ಹಾ ಮ ಸತೀಶ್ - ಎರಡು ಕವನಗಳು
ಮಾತು ಮರೆಯಾಗದಿರಲಿ
ಮಾತು ಮಾತಿನಂತಿರಲಿ
ಮಾತು ಕತೆಯಂತಿರಲಿ
ಮಾತು ವ್ಯಥೆಯಾಗದಿರಲಿ ನನ್ನ ಪ್ರೀತಿಯೆ
ಮಾತಿನೊಳಗೆ ಮಾತು ಇರಲಿ
ಮಾತಿನಾಳ ತಿಳಿದಿರಲಿ
ಮಾತು ಅಮೃತವಾಗಿರಲಿ ನನ್ನ ಪ್ರೀತಿಯೆ
ಮಾತಿಗೊಂದು ನಗುವು ಇರಲಿ
ಮಾತಿನೊಳಗೆ ಹೃದಯವಿರಲಿ
ಮಾತು ಮನಕೆ ಸವಿಯ ಕೊಡಲಿ ನನ್ನ ಪ್ರೀತಿಯೆ
ಮಾತುಯೆಂದು ಸೋಲದಿರಲಿ
ಮಾತಿನಲ್ಲಿ ಕರುಣೆಯಿರಲಿ
ಮಾತು ಜಲದ ರೀತಿಯಿರಲಿ ನನ್ನ ಪ್ರೀತಿಯೆ
ಮಾತು ತನುವ ಬೆಸೆಯುತಿರಲಿ
ಮಾತು ಮನೆಯ ಬೆಳಗುತಿರಲಿ
ಮಾತ ಜ್ಯೋತಿ ಬಾಳಲಿರಲಿ ನನ್ನ ಪ್ರೀತಿಯೆ
ಮಾತು ಪ್ರೇಮ ಬಿತ್ತುತಿರಲಿ
ಮಾತಿನೊಳಗೆ ಸಿಹಿಯು ಬರಲಿ
ಮಾತಿನಾಳ ಒಲವು ಬರಲಿ ನನ್ನ ಪ್ರೀತಿಯೆ
***
ಮಧುರ ಎನ್ನುವ ಪದಗಳು
ಮಧುರ ಎನ್ನುವ ಪದಗಳೆ
ಹೀಗೆ , ಹೇಗೆಂದರೆ ? ಚಿರ ಯೌವನವೆ !
ಕತ್ತಲು ಕಳೆದು ಬೆಳಕಾದಂತೆ
ಬೆಟ್ಟದಿಂದ ಕಾಲು ಜಾರದೆ
ಕೆಳಗಿಳಿದು ಬಂದಂತೆ !!
ಪ್ರೀತಿ ಪ್ರೇಮ ಪ್ರಣಯದೆಡೆಗೆ ಸಲುಗೆ
ಅವಿಲಿಗೆ ಹಾಕುವ ತರಕಾರಿಗಳಿದ್ದಂತೆ !
ಜೊತೆಗೆ ಸೇರಿದರೆ ಸಾಲದು, ಹೀಗೆಯೇ
ಉಪ್ಪು ಕಾರ ಹುಳಿ ಸೇರಿದಂತೆ
ಮನಸು ಹೃದಯ ಸೇರಬೇಕು ಹಾಗೆಯೆ !!
ಹಾಲು ಜೇನಿನಂತೆ ಸೇರಿದರೆ ಬದುಕು ಬಂಗಾರವೆ ?
ಜೊತೆ ಸೇರಿ ನಡೆದರೆ ಬೃಂದಾವನವೆ !
ಉಪ್ಪರಿಗೆಯ ಕನಸು ಒಲವಿನಲಿ ಬಂದರೆ ;
ಬೀದಿಯ ಬದುಕಿಗೆ ಸಾಗುವುದು ದಿಟವೆ ?
ತಿಳಿದು ನಡೆಯ ಬೇಕು ಜೀವವೆ !!
ಮೋಹಕ ನಗುವೆಂದಿಗೂ ಬಾಳಿನುಸಿರಿಗೆ
ಉಸಿರಾದರೆ , ಬದುಕು ಭಾಗ್ಯವೆ !
ಕೈಯ ಕೈ ಹಿಡಿದು ಜೋಡಿ ಸಾಗಿದರೆ
ಹಿರಿಯರ ಆಶೀರ್ವಾದ ಇರಲಿ ನಡೆಗೆ
ಪ್ರೀತಿಯುಸಿರು ಸದಾ ಹರಿಯುತಿರಲಿ ಹಾಗೆ ಹೀಗೆಯೆ!!
-ಹಾ ಮ ಸತೀಶ, ಬೆಂಗಳೂರು
ಚಿತ್ರ: ಇಂಟರ್ನೆಟ್ ತಾಣ
