ಹಿಂದೂ ಜೀವನಮೌಲ್ಯಗಳು: ನಾಗರಿಕತೆಯ ದಾರಿದೀಪಗಳು
ಹಿಂದುತ್ವ ಜಗತ್ತಿನ ಅತ್ಯಂತ ಪುರಾತನ ನಾಗರಿಕತೆ. ಜೊತೆಗೆ, ಇದು ಜ್ವಲಂತವಾದ ಮತ್ತು ಆಂತರಿಕ ಸತ್ವದಿಂದ ಪುಟಿಯುತ್ತಿರುವ ನಾಗರಿಕತೆ ಎಂಬುದು ಗಮನಿಸಬೇಕಾದ ಸಂಗತಿ.
ಇದು ಹೇಗಾಯಿತು? ಹೇಗೆಂದರೆ, ಹಿಂದುತ್ವ ಒಂದು ಧರ್ಮ ಎನ್ನುವುದಕ್ಕಿಂತಲೂ ಅದೊಂದು “ಬದುಕುವ ರೀತಿ” (ವೇ ಆಫ್ ಲೈಫ್). ಶತಮಾನಗಳು ಉರುಳಿದಂತೆ, ಹಿಂದುತ್ವವು ಕೆಲವು ಉದಾತ್ತ ಮೌಲ್ಯಗಳು, ತತ್ವಗಳು ಮತ್ತು ನಂಬಿಕೆಗಳನ್ನು ಬೆಳೆಸಿಕೊಂಡಿದೆ. ಈ ಮೂಲಭೂತ ಮೌಲ್ಯಗಳೇ ಹಿಂದುತ್ವವು ನಿರಂತರವಾಗಿ ವಿಕಾಸ ಹೊಂದುತ್ತಿರುವುದಕ್ಕೆ ಕಾರಣ.
ಹಿಂದುತ್ವದ ಅಡಿಪಾಯವಾಗಿರುವ ಈ ಮೂಲಭೂತ ಮೌಲ್ಯಗಳು 5,000 ವರುಷಗಳಿಗಿಂತ ದೀರ್ಘ ಅವಧಿಯಲ್ಲಿ ಅದನ್ನು ಮುನ್ನಡೆಸಿವೆ. ಇವು, ಹಿಂದೂಗಳ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದ್ದು, ಅವರ ದೈನಂದಿನ ಬದುಕಿನ ಭಾಗವಾಗಿವೆ. ಇದನ್ನೇ “ಸನಾತನ ಧರ್ಮ” ಎಂದು ಕರೆಯಲಾಗುತ್ತದೆ. ಕಾಲದೇಶಗಳನ್ನು ಮೀರಿದ ಈ ಜೀವನಮೌಲ್ಯಗಳು ವಿಶ್ವಮಾನ್ಯವಾಗಿವೆ. ಅವುಗಳಲ್ಲಿ ಕೆಲವನ್ನು ಪರಿಶೀಲಿಸೋಣ.
ಜಗತ್ತೇ ಒಂದು ಕುಟುಂಬ
"ವಸುದೈವ ಕುಟುಂಬಕಮ್" ಅಂದರೆ ಜಗತ್ತೇ ಒಂದು ಕುಟುಂಬ ಎಂಬುದು ಹಿಂದೂಗಳ ನಂಬಿಕೆ. ಕೂಡುಕುಟುಂಬದಲ್ಲಿ ಬದುಕುವುದು ಹಿಂದೂಗಳ ಒಂದು ಮೂಲಭೂತ ಮೌಲ್ಯ. ಹಿಂದೂ ಸಂಸ್ಕೃತಿಯ ಅನುಸಾರ ವ್ಯಕ್ತಿಗಿಂತ ಕುಟುಂಬ ಮುಖ್ಯ. "ನಾನು ಇಂತಹ ಕುಟುಂಬಕ್ಕೆ ಸೇರಿದವನು/ ಸೇರಿದವಳು” ಎಂಬುದು ಪ್ರತಿಯೊಬ್ಬ ಹಿಂದೂವಿಗೂ ಅಭಿಮಾನದ ಸಂಗತಿ. ಎಲ್ಲ ಹಿಂದೂ ಆಚರಣಿಗಳಿಗೂ ಕುಟುಂಬವೇ ಕೇಂದ್ರ ಬಿಂದು. ಹಿಂದೂ ಹುಟ್ಟುವುದು, ಬೆಳೆಯುವುದು ಮತ್ತು ಮೌಲ್ಯಗಳನ್ನು ಕಲಿಯುವುದು ಕುಟುಂಬದಲ್ಲಿಯೇ. ಕುಟುಂಬದ ಸದಸ್ಯನಾಗಿ ಬದುಕುವುದು ಹಿಂದೂವಿಗೆ ಜೀವನದಲ್ಲಿ ದೊಡ್ಡ ಸಾಧನೆಗಳನ್ನು ಮಾಡಲು ಮಾನಸಿಕ ಹುಮ್ಮಸ್ಸು ನೀಡುತ್ತದೆ.
