ಹಿಂದಿನ ಮೈಸೂರು ಸಂಸ್ಥಾನದ ರಾಜ್ಯಗೀತೆ !
ಮೈಸೂರು ಸಂಸ್ಥಾನದ ರಾಜ್ಯಗೀತೆಯಾಗಿದ್ದ, " ಕಾಯೌ ಜಯಗೌರಿ, ಕರುಣಾ ಲಹರಿ.....", ಗೀತೆಯನ್ನು, ನಮ್ಮ ಬಾಲ್ಯದ ಶಾಲೆಯದಿನಗಳಲ್ಲಿ, ಹೇಳುತ್ತಿದ್ದದ್ದು ಇಂದಿಗೂ, ನನ್ನ ನೆನಪಿನ ಹಲಿಗೆಯಲ್ಲಿ ಮಾಸದೆ, ಉಳಿದುಕೊಂಡಿದೆ !
" ಕಾಯೌ ಶ್ರೀ ಗೌರೀ ಕರುಣಾಲಹರೀ
ತೋಯಜಾಕ್ಷೀ ಶಂಕರೀಶ್ವರೀ [ಪ]
ವೈಮಾನಿಕ ಭಾಮಾರ್ಚಿತ ಕೋಮಲತರ ಪಾದೇ
ಸೀ ಮಾತಿಗ ಭೂಮಾಸ್ಪದೆ ಕಾಮಿತ ಫಲದೇ [೧]
ಶುಂಭಾದಿಮದಾಂಬೋನಿಧಿ ಕುಂಭಜನಿಭೆ ದೇವೀ
ಜಂಭಾಹಿತ ಸಂಭಾವಿತೆ ಶಾಂಭವಿ ಶುಭವೀ [೨]
ಶ್ಯಾಮಾಲಿಕೆ ಚಾಮುಂಡಿಕೆ ಸೋಮಕುಲಜಚಾಮ
ನಾಮಾಂಕಿತ ಭೂಮೀಂದ್ರ ಲಾಮನ
ಮುದದೇ." [೩]
ಮೈಸೂರು ಅರಸರ ಕುಲದೇವತೆಯಾದ ಶ್ರೀ ಚಾಮುಂಡೇಶ್ವರಿ ಅಥವ ಗೌರಿಯನ್ನು ಪ್ರಾರ್ಥಿಸುವ ರಾಜ್ಯಗೀತೆಯನ್ನು ಆಸ್ಥಾನ ಸಾಹಿತಿ, ವಿದ್ವಾನ್, ಶ್ರೀ. ಬಸಪ್ಪ ಶಾಸ್ತ್ರಿಗಳು, ೧೦ ನೆಯ ಮಹಾರಾಜರಾಗಿದ್ದ, ಶ್ರೀ ಚಾಮರಾಜೇಂದ್ರ ಒಡೆಯರ್ ಬಹದ್ದೂರ್, ಜೆ. ಸಿ. ಐ. ಇ ; ರವರಿಗಾಗಿ, ರಚಿಸಿದರು. ತಮ್ಮ ಬ್ಯಾಂಡ್ ಮಾಸ್ಟರ್ ಬಾರ್ಟೈಸ್, ಹಾಗೂ ಆಸ್ಥಾನವಿದ್ವಾಂಸ, ವೈಣಿಕಶಿಖಾಮಣಿ, ಶೇಷಣ್ಣನವರ ಸಹಯೋಗದಿಂದ, ರಾಗ-ಸಂಯೋಜನೆ ನಡೆಸಿದರು. ಹಳೆಯಮೈಸೂರಿನ ಜನತೆಯ ದೈನಂದಿಕ ವ್ಯವಹಾರದಲ್ಲಿ, ಈ ಗೀತೆ ಅವಿಭಾಜ್ಯ ಅಂಗವಾಗಿತ್ತು. ಮಹಾರಾಜರ ಮರಣದ ನಂತರ ನಾಲ್ಮಡಿಕೃಷ್ಣರಾಜ ಒಡೆಯರು ಪಟ್ಟಕ್ಕೆ, ಬಂದರು. ರಾಜ್ಯಗೀತೆಯ ರಚನೆಯ, ಅಂತಿಮ ಚರಣದಲ್ಲಿ, " ಚಾಮ," ಎಂಬ ಪದದ ಜಾಗದಲ್ಲಿ " ಕೃಷ್ಣ " ಎಂಬ ಹೊಸಪದ ಸೇರ್ಪಡೆಯಾಯಿತು. ಇದೇತರಹ, ಜಯಚಾಮೇಂದ್ರ, ಎನ್ನುವ ಮತ್ತೊಂದು ಹೊಸಪದ, ಶ್ರೀ ಜಯಚಾಮರಾಜ ಒಡೆಯರು, ಅಧಿಕಾರಕ್ಕೆಬಂದಾಗ, ಸೇರಿಸಲಾಯಿತು. ವೈಣಿಕಪ್ರವೀಣ, ಶ್ರೀ. ವಿ. ವೆಂಕಟಗಿರಿಯಪ್ಪನವರು, ಬೇಕಾಗಿದ್ದ ರಾಗಸಂಯೋಜನೆಯನ್ನು, ತಾವೇ ಮಾಡಿಕೊಟ್ಟರು. ಮೈಸೂರು ರಾಜಧ್ವಜದ ಬಣ್ಣ, ಕೆಂಪು. ರಾಜಲಾಂಛನ, ಗಂಡುಭೇರುಂಡ.
'ಮೈಸೂರು-ನೂರಿನ್ನೂರು ವರ್ಷಗಳ ಹಿಂದೆ'. ಲೇ : ಪ್ರೊ. ಪಿ. ವಿ. ನಂಜರಾಜ ಅರಸು. ತರಂಗ, ೨೫, ಅಕ್ಟೊಬರ್, ೨೦೦೭.
ಪುಟ- ೫೬.