ಹಿಂದೂ ಮುಸ್ಲಿಂ ಧಾರ್ಮಿಕ ಸಂಗಮ -ಉರುಗನಹಳ್ಳಿ
ಇತ್ತೀಚಿನ ದಿನಗಳಲ್ಲಿ ಹಲವಾರು ಮುಸ್ಲಿಂ ಬಾಂಧವರು ಜಾತಕ ಬರೆಸುವುದು, ಮದುವೆಗೆ ಜ್ಯೋತಿಷ್ಯ ಕೇಳುವುದು, ಹಿಂದೂ ದೇವತೆಗಳನ್ನು ಆರಾಧನೆ ಮಾಡುತ್ತಿರುವುದು ಸಾಮಾನ್ಯವಾಗಿದೆ. ಅದೇ ರೀತಿ ಹಿಂದೂಗಳು ಕೂಡ ಮೊಹರಂ ದಿನದಂದು ಕಲ್ಲುಸಕ್ಕರೆ, ಲೋಬಾನ ದೇವರಿಗೆ ನೀಡುವುದು ಕಂಡು ಬರುತ್ತಿದೆ. ಇದು ಎಲ್ಲರೂ ಮಾಡುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಅವರವರ ಭಕ್ತಿಗೆ, ನಂಬಿಕೆ ಆಧಾರದ ಮೇಲೆ ಆಚರಣೆಗಳನ್ನು ನಡೆಸುತ್ತಿದ್ದಾರೆ.
ಆದರೆ ಎಲ್ಲಾ ಹಿಂದುಗಳು, ಮುಸ್ಲಿಂಮರು ಸೇರಿದಂತೆ ಎಲ್ಲಾ ಸಮುದಾಯದವರು ಭೇಟಿ ನೀಡುವ ದೇವಸ್ಥಾನವೆಂದರೆ ಅದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಬಳಿಯಿರುವ ಉರುಗನಹಳ್ಳಿಯ ಸುಬ್ರಹ್ಮಣ್ಯ ದೇವಸ್ಥಾನ. ಇಲ್ಲಿ ಸರ್ಪವನ್ನು ಆರಾಧಿಸಲಾಗುತ್ತದೆ. ಇದಕ್ಕೆ ಮಿನಿ ಸುಬ್ರಹ್ಮಣ್ಯ ಎಂದು ಕರೆಯಲಾಗುತ್ತೆ. ಇಲ್ಲಿ ತಮ್ಮ ಇಷ್ಟಾರ್ಥಗಳನ್ನು ಹೇಳಿಕೊಂಡರೆ, ಅದು ಸತ್ಯವಾಗುತ್ತದೆ ಎನ್ನುವುದು ವಾಡಿಕೆ. ನಂಬಿಕೆ. ಈ ದೇವಸ್ಥಾನಕ್ಕೆ ರಾಜ್ಯದಾದ್ಯಂತ ಭಕ್ತರಿದ್ದಾರೆ. ಇಲ್ಲಿ ಬೆಳಗಿನ ಜಾವದಲ್ಲಿ ಸರ್ಪ ಹರಿದಾಡುತ್ತದೆ ಎನ್ನುವುದನ್ನು ಗ್ರಾಮದ ಕೆಲವರು ಸ್ಪಷ್ಟಪಡಿಸುತ್ತಾರೆ. ಅದು ನಿಜವೋ ಸುಳ್ಳು ಎಂದು ಪರೀಕ್ಷಿಸುವವರು ವಿರಳ. ಯಾಕೆ ಬೇಕಪ್ಪಾ, ದೇವರು ವಿಚಾರ ಅಂತ. ಅಂತೂ ದೇವಸ್ಥಾನವಂತೂ ಸಾಕಷ್ಟು ಪ್ರಸಿದ್ದಿಯಾಗಿದೆ.
ದೇವಸ್ಥಾನದಿಂದ ಅರ್ಧ ಕಿ.ಮೀ ದೂರದಲ್ಲಿ ಒಂದು ಮುಸಲ್ಮಾನ ಸಮುದಾಯಕ್ಕೆ ಸೇರಿದ ಒಂದು ಗೋರಿಯಿದೆ. ದೇವಸ್ಥಾನದ ಪೂಜೆ ನಂತರ ಬಂದಂತಹ ಭಕ್ತಾದಿಗಳು ಅಲ್ಲಿಗೆ ತೆರಳಿ, ತಮ್ಮ ಬೇಡಿಕೆಯನ್ನು ಮನಸ್ಸಿನಲ್ಲಿ ಹೇಳಿಕೊಂಡು, ಮುಲ್ಲಾ (ಧಾರ್ಮಿಕ ವಿಧಿಗಳನ್ನು ನಡೆಸುವವರು) ಆದೇಶದಂತೆ, ಒಂದು ರೂಪಾಯಿಯನ್ನು ಹಸಿರು ಬಟ್ಟೆಗೆ ಕಟ್ಟಿ, ಅಲ್ಲಿನ ಕಂಬವೊಂದಕ್ಕೆ ಕಟ್ಟುತ್ತಾರೆ. ನಂತರ ಅವರು ಪೂಜೆ ವಿಧಿ ವಿಧಾನ ನೆರವೇರಿಸುತ್ತಾರೆ. ಇಲ್ಲೂ ಕೂಡ ಎಲ್ಲಾ ಸಮುದಾಯದವರು ಪಾಲ್ಗೊಳ್ಳುತ್ತಾರೆ.
ಇಲ್ಲಿ ಜಾತಿಗೆ ಮಹತ್ವವಿಲ್ಲ. ಧಾರ್ಮಿಕ ನಂಬಿಕೆಯಾಗಿದೆ.