ಹಿಂದಿನ ನಿಲ್ದಾಣ

ಹಿಂದಿನ ನಿಲ್ದಾಣ

ಪುಸ್ತಕದ ಲೇಖಕ/ಕವಿಯ ಹೆಸರು
ಶುಭಶ್ರೀ ಭಟ್ಟ
ಪ್ರಕಾಶಕರು
ವೀರಲೋಕ ಬುಕ್ಸ್, ಬೆಂಗಳೂರು
ಪುಸ್ತಕದ ಬೆಲೆ
ರೂ. 108.00, ಮುದ್ರಣ: 2022

ಶುಭಶ್ರೀ ಭಟ್ಟ ಇವರು ಬರೆದ ‘ಹಿಂದಿನ ನಿಲ್ದಾಣ' ಕೃತಿಯನ್ನು ಓದಿದಾಗ ನನಗೆ ಅನಿಸಿದ್ದು ಈ ಪುಸ್ತಕವು ನಮ್ಮ ಬಾಲ್ಯದ ನೆನಪುಗಳನ್ನು ಇಣುಕುವಂತೆ ಮಾಡುವ ಕೃತಿ ಎಂದು. “ಮಕ್ಕಳು ಬದುಕನ್ನು ತೀವ್ರವಾಗಿ ಬದುಕುತ್ತಾರೆ. ಅವರಿಗೆ ಎಲ್ಲವೂ ವಿಶೇಷ ಮತ್ತು ಎಲ್ಲವೂ ಊಹಿಸಿಕೊಳ್ಳುವಷ್ಟೆ ಸಲೀಸು ಎಂಬ ಮಕ್ಕಳ ಮನೋಪ್ರಜ್ಞಾವಸ್ಥೆಯನ್ನು ರೂಪಿಸುವಲ್ಲಿ ಶುಭಶ್ರೀ ಯಶಸ್ವಿಯಾಗಿದ್ದಾರೆ” ಎನ್ನುವುದು ನನ್ನ ಅನಿಸಿಕೆ.

ಸಖಿ ಶುಭಶ್ರೀ ಭಟ್ಟ ಅವರ 'ಹಿಂದಿನ ನಿಲ್ದಾಣ' ದಲ್ಲಿ ಒಟ್ಟು 23 ಲಲಿತ ಪ್ರಬಂಧಗಳಿದ್ದು ಒಂದೊಂದು ಲೇಖನ ಓದುವಾಗಲೂ ಮನಸ್ಸು ಬಾಲ್ಯಕ್ಕೆ ಪ್ರಯಾಣ ಬೆಳೆಸುತ್ತದೆ. ಬಾಲ್ಯದ ನೆನಪುಗಳ ಹಂದರವೇ ಈ ಹಿಂದಿನ ನಿಲ್ದಾಣ. ಲೇಖಕಿ ಶುಭಶ್ರೀ ಅವರ ನೆನಪುಗಳ ದಿಬ್ಬಣವನ್ನು ಪ್ರಸ್ತುತ ಪಡಿಸುತ್ತಾ ನಮ್ಮನ್ನೆಲ್ಲಾ ಕ್ಷಣಕಾಲ ನಾವೆಲ್ಲಿದ್ದೀವಿ ಎಂದು ಬೆರಗುಗೊಳ್ಳುವಂತೆ ತಮ್ಮ ಅನುಭವವನ್ನು ಚಿತ್ರಿಸಿದ್ದಾರೆ.

ಅಕ್ಷರಗಳ ಮೇಲೆ ವ್ಯಾಮೋಹ ಮೂಡಿದ್ದೆ ಅಜ್ಜಿ ದೆಸೆಯಿಂದ ಎನ್ನುತ್ತಾ ಅವರಿಗೆ ಪುಸ್ತಕ ಅರ್ಪಿಸಿರುತ್ತಾರೆ ಲೇಖಕಿ. ಅನುಭವವಾಗದ ವಾಸ್ತವವಾಗಿ ಅಚ್ಚರಿ ಎನಿಸುವ ಈಗಲೂ ನಿಗೂಢವಾಗಿ ಕಾಡುವ ವಿಷಯಗಳ ಬಗ್ಗೆ ಮಕ್ಕಳಿಗಿರುವ ಕುತೂಹಲವನ್ನು ಬರೆಯುತ್ತಾರೆ. ಸಾಮಾನ್ಯವಾಗಿ ಅಸಾಮಾನ್ಯ ರೀತಿಯಲ್ಲಿ ಊರಲ್ಲಿ ನಡೆಯುವ ವಿಚಾರಗಳ ಕುರಿತು ಕಣ್ಣಿಗೆ ಕಟ್ಟುವಂತೆ ತಿಳಿಸುತ್ತಾರೆ.

ಮಕ್ಕಳು ಬದುಕನ್ನು ತೀವ್ರವಾಗಿ ಬದುಕುತ್ತಾರೆ. ಅವರಿಗೆ ಎಲ್ಲವೂ ವಿಶೇಷ ಮತ್ತು ಎಲ್ಲವೂ ಊಹಿಸಿಕೊಳ್ಳುವಷ್ಟೇ ಸಲೀಸು ಎಂಬ ಮಕ್ಕಳ ಮನೋಪ್ರಜ್ಞಾವಸ್ಥೆಯನ್ನು ರೂಪಿಸುವಲ್ಲಿ ಶುಭಶ್ರೀ ಯಶಸ್ವಿಯಾಗಿದ್ದಾರೆ.

