ಹಾ ಮ ಸತೀಶ್ ಅವರ ತ್ರಿವಳಿ ಕವನಗಳು

ಹಾ ಮ ಸತೀಶ್ ಅವರ ತ್ರಿವಳಿ ಕವನಗಳು

ಕವನ

ನೀನಿರುವ ಮನೆಯಲ್ಲಿ

ನೀನಿರುವ ಮನೆಯೊಳಗೆ 

ನಂದಾದೀಪ ಬೆಳಗಲಿ

ನಾನಿರುವ ಮನದೊಳಗೆ 

ಹೊಸ ಜೀವ ಹಾಡಲಿ

 

ಚೈತನ್ಯ ತುಂಬುವಾಗ

ಚಿಂತೆಗಳು ದೂರವಾಗಿ

ಚಿಂತನೆಯ ಸೊಗಡಿನಲಿ

ಮನ ಸವಿದು ಬಾಳಲಿ

 

ನವ ತನುವಿನಾಳದೊಳಗೆ

ಹೊಸ ಬಯಕೆಯು ಮೂಡಲಿ

ಸವಿ ಜೇನಿನ ಹೃದಯದೊಳು

ಉಯ್ಯಾಲೆಯು ಜೀಕಲಿ

 

ತೊಟ್ಟಿಲೊಳು ಮಗುವಿನ ನಗೆಯು

ಹೊಸತು ರೂಪ ಪಡೆಯಲಿ

ಜೀವನದ ಹೊಸ ಪಯಣದೊಳು

ಪ್ರೀತಿ ಪ್ರೇಮ ಹೊಮ್ಮಲಿ

***

ಮೌನದಲೆ

ಮೌನದಲೆಯ ಮೋಹ ಕಡಲು

ಕೂಡಿ ನಡೆವ ನಡೆಯು

ಅಲೆಯಲಿರುವ ನಾದರಂಗ

ಮನದಿ ಸುಳಿವ ಪ್ರೀತಿಯು

 

ಅಂತರಂಗ ತರಂಗ ಭಾವ

ಸುತ್ತ ಚೆಲ್ಲೆ ಸೊಬಗಲಿ

ತನುವ ಸೆಳೆವ ಪ್ರೇಮ ಪರಿಗೆ

ಹರುಷ ಕಾಣ್ಕೆ ಚೆಲುವಲಿ

 

ಉಬ್ಬಿಯುಬ್ಬಿ ಸೊಕ್ಕಿ ನಲಿವ

ಉಬ್ಬರದ ಅಲೆಯಲಿ

ಸಖಿಯ ಗೀತೆ ಕೇಳುತಿದೆ 

ಮನದ ತುಂಬಾ ಸವಿಯಲಿ

 

ನಾನು ಗಂಡು ಅವಳು ಹೆಣ್ಣು

ನಡುವೆಯೇಕೆ ಅಂತರ

ಮಧುರ ಭಾವದೊಳಗೆ ನಾವು

ಬದುಕಬೇಕು ಸುಂದರ

***

ಸೋಲುಗಳ ನಡುವೆ 

ನೆಲವು ಕಚ್ಚಿತು

ಬದುಕು ಸೋತಿತು

ಮನವು ದುಃಖದಿ ಕೂಗಿತು

ಸೋಲು ಸೋಲು ಸೋಲು ಸೋಲು

ಬಾನು ತೆರೆಯಿತು 

ಮುಗಿಲು ಜಾರಿತು

ಬೆಳೆದ ಬೆಳೆಗಳು ತೇಲಿತು 

ಸೋಲು ಸೋಲು ಸೋಲು ಸೋಲು

 

ಉಟ್ಟ ಬಟ್ಟೆಯು

ಹೊರಗೆ ಮಲಗಿತು

ಮುರಿದು ಬಿದ್ದಿತು ಸೌಧವು

ಸೋಲು ಸೋಲು ಸೋಲು ಸೋಲು

ಮೂಖ ಪ್ರಾಣಿಯು

ಜಲದಿ ಸಾಗಿತು

ಕರುಣೆ ಇಲ್ಲದ ವಧೆಯೊಳು

ಸೋಲು ಸೋಲು ಸೋಲು ಸೋಲು

 

ಬೆಟ್ಟ ಗುಡ್ಡವು 

ಜರಿದು ಬಿದ್ದವು

ಮನೆಯ ಮೇಲ್ಗಡೆ ಎಲ್ಲವು

ಸೋಲು ಸೋಲು ಸೋಲು ಸೋಲು

ಬರಿದೆ ಮೈಯೊಳು 

ಒಳಗೆ ಇದ್ದರು

ಮಸಣ ದಾರಿಯ ಹಿಡಿದರು

ಸೋಲು ಸೋಲು ಸೋಲು ಸೋಲು

 

ಮನಜ ಕುಲವದು 

ಭಯವಗೊಳ್ಳಲು

ಮಳೆಯು ನರ್ತನ ಮಾಡಿತು

ಸೋಲು ಸೋಲು ಸೋಲು ಸೋಲು

ಹಿತವ ಮರೆತರು

ಪ್ರಭುಗಳೆಲ್ಲರು

ಸೌಧದೊಳಗಡೆ ಕುಳಿತರು 

ಸೋಲು ಸೋಲು ಸೋಲು ಸೋಲು

 

-ಹಾ ಮ ಸತೀಶ

 

ಚಿತ್ರ್