ಹಿಂದೂಗಳಲ್ಲಿ ಮಕ್ಕಳನ್ನು ಬೆಳೆಸುವುದು ಮತ್ತು ತಮ್ಮ ತಂದೆತಾಯಿಯರ ಯೋಗಕ್ಷೇಮ ನೋಡಿಕೊಳ್ಳುವುದು ಹೆತ್ತವರ ಕರ್ತವ್ಯ. ಯಾವುದೇ ಹಿಂದೂ ಕುಟುಂಬದ ಎಲ್ಲ ಸದಸ್ಯರೂ ಒಂದೇ ಚಾವಣಿಯಡಿಯಲ್ಲಿ ವಾಸ ಮಾಡದಿದ್ದರೂ, ಅವರೊಳಗಿನ ಭಾವನಾತ್ಮಕ ಸಂಬಂಧ ಗಾಢವಾಗಿರುತ್ತದೆ.
ನ್ಯಾಷನಲ್ ಜೋಗ್ರಫಿಕ್ ಸಂಶೋಧಕ ಡಾನ್ ಬ್ಯುಟ್ಟನರ್ ಕಂಡುಕೊಂಡ ಒಂದು ಮುಖ್ಯವಾದ ಸಂಗತಿ ಏನೆಂದರೆ ಅತ್ಯಂತ ಜಾಸ್ತಿ ಸಂಖ್ಯೆಯ ಶತಾಯುಷಿಗಳು ಇರುವ ಸಮುದಾಯಗಳಲ್ಲಿ ಗಮನಿಸಬೇಕಾದ ಒಂದು ಸಾಮಾನ್ಯ ವಿದ್ಯಮಾನ: ಕುಟುಂಬದ ಸದಸ್ಯರನ್ನು ಮತ್ತು ಇತರ ಪ್ರೀತಿಯ ವ್ಯಕ್ತಿಗಳನ್ನು ಪ್ರತಿ ದಿನದ ಆದ್ಯತೆ (ಮುಖ್ಯ ಕರ್ತವ್ಯ)ಗಳಲ್ಲಿ ಒಂದಾಗಿ ಪರಿಗಣಿಸುವುದು. ಆತನ ಸಂಶೋಧನೆಯ ಅನುಸಾರ, ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯುವುದು ಒಂದು ಜಾಣ್ಮೆಯ ನಡವಳಿಕೆ ಮತ್ತು ಇದು ವ್ಯಕ್ತಿಗಳ ನಿರೀಕ್ಷಿತ ಆಯುಷ್ಯವನ್ನು ಆರು ವರುಷಗಳಷ್ಟು ಹೆಚ್ಚಿಸುತ್ತದೆ!
