ಹಾ. ಮ. ಸತೀಶ್ ಅವರ ಗಝಲ್ ಮತ್ತು ಹನಿಗಳು
ಗಝಲ್
ಚೆಲುವಿರಲು ಮೊಗದೊಳಗೆ ವಿಷವು ಹೋಗದೇ ಇರಲಿ
ಬಲವಿರಲು ತನುವೊಳಗೆ ಶಕುತಿ ಬಾಗದೇ ಇರಲಿ
ಛಲವಿರಲು ಭವದೊಳಗೆ ಈಜಿ ನಡೆಯಲೀ ಹೀಗೆ
ಕಸುವಿರಲು ಕನಸೊಳಗೆ ಪಯಣ ಸಾಗದೇ ಇರಲಿ
ಹಿತವಿರಲು ಕ್ಷಣದೊಳಗೆ ಖುಷಿಯ ಪಡೆಯಲೀ ಹಾಗೆ
ಶುಭವಿರಲು ಶಕೆಯೊಳಗೆ ವ್ಯಾಲ ಬಾರದೇ ಇರಲಿ
ವೃತವಿರಲು ಮನದೊಳಗೆ ಜನರು ನಡೆಯಲೀ ಮಾಗೆ
ಬಣವಿರಲು ಹಿತದೊಳಗೆ ವಿರಸ ಕಾಣದೇ ಇರಲಿ
ಫಲವಿರಲು ಈಶನೊಳಗೆ ಪ್ರೀತಿ ತುಂಬುತಲೀ ಸಾಗೆ
ಹಸಿವಿರಲು ಪ್ರೇಮದೊಳಗೆ ಕೆಸರು ತಾರದೇ ಇರಲಿ
******
ಹನಿಗಳು
ಚೆಲುವು
ಭತ್ತ ತೆನೆಯೊಡೆದು
ಹೊರಬರಲು ಚೆಲುವು
ಕನಸು ಹೊರ ಬಂದು
ನನಸಾಗಲು ಗೆಲುವು
*****
ನಂಬಿರದ ಮನುಜರೊಡೆ
ನಂಬಿರದ ಮನುಜರೊಡೆ
ನಂಬಿಕೆಯು ಬರದಿನ್ನು
ನಂಬದಿಹ ಹೃದಯವದು
ನಂಬುವುದಿದೆಯೇ ಇನ್ನು
ಕಂಡಿರದ ದುಷ್ಟತನ
ಕಂಡಿಹುದು ಇಂದಿಲ್ಲಿ
ಕಂಡು ಕಾಣದ ರೀತಿ
ಕಂಡವರ ಮನದಲ್ಲಿ
ಮಂಡೆ ಒಡೆಯುವ ಮಂದಿ
ಮಂಡೆಯೊಳು ತುಂಬಿರಲು
ಮಂಡೆ ಮಂಡೆಯ ಒಳಗೆ
ಮಂಡೆ ಕಲಹವು ಬರಲು
ಕಂತಿರುವ ಮನದಲ್ಲಿ
ಕಂತಿಹುದು ತನುವಿಂದು
ಕಂತೆ ಅಂತೆಯ ಸಂತೆ
ಕಂತಿನಲಿ ಸಿಗಲಿಂದು
ಮಂಕು ಕವಿದಿಹ ಬುದ್ದಿ
ಮಂಕಾಗಿ ಕುಳಿತಿರಲು
ಮಂಕನಂತೇ ತಿರುಗಿ
ಮಂಕ ತಾನಾಗಿರಲು
-ಹಾ ಮ ಸತೀಶ
