ಹಿಂದಿ, ಉರ್ದು ಸಾಹಿತ್ಯದ ಮಿನುಗುತಾರೆ: ಪ್ರೇಮಚಂದ್

ಹಿಂದಿ, ಉರ್ದು ಸಾಹಿತ್ಯದ ಮಿನುಗುತಾರೆ: ಪ್ರೇಮಚಂದ್

ಮುನ್ಶಿ ಪ್ರೇಮಚಂದ್ ಹಿಂದಿ ಹಾಗೂ ಉರ್ದು ಸಾಹಿತ್ಯ ಲೋಕದ ಖ್ಯಾತ ಹೆಸರು. ಇವರ ಸಾಹಿತ್ಯದ ಸೊಗಡು ಆಸ್ವಾದಿಸಿದವರಿಗೇ ಗೊತ್ತು ಅದರ ಮಹತ್ವ. ಪ್ರೇಮಚಂದ್ ಅವರ ಹಲವಾರು ಬರಹಗಳು ಕನ್ನಡಕ್ಕೆ ಅನುವಾದವಾಗಿವೆ. ಇವರು ಹಿಂದಿ ಹಾಗೂ ಉರ್ದುವಿನಲ್ಲಿ ಬರೆದ ಕಥೆ, ಕಾದಂಬರಿಗಳು ದೇಶ ವಿದೇಶಗಳಲ್ಲಿ ಖ್ಯಾತಿ ಪಡೆದಿದ್ದು, ಅನೇಕ ಭಾಷೆಗಳಿಗೆ ಅನುವಾದಗೊಂಡಿವೆ. ಯಾರು ಈ ಪ್ರೇಮಚಂದ್? ತಿಳಿಯಲು ಈ ಲೇಖನ ಓದಿ.

ಪ್ರೇಮಚಂದ್ ಅವರ ಮೂಲ ಹೆಸರು ಧನಪತ್ ರಾಯ್ ಶ್ರೀವಾಸ್ತವ. ೧೮೮೦ರ ಜುಲೈ ೨೧ರಂದು ವಾರಣಾಸಿ ಸಮೀಪದ ಲಮ್ಹಿ ಎಂಬ ಊರಿನಲ್ಲಿ ಜನಿಸಿದರು. ಇವರ ತಂದೆ ಅಜೈಬ್ ಲಾಲ್ ಹಾಗೂ ತಾಯಿ ಆನಂದಿ ದೇವಿ. ತಂದೆಯವರು ಅಂಚೆ ಇಲಾಖೆಯಲ್ಲಿ ಕೆಲಸದಲ್ಲಿದ್ದರು. ಅಸೌಖ್ಯದ ಕಾರಣದಿಂದ ಇವರ ತಾಯಿ ಅನಂದಿ ದೇವಿ ನಿಧನ ಹೊಂದಿದಾಗ ಇವರಿಗೆ ಕೇವಲ ೮ ವರ್ಷ. ಇವರ ಅಜ್ಜಿ ಇವರನ್ನು ಸ್ವಲ್ಪ ಸಮಯ ಸಾಕಿದರು. ಆದರೆ ಅವರ ನಿಧನದ ಬಳಿಕ ಪ್ರೇಮಚಂದ್ ತುಂಬಾ ಏಕಾಂಗಿಯಾದರು. ಅವರಿಗಿದ್ದ ಒಬ್ಬಳೇ ಅಕ್ಕಳಿಗೆ ಆವಾಗಲೇ ಮದುವೆಯಾಗಿತ್ತು. ಇವರ ತಂದೆಯವರು ಮತ್ತೊಂದು ಮದುವೆಯಾದರು. ಇವರ ಮಲತಾಯಿ ಪ್ರೇಮಚಂದ್ ಅವರಿಗೆ ಸಾಹಿತ್ಯ ಕೃಷಿಗೆ ಪ್ರಾರಂಭದ ದಿನಗಳಲ್ಲಿ ಸ್ವಲ್ಪ ಬೆಂಬಲ ನೀಡಿದರು ಎನ್ನುತ್ತಾರೆ ಕೆಲವರು. 

