ಹಿಂಗೆ ನಮ್ ಶಿವರಾತ್ರೀ...

ಹಿಂಗೆ ನಮ್ ಶಿವರಾತ್ರೀ...

ನಿನ್ನೆಯ ಶಿವರಾತ್ರಿಯ ದಿನ ಹಬ್ಬ ಆಚರಿಸಿದವರ ಪ್ರಮುಖ ಕಾರ್ಯ ಉಪವಾಸ ಮಾಡುವುದು. ಫಲಹಾರಾದಿಗಳನ್ನು ಸೇವಿಸಿದರೂ ಇಡೀ ದಿನ ಅನ್ನ ತಿನ್ನದೆ ಉಪವಾಸ ಮಾಡಿ, ರಾತ್ರಿಯೆಲ್ಲ ಜಾಗರಣೆಯನ್ನು ಮಾಡಿ, ಮರುದಿನ ಉಪವಾಸ ಮುರಿದು ಹಬ್ಬದೂಟ ಮಾಡುತ್ತಿದ್ದ ನೆನಪು ಕಣ್ಣ ಮುಂದೆಯಿನ್ನು ಹಸಿರು. ಆದರೆ ವಿದೇಶಕ್ಕೆ ಬಂದ ಮೇಲೆ ಮೊದಲಿಗೆ ಹಬ್ಬದ ಆಚರಣೆ ಮಾಡಲು ರಜೆಯಿರುವುದಿಲ್ಲ. ಎರಡನೆಯದಾಗಿ ಹಬ್ಬದ ವಾತಾವರಣವೂ ಇರುವುದಿಲ್ಲ. ಸಿಂಗಪುರದ ದೇವಸ್ಥಾನಗಳಲ್ಲಿ ಆಚರಣೆ, ಜಾಗರಣೆ, ಪೂಜೆ ನಡೆಯುವುದಾದರೂ, ನಮ್ಮವರು ವಾಸಿಸುವ ಎಲ್ಲೆಡೆ ದೇವಸ್ಥಾನದ ಅನುಕೂಲವಿರುವುದಿಲ್ಲ. ಆದರೂ ಭಗವಂತನ ಕೃಪೆಯೊ, ಪ್ರೇರಣೆಯೊ - ರಜೆ ಇಲ್ಲದೆಯೂ, ಹಬ್ಬದ ಪರಿಸದ ಕೊರತೆಯಲ್ಲೂ, ಆಫೀಸಿಗೆ ಹೋಗಿದ್ದರು ಉಪವಾಸದ ಆಚರಣೆ ಆಗುವುದೂ ಉಂಟು, ಪ್ರಯತ್ನ ಪೂರ್ವಕವಾಗಿ ಮಾಡದೆ ಇದ್ದರೂ. ಇದೊಂದು ರೀತಿ ಸ್ವಾಮಿ ಕಾರ್ಯ, ಸ್ವಕಾರ್ಯದ ಲೆಕ್ಕ - ಹೇಗೂ ಉಪವಾಸ ಇರುವ ರೀತಿ ಅನಿವಾರ್ಯವಾದರೆ, ಅದನ್ನೆ ಸ್ವಲ್ಪ ಸರಿಯಾಗಿ ಧಾರ್ಮಿಕ ಅನುಭೂತಿಗೆ ಹೊಂದಿಕೆಯಾಗುವಂತೆ ಆಚರಿಸಿಕೊಂಡುಬಿಟ್ಟರೆ ಒಂದು ರೀತಿ ಹೇಗೊ ಆಚರಿಸಿಕೊಂಡ ತೃಪ್ತಿಯಾದರೂ ಆದೀತು.

ಇಲ್ಲಿ ವಿವರಿಸಿರುವ ಪ್ರಹಸನ ಅಂತದ್ದೆ ಒಂದು ಸಂಘಟನೆ. ಅನಿವಾರ್ಯವಾಗಿ ಬಂದದ್ದೊ ಆಚರಿಸಬೇಕೆಂದುಕೊಂಡಿದ್ದೊ ಒಟ್ಟಾರೆ ಉಪವಾಸದ ಬಲವಂತ ಮಾಘಸ್ನಾನ ತಾನಾಗೆ ಆದುದನ್ನು ವಿವರಿಸುವ ಪದ್ಯ ತುಸು ಲಘು ಹಾಸ್ಯದ ಲಹರಿಯಲ್ಲಿ :-)

