ಹಿಂದೂ, ಮುಸ್ಲಿಂ ಬೇಡ ಬೇಡ : ಭಾರತೀಯತೆ, ಮಾನವೀಯತೆ ಬೇಕೇ ಬೇಕು...

ಹಿಂದೂ, ಮುಸ್ಲಿಂ ಬೇಡ ಬೇಡ : ಭಾರತೀಯತೆ, ಮಾನವೀಯತೆ ಬೇಕೇ ಬೇಕು...

ನಮ್ಮ ಸಮಾಜ ಮಾನಸಿಕವಾಗಿ ಮೂರು ವಿಭಾಗಗಳು ಅಥವಾ ದಿಕ್ಕುಗಳಾಗಿ ಒಡೆದು ಹೋಗುತ್ತಿರುವಂತೆ ಭಾಸವಾಗುತ್ತಿದೆ.‌ ಸಾಮಾಜಿಕ ರಾಜಕೀಯ ವಿಷಯಗಳ ಬಗ್ಗೆ ಚರ್ಚಿಸುವ ಗೆಳೆಯರು ಸಹ ಒಂದು ನಿರ್ದಿಷ್ಟ ವಿಚಾರಗಳಿಗೆ ಒಲವು ತೋರಿಸಿ ನಿಧಾನವಾಗಿ ಸ್ವಲ್ಪ ಸ್ವಲ್ಪ ಮನಸ್ತಾಪವನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಕ್ರಾಂತಿಯಿಂದ ಎಲ್ಲರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ವೇದಿಕೆ ಸಿಕ್ಕಿರುವುದರಿಂದ ಇದು ಇನ್ನಷ್ಟು ಬೇಗ ಹರಡುತ್ತಿದೆ. ಅದಕ್ಕೆ ತಕ್ಕಂತೆ ಭಾವನಾತ್ಮಕ ವಿಷಯಗಳು ಮುನ್ನಲೆಗೆ ಬರುತ್ತಿವೆ. ಈಗ ನಮ್ಮ ಮುಂದೆ ಬಹುದೊಡ್ಡ ಸವಾಲು ಎದುರಾಗಿದೆ. 

ಹಿಂದೂ - ಮುಸ್ಲಿಂ,

ಬಿಜೆಪಿ - ಕಾಂಗ್ರೆಸ್ - ಜೆಡಿಎಸ್,

ಕಮ್ಯುನಿಸ್ಟ್ - ಆರೆಸ್ಸೆಸ್

ದಲಿತರು - ಬ್ರಾಹ್ಮಣರು,

ಬಸವತತ್ವ - ಮನುವಾದ,

ಕೇಸರಿ ಶಾಲು -ರಾಷ್ಟ್ರ ಧ್ವಜ,

ಸಂವಿಧಾನ -ಭಗವದ್ಗೀತೆ

ರಾಷ್ಟ್ರೀಯ ಏಕತೆ - ಧಾರ್ಮಿಕ ಸ್ವಾತಂತ್ರ್ಯ...

ಹೀಗೆ ಅನೇಕ ವಿಷಯಗಳಲ್ಲಿ ಭಿನ್ನಾಭಿಪ್ರಾಯ ಭುಗಿಲೆದ್ದಿದೆ ಅಥವಾ ಮಾಧ್ಯಮಗಳು ಇದನ್ನು ‌ಭುಗಿಲೇಳುವಂತೆ ಮಾಡಿವೆ. ಈಗ ನಮಗೂ ಮನಸ್ಸು ಸ್ವಲ್ಪ ಘಾಸಿಯಾಗತೊಡಗಿದೆ. ಒಂದು ಕಡೆ ಸಾರ್ವತ್ರಿಕ ಸತ್ಯ, ಮತ್ತೊಂದು ಕಡೆ ಪ್ರಾಕೃತಿಕ ಸತ್ಯ,

ಮಗದೊಂದು ಕಡೆ ಭಾರತೀಯ ನೆಲದ ಐತಿಹಾಸಿಕ ಸತ್ಯ, ಇನ್ನೊಂದು ಕಡೆ ಸಾಂವಿಧಾನಿಕ ಸತ್ಯ, ಈ ಎಲ್ಲದರ ನಡುವೆ ಆತ್ಮಸಾಕ್ಷಿಯ ನಮ್ಮ ವೈಯಕ್ತಿಕ ತಿಳಿವಳಿಕೆಯ ಸತ್ಯ.

