ಹಿಂಬಾಲಕರು….!
ಹೌದು, ವೈವಿಧ್ಯಮಯ ಈ ಭಾರತದಲ್ಲಿ ಹಿಂಬಾಲಕರು ಎಂಬ ಒಂದು ವರ್ಗ ಅಸ್ತಿತ್ವದಲ್ಲಿದೆ. ಚಿತ್ರ ವಿಚಿತ್ರ ವರ್ತನೆಯ ಈ ಜನರ ನಡವಳಿಕೆಗಳು ನಮ್ಮ ಸಮಾಜದ ಬೌದ್ಧಿಕ ನೈತಿಕ ಮಾನಸಿಕ ಮತ್ತು ಪ್ರಬುದ್ದತೆಯ ಮಟ್ಟವನ್ನು ಅಳೆಯಲು ಒಂದು ಮಾನದಂಡವಾಗಬಹುದು. ರಾಜಕೀಯದಲ್ಲಿ ಒಬ್ಬ ನಾಯಕನನ್ನು ಹಿಂಬಾಲಿಸುವ ಜನರಿರುತ್ತಾರೆ. ಇವರನ್ನು ಸಾಮಾನ್ಯವಾಗಿ ಪುಡಾರಿಗಳು ಎನ್ನಲಾಗುತ್ತದೆ. ಬಹುತೇಕ ಬಿಳಿಬಣ್ಣದ ಖಾದಿ ಬಟ್ಟೆಗಳನ್ನು ತೊಟ್ಟಿರುತ್ತಾರೆ.( ಇತ್ತೀಚೆಗೆ ಇದು ಸ್ವಲ್ಪ ಬದಲಾಗಿದೆ.) ತಮ್ಮ ನಾಯಕನ ಹಿಂದೆ ಮುಂದೆ ಸುತ್ತುತ್ತಾ, ಆತನಿಗೆ ಜೈಕಾರ ಹಾಕುತ್ತಾ, ಯಾವುದಾದರೂ ಕೆಲಸಗಳಲ್ಲಿ ಕಮೀಷನ್ ಪಡೆದು ಬ್ರೋಕರ್ ಗಿರಿ ಮಾಡುತ್ತಾ ಜೀವನ ನಡೆಸುತ್ತಾರೆ. ತಮ್ಮ ಅನುಕೂಲಕ್ಕೆ ತಕ್ಕಂತೆ ಆಗಾಗ ನಾಯಕ ನಿಷ್ಠೆಯನ್ನು ಬದಲಿಸುತ್ತಿರುತ್ತಾರೆ.
ಸಿನಿಮಾದಲ್ಲಿ ನಾಯಕರ ಹಿಂಬಾಲಕರನ್ನು ಅಭಿಮಾನಿಗಳು ಎಂದು ಕರೆಯಲಾಗುತ್ತದೆ. ಇವರು ಒಬ್ಬ ನಾಯಕನಿಗೆ ನಿಷ್ಠರಾಗಿ, ಆತನ ಅಭಿಮಾನಿ ಸಂಘಗಳನ್ನು ಕಟ್ಟಿಕೊಂಡು ಕಟೌಟ್ ಗಳಿಗೆ ಹಾಲಿನ ಅಭಿಷೇಕ್ ಮಾಡುತ್ತಾ, ಜೈಕಾರ ಹಾಕುತ್ತಾ, ಹುಚ್ಚುತನ ಪ್ರದರ್ಶಿಸುತ್ತಾರೆ. ಸಾಮಾನ್ಯವಾಗಿ ಆ ನಟನ ಜನಪ್ರಿಯತೆ ಇರುವವರೆಗೂ ಹೆಚ್ಚು ಚಟುವಟಿಕೆಯಿಂದ ಇದ್ದು, ಸಿನಿಮಾಗಳಿಗೆ ಉಚಿತ ಪ್ರವೇಶ ಗಿಟ್ಟಿಸಿ ಅದನ್ನೇ ಸಾಧನೆ ಎಂಬಂತೆ ಹೇಗೋ ಜೀವನ ಸಾಗಿಸುತ್ತಾರೆ. ಧಾರ್ಮಿಕ ಸಂಸ್ಥೆಗಳ ಹಿಂಬಾಲಕರನ್ನು ಶಿಷ್ಯರು ಎಂದು ಕರೆಯಲಾಗುತ್ತದೆ. ಇವರು ಧರ್ಮಾಧಿಕಾರಿಯ ಸುತ್ತಲೇ ಸುತ್ತುತ್ತಾ, ಆ ಧರ್ಮಾಧಿಕಾರಿಯೇ ದೇವರ ಪ್ರತಿನಿಧಿ ಎಂದು ಅಮಾಯಕರನ್ನು ನಂಬಿಸುತ್ತಾ, ಅವರ ಸೇವೆಯ ನೆಪದಲ್ಲಿ ಸ್ವಾಮಿ ಕಾರ್ಯ - ಸ್ವ ಕಾರ್ಯ ಮಾಡಿಕೊಳ್ಳುತ್ತಾ ಬದುಕು ನಡೆಸುತ್ತಾರೆ. ಖಾವಿ ಬಟ್ಟೆ ಅಥವಾ ಆಯಾ ಧರ್ಮದ ಧಾರ್ಮಿಕತೆ ಸಾರುವ ಟೋಪಿ ಮುಂತಾದ ಉಡುಪುಗಳು ಇವರ ವೇಷ ಭೂಷಣಗಳಾಗಿರುತ್ತವೆ.
