ಹಿಂಗಾದ್ರೆ ಉದ್ದಾರ ಆದ ಹಾಗೆ!

ಹಿಂಗಾದ್ರೆ ಉದ್ದಾರ ಆದ ಹಾಗೆ!

 

"ಶನಿವಾರ ಆಯ್ತು ... ಈಗ ಭಾನುವಾರ ಅರ್ಧ ಅಯ್ತು ... ಪುಸ್ತಕ ಹಿಡ್ಕೊಂಡಿದ್ದು ನೋಡ್ಲಿಲ್ಲ "

 

"ಅಮ್ಮಾ, ಲ್ಯಾಪ್ಟಾಪ್ ಇಟ್ಕೊಂಡ್ ಕೂತಿದ್ದು ನೋಡ್ಲಿಲ್ವಾ?"

 

"ಯಾವಾಗ?"

 

"ನೆನ್ನೆ ರಾತ್ರಿ ಊಟ ಆದ ಮೇಲೆ ... ಆಗ್ಲೇ ಮರೆತು ಹೋಯ್ತಾ? ನೀನೇ ಹೇಳಿದ್ಯಲ್ಲಮ್ಮ ... "ಸಾಕು ಎತ್ತಿಡು, ಕಣ್ ಹಾಳಾಗುತ್ತೆ ಅಂತ"

 

"ಹೌದಪ್ಪ ಹೇಳ್ದೆ ... ಸ್ಟಡಿ ರೂಮಿನಲ್ಲಿ ಕೂತು .. ಲೈಟು ಬಂದ್ ಮಾಡಿ, ಲ್ಯಾಪ್ ಟಾಪ್ ಮುಂದೆ ಕೂತು ಸಿನಿಮಾ ನೋಡ್ಕೊಂಡ್ ಕಣ್ಣು ಹಾಳು ಮಾಡಿಕೊಳ್ ಬೇಡ ... ಸುಮ್ನೆ ಎತ್ತಿಟ್ ಮಲ್ಕೋ ಅಂತ ನಾನು ಹೇಳಿದ್ದು"

 

"ಅಮ್ಮಾ, ಅದು ಸಿನಿಮಾ ಅಲ್ಲಮ್ಮ ... ಹೋಗ್ಲಿ ಬಿಡು"

 

"ನೆನ್ನೆ ಬೆಳಿಗ್ಗೆ ಫ್ರೆಂಡ್ಸ್ ಜೊತೆ ಕ್ರಿಕೆಟ್ ಆಯ್ತು ... ಮಧ್ಯಾನ್ನ ಬಂದು ಕೈ-ಕಾಲು ನೋವು ಅಂತ ಮಲಗಿ ಎಳೋ ಅಷ್ಟರಲ್ಲಿ ಸಂಜೆ ನಾಲ್ಕು ... ಊಟ ಕಾಫಿ ಸಮಾರಾಧನೆ ಎಲ್ಲ ಆಗೋಷ್ಟರಲ್ಲಿ ಐದೂವರೆ ..."

 

"ತುಂಬಾ ಇಂಪಾರ್ಟೆಂಟ್ ಕ್ರಿಕೆಟ್ ಮ್ಯಾಚ್ ಅದು .. ಹೋಗ್ಲೇ ಬೇಕಿತ್ತು ... "

 

"ಕಳ್ಳಂಗೂ ಕಾರಣ ಇರುತ್ತೆ .... ನೆನ್ನೆ ಸಂಜೆ ಎದ್ದ ಮೇಲೆ ಓದಿದೆಯಾ, ಅದೂ ಇಲ್ಲ ... ಟೆನ್ನಿಸ್ ಅಂತೆ ಟೆನ್ನಿಸ್ ... ಆಮೇಲೆ ಓದಿ ಉದ್ದಾರ ಮಾಡ್ತೀನಿ ಅಂತ ಸಿನಿಮಾ ನೋಡೋದು "

 

"ಫ್ರೆಂಚ್ ಓಪನ್ ಟೆನ್ನಿಸ್ ಅಮ್ಮ ಅದು ... ಲೇಡೀಸ್ ಫೈನಲ್ಸು"