ಹಿಂಗೆ ನಮ್ ಶಿವರಾತ್ರಿ
__________________

ಶಿವರಾತ್ರಿಗೆ ಹರ್ಷ
ಜಾಗರಣೆ ಪ್ರತಿ ವರ್ಷ
ಮಾಡಿದ್ರೆ ತಾನೆ ಅಡಿಗೆ
ಉಪವಾಸ ನಮ್ಗೇನ್ ಹೊಸದೆ ? ||

ಆರಕ್ಕೆ ಸ್ಕೂಲ್ಬಸ್ಸು
ಬರೋಕ್ಮೊದಲೆ ಬ್ರಷ್ಷು
ಹಲ್ಲುಜ್ಜೋಕು ಪುರುಸೊತ್ತು
ತಿನ್ಕೊಂಡ್ ಓಡೊಕೆಲ್ಲಿದೆ ಹೊತ್ತು ||

ಕ್ಯಾಂಟಿನಲ್ಲು ಬ್ರೆಡ್ಡು
ಕಾಫಿ ಬಿಸ್ಕೆಟ್ಟಿನ ಲಡ್ಡು
ತಿನ್ನೋಕ್ಬಿಡದೆ ಮೀಟಿಂಗು
ಮಧ್ಯೆ ಪುರುಸೊತ್ತೆಲ್ಲಿ ಈಟಿಂಗು ||

ಲಂಚಿನ ಹೊತ್ಗೆ ಬೆಪ್ಪು
ಹಬ್ಬ ಶಿವರಾತ್ರಿ ನೆನಪು
ಅನ್ನ ತಿನ್ನೊಂಗಿಲ್ಲವೆ ಶಿವನೆ
ಇಲ್ಲಿ ಕಾಣೊದೆಲ್ಲ ಬರಿ ಮೀನೆ ||

ಸರಿ ಹೇಗಿದ್ರು ಹಬ್ಬ
ಉಪವಾಸ ಮಾಡೋಣ್ಬಾ
ಕತ್ತರ್ಸಿಟ್ಟ ಹಣ್ಣು ಹಂಫಲ
ತಿನ್ಕೊಂಡೇನೆ ಬಂದೆ ಕಣಣ್ಣಾ ||

ಮುಗಿವಲ್ದು ಆಫೀಸು
ಸಂಜೆ ಹೊತ್ಗೆ ನೋಟೀಸು
ಕಾನ್ಫರೆನ್ಸ್ ಕಾಲು ಬರಬೇಕ
ಕೆಲಸಕ್ಕ್ ಹೊತ್ತು ಗೊತ್ತಿರಬೇಕಾ ?||

ಮುಗ್ದಾಗಾಗ್ಲೆ ಕತ್ತಲೆ
ರಾತ್ರಿ ಬಿಚ್ಕೊಂಡ್ ಸುತ್ಲೆ
ಸುಸ್ತನ್ ಹೊತ್ಕೊಂಡ್ ಹೊರ್ಟೆ
ಹೊಟ್ಟೇಲ್ ಶಿವರಾತ್ರಿಯ ಜಾಗಟೆ ||

ಸೇರ್ಕೊಂಡಾಯ್ತು ಮನೆ
ಬಂದವ್ರೆಲ್ಲಾ ಆಗ್ ತಾನೆ
ಸ್ಕೂಲಲ್ಲೇನ್ ತಿಂದ್ನೊ ಕಂದ
ತೋಳಿಬೇಕಿನ್ನು ಮುಸುರೆ ಸುಗಂಧ ||

ತೊಳ್ದು ಮಾಡ್ಕೊಂಡ್ ತಿನ್ನೆ
ಮನಶಕ್ತೀನೆ ಇಲ್ವಲ್ಲೊ ಶಿವನೆ
ಫ್ರಿಡ್ಜಲ್ಲೂ ಬರಿ ಹಣ್ಣಿನ್ ಜ್ಯೂಸು
ಅದನ್ನೆ ಕುಡ್ದು ರಾತ್ರಿ ನಿಭಾಯ್ಸು ||

ಹಿಂಗೆ ನಮ್ ಶಿವರಾತ್ರಿ
ಬಲವಂತದುಪ್ವಾಸ ಖಾತ್ರಿ
ಖಾಲಿ ಹೊಟ್ಟೆಗೆಲ್ಲಿ ಬರದ ನಿದ್ದೆ
ಆಯ್ತೆ ಜಾಗರಣೆನೂ ಉಪವಾಸದ್ದೆ ||

ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು
 

Comments

Submitted by nageshamysore Sat, 03/01/2014 - 11:26

In reply to by kavinagaraj

ಕವಿಗಳೆ ನಮ್ದು ಬರಿ ಬೂಟಾಟಿಕೆ 'ಸಿವ ರಾತ್ರಿ' ಈ ಕೆಳಗಿನ ಕೊಂಡಿಯಲ್ಲಿರುವ ನಿಮ್ಮದು ನಿಜವಾದ ಶಿವರಾತ್ರಿ :-)
http://sampada.net/%E0%B2%9C%E0%B3%8D%E0%B2%9E%E0%B2%BE%E0%B2%A8%E0%B3%8...