'ನೆನಪಿನಂಗಳದಿಂದ' ಎಂಬಂತೆ ಮಲೆನಾಡ ಜನರ ಬದುಕಿನ ಶೈಲಿಯನ್ನು 'ಊರಿಗೆ ಬಸ್ ಬಂದರು ನಾಕು ದಿನದಂತೆ ಖುಷಿ ಪಟ್ಟು, ಮತ್ತೆ ನಡೆಯಲು ಆರಂಭಿಸುವ ಮಂದಿ'ಯ ಬಗೆ, ಮನೆ ಕೆಲಸದವರ ಮುಗ್ಧ ಪ್ರೀತಿ, ಕಾಳಜಿ, ರೈಲಿನ ಪ್ರಯಾಣಿಕರಿಗೆ ಟಾಟಾ ಮಾಡುವ ಮಕ್ಕಳ ಸಂತಸ, ಮಿಠಾಯಿ ಮಾಮ, ಪರೀಕ್ಷಾ ಕಾಲದಲ್ಲಿನ ಭಯ, ಪ್ರಾಣಿಯೊಳಗಿನ ಮೂಕಪ್ರೇಮ, ಕಡಲಿನೊಡಗಿನ ಮೋಹ, ಚಿಮಣಿ ದೀಪ, ಗಿಂಡಿಚೊಂಬಿನ ಚಾ. ಅಬ್ಬಾ! ಎಷ್ಟೆಲ್ಲಾ ನೆನಪು. ಎಲ್ಲವೂ ಬಾಲ್ಯದ್ದೆ-ಬಾಲ್ಯ ಸುಂದರವೇ.

ಸಖಿ ಶುಭಶ್ರೀ ಕೃಷ್ಣನ ಆರಾಧಕಿ ಈಗಲ್ಲ, ಬಾಲ್ಯದಲ್ಲಿಯೇ ಸಖಿಯ ನವಿಲುಗರಿಯ ಮೋಹ, ಕೃಷ್ಣನೆಡೆಗಿನ ಸೆಳೆತ ಅದೆಷ್ಟು ನವೀರಾಗಿದೆ ಎಂದರೆ ಸಖಿಯೇ ರಾಧೆಯಂತೆ, ಗೋಪಿಕೆಯಂತೆ. ಉಡುಪಿನ ವೈಯ್ಯಾರ, ಸಿಂಗಾರದ ವರ್ಣನೆಯ ಓದುವಾಗ "ಲೋಕದ ಕಣ್ಣಿಗೆ ರಾಧೆಯು ಕೂಡ....." ಲೇಖಕಿ ಮನ ಗುನುಗುವಂತೆಯೇ ಓದುಗಳಾದ ಎನ್ನ ಭಾವವು ಮಿಡಿಯುತಿತ್ತು.

"ದಣಪೆಯೊಳಗಣ ಅಕ್ಷರಮೋಹ" ದಿಂದ ಆರಂಭವಾಗುವ ಪ್ರಬಂಧಗಳು ಓದುಗರನ್ನು ಕ್ಷಣ ಮಾತ್ರದಲ್ಲಿಯೇ ಬಾಲ್ಯಕ್ಕೆ ಕೊಂಡೊಯ್ದು ಮಂತ್ರಮುಗ್ಧರನ್ನಾಗಿಸುತ್ತದೆ. 'ದಣಪೆ' ಎಂಬ ಪದವನ್ನು ಅದೆಷ್ಟು ಬಾರಿ ಬಳಸಿದ್ದಾರೆಂದರೆ ಓದುವಾಗ ಎಲ್ಲಿಯೂ ಬಳಲಿಕೆಯೂ ಆಗಲಾರದು. ಲೇಖಕಿ ಶುಭ್ರಶ್ರೀ ಅವರ ಅಬ್ಬೆ/ಅಜ್ಜಿಯೂ ಹೇಳಿದ ಕಥೆಗಳಿಗೆ ಕಿವಿಯಾಗಿ ಈಗ ಓದಿಸುತಿದ್ದಾರೆ. ಎಲ್ಲವೂ ಚಂದವೇ ಏಕೆಂದರೆ ನಮ್ಮ ಬಾಲ್ಯವೇ ಅಷ್ಟು ಸುಂದರ. ಈಗಿನ ಮಕ್ಕಳಿಗೆ ಅಂತಹ ಬಾಲ್ಯಗಳು ಸಿಕ್ಕಲಾರವು ಮತ್ತು ಸಣ್ಣ ಪುಟ್ಟ ವಿಷಯಗಳಲ್ಲಿ ಈಗಿನ ಮಕ್ಕಳಿಗೆ ಕುತೂಹಲ-ಅಚ್ಚರಿ ಇರಲಾರದು ಎಂಬುದೇ ವಿಷಾದ.

-ದೀಪಿಕಾ ಬಾಬು, ಚಿತ್ರದುರ್ಗ