ಹಿಂದು ಧರ್ಮ ಸಾರ
ಹಿಂದು ಧರ್ಮದ ಬಗ್ಗೆ ಎಲ್ಲ ಅವಶ್ಯ ಮಾಹಿತಿಯನ್ನು ಎಲ್ಲರಿಗೂ ಅರ್ಥವಾಗುವಂತೆ ವಿವರಿಸುವ ಪುಸ್ತಕ ಇದು. ಲೇಖಕರು 1939ರಲ್ಲಿ ಆಗಿನ ಮದ್ರಾಸಿನ ಪಚ್ಚೆಯಪ್ಪಾ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿದ್ದಾಗ, ಆ ಸಂಸ್ಥೆಯಲ್ಲಿ ಧಾರ್ಮಿಕ ಶಿಕ್ಷಣವನ್ನು ಪ್ರಸ್ತುತಗೊಳಿಸಲಿಕ್ಕಾಗಿ ಬರೆದ ಪುಸ್ತಕ. ಇದನ್ನು ಎನ್. ಪಿ. ಶಂಕರನಾರಾಯಣ ರಾವ್ ಕನ್ನಡಕ್ಕೆ ಅನುವಾದಿಸಿದ್ದಾರೆ.
ಇಂಗ್ಲಿಷಿನಲ್ಲಿ “ವಾಟ್ ಈಸ್ ಹಿಂದುಯಿಸಂ" ಎಂಬ ಶೀರ್ಷಿಕೆಯ ಈ ಪುಸ್ತಕ ಹಲವಾರು ಬಾರಿ ಮರುಮುದ್ರಣಗೊಂಡಿದೆ. ಇದು ಅದರ ತಿದ್ದಿದ ಆವೃತ್ತಿ. ಇದರಲ್ಲಿ ಏಳು ಅಧ್ಯಾಯಗಳಿವೆ: (1) ಪೀಠಿಕೆ (2) ಹಿಂದು ಧರ್ಮ ಗ್ರಂಥಗಳು (3) ಹಿಂದು ಸಂಸ್ಕಾರಗಳು ಮತ್ತು ಪುರಾಣಗಳು (4) ಹಿಂದು ನೀತಿ ಸೂತ್ರಗಳು (5) ಹಿಂದು ದೈವ ಸಾಧನಗಳು (6) ಹಿಂದು ತತ್ತ್ವ ಜಿಜ್ನಾಸೆ ಮತ್ತು (7) ಉಪಸಂಹಾರ
"ಪೀಠಿಕೆ" ಅಧ್ಯಾಯದಲ್ಲಿ ಧರ್ಮಗಳನ್ನು ಭಾಷೆಗಳಿಗೆ ಹೋಲಿಸುತ್ತಾ ಲೇಖಕರು ಹೀಗೆಂದು ವಿವರಿಸಿದ್ದಾರೆ: “ಯಾವ ಭಾಷೆಯೂ ಮನುಷ್ಯನ ಭಾವನೆಗಳ ಸಮಗ್ರವಾಹಕವಾಗಲಾರದು. ಅದೇ ರೀತಿ ಯಾವ ಧರ್ಮವೂ ದೈವಾನುಭವದ ಸಮಗ್ರವಾಹಕವಾಗಿಲ್ಲ. ಪ್ರತಿಯೊಂದು ಭಾಷೆಗೂ ಅದರದರ ಗುಣಗಳೂ ಇವೆ; ದೋಷಗಳೂ ಇವೆ. ಪದ ಸಂಪತ್ತು ವಿಪುಲವಾಗಿರುವ ಭಾಷೆಯ ಉಚ್ಚಾರಣಾಕ್ರಮ ಅಸಂಬದ್ಧವಾಗಿರಬಹುದು. ವಾಕ್ಯರಚನಾ ಕ್ರಮವು ತರ್ಕಬದ್ಧವಾಗಿರುವ ಭಾಷೆಯ ಶಬ್ದ ಸೃಷ್ಟಿ ಸಾಮರ್ಥ್ಯ ಕುಂಠಿತವಾಗಿರಬಹುದು. ಹೀಗೆಯೇ ಪ್ರತಿಯೊಂದು ಧರ್ಮಕ್ಕೂ ಅದರದರ ಗುಣಗಳೂ ಇವೆ; ದೋಷಗಳೂ ಇವೆ. ದೈವದ ಕಲ್ಪನೆ ಭವ್ಯವಾಗಿರುವ ಧರ್ಮದ ವ್ಯವಸ್ಥಾ ಸಾಮರ್ಥ್ಯ ದುರ್ಬಲವಾಗಿರಬಹುದು. ಉನ್ನತವೂ, ಉದಾರವೂ ಆದ ನೈತಿಕ ತತ್ತ್ವಗಳನ್ನು ಪಡೆದಿರುವ ಧರ್ಮದ ಉಪಾಸನಾ ಪದ್ಧತಿಗಳು ಅತೃಪ್ತಿಕರವಾಗಿರ ಬಹುದು. ಅನ್ಯೂನ ಭಾಷೆ, ಅನ್ಯೂನ ಧರ್ಮ, ಎರಡೂ ಆದರ್ಶ ಧ್ಯೇಯಗಳಾಗಿ ಮಾತ್ರ ಇರಬಲ್ಲವು. ಆದ್ದರಿಂದ ನಮ್ಮ ಮಾತೃ ಭಾಷೆಯೊಂದೇ ಅಭಿವ್ಯಕ್ತಿಯ ಸಮಗ್ರ ಸಾಧನ, ಇತರ ಭಾಷೆಗಳು ಅರ್ಥಹೀನ ಶಬ್ದಗಳ ರಾಶಿ ಎಂದು ಭಾವಿಸುವುದು ಹೇಗೆ ತಪ್ಪಾಗುವುದೋ, ಅದೇ ರೀತಿ ನಾವು ಅನುಸರಿಸುವ ಧರ್ಮವೊಂದೇ ಭಗವಂತನ ಪರಿಪೂರ್ಣ ದಿವ್ಯದರ್ಶನ, ಇತರ ಧರ್ಮಗಳು ಆರಾಧಕರ ಕಲ್ಪನೆಯ ಭ್ರಮೆ ಎಂದು ಭಾವಿಸುವುದು ಸಹ ತಪ್ಪು.”
ಇದೇ ವಿಚಾರವನ್ನು ಮುಂದುವರಿಸಿ, ಲೇಖಕರು ಸ್ಪಷ್ಟ ಪಡಿಸುವ ಸಂಗತಿ: “.... ನಮ್ಮ ಸ್ವಂತ ಧರ್ಮದ ಮೇಲಿನ ಪ್ರೇಮ ಇತರ ಧರ್ಮಗಳ ಮೇಲಿನ ದ್ವೇಷಕ್ಕೆ ಎಡೆಕೊಡಬಾರದು. ಅದಕ್ಕೆ ಪ್ರತಿಯಾಗಿ, ನಮ್ಮ ನೆರೆಹೊರೆಯಲ್ಲಿ ಪ್ರಚಲಿತವಾಗಿರುವ ಧರ್ಮಗಳನ್ನು ಪೂಜ್ಯ ಭಾವನೆ ಮತ್ತು ಸಹಾನುಭೂತಿಗಳಿಂದ ನೋಡುವುದು ನಮ್ಮ ಕರ್ತವ್ಯ. ಇದರ ಉದ್ದೇಶವು ಅವುಗಳನ್ನು ಅರಿತುಕೊಳ್ಳುವುದು ಮಾತ್ರವಲ್ಲ; ಸಾಧ್ಯವಿದ್ದ ಮಟ್ಟಿಗೆ ನಮ್ಮ ಸ್ವಂತ ಧರ್ಮಗಳನ್ನು ಉತ್ತಮಗೊಳಿಸಿ ಬಲಪಡಿಸುವುದು ಸಹ.”