ಪ್ರೇಮಚಂದ್ ಅವರಿಗೆ ಹದಿನೈದು ವರ್ಷವಾಗುತ್ತಲೇ ಇವರ ತಂದೆ ಇವರಿಗೆ ಬಲವಂತದಿಂದ ಓರ್ವ ಯುವತಿ ಜೊತೆ ಮದುವೆ ಮಾಡಿಸುತ್ತಾರೆ. ಹುಡುಗಿ ಇವರಿಗೆ ಹೊಂದಿಕೆಯಾಗುತ್ತಲೇ ಇರಲಿಲ್ಲ ಮತ್ತು ಇವರಿಗಿಂತ ಪ್ರಾಯದಲ್ಲಿ ದೊಡ್ಡವಳೂ ಆಗಿದ್ದಳು. ಈ ಕಾರಣದಿಂದ ಇವರು ತಮ್ಮ ಪತ್ನಿಯನ್ನು ತ್ಯಜಿಸಿದರು ಮತ್ತು ಬರಹದತ್ತ ತಮ್ಮ ಗಮನವನ್ನು ಕೇಂದ್ರೀಕರಿಸಿದರು. ತಮ್ಮ ತಂದೆಯ ಸಹಕಾರ ಇಲ್ಲದ ಕಾರಣದಿಂದ ಇವರು ತಮ್ಮ ಶಿಕ್ಷಣದ ವೆಚ್ಚವನ್ನು ಇವರೇ ಭರಿಸಬೇಕಾಗಿ ಬರುತ್ತಿದ್ದು, ಆ ಕಾರಣದಿಂದ ಇವರು ಬರವಣಿಯತ್ತ ಮುಖ ಮಾಡಿದರು. ಮನೆ ಪಾಠವನ್ನು ಹೇಳಿ ಸಂಪಾದನೆ ಮಾಡತೊಡಗಿದರು. ಇವರಿಗೆ ವಕೀಲನಾಗುವ ಆಶೆ ಇದ್ದರೂ ಪರಿಸ್ಥಿತಿ ಅವರಿಗೆ ಬೆಂಬಲ ಕೊಡದ ಕಾರಣ, ಅಧ್ಯಾಪನಾ ವೃತ್ತಿಯಲ್ಲೇ ಮುಂದುವರೆದರು. ಬಿಎ ಪದವಿಯನ್ನು ಗಳಿಸಿದರು. 

ಇವರು ಶಿವರಾಣಿ ದೇವಿ ಎಂಬ ಬಾಲವಿಧವೆಯನ್ನು ಮರು ಮದುವೆಯಾದರು. ಆ ಕಾಲಕ್ಕೆ ಇದೊಂದು ಕ್ರಾಂತಿಕಾರಕ ನಡೆಯಾಗಿತ್ತು. ಶಿವರಾಣಿ ದೇವಿ ಖುದ್ದು ಲೇಖಕಿಯಾಗಿದ್ದರು. ಈ ಕಾರಣದಿಂದ ಪ್ರೇಮಚಂದ್ ಆವರಿಗೆ ಶಿವರಾಣಿಯ ಮೇಲೆ ಒಲವು ಹುಟ್ಟಿಕೊಂಡಿತು. ಪ್ರಾರಂಭಿಕ ದಿನಗಳಲ್ಲಿ ಧನಪತ್ ರಾಯ್ ಅವರು ‘ನವಾಬ್ ರಾಯ್' ಎಂಬ ಹೆಸರಿನಲ್ಲಿ ಕೆಲವು ಬರಹಗಳನ್ನು ಬರೆದರು. 

೧೯೦೬ರಲ್ಲಿ ಅವರು ಶಾಲಾ ತನಿಖಾಧಿಕಾರಿಯಾಗಿದ್ದ ಸಮಯದಲ್ಲಿ ದೇಶದಾದ್ಯಂತ ಸ್ವಾತಂತ್ರ್ಯ ಸಂಗ್ರಾಮದ ಚಳುವಳಿಗಳು ನಡೆಯುತ್ತಿದ್ದವು. ದೇಶಪ್ರೇಮಿಯಾಗಿದ್ದ ಇವರು ಅನೇಕ ಪುಸ್ತಕಗಳನ್ನು ಬರೆದರು. ಇವೆಲ್ಲದುದರ ಮೇಲೆ ಮಹಾತ್ಮ ಗಾಂಧೀಜಿಯವರ ಪ್ರಭಾವವಿತ್ತು. ಇವರ ಪುಸ್ತಕಗಳನ್ನು ಸರಕಾರ ಬಹಿಷ್ಕರಿಸಿದಾಗ, ಇವರು ತಮ್ಮ ಹೆಸರನ್ನು ‘ಪ್ರೇಮಚಂದ್’ ಎಂದು ಬದಲಾಯಿಸಿಕೊಂಡರು. ನಂತರ ಅವರಿಗೆ ಈ ಹೆಸರೇ ಖ್ಯಾತಿಯನ್ನು ತಂದುಕೊಟ್ಟಿತು. ನಂತರ ನಡೆದ ಜಲಿಯಾನ್ ವಾಲಾ ಭಾಗ್ ಹತ್ಯಾಕಾಂಡ, ಅಸಹಕಾರ ಚಳುವಳಿಗಳಿಂದ ಪ್ರಭಾವಿತರಾಗಿ ಪ್ರೇಮಚಂದ್ ಅವರು ಸರಕಾರೀ ನೌಕರಿಗೆ ರಾಜೀನಾಮೆ ನೀಡಿದರು.