ಇದರ ಜೊತೆಗೆ ವಾಸ್ತವಾಂಶವೇ ಬೇರೆ. ಸತ್ಯ ಮತ್ತು ವಾಸ್ತವದ ನಡುವೆಯೂ ಸಾಕಷ್ಟು ಭಿನ್ನತೆ ಇದೆ. ವಾಸ್ತವ ಸಹ ನಿಶ್ಚಿತವಲ್ಲ. ಅದು ಸಹ ಕಾಲದೊಂದಿಗೆ ಮತ್ತು ವ್ಯಕ್ತಿಗಳ ಚಿಂತನೆಯೊಂದಿಗೆ ಬದಲಾಗುತ್ತಾ ಸಾಗುತ್ತದೆ. ಇಷ್ಟರ ನಡುವೆ ನಾವು ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಪಲಾಯನ ಮಾಡುವ ಸಾಧ್ಯತೆಯೂ ಇಲ್ಲ. ಈ ಸಮಾಜದಲ್ಲಿ ನಾವು ಮಾಡಬೇಕಾದ ಕೆಲವು ಕರ್ತವ್ಯಗಳು ಸಹ ಇದೆ. ಅದರಿಂದಾಗಿ ನಮ್ಮ ನಿಲುವುಗಳನ್ನು ಸ್ಪಷ್ಟಪಡಿಸಬೇಕಾಗುತ್ತದೆ.

ಸಾಮಾನ್ಯ ಜನರಿಗೆ ಓದು ಅಧ್ಯಯನ ಚಿಂತನೆ ಸಮಗ್ರ ದೃಷ್ಟಿಕೋನ ಇರುವುದಿಲ್ಲ ಇದ್ದರೂ ಈ ಆಧುನಿಕ ಕಾಲದಲ್ಲಿ ಅವರಿಗೆ ಸಮಯದ ಕೊರತೆ. ಬಹುತೇಕರು ಪತ್ರಿಕೆ ಅಥವಾ ಟಿವಿ ಸುದ್ದಿ ವಾಹಿನಿಗಳ ಚರ್ಚೆಯನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಆದರೆ ಆ ಮಾಧ್ಯಮಗಳು ಸತ್ಯ ಮತ್ತು ವಾಸ್ತವಕ್ಕಿಂತ ಬೆಂಕಿಯುಗುಳುವ ವಿಷಯಗಳಿಗೆ ಮಾತ್ರ ಮಹತ್ವ ನೀಡುತ್ತವೆ. ಜನ ಅದನ್ನೇ ನಂಬುತ್ತಾರೆ. ಪಕ್ಕಾ ಹಿಂದುತ್ವ ವಾದಿಗಳು, ತೀವ್ರ ಮುಸ್ಲಿಂ ಮೂಲಭೂತವಾದಿಗಳು, ನಡುವೆ ಜಾತ್ಯಾತೀತವಾದಿಗಳು.‌ ಈ ಜಾತ್ಯಾತೀತವಾದಿಗಳ ಮುಖವಾಡ ಸಹ ಕಳಚುತ್ತಿದೆ. ಮಾತಿನಲ್ಲಿ ಜಾತ್ಯಾತೀತ ವಾದಿಗಳಾಗಿದ್ದವರು ಕೆಲವು ವಿಷಯಗಳಲ್ಲಿ ಮೂಲಭೂತವಾದಿತನ ಪ್ರದರ್ಶಿಸುತ್ತಿದ್ದಾರೆ. 

ಇಲ್ಲಿ ಮತ್ತೊಂದು ವಿಷಯವೂ ಅಡಕವಾಗಿದೆ. ಎಷ್ಟೇ ಸ್ಪಷ್ಟವಾಗಿ ನಮ್ಮ ಅಭಿಪ್ರಾಯ ರೂಪಿಸಿಕೊಂಡರು ಭಾರತದ ಸಂಕೀರ್ಣ ಸಾಮಾಜಿಕ ವ್ಯವಸ್ಥೆಯಲ್ಲಿ ಅನೇಕ ವಿಷಯಗಳ ನಡುವೆ ಸಂಘರ್ಷ ಮತ್ತು ದ್ವಂದ್ವ ಇದ್ದೇ ಇರುತ್ತದೆ. ಚರ್ಚೆಗಳ ಸಂದರ್ಭದಲ್ಲಿ ಅವು ಒಂದಕ್ಕೊಂದು ಘರ್ಷಣೆಯಾಗುತ್ತದೆ ಮತ್ತು ನಮ್ಮ ವಾದಗಳೇ ನಮ್ಮನ್ನು ಕೆಲವೊಮ್ಮೆ ಅಣಕಿಸುತ್ತವೆ. 