ಅಧ್ಯಾಯ ಎರಡರಲ್ಲಿ, ಹಿಂದು ಧರ್ಮದ ವಿಶ್ವಾಸಗಳಿಗೆ ಅಧಿಕೃತ ಮೂಲಗಳು ಯಾವುವು ಎಂಬುದನ್ನು ಪ್ರಸ್ತಾಪಿಸಲಾಗಿದೆ. ಹಿಂದು ಧರ್ಮದ ಅಧಿಕೃತ ಮೂಲಗಳನ್ನು (1) ಶ್ರುತಿ ಮತ್ತು (2) ಸ್ಮೃತಿ ಎಂದು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಶ್ರುತಿಯು ಮೂಲ ಆಧಾರ. ಸ್ಮೃತಿಯು ಆನುಷಂಗಿಕ ಆಧಾರ ಎಂದು ಅವನ್ನು ವಿವರಿಸಲಾಗಿದೆ.
ಅಧ್ಯಾಯ 3ರಲ್ಲಿ (ಹಿಂದು ಸಂಸ್ಕಾರಗಳು ಮತ್ತು ಪುರಾಣಗಳು) “ಸಂಸ್ಕಾರಗಳಿಲ್ಲದೆ ಧರ್ಮ ನಿಲ್ಲಲಾರದು. ನಮ್ಮ ಬಾಲ್ಯದಲ್ಲಿ ನೋಡುವ ಸಂಸ್ಕಾರಗಳು ಮತ್ತು ಉತ್ಸವಗಳ ಮೂಲಕ ನಾವು ಧರ್ಮದ ಪ್ರಥಮ ಪರಿಚಯವನ್ನು ಪಡೆಯುತ್ತೇವೆ. ಎಲ್ಲ ದೇಶಗಳಲ್ಲೂ ಬಹುಸಂಖ್ಯೆಯ ಜನರು ತಮ್ಮ ಆಧ್ಯಾತ್ಮಕ ಉನ್ನತಿಯಲ್ಲಿ ಈ ಸಂಸ್ಕಾರಗಳು ಮತ್ತು ಉತ್ಸವಗಳ ಹಂತವನ್ನು ದಾಟುವುದೇ ಇಲ್ಲ” ಎಂದು ಯಾವುದೇ ಧರ್ಮದಲ್ಲಿ ಸಂಸ್ಕಾರಗಳನ್ನು ಕಲಿಯುವ ಅನುಯಾಯಿಗಳ ಪಾಡನ್ನು ಚಿತ್ರಿಸಿದ್ದಾರೆ.
ಸಂಸ್ಕಾರಗಳ ಪಾತ್ರವನ್ನು ಹೀಗೆಂದು ತಿಳಿಸಿದ್ದಾರೆ: “ಮೊದಲನೆಯದಾಗಿ ಸಂಸ್ಕಾರ ಕ್ರಮಕ್ಕೆ ಮಹತ್ತರವಾದ ಸಾಮಾಜಿಕ ಪಾತ್ರವಿದೆ. ಧರ್ಮವು, ಭಾಷೆಯಂತೆ ನಮಗೆ ಸಣ್ಣವಯಸ್ಸಿನಲ್ಲಿ ಬರುವ ಸಾಮಾಜಿಕ ವಸ್ತು. ಭಾಷೆಯು ಅರ್ಥ ತುಂಬಿದ ಶಬ್ದಗಳ ರೂಪದಲ್ಲಿ ಬರುವ ಹಾಗೆ, ಧರ್ಮವು ಅರ್ಥ ತುಂಬಿದ ಸಂಸ್ಕಾರಗಳ ರೂಪದಲ್ಲಿ ಬರುತ್ತದೆ. ಸಂಸ್ಕಾರ ಕ್ರಮ ಧಾರ್ಮಿಕ ವಿಶ್ವಾಸದ ಮೂರ್ತರೂಪ. ಧರ್ಮಾನುಯಾಯಿಗಳ ದೊಡ್ಡ ಗುಂಪುಗಳನ್ನು ಅದು ಒಂದುಗೂಡಿಸುತ್ತದೆ. ಪ್ರತಿ ದಿನವೂ ನಿತ್ಯ ಪೂಜಾ ವಿಧಿಗಳಲ್ಲಿ ಭಾಗವಹಿಸಲು ಹಿಂದು ದೇವಾಲಯಕ್ಕೋ, ಕ್ಯಾಥಲಿಕ್ ಚರ್ಚಿಗೋ, ಬೌದ್ಧ ವಿಹಾರಕ್ಕೋ, ಮಹಮ್ಮದೀಯ ಮಸೀದಿಗೋ ಬರುವ ಆರಾಧಕರ ಜನಜಂಗುಳಿಯಲ್ಲಿ ನಾವು ಇದನ್ನು ಕಾಣಬಹುದು.” ಮುಂದುವರಿದು ಲೇಖಕರು ಸಂಸ್ಕಾರ ಕ್ರಮಗಳ ಐತಿಹಾಸಿಕ, ನೈತಿಕ ಪಾತ್ರ ಮತ್ತು ಅವುಗಳ ಆಂತರಿಕ ಪ್ರಭಾವವನ್ನು ವಿವರಿಸಿದ್ದಾರೆ.
