ಹಾ ಮ ಸತೀಶ್ ಅವರ ಗಝಲ್ ಪ್ರಪಂಚ
ಗಝಲ್ -೧
ಬಾನಲ್ಲಿ ಇರುವ ತಾರೆಯಂತೆ ಎಂದೆಂದು ನೆಲೆಸು ನೀನು
ಒಲವಿನ ಸುಧೆಯ ಸವಿಯಂತೆ ಎಂದೆಂದು ನೆಲೆಸು ನೀನು
ಹೊತ್ತಲ್ಲದ ಹೊತ್ತಿನಲ್ಲಿ ಬಂದರೂ ಬಾಗಿಲನ್ನು ಯಾಕೆ ತೆರೆದೆ
ಚೆಲುವಿನ ಸನಿಹ ಯಾವತ್ತಿಗೂ ಮದಿರೆಯಂತೆ ಎಂದೆಂದು ನೆಲೆಸು ನೀನು
ಗೊತ್ತು ಗುರಿಯಿಲ್ಲದ ಬದುಕೊಂದು ಸಂತೆಯೆಂದೆ ಅಲ್ಲವೆ
ಮತ್ತಿನೊಳಗಿನ ಮುತ್ತುಗಳು ಸುವಾಸನೆಯಂತೆ ಎಂದೆಂದು ನೆಲೆಸು ನೀನು
ಚಿತ್ತಾರದ ಪುಟಗಳಿದ್ದರೂ ಬಾಳೊಂದು ಕನಸೆಂದೆ ಯಾಕಾಗಿ
ನಶೆಯು ಕೂಡ ಒಂದೊಳ್ಳೆಯ ನಡತೆಯಂತೆ ಎಂದೆಂದು ನೆಲೆಸು ನೀನು
ಸಾಗರದ ಮುತ್ತುಗಳ ತಂದು ಎದುರಿಟ್ಟರೂ ತಿರುಗಿ ನೋಡಲಿಲ್ಲವೇಕೆ
ಈಶನ ಹೃದಯದಿ ರಾಣಿಯಂತೆ ಎಂದೆಂದು ನೆಲೆಸು ನೀನು
***
ಗಝಲ್ - ೨ ( ಸ್ವರ ಕಾಫಿಯಾ )
ಮತ್ತದುವೆ ಜೀವನದಿ ಸಾಗುತಿರಲೂ ಯಾನ ಹುಣ್ಣಿಮೆಯ ಲೋಕದೊಳು ಎಲೆ ಮಾನವ
ಗತ್ತಿರದೆ ಬಾಳುವೆಲಿ ಸುಖವಿರುವ ಜ್ಯೋತಿಯೊಳು ಚೆಲುವಾಗಿ ಒಲವಾಗು ಎಲೆ ಮಾನವ
ಮನದೊಳಗೆ ಸವಿಯಿರಲು ಚಿಂತೆ ಏತಕೆಯಿಂದು ಹೇಳಲಾರೆಯ ನೀನು ನಗುಮೊಗದಲಿ
ತನುವೊಳಗೆ ಕಹಿತೊಡೆಯೆ ಬರಲು ಜೇನಿನಹೊಳೆಯು ಕುಲದೊಳಗೆ ಛಲವಿರಲು ಎಲೆ ಮಾನವ
ಮೋಹದಾಚೆಗೆ ಸರಿದ ವನವಾಸ ಉಪವಾಸ ಸನಿಹದೊಳು ಬೇಕಿದೆಯೇ ನಿನ್ನೊಲವಲಿ
ಚಿತ್ತಾರದೊಳಗೆ ನೋಟವನು ಹರಿಸುತಲಿ ಸಾಗುತಿರೆ ಪ್ರತಿಬಿಂಬ ಕಾಣುವುದು ಎಲೆ ಮಾನವ
ಮಸಣದೀಚೆಗೆ ಇರುವ ಪ್ರೀತಿಯನು ಹುಡುಕುತಿರು ಪ್ರೇಮವದುಯೆಂದೂ ಚಿತ್ತೈಸಲಿ
ಮತ್ತದುವೆ ನೋವುಗಳು ಮರೆಯಾಗುತಲಿರೆ ಹೊಸದೊಂದು ಸಂಕುಲವು ಎಲೆ ಮಾನವ
ಸಾಗರಕೆ ಕೊನೆ ಇಹುದೆ ನೋಡಿರುವಿಯಾ ಮನುಜ ಕನಸುಗಳ ಬೀಜಗಳೇ ದಡ ಸೇರಿರಿ
ತಡೆಗೋಡೆ ಕುಸಿಯದಿರೆ ಈಶನೊಲುಮೆಯ ಉಸಿರಲಿ ಹಸಿರಾಗೆ ಬೆರೆಯುತಿರು ಎಲೆ ಮಾನವ
-ಹಾ ಮ ಸತೀಶ