ಗಾಂಧೀಜಿಯವರ ಅಹಿಂಸೆ ಹಾಗೂ ಸತ್ಯಾಗ್ರಹದ ಹೋರಾಟದಲ್ಲಿ ಪ್ರೇಮಚಂದ್ ಅವರಿಗೆ ಸಂಪೂರ್ಣ ವಿಶ್ವಾಸವಿರಲಿಲ್ಲ. ಅವರು ಆ ಕಡೆ ಕ್ರಾಂತಿಕಾರಿಯೂ ಅಲ್ಲದ, ಈ ಕಡೆ ಅಹಿಂಸಾವಾದಿಯೂ ಅಲ್ಲದ ವಿಕಾಸವಾದಿಯಾಗಿದ್ದರು. ಅಳಲು ಹಾಗೂ ನಗಲು ಬಾರದವನು ಮನುಷ್ಯನೇ ಅಲ್ಲ, ಜೀವನವನ್ನು ಸುಖಿಯಾಗಿ ಮಾಡುವುದೇ ಭಕ್ತಿ ಮತ್ತು ಮುಕ್ತಿ ಎನ್ನುತ್ತಿದ್ದರು.

೧೯೨೧ರಲ್ಲಿ ಉದ್ಯೋಗ ತ್ಯಜಿಸಿದ ಪ್ರೇಮಚಂದ್ ಅವರು ನಂತರದ ದಿನಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ಬರಹಗಳ ರಚನೆಯಲ್ಲಿ ತೊಡಗಿಸಿಕೊಂಡರು. ೧೯೨೩ರಲ್ಲಿ ತಮ್ಮ ಬರಹಗಳನ್ನು ಮುದ್ರಿಸಿ ಪ್ರಕಾಶಿಸಲು ತಮ್ಮದೇ ಆದ ಒಂದು ಮುದ್ರಣಾಲಯ ‘ಸರಸ್ವತಿ ಪ್ರೆಸ್' ಅನ್ನು ಪ್ರಾರಂಭಿಸಿದರು. ಸರಸ್ವತಿ ಪ್ರೆಸ್ ಮೂಲಕ ಹಲವಾರು ಖ್ಯಾತ ಕಾದಂಬರಿ, ಸಣ್ಣ ಕಥೆಗಳು ಮುದ್ರಿತವಾದುವು. ಅವುಗಳಲ್ಲಿ ರಂಗಭೂಮಿ, ಈಶ್ವರಿಯಾ ನ್ಯಾಯ್, ಮಾ, ಘರ್ ಜಮಾಯಿ, ದುರ್ಗಾ ಕಾ ಮಂದಿರ್, ದಿಲ್ ಕಿ ರಾಣಿ, ಧಿಕ್ಕಾರ್, ಬಲಿದಾನ್, ಪುತ್ರಪ್ರೇಮ್, ಮೇರಿ ಪಹಲೀ ರಚನಾ ಮೊದಲಾದುವುಗಳು ಪ್ರಸಿದ್ಧವಾಗಿವೆ. ಇವರ ಖ್ಯಾತ ಕಾದಂಬರಿ ‘ಶತರಂಜ್ ಕೆ ಖಿಲಾಡಿ’ ಚಲನಚಿತ್ರವಾಗಿದೆ. 