ಹೆತ್ತವರನ್ನು ಮತ್ತು ಹಿರಿಯರನ್ನು ಗೌರವಿಸುವುದು
ಹಿಂದೂಗಳಲ್ಲಿ ಪ್ರತಿಯೊಂದು ಮಗುವಿಗೂ ಹೆತ್ತವರು ಮತ್ತು ಹಿರಿಯರನ್ನು ಗೌರವಿಸಲು ಮತ್ತು ಅವರಿಗೆ ವಿಧೇಯವಾಗಿರಲು ಕಲಿಸಲಾಗುತ್ತದೆ. ಹಿಂದೂಗಳ ಅನುಸಾರ “ಮಾತೃ ದೇವೋಭವ, ಪಿತೃ ದೇವೋಭವ” ಅಂದರೆ ತಾಯಿ ಮತ್ತು ತಂದೆ ದೇವರಿಗೆ ಸಮಾನ. ರಾಮಾಯಣವನ್ನು ನೆನಪಿಸಿಕೊಂಡರೆ, ಶ್ರೀರಾಮನು ತನ್ನ ತಂದೆಯ ವಚನ ಪಾಲನೆಗಾಗಿ ರಾಜ್ಯವನ್ನೇ ತೊರೆದು ವನವಾಸಕ್ಕೆ ಹೋದ. ಹಿಂದೂಗಳಲ್ಲಿ ಹೆತ್ತವರನ್ನು ದೇವರ ಪ್ರತಿರೂಪವೆಂದೇ ಪರಿಗಣಿಸಲಾಗುತ್ತದೆ. ಹಿಂದೂ ಪುರಾಣಕತೆಗಳಲ್ಲಿ ಇಂತಹ ಹಲವು ದೃಷ್ಟಾಂತಗಳಿವೆ. ಶ್ರವಣ ಕುಮಾರನು ತನ್ನ ಕಣ್ಣುಕಾಣದ ಹೆತ್ತವರನ್ನು ಹೆಗಲಿನಲ್ಲಿ ಹೊತ್ತುಕೊಂಡು ಅವರಿಗೆ ಪುಣ್ಯಕ್ಷೇತ್ರಗಳ ದರ್ಶನ ಮಾಡಿಸಿದ. ಜನ್ಮ ನೀಡಿದ ತಾಯಿಗಿಂತ ದೊಡ್ದ ದೇವರಿಲ್ಲ ಎಂಬುದು ಹಿಂದೂಗಳ ನಂಬಿಕೆ.
ಪಾಶ್ಚಾತ್ಯ ಕುಟುಂಬಗಳಲ್ಲಿ ಮಕ್ಕಳು ಹೆತ್ತವರಿಗೆ ಅವಿಧೇಯರಾಗಿ ವರ್ತಿಸುವುದು ಸಾಮಾನ್ಯ. ಆದರೆ ಹಿಂದೂ ಕುಟುಂಬಗಳಲ್ಲಿ ಅಂತಹ ನಡವಳಿಕೆ ಅಪರೂಪ. ಹೆತ್ತವರನ್ನು ಮಾತ್ರವಲ್ಲ, ದೊಡ್ಡಪ್ಪ, ದೊಡ್ಡಮ್ಮ, ಚಿಕ್ಕಪ್ಪ, ಚಿಕ್ಕಮ್ಮ, ಮಾವಂದಿರು, ಅತ್ತೆಯಂದಿರು - ಹೀಗೆ ಕುಟುಂಬದ ಎಲ್ಲ ಹಿರಿಯರನ್ನೂ ಗೌರವಿಸುವುದನ್ನು ಹಿಂದೂ ಮಕ್ಕಳಿಗೆ ಬಾಲ್ಯದಿಂದಲೇ ಕಲಿಸಲಾಗುತ್ತದೆ. ಹಿರಿಯರಿಗೆ ಅಡ್ಡಬಿದ್ದು, ಅವರ ಆಶೀರ್ವಾದ ಪಡೆಯುವುದು ಹಿಂದೂಗಳ ಪದ್ಧತಿ.
ಹಾಗೆಯೇ ಶಿಕ್ಷಕರನ್ನು ಹಿಂದೂಗಳು "ಗುರುಗಳು" ಎಂದು ಪೂಜಿಸುತ್ತಾರೆ. ಗುರು ಎಂದರೆ ಕೇವಲ ಪಾಠ ಕಲಿಸುವ ವ್ಯಕ್ತಿ ಎಂದಲ್ಲ; ಗುರು ಎಂದರೆ, ಮಾರ್ಗದರ್ಶಕ, ಮಿತ್ರ, ತತ್ವಜ್ನಾನಿ ಮತ್ತು ಬದುಕನ್ನೇ ರೂಪಿಸುವಾತ ಎಂದು ಗೌರವಿಸಲಾಗುತ್ತದೆ.