ಕಾರಣ ಮನುಷ್ಯ ಮಾನವೀಯ ಮೌಲ್ಯಗಳ ಹಿನ್ನೆಲೆಯಲ್ಲಿ ಬದುಕನ್ನು ಕಟ್ಟಿಕೊಂಡಿಲ್ಲ. ಪ್ರಕೃತಿಯ ಮೂಲ ನಿಯಮಗಳ ಅಡಿಯಲ್ಲಿ ಸಹ ಜೀವನ ರೂಪಿಸಿಕೊಂಡಿಲ್ಲ. ಧರ್ಮ ದೇವರು ಪ್ರಾದೇಶಿಕತೆ ನಂಬಿಕೆ ಮುಂತಾದ ‌ಸಂಕುಚಿತ ನಿಯಂತ್ರಣದಡಿ ತನ್ನನ್ನು ಬಂಧಿಯಾಗಿಸಿದ್ದಾನೆ. ಅದರ ಪರಿಣಾಮ ಅವನ ಯೋಚನಾ ಶಕ್ತಿ ನಾನು ನನ್ನದು ಎಂಬ ಸ್ವಾರ್ಥದ ಪರಿಧಿಯೊಳಗೆ ಯೋಚಿಸುತ್ತದೆ. ಸಹಜವಾಗಿ ಇಲ್ಲಿ ನಮ್ಮ ಗುಂಪಿಗೆ ಸೇರದ ಇತರರನ್ನು ಬೇರೆಯವರು ಎಂದು ಪರಿಗಣಿಸಲಾಗುತ್ತದೆ. ಅಲ್ಲಿಂದ ಘರ್ಷಣೆ ಪ್ರಾರಂಭವಾಗುತ್ತದೆ.

ಈಗ ನಿಜಕ್ಕೂ ಬೇಕಾಗಿರುವುದು ಸಮಗ್ರ ಚಿಂತನೆ ಮತ್ತು ಸಂಯಮ. ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ಒಂದು ಅಂಶ ಗಮನ ಸೆಳೆಯುತ್ತದೆ. ಈ‌ ಭಾವನಾತ್ಮಕ ಅಂಶಗಳು ಬೆಳೆಯುತ್ತಾ ದ್ವೇಷ ಅಸೂಯೆಗಳು ಹೆಚ್ಚಾಗಿ ಒಂದು ದಿನ‌ ಯಾವುದೋ ಅನಿರೀಕ್ಷಿತ ಅಥವಾ ಉದ್ದೇಶ ಪೂರ್ವಕ ಸಾವು ನೋವಿನ ಘಟನೆಯಲ್ಲಿ ಸ್ಪೋಟಗೊಂಡು ರಕ್ತಪಾತವಾಗುವ ಸಾಧ್ಯತೆಯೇ ಹೆಚ್ಚು. ಆಗ ಅನೇಕ ಅಮಾಯಕರು ಬಲಿಯಾಗುತ್ತಾರೆ. ಅದರ ನಂತರ ಸಾಮಾನ್ಯ ಜನ ಇದು ನಮಗೆ ಬೇಕಿರಲಿಲ್ಲ ಎಂದು ಪಶ್ಚಾತ್ತಾಪ ಪಡುತ್ತಾರೆ. ಆದರೆ ಕಾಲ ಮುಂದೆ ಸರಿದಿರುತ್ತದೆ. 

