತ್ತು
ಗಝಲ್ ೧
ನಿಂತ ನೆಲವೆ ಪಾದತಲದಿ ಕುಸಿಯುತಿಹುದು ಅರಿತು ನಡೆಯಲಾರೆಯ
ಚಿಂತೆಯಿಲ್ಲದೆ ಇರುವಲ್ಲೆ ಮುಳುಗುತಿಹುದು ಅರಿತು ನಡೆಯಲಾರೆಯ
ಕಂತೆ ಹುಲ್ಲನು ಅರಸಿ ಸಾಗುತಿರುವ ಹಸುವೊಂದ ನೋಡೆಯಾ
ಬಂತೆ ಅನಾವೃಷ್ಟಿ ಜಲವು ಬತ್ತುತಿಹುದು ಅರಿತು ನಡೆಯಲಾರೆಯ
ಗೋಡೆಗಳು ಬಿರುಕು ಬಿಟ್ಟಿವೆಯೆಂಬುದನು ನೀನೆಂದೂ ಗಮನಿಸಲಿಲ್ಲವೆ
ಜೋರಾಗಿ ಗಾಳಿಯು ಬೀಸುತಿಹುದು ಅರಿತು ನಡೆಯಲಾರೆಯ
ಸಾಗರದ ಅಲೆಯಲೆಯು ತೀರವನು ತಲುಪುತ್ತಿಲ್ಲವಿಂದು ಕಾಣೆಯಾ
ಮರಳಿಂದು ಬಹುವಾಗಿ ಬಿಸಿಯಾಗುತಿಹುದು ಅರಿತು ನಡೆಯಲಾರೆಯ
ಆಗಸದ ಮೋಡದಲ್ಲೂ ಹನಿನೀರಿಲ್ಲ ಎಂಬುವುದು ಈಶನಿಗೆ ಗೊತ್ತಿಲ್ಲವೆ
ನೆಲವು ಅಗ್ನಿಯಂತೆ ಪ್ರಜ್ವಲಿಸುತಿಹುದು ಅರಿತು ನಡೆಯಲಾರೆಯ
***
ಗಝಲ್- ೨
ಹೊದಳು ಹುರಿಯುತ್ತಲೆ ಮಾತಾಡಿದೆ ಕೂಸೆ
ಜಗಳ ಮಾಡುತ್ತಲೆ ಕಾದಾಡಿದೆ ಕೂಸೆ
ಹವಳ ದ್ವೀಪದತ್ತಲೆ ಹೋಪಲೆ ಆಯಿದಿಲ್ಲೆ
ಬವಳಿ ಬೆಂಡಾಗುತ್ತಲೆ ಒದ್ದಾಡಿದೆ ಕೂಸೆ
ಕವಳ ಕೊಟ್ಟವರತ್ತಲೆ ಕೈಯೊಡ್ಡದೆ ಹೋದೆ
ಅಗುಳಿ ಹಾಕೊಳ್ಳುತ್ತಲೆ ಹಾರಾಡಿದೆ ಕೂಸೆ
ಸರಳ ಜೀವನದತ್ತಲೆ ನೋಡಿದ ನೆನಪಿಲ್ಲೆ
ಮರುಳು ತಿರುಗುತ್ತಲೆ ಚೆಲ್ಲಾಡಿದೆ ಕೂಸೆ
ಸುರುಳಿ ಆವುತ್ತಲೆ ಈಶನುದೆ ಕಾಂಬಲೆಯಿಲ್ಲೆ
ಮರಳಿ ಬೊಗಳುತ್ತಲೆ ಚೀರಾಡಿದೆ ಕೂಸೆ
***
ಗಝಲ್ ( ಸ್ವರ ಕಾಫಿಯಾ)- ೩
ಇಷ್ಟವಿಲ್ಲದವರ ನಡುವೆ ಸ್ನೇಹ ಎಂತಗೆ
ಕಷ್ಟವಿಲ್ಲದವರ ಜೊತೆಯೆ ಸ್ನೇಹ ಎಂತಗೆ
ಶಿಸ್ತುಯಿಲ್ಲದವರ ಸಂಬಂಧ ನನಗೇಕೆ ಬೇಕು
ಭಾಷೆಯಿಲ್ಲದವರ ಪಡೆಗೆ ಸ್ನೇಹ ಎಂತಗೆ
ಗಾನವಿಲ್ಲದವರ ಹತ್ತಿರ ಹೋಗದಿರುವೆ ನಾನೆಂದು
ಮೌನವಿಲ್ಲದವರ ಚಿತ್ತಕೆ ಸ್ನೇಹ ಎಂತಗೆ
ಗುಣವಿಲ್ಲದವರ ಒಲವಿಂದ ದೂರ ಸರಿದರಾಯಿತು
ಗಣವಿಲ್ಲದವರ ಬರಿದೆ ಸ್ನೇಹ ಎಂತಗೆ
ಗೆಲುವಿಲ್ಲದವರ ಸನಿಹದಲ್ಲಿ ಇರುವನೇ ಈಶನು
ಛಲವಿಲ್ಲದವರ ಪ್ರೀತಿಸೆ ಸ್ನೇಹ ಎಂತಗೆ
-ಹಾ ಮ ಸತೀಶ