ಅತಿಥಿಗಳನ್ನು ಗೌರವಿಸುವುದು
ಅತಿಥಿಗಳ ಬಗ್ಗೆ "ಅತಿಥಿ ದೇವೋಭವ” ಎಂಬ ಭಾವನೆಯನ್ನು ಇತರ ಧರ್ಮಗಳಲ್ಲಿ ಮತ್ತು ಸಂಸ್ಕೃತಿಗಳಲ್ಲಿ ಕಾಣುವುದು ವಿರಳ. ಮನೆಗೆ ಬರುವ ಅತಿಥಿಗಳಿಗೆ ಎಲ್ಲ ರೀತಿಯ ಆತಿಥ್ಯ ನೀಡಿ ಹಿಂದೂಗಳು ಆದರಿಸುತ್ತಾರೆ. ಕೆಲವೊಮ್ಮೆ ಅತಿಥಿಗಳಿಗೇ ಮುಜುಗರ ಆಗುವಷ್ಟು ಗೌರವಾದರಾಗಳಿಂದ ಸತ್ಕರಿಸಲಾಗುತ್ತದೆ. ಅತಿಥಿಗಳನ್ನು ಹೆತ್ತವರು ಪೂಜ್ಯ ಭಾವನೆಯಿಂದ ಕಾಣುವುದನ್ನು ನೋಡಿದ ಮಕ್ಕಳೂ ಅದೇ ಆಚರಣೆಗಳನ್ನು ಕಲಿತುಕೊಳ್ಳುತ್ತಾರೆ.
ಈ ಸಂಸ್ಕಾರವೇ ಹಿಂದೂ ಸಂಸ್ಕೃತಿಗೆ ಮುಳುವಾಯಿತು ಅನಿಸುತ್ತದೆ. ಯಾಕೆಂದರೆ, ಎಲ್ಲ ಪರಕೀಯ ಧರ್ಮಗಳನ್ನೂ ಹಿಂದೂಗಳು ಸ್ವಾಗತಿಸಿದರು. ಆದರೆ, ಅದೇ ಸಂಸ್ಕಾರವಿಲ್ಲದ ಪರಕೀಯ ಧರ್ಮಗಳು ಹಿಂಸೆ ಮಾಡಿ, ಭಯ ಹುಟ್ಟಿಸಿ, ಕ್ರೌರ್ಯ-ದಬ್ಬಾಳಿಕೆಯಿಂದ ಹಿಂದೂಗಳ ಮತಾಂತರ ಮಾಡಿದವು. ಗಮನಿಸಿ: ಜಗತ್ತಿನ ಆರು ಪ್ರಮುಖ ಧರ್ಮಗಳ ಅನುಯಾಯಿಗಳು ಭಾರತದಲ್ಲಿ ನಿರಾತಂಕವಾಗಿ ಬದುಕುತ್ತಿದ್ದಾರೆ. ಹಿಂದೂಗಳ ವಿಶಾಲ ಮನೋಧರ್ಮವೇ ಇದಕ್ಕೆ ಕಾರಣ.
ಎಲ್ಲರೊಂದಿಗೆ ಸಹಬಾಳ್ವೆ
ದೇವಸ್ಥಾನಗಳಿಗೆ ಹೋಗುವುದು ಮತ್ತು ಧಾರ್ಮಿಕ ಪ್ರಾರ್ಥನೆಗಳನ್ನು ಹೇಳುವುದು ಹಲವು ಹಿಂದೂಗಳ ದೈನಂದಿನ ಪರಿಪಾಠ.
ಈ ಪ್ರಾರ್ಥನೆಗಳ ಎರಡು ಪ್ರಮುಖ ಅಂಶಗಳನ್ನು ಗಮನಿಸಿ: "ವಿಶ್ವ ಕಾ ಕಲ್ಯಾಣ್ ಹೋ” ಅಂದರೆ "ಇಡೀ ವಿಶ್ವಕ್ಕೇ ಒಳಿತಾಗಲಿ” ಮತ್ತು “ಪ್ರಾಣಿಯೋನ್ ಮೇನ್ ಸದ್ಭಾವನಾ ಹೋ” ಅಂದರೆ “ಎಲ್ಲ ಜೀವಿಗಳೂ ಪರಸ್ಪರ ಶಾಂತಿಯಿಂದ ಬಾಳುವಂತಾಗಲಿ”.