ಪ್ರೇಮಚಂದ್ ಅವರು ನೂರಾರು ಪುಸ್ತಕಗಳನ್ನು ಬರೆದರು. ಹಿಂದಿ ಭಾಷೆಯಲ್ಲಷ್ಟೇ ಅಲ್ಲ ಉರ್ದುವಿನಲ್ಲೂ ಸೊಗಸಾದ ಕಾದಂಬರಿಗಳನ್ನು ರಚಿಸಿದರು. ಹಲವಾರು ಬರಹಗಳನ್ನು ವಿವಿಧ ಭಾಷೆಗಳಿಂದ ಹಿಂದಿಗೆ ಅನುವಾದ ಮಾಡಿದರು, ಇವರ ಕಾದಂಬರಿಗಳಲ್ಲಿ ಜೀವನದ ವಿಮರ್ಶೆ, ಮಾನವರಲ್ಲಿ ಆಂತರಿಕ ಸೌಂದರ್ಯದ ಪ್ರೇಮವನ್ನು ಜಾಗೃತಗೊಳಿಸುವುದು ಪ್ರಮುಖವಾದ ಅಂಶಗಳಾಗಿರುತ್ತಿದ್ದವು. ಇವರು ಜನರ ದುಃಖ ದುಮ್ಮನಗಳನ್ನು ಹತ್ತಿರದಿಂದ ನೋಡಿದ್ದರು, ಇವರು ತಮ್ಮ ಬರಹಗಳಲ್ಲಿ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯಗಳು, ಶೋಷಣೆ ಮೊದಲಾದುವುಗಳ ಬಗ್ಗೆ ಬರೆದರು. ಪ್ರೇಮಚಂದ್ ಅವರು ನಾಟಕ, ಕಥೆ, ಕಾದಂಬರಿ, ಪ್ರಬಂಧ, ಜೀವನ ಚರಿತ್ರೆ, ಶಿಶು ಸಾಹಿತ್ಯ, ವಿಚಾರಾತ್ಮಕ ಲೇಖನ ಹಾಗೂ ಅನುವಾದಗಳನ್ನು ಬರೆದಿದ್ದಾರೆ. ಇವರ ಕೆಲವು ಕಾದಂಬರಿಗಳು ಚಲನ ಚಿತ್ರಗಳಾಗಿವೆ.

ಇವರು ಬರೆಯುತ್ತಿದ್ದ ಭಾಷೆ ಬಹಳ ಸರಳವಾಗಿದ್ದ ಕಾರಣದಿಂದ ಸಾಮಾನ್ಯ ಜನರೂ ಇವರ ಬರಹಗಳ ಸ್ವಾದವನ್ನು ಆಸ್ವಾದಿಸುತ್ತಿದ್ದರು. ಇವರು ೧೯೩೬ ಅಕ್ಟೋಬರ್ ೮ರಂದು ಬನಾರಸ್ ನಲ್ಲಿ ನಿಧನ ಹೊಂದಿದರು. ಇವರ ಗೌರವಾರ್ಥ ಭಾರತೀಯ ಅಂಚೆ ಇಲಾಖೆ ೧೯೮೦ ಜುಲೈ ೩೧ರಂದು ೩೦ ಪೈಸೆ ಮುಖಬೆಲೆಯ ಅಂಚೆ ಚೀಟಿಯನ್ನು ಮುದ್ರಿಸಿ ಗೌರವಿಸಿದೆ. ಇವರ ಮರಣಾ ನಂತರ ಇವರ ಪತ್ನಿಯಾದ ಶಿವರಾಣಿ ದೇವಿಯವರು ತಮ್ಮ ಪತಿಯ ನೆನಪಿನಲ್ಲಿ ‘ಪ್ರೇಮಚಂದ್ ಘರ್ ಮೆ' ಎಂಬ ಕೃತಿಯನ್ನು ರಚಿಸಿದ್ದಾರೆ.

ಮುನ್ಶಿ ಪ್ರೇಮಚಂದ್ ಎಂದರೆ ಹಿಂದಿ ಮತ್ತು ಉರ್ದು ಸಾಹಿತ್ಯ ಲೋಕದಲ್ಲಿ ಈಗಲೂ ಬಹಳ ಖ್ಯಾತಿವೆತ್ತ ಹೆಸರು. ನಾವೂ ಶಾಲೆಯಲ್ಲಿ ಕಲಿಯುತ್ತಿರುವಾಗ ಇವರು ಬರೆದ ಬರಹವೊಂದರ ಅನುವಾದ ಅಥವಾ ಹಿಂದಿ ಪಠ್ಯದಲ್ಲಿ ಕಿರು ಕಥೆಯನ್ನು ಓದಿದ ನೆನಪು ಈಗಲೂ ಇದೆ. ಸುಮಾರು ಮೂವತ್ತು ವರ್ಷ ಇವರು ಬರೆದೇ ಬದುಕಿದರು. ಇವರನ್ನು ‘ಭಾರತದ ಗಾರ್ಕಿ' (ರಷ್ಯಾದ ಖ್ಯಾತ ಸಾಹಿತಿ ಮ್ಯಾಕ್ಸಿಂ ಗಾರ್ಕಿ ನೆನಪಿನಲ್ಲಿ) ಎಂದೇ ಕರೆಯಲಾಗುತ್ತದೆ.

ಚಿತ್ರ ಕೃಪೆ: ಅಂತರ್ಜಾಲ ತಾಣ