ಜೊತೆಗೆ, “ಸಂಸ್ಕಾರ ಕ್ರಮವು ಧರ್ಮವನ್ನು ಯಂತ್ರಸದೃಶವನ್ನಾಗಿ ಮಾಡುವುದಲ್ಲದೆ, ನಿಂತಲ್ಲಿ ನಿಲ್ಲಿಸುತ್ತದೆ” ಎಂದೂ ಲೇಖಕರು ಎಚ್ಚರಿಸುತ್ತಾರೆ. ಇದಕ್ಕೆ ಅವರ ವಿವರಣೆ ಹೀಗಿದೆ: "ನಂಬಿಕೆ ಬದಲಾದ ಹಾಗೆ ಸಂಸ್ಕಾರ ಕ್ರಮವೂ ಬದಲಾಗಬೇಕು.
ಪ್ರಗತಿಪರ ಭಾಷೆಯೊಂದರಲ್ಲಿ ಕಾಗುಣಿತವು ಉಚ್ಚಾರಣೆಯನ್ನೂ ಬರಹದ ಶೈಲಿಯು ಮಾತಿನ ಶೈಲಿಯನ್ನೂ ಸ್ವಲ್ಪ ಹಿಂದಿನಿಂದಲಾದರೂ ಅನುಸರಿಸುವಂತೆ, ಪ್ರಗತಿಪರ ಧರ್ಮದಲ್ಲಿ ಸಂಸ್ಕಾರಗಳು ವಿಶ್ವಾಸವನ್ನು ಹಿಂಬಾಲಿಸಬೇಕು. ಇವೆರಡರ ನಡುವೆ ಅಗಾಧ ಕಂದಕವಿರಬಾರದು.
ಹದಿನೈದನೆಯ ಶತಮಾನದಲ್ಲಿ ಮುದ್ರಣ ಯಂತ್ರಗಳು ಆ ಕಾಲದಲ್ಲಿ ಪ್ರಚಲಿತವಿದ್ದ ಕಾಗುಣಿತವನ್ನು ಸರಿಸುಮಾರಾಗಿ ಸ್ಥಿರಗೊಳಿಸಿಬಿಟ್ಟದ್ದರಿಂದ, ಇಂಗ್ಲಿಷ್ ಭಾಷೆಯ ಕಾಗುಣಿತವು ಕಂದಾಚಾರದ್ದಾಗಿ, ಅಸಮಂಜಸವಾಗಿದೆ. ಮುಂದಿನ ಶತಮಾನದಲ್ಲಿ ಜನ ಬಳಕೆಯ ಉಚ್ಚಾರಣೆ ಮುಂದೆ ಹೋಗಿರುವಾಗ, ಕಾಗುಣಿತ ಕ್ರಮ ಬಹುತೇಕ ನಿಂತಲ್ಲಿ ನಿಂತಿದೆ. ಇದೇ ಬಗೆಯಲ್ಲಿ ಕ್ರೈಸ್ತಶಕೆ ಪ್ರಾರಂಭಕ್ಕೆ ಕೆಲವು ಶತಮಾನಗಳ ಹಿಂದೆ, ಆ ಕಾಲದ ವಿಶ್ವಾಸಿಗಳಿಗೆ ಅನುಗುಣವಾಗಿ ನಮ್ಮ ಸಂಸ್ಕಾರಗಳನ್ನು ಪುರೋಹಿತ ವರ್ಗ ಹೆಚ್ಚುಕಡಿಮೆ ಸ್ಥಿರರೂಪದಲ್ಲಿ ನೆಲೆಗೊಳಿಸಿತು. ಕೆಲವು ಅಂಶಗಳಲ್ಲಿ ವಿಶ್ವಾಸ ಮುನ್ನಡೆದಿದೆ, ಸಂಸ್ಕಾರ ನಿಂತಲ್ಲಿ ನಿಂತಿದೆ. … ಈ ರಂಗದಲ್ಲಿ ಧಾರ್ಮಿಕ ಉತ್ಸಾಹಿಗಳು ಮತ್ತು ಪ್ರಭುದ್ಧರಾದ ಪಂಡಿತರು ಮಾಡಬಹುದಾದ ಕೆಲಸ ಬೇಕಾದಷ್ಟಿದೆ. ನಮ್ಮ ಸಂಸ್ಕಾರಗಳಲ್ಲಿ ಸುಧಾರಣೆ ಆಗಬೇಕಾದುದು ಬಹಳ ಇದೆ. ಮುಂದಿನ ತಲೆಮಾರಿನವರು ಧಾರ್ಮಿಕ ವಿಶ್ವಾಸವನ್ನು ಕಳೆದುಕೊಳ್ಳದೆ ಇರಬೇಕಾದರೆ ಅದನ್ನು ಸರಳಗೊಳಿಸಬೇಕು, ವಿವೇಚನಾಬದ್ಧ-ಗೊಳಿಸಬೇಕು. ಜನರ ಯಥಾವತ್ ವಿಶ್ವಾಸಕ್ಕೆ ಅದನ್ನು ಹತ್ತಿರಕ್ಕೆ ತಂದರೆ ಮಾತ್ರ ಅದು ಹಿತಕಾರಿ ಪ್ರಭಾವವನ್ನು ಬೀರಬಲ್ಲದು. ಧರ್ಮದಲ್ಲಿ ತಾನು ನಿರ್ವಹಿಸಬೇಕಾದ ಪಾತ್ರವನ್ನು ಯೋಗ್ಯವಾದ ರೀತಿಯಲ್ಲಿ ನಿರ್ವಹಿಸಬಲ್ಲದು.”
“ಹಿಂದು ಧರ್ಮವು ಉತ್ತಮ ಕಾರ್ಯನಿರತ ಧರ್ಮ; ಅಷ್ಟೇ ಮಟ್ಟಿಗೆ ಉನ್ನತ ತತ್ತ್ವನಿರತ ಧರ್ಮ” ಎಂದು ಘೋಷಿಸುವ ಲೇಖಕರು, 3ನೇ ಅಧ್ಯಾಯದ ಮುಕ್ತಾಯದಲ್ಲಿ ಹೀಗೆಂದು ಸಾರಿದ್ದಾರೆ: “ಅಸಂಖ್ಯಾತ ಪ್ರತೀಕ, ಪ್ರತಿಮೆಗಳ ಮೂಲಕ ಜನಮನದಲ್ಲಿ ಅನೇಕದಲ್ಲಿ ಏಕತೆಯ ಭಾವವನ್ನು ಬಿತ್ತಿ ಬೆಳೆಸಿರುವುದರಲ್ಲಿ ಹಿಂದು ಧರ್ಮದ ಸತ್ವವು ಅಡಗಿದೆ. ಅನೇಕ ವಿದೇಶೀ ವಿಮರ್ಶಕರು ಏಕತೆಯತ್ತ ಕುರುಡುಗಣ್ಣು ಹರಿಸಿ, ಅನೇಕವನ್ನು ಮಾತ್ರ ಕಂಡು ಹಿಂದು ಧರ್ಮವನ್ನು ಕೇವಲ ಬಹುದೇವತಾವಾದ ಅಥವಾ ಪುರಾಣ ಎಂದು ಕರೆದಿದ್ದಾರೆ. ಆದರೆ, ಗ್ರಾಮದೇವತೆಯ ಪದತಲದಲ್ಲಿ ನಾಲ್ಕು ಹೂವಿರಿಸಿ ಕೈಮುಗಿಯುವ ಅನಕ್ಷರಸ್ಥ ರೈತನೂ ಮನಗಂಡಿರುವಂತಹ, ಆಸ್ತಿಭಾರ ಸ್ವರೂಪದ ತಾತ್ತ್ವಿಕ ಏಕತೆಯೊಂದು ಇಲ್ಲವಾಗಿದ್ದರೆ, ಹಿಂದುಗಳ ಧರ್ಮವು ಸಹ ಎಷ್ಟೋ ಕಾಲದ ಹಿಂದೆಯೇ ಗ್ರೀಕರ, ರೋಮನರ, ಈಜಿಪ್ಟಿಯನರ, ಮೆಕ್ಸಿಕನರ ಧರ್ಮಗಳಂತೆ ಅಳಿದು ಹೋಗಿ, ಮರೆತ ಸಂಗತಿಯಾಗಿ ಬಿಡುತ್ತಿತ್ತು.”