 

"ನೀನು ಓದೂ ಬರಹ ಬಿಟ್ಟು ಕೂತ್ಕೊಂಡ್ ನೋಡ್ದಿ ಅಂತ ನಿನಗೇನಾದ್ರೂ ಕೊಟ್ರಾ ಗೆದ್ದೋವ್ರು? ... ಆಗೆಲ್ಲ ಕ್ರಿಕೆಟ್ ಮ್ಯಾಚು ... ಈಗ ಟೆನ್ನಿಸ್ಸು .. ಇದಾದ ಕೂಡ್ಲೆ ಮತ್ತೊಂದು ... ಉದ್ದಾರ ಆದ ಹಾಗೇ" 

 

"ಟೆನ್ನಿಸ್ ಆದ ಮೇಲೆ ಆಯ್ತಮ್ಮ ... ಬೇರೇ ಏನಿಲ್ಲ ..."

 

"ಈ ಸುಧೀನ್ನ ನೋಡು ... ಮೊನ್ನೆ ಪರೀಕ್ಷೇಲಿ ನೂರಕ್ಕೆ ನೂರು .... "

 

"ಅಮ್ಮಾ, ನನ್ನ ಓದನ್ನು ಸುಧಿ ಓದಿಗೆ ಹೋಲಿಸಬೇಡ"

 

"ಹೋಗ್ಲಿ ಬಿಡು ... ನಿಮ್ಮಪ್ಪ ಏನ್ ಮಾಡ್ತಿದ್ದಾರೆ"

 

"ಹೊರಗೆ ಮೆಟ್ಟಿಲ ಮೇಲೆ ಕೂತ್ಕೊಂಡ್ ಏನೋ ಓದುತ್ತಿದ್ದಾರೆ"

 

"ನೋಡು ಅವರೂ ಓದ್ಕೋತಿದ್ದಾರೆ ... "

 

"ಅಯ್ಯೋ, ಅಮ್ಮಾ... ಅಪ್ಪಾ ಓದ್ದುತ್ತಿರೋದು ಕಾದಂಬರಿ"

 

"ಕಾದಂಬರಿ ಆದರೇನು ... ಅದು ಓದು ತಾನೇ? ನಿನ್ ಹಾಗೆ ಟಿವಿ ಮುಂದೆ ಕೂತಿಲ್ಲವಲ್ಲ"

 

"ಅಮ್ಮಾ, ಇವತ್ತು ಒಳ್ಳೇ ಟೆನ್ನಿಸ್ ಮ್ಯಾಚ್ ನೆಡೀತಿದೆ ... ಮೆನ್ಸ್ ಫೈನ್ಲಸು"

 

"ಯಾವತ್ತಾದ್ರೂ ಕೆಟ್ಟ ಮ್ಯಾಚುಗಳು ನೆಡೆಯುತ್ತಾ? ಕಳ್ಳಂಗೊಂದು ಪಿಳ್ಳೆ ನೆವ ... "

 

"ಅಯ್ಯೋ! ನೋಡು ನಿನ್ ಗಲಾಟೇಲಿ ಅಲ್ಲಿ ಮಳೆ ಶುರುವಾಯ್ತು"

 

"ಅದೇ ಹೇಳೋದು .. ನನ್ ಗಲಾಟೆಗೆ ಮಳೆನೂ ಬರುತ್ತೆ ಅದ್ರೆ ನಿನಗೆ ಬುದ್ದಿ ಬರಲಿಲ್ಲ ನೋಡು .. ದೇವ್ರೇ ದಯ ಮಾಡಿದ ... ಟಿವಿ ಬಂದ್ ಮಾಡಿ ಓದ್ಕೋ ಹೋಗು .. ಲೋ! ಸುಧಿ ಸ್ವಲ್ಪ ಬಾರೋ ಇಲ್ಲಿ"

 

"ಅವನು ಮಹಡಿ ಮೇಲೆ ಇದ್ದಾನಮ್ಮ ... ಹೋಮ್ ವರ್ಕ್ ಮಾಡ್ತಿದ್ದಾನೆ. ಏನು ಬೇಕಿತ್ತು?"