ಇದಕ್ಕಿಂತ ಉದಾತ್ತವಾದ ಪ್ರಾರ್ಥನೆಯನ್ನು ಕಲ್ಪಿಸಲು ಸಾಧ್ಯವೇ?
ಒಬ್ಬ ಹಿಂದೂ ಕೇವಲ ತಾನು ಮತ್ತು ತನ್ನ ಕುಟುಂಬದ ಹಿತದ ಬಗ್ಗೆ ಯೋಚಿಸುವುದಿಲ್ಲ. ಎಲ್ಲ ಜೀವಿಗಳ ಕಲ್ಯಾಣದ ಬಗ್ಗೆ ಯೋಚಿಸುತ್ತಾನೆ. “ಪ್ರಾಣಿಯೋನ್" ಎಂದರೆ ಎಲ್ಲ ಜೀವಿಗಳು - ಪ್ರಾಣಿಗಳು, ಪಕ್ಷಿಗಳು, ಉರಗಗಳು, ನೀರಿನಲ್ಲಿ ವಾಸಿಸುವ ಜೀವಿಗಳು, ಗಿಡಮರಬಳ್ಳಿಗಳು - ಎಂದರ್ಥ.
“ಪಂಚತತ್ವ”ಗಳಾದ ನೀರು, ಗಾಳಿ, ಭೂಮಿ, ಆಕಾಶ ಮತ್ತು ಬೆಂಕಿಯನ್ನೂ ಹಿಂದೂಗಳು ಜೀವಂತ ಸಂಗತಿಗಳೆಂದು ನಂಬುತ್ತಾರೆ ಮತ್ತು ಹಾಗೆಯೇ ಪೂಜಿಸುತ್ತಾರೆ. ನದಿಗಳು, ಸಾಗರಗಳು, ಪರ್ವತಗಳು, ಅಗ್ನಿ, ಆಕಾಶ, ಅರಣ್ಯ - ಇವೆಲ್ಲವೂ ಹಿಂದೂಗಳಿಗೆ ಪೂಜನೀಯ. ಅವುಗಳ ಶ್ರದ್ಧಾಭಕ್ತಿಪೂರ್ವಕ ಆರಾಧನೆ ಹಿಂದೂಗಳ ಧಾರ್ಮಿಕ ಆಚರಣೆಗಳ ಅವಿಭಾಜ್ಯ ಅಂಗ.
"ವಿಶ್ವ ಕಾ ಕಲ್ಯಾಣ್ ಹೋ” ಎಂಬ ಪ್ರಾರ್ಥನೆಯ ವಿಶಾಲ ವ್ಯಾಪ್ತಿಯನ್ನೂ ಸಮಗ್ರ ಭಾವವನ್ನೂ ಗಮನಿಸಿ. ಹಿಂದೂ ತನಗೆ ಮತ್ತು ತನ್ನವರಿಗೆ ಮಾತ್ರ ಒಳಿತಾಗಲೆಂದು ಪ್ರಾರ್ಥಿಸುವುದಿಲ್ಲ; ಬದಲಾಗಿ ವಿಶ್ವದ ಪ್ರತಿಯೊಂದು ಜೀವಿಗೂ ಒಳಿತಾಗಲೆಂದು ಪ್ರಾರ್ಥಿಸುತ್ತಾನೆ. ಇದುವಲ್ಲವೇ ಉದಾತ್ತ ಮಾನವತೆ ಮತ್ತು ವಿಶ್ವಬಂಧುತ್ವ?
ಆದ್ದರಿಂದಲೇ ಈ ಭೂಮಿ ಎಲ್ಲ ಜೀವಿಗಳೂ ಸುಖಶಾಂತಿಯಿಂದ ಬಾಳುವ ನೆಲೆ ಆಗಬೇಕಾದರೆ, ಹಿಂದುತ್ವದ ಉದಾತ್ತ ತತ್ವಗಳನ್ನೂ ಜೀವನಮೌಲ್ಯಗಳನ್ನೂ ಎಲ್ಲ ಧರ್ಮಗಳೂ ಅಳವಡಿಸಿಕೊಳ್ಳಬೇಕಾಗಿದೆ, ಅಲ್ಲವೆ?