ಈ ಹಿಂಬಾಲಕರು ಎಷ್ಟು ಮುಗ್ದರು, ಮೂರ್ಖರು, ವಿವೇಚನಾರಹಿತರು, ಸ್ವಾರ್ಥಿಗಳು, ವಂಚಕರು ಆಗಿರುತ್ತಾರೆಂದರೆ ತಮ್ಮ ನಾಯಕನ ಅತ್ಯಂತ ಕೆಟ್ಟ ನಡವಳಿಕೆಗಳನ್ನೂ ಸಮರ್ಥಿಸುತ್ತಾರೆ ಮತ್ತು ಅದನ್ನು ಅನಿವಾರ್ಯವಾಗಿಸಿ ಕೊಂಡಿರುತ್ತಾರೆ. ಆತನಿಲ್ಲದೆ ಇವರಿಗೆ ಜೀವನವೇ ಇಲ್ಲ ಎಂಬಷ್ಟು ಅವಲಂಬಿತರಾಗಿರುತ್ತಾರೆ.
ಉದಾಹರಣೆಗೆ, ಅವರು ಹಿಂಬಾಲಕರಾಗಿರುವ ಧರ್ಮಾಧಿಕಾರಿಯೊಬ್ಬ ಅತ್ಯಾಚಾರದ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡರೂ ಅವರು ಅವನನ್ನು ದೇವ ಮಾನವ ಎಂದೇ ನಂಬುತ್ತಾರೆ ಅಥವಾ ವಾದಿಸುತ್ತಾರೆ. ಅವರ ರಾಜಕೀಯ ನಾಯಕ ಜೈಲಿಗೆ ಹೋಗಿ ಬಂದರೂ ಅವನಿಗೆ ಹಾರ ಹಾಕಿ ಸ್ವಾಗತಿಸುತ್ತಾರೆ. ಅವರ ಸಿನಿಮಾ ನಾಯಕ ಕೊಲೆಗಡುಕನಾದರೂ ಆತ ನಿರಪರಾಧಿ ಎಂದೇ ಭಾವಿಸುತ್ತಾರೆ. ಇದು ಎಲ್ಲರಿಗೂ ಅನ್ವಯಿಸುವುದಿಲ್ಲ. ಪ್ರೀತಿಯಿಂದ, ನಿಸ್ವಾರ್ಥದಿಂದ ಒಂದು ಕ್ಷೇತ್ರದ ಸಾಧಕನನ್ನು ಅಭಿಮಾನಿಸುವುದು ಮತ್ತು ಆತ ತಪ್ಪು ಮಾಡಿದಾಗ ಟೀಕಿಸುವುದು ಸಹಜ ಗುಣ.
ಆದರೆ, ನಾನು ಹೇಳುತ್ತಿರುವ ಹಿಂಬಾಲಕರು ಸ್ವತಂತ್ರ ಚಿಂತನೆ ಇಲ್ಲದ, ಹುಚ್ಚತನವನ್ನೇ ಸಹಜತೆ ಎಂದು ಭಾವಿಸಿದ, ಬದುಕಲು ಈ ಹುಚ್ಚತನವನ್ನೇ ಉದ್ಯೋಗ ಮಾಡಿಕೊಂಡಿರುವ ಜನರು ಸಮಾಜದ ಹಿತಾಸಕ್ತಿಗೆ ಅಪಾಯಕಾರಿಗಳಾಗಿರುತ್ತಾರೆ. ನಮ್ಮ ನಿಮ್ಮ ನಡುವೆಯೇ ಇರುವ ಇವರು ಕೆಲವೊಮ್ಮೆ ನಮಗೆ ಒಳ್ಳೆಯದನ್ನೇ ಮಾಡಿದರು ಅದು ಖಂಡಿತ ಪ್ರೋತ್ಸಾಹಿಸಲು ಯೋಗ್ಯವಾದ ಉದ್ಯೋಗವಲ್ಲ. ಮಕ್ಕಳ ಮುಂದಿನ ಭವಿಷ್ಯದ ದೃಷ್ಟಿಯಿಂದ ಈ ಹಿಂಬಾಲಕ ವೃತ್ತಿಯನ್ನು ಆದಷ್ಟು ಬೇಗ ನಿರ್ಮೂಲನೆ ಮಾಡಿ, ಸ್ವತಂತ್ರ ಚಿಂತನೆಯ ಸ್ವಾಭಿಮಾನದ ಆರೋಗ್ಯಕರ ವ್ಯಕ್ತಿತ್ವವನ್ನು ನಮ್ಮ ಸುತ್ತ ಬೆಳೆಸಬೇಕಾಗಿದೆ. ಹಿಂಬಾಲಕರು ಎಂಬ ಗುಲಾಮಿತನದ ಮನೋಭಾವ ಹೋಗಲಾಡಿಸಬೇಕಿದೆ. ಅದನ್ನು ನಮ್ಮ ನಮ್ಮ ಮಿತಿಯಲ್ಲಿ ಸಾಧ್ಯವಾದಷ್ಟೂ ಮಾಡೋಣ ಎಂಬ ಆಶಯದೊಂದಿಗೆ…
-ವಿವೇಕಾನಂದ ಎಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