ಮುಂದಿನ ಮೂರು ಅಧ್ಯಾಯಗಳಲ್ಲಿ, ಹಿಂದು ನೀತಿ ಸೂತ್ರಗಳು, ಹಿಂದು ದೈವ ಸಾಧನಗಳು ಮತ್ತು ಹಿಂದು ತತ್ತ್ವ ಜಿಜ್ನಾಸೆಯನ್ನು ಸಮರ್ಥವಾಗಿ, ಸರ್ವರಿಗೂ ಸುಲಭವಾಗಿ ಅರ್ಥವಾಗುವಂತೆ ಪ್ರಸ್ತುತಪಡಿಸಿದ್ದಾರೆ ಲೇಖಕರು. “ಹಿಂದು ಧರ್ಮ ಗ್ರಂಥಗಳಲ್ಲೆಲ್ಲ ಭಗವದ್ಗೀತೆಯು ಅತ್ಯಂತ ಮಹತ್ವದ್ದು” ಎನ್ನುತ್ತಾ ಅದು ತೋರಿರುವ ದಾರಿಗಳನ್ನು ಉಲ್ಲೇಖಿಸಿದ್ದಾರೆ.
ಹೀಗೆ ಆರು ಅಧ್ಯಾಯಗಳಲ್ಲಿ, "ಪ್ರಪಂಚದ ಅತ್ಯಂತ ಪುರಾತನ ಧರ್ಮವಾದ ಹಿಂದು ಧರ್ಮವು ಅದೃಷ್ಟವಾದವಲ್ಲ, ನಿರಾಶವಾದವಲ್ಲ, ವೈರಾಗ್ಯವಾದವಲ್ಲ, ಸ್ತಬ್ಧವಾದವಲ್ಲ, ಸಂದೇಹವಾದವಲ್ಲ, ವಿಶ್ವದೇವೈಕ್ಯವಾದವಲ್ಲ, ಭ್ರಮವಾದವಲ್ಲ, ಮತ್ತು ತಾಳ್ಮೆಯಿಲ್ಲದ ವಿದೇಶೀ ವಿಮರ್ಶಕರು ನಿರೂಪಿಸುವಂತೆ ಬರಿಯ ಬಹುದೇವತಾವಾದವೂ ಅಲ್ಲ” ಎಂಬುದನ್ನು ಸಾಧಿಸುವ ಲೇಖಕರು, 20ನೇ ಶತಮಾನದಲ್ಲಿ ಹಿಂದು ಧರ್ಮವು ಮಗದೊಂದು ಪುನರುಜ್ಜೀವನದ ಪಥದಲ್ಲಿ ಮುಂದುವರಿಯುತ್ತಿರುವುದನ್ನು ವಿವರಿಸುತ್ತಾ, ಹಿಂದು ಧರ್ಮದ ನಿರಂತರತೆಯನ್ನು ಎತ್ತಿ ಹಿಡಿಯುತ್ತಾರೆ.