 

"ದೊಡ್ಡವರು ನಿಮ್ಮಪ್ಪ ಓದಿಕೊಳ್ತಿದ್ದಾರೆ ... ಚಿಕ್ಕವನು ಸುಧಿ ಓದಿಕೊಳ್ತಿದ್ದಾನೆ .... ನಿನಗೇನು ಬಂದಿದೆಯೋ ಧಾಡಿ ... ನಾನೇ ಮಾಡಿಕೊಳ್ತೀನಿ ಬಿಡು .. ನೀ ನೆಡಿ"

 

"ಆಯ್ತು ... ಹೋಗ್ತೀನಿ " {ಧಡ ಧಡ ಎದ್ದು ಹೋದನಾ ಮಗರಾಯ}

 

"ಮೆಲ್ಲಗೆ ... ಮಹಡಿ ಮೆಟ್ಟಿಲು ಮುರಿದೀತು ... ನನ್ ಜೀವನವೆಲ್ಲ ಇಷ್ಟೇ ಆಯ್ತು"

 

----

 

"ಏನಾಯ್ತಪ್ಪ? ಅಜ್ಜಿ ಬೈದ್ರಾ?"

 

"ಲೇಯ್ ಸುಧಿ .... ನಿನ್ ಕೆಲ್ಸ ನೀನು ಮಾಡು ... ನಿಮ್ಮಜ್ಜಿಗೆ ಎರಡನೇ ಕ್ಲಾಸ್ ಓದುತ್ತಿರೋ ನೀನೂ ಒಂದೇ ಎಂ.ಬಿ.ಎ ಮಾಡ್ತಿರೋ ನಾನೂ ಒಂದೇ"

 

{ಹೆಂಡತಿ}"ನೆನ್ನೆಯೆಲ್ಲ ನೀವು ಪುಸ್ತಕ ಹಿಡೀತಿಲ್ಲ ಅಂತ ಅತ್ತೆ ನನ್ ಮುಂದೆ ಹೇಳ್ತಿದ್ರು. ಅದಕ್ಕೇ ನಿಮಗೆ ಕ್ಲಾಸ್ ತೊಗೋಬೇಕಾದ್ರೆ ನಾನು ಸೈಲೆಂಟಾಗಿ ಮೇಲ್ಗಡೆ ಬಂದೆ !"

 

"ನಾನು Conference call ಅಂತ ನನ್ ಟೀಮಿನವರ ಜೊತೆ ಮಾತಾಡ್ತಿದ್ರೆ ಅಮ್ಮ ಬರೀ ಹರಟೇನೇ ಆಯ್ತು ಅಂದ್ರ್ ... ನೆನ್ನೆ ರಾತ್ರಿ Video Conference’ನಲ್ಲಿದ್ರೆ ಅಮ್ಮ ಅದನ್ನ ನೋಡಿ ಸಿನಿಮಾ ನೋಡ್ತಿದ್ದೀನಿ ಅಂದ್ರು ...’

 

"ಪಾಪ, ಅವರಿಗೇನು ಗೊತ್ತಾಗುತ್ತೆ ಬಿಡಿ ... ನೀವು ಓದ್ಕೊಳ್ಳಿ"

 

{ಅಮ್ಮ} "ಮೇಲ್ಗಡೆ ಹೋಗಿ ಓದಿಕೊಳ್ತೀನಿ ಅಂದೋನು ಹೆಂಡತಿ ಜೊತೆ ಹರಟೆ ಹೊಡೀತಿದ್ಯೇನೋ. ನೀನು ಕೆಳಗಡೆ ಇಳಿದು ಬಾಮ್ಮ. ಅವನು ಓದಿಕೊಳ್ಳಲಿ. ಹಿಂಗೇ ಆದ್ರೆ ಉದ್ದಾರ ಆದ ಹಾಗೆ"

 

 

 

 

 

Comments