ಕೆಟ್ಟವರ ಸಂಖ್ಯೆ ಕಡಿಮೆ. ಒಳ್ಳೆಯವರ ಸಂಖ್ಯೆ ಹೆಚ್ಚು. ಆದರೆ ಒಳ್ಳೆಯವರ ಮೌನ ಒಂದು ದೌರ್ಬಲ್ಯ. ಅದರ ದುರುಪಯೋಗ ಪಡಿಸಿಕೊಳ್ಳುವುದು ಕೆಟ್ಟವರು. ಕೆಲವು ಮೂಲಭೂತವಾದಿ ಸಂಘಟನೆಗಳು ಇಡೀ ಸಾಮಾಜಿಕ ವ್ಯವಸ್ಥೆಯನ್ನು ಹಾಳು ಮಾಡುತ್ತಿವೆ. ಹಿಂದೂ ಧರ್ಮ ರಕ್ಷಕರು ನಾವು ಎಂದೂ, ಮುಸ್ಲಿಂ ಧರ್ಮ ರಕ್ಷಕರು ನಾವು ಎಂದೂ ಕೆಲವರು ಭಾರತ ‌ದೇಶವನ್ನು ಹಾಳು ಮಾಡುತ್ತಿದ್ದಾರೆ. ದೇಶದ ಕಾನೂನು ಪೋಲೀಸ್ ಸೈನಿಕ ವ್ಯವಸ್ಥೆ ಬಲಿಷ್ಠವಾಗಿ ಕೆಲಸ ನಿರ್ವಹಿಸುತ್ತಿರುವಾಗ ಈ ಸಂಘಟನೆಗಳು ಏಕೆ ಕಾನೂನು ಕೈಗೆ ತೆಗೆದುಕೊಳ್ಳುವುದು. ಸಂಘ ಸಂಸ್ಥೆಗಳಿಗೆ ಮಾಡಲು ಇದಕ್ಕಿಂತ ಒಳ್ಳೆಯ ಕೆಲಸಗಳಿವೆ.

ಭಾರತದ ನೆಮ್ಮದಿಯ ಮಟ್ಟ ತೀರಾ ಕೆಳಗೆ ಕುಸಿದಿದೆ. ಜನರ ಮಾನಸಿಕ ಮತ್ತು ದೈಹಿಕ ಆರೋಗ್ಯ ತೀರಾ ಕಳವಳಕಾರಿ. ಈಗ ನಡೆಯುತ್ತಿರುವ ಘಟನೆಗಳ ಹಿಂದೆ ರಕ್ತಪಾತದ ವಾಸನೆ ಬರುತ್ತಿದೆ. ಅದು ದುರ್ಘಟನೆಯ ಮುನ್ಸೂಚನೆ. ದಯವಿಟ್ಟು ಈ ಮಾಧ್ಯಮಗಳ ಹುಚ್ಚಾಟಕ್ಕೆ ಬಲಿಯಾಗದಿರಿ. ಯಾರದೋ ಒಂದು ಮಾತು, ಇನ್ಯಾರದೋ ಇನ್ನೊಂದು ಅಭಿಪ್ರಾಯ ಇಡೀ ವ್ಯವಸ್ಥೆಯ ಅನಿಸಿಕೆಯಲ್ಲ.  ಹಿಂದೂ ಮುಸ್ಲಿಂ ಭಾಂಧವರೆ ಧರ್ಮಗಳು ನಮ್ಮನ್ನು ವಿಭಜಿಸುತ್ತವೆ. ಸಂವಿಧಾನ ನಮ್ಮನ್ನು ಒಂದಾಗಿಸುತ್ತದೆ. ನಮ್ಮ ನಿಷ್ಠೆ ಸಂವಿಧಾನದ ಕಡೆಗಿರಲಿ. ಸಾಮಾನ್ಯ ಜನರೇ ಗಲಭೆಗಳು ಪ್ರಾರಂಭವಾಗುವಾಗ ನಾವು ಮಾತನಾಡದೆ ಮೌನವಾಗಿದ್ದರೆ ಅದು ನಮ್ಮನ್ನೂ‌ ಆಹುತಿ ತೆಗೆದುಕೊಳ್ಳಬಹುದು. ಆದ್ದರಿಂದ ಅವಕಾಶ ಸಿಕ್ಕಾಗ ಮಾತನಾಡಿ. ಈ‌ ಧಾರ್ಮಿಕ ಮೂಲಭೂತವಾದಿಗಳ ಅಜ್ಞಾನದಿಂದ ಪ್ರಪಂಚದ ಸುಂದರ ದೇಶ ಭಾರತ ನರಳದಿರಲಿ...

-ವಿವೇಕಾನಂದ ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