ಹಿಂಸೆಯನ್ನು ಯಾವ ಕೋನದಿಂದಲೂ ಸಮರ್ಥಿಸಲು ಸಾಧ್ಯವಿಲ್ಲ…!

ಹಿಂಸೆಯನ್ನು ಯಾವ ಕೋನದಿಂದಲೂ ಸಮರ್ಥಿಸಲು ಸಾಧ್ಯವಿಲ್ಲ…!

ಅತಿಯಾದ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪಗಳ ಮೇಲೆ ಕೆಲವು ಸಂಘಟನೆಗಳನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಮೇಲ್ನೋಟಕ್ಕೆ ಇದು ಸ್ವಾಗತಾರ್ಹ. ಹಾಗೆಯೇ ಇವುಗಳನ್ನು ಪ್ರಚೋದಿಸುವ ಮತ್ತು ಬುದ್ಧಿವಂತಿಕೆಯಿಂದ ಇದೇ ರೀತಿಯ ಚಟುವಟಿಕೆಗಳಲ್ಲಿ ತೊಡಗಿ ಕಾನೂನಿನ ವ್ಯಾಪ್ತಿಯಿಂದ ತಪ್ಪಿಸಿಕೊಳ್ಳುತ್ತಲಿರುವ ಮತ್ತಷ್ಟು ಮೂಲಭೂತವಾದಿ ಸಂಘಟನೆಗಳ ನಿಷೇಧ ಅಥವಾ ಎಚ್ಚರಿಕೆ ನೀಡುವ ಕೆಲಸ ಆಗಬೇಕಿದೆ.

ದೇಶದಲ್ಲಿ ಮಾಡಲು ಸಾಕಷ್ಟು ಕೆಲಸಗಳಿವೆ. ಅದರಲ್ಲೂ ಪ್ರಜಾಪ್ರಭುತ್ವದ ನೆಲೆಯಲ್ಲಿ ಎಷ್ಟೊಂದು ಒಳ್ಳೆಯ ಕಾರ್ಯಕ್ರಮಗಳನ್ನು ರೂಪಿಸಿ ಜನರ ವಿಶ್ವಾಸ ಗಳಿಸಲು ಇರುವ ಮಾರ್ಗಗಳನ್ನು ಉಪಯೋಗಿಸಿಕೊಳ್ಳಬಹುದು.

ಬುದ್ಧ, ಮಹಾವೀರ, ಬಸವ, ವಿವೇಕಾನಂದ, ಗಾಂಧಿ, ಅಂಬೇಡ್ಕರ್ ಹುಟ್ಟಿದ ನೆಲದಲ್ಲಿ ಚಿಂತನೆಗಳ ಮಹಾಪೂರವೇ ಇದೆ. ಈ ಐತಿಹಾಸಿಕ ವ್ಯಕ್ತಿಗಳ ಮಾರ್ಗದರ್ಶನ ಇರುವಾಗ ಕೊಚ್ಚು ಕೊಲ್ಲು ಸಿದ್ದಾಂತದ ಅವಶ್ಯಕತೆಯೇ ಇಲ್ಲ. ರಾಶಿ ಹಣದ ಸಂಗ್ರವೂ ಬೇಕಿಲ್ಲ. ಕೇವಲ ಅಧ್ಯಯನ, ಚಿಂತನೆ, ಶ್ರಮ, ಪ್ರಾಮಾಣಿಕತೆ, ನಿಸ್ವಾರ್ಥ ಇದ್ದರೆ ಸಾಕು. ಖಂಡಿತ ಜನರ ವಿಶ್ವಾಸ ಗಳಿಸಬಹುದು. ನಮ್ಮ ವಿಚಾರಗಳನ್ನು ಜನರ ಮುಂದಿಡಬಹುದು. ವಾಸ್ತವವಾಗಿ ಧರ್ಮಕ್ಕೆ ಸಂಘಟನೆಗಳ ಅವಶ್ಯಕತೆ ಇಲ್ಲ. ಅದು ಖಾಸಗಿಯಾದದ್ದು. ವ್ಯಕ್ತಿಗಳ ವೈಯಕ್ತಿಕ ಬದುಕಿನಲ್ಲಿ ಅಥವಾ ಕುಟುಂಬಗಳಲ್ಲಿ ತಾವು ‌ನಂಬಿದ ಆಚರಣೆಗಳನ್ನು ಮಾಡಿಕೊಳ್ಳಲು ಯಾವುದೇ ತೊಂದರೆ ಇಲ್ಲ. ಸಂವಿಧಾನಾತ್ಮಕವಾಗಿ ಸಹ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಎಲ್ಲರಿಗೂ ಇದೆ.

ಆದರೆ ಈ ಮೂಲಭೂತವಾದಿಗಳು ಅಥವಾ ‌ಮತಾಂಧರು ಅಥವಾ ಅಜ್ಞಾನಿಗಳು ತಮ್ಮ ಧರ್ಮವೇ ಶ್ರೇಷ್ಠ ಎಂಬ ವ್ಯಸನಕ್ಕೆ ಬಿದ್ದು ತಾವು ಮಹಾನ್ ಧರ್ಮ ರಕ್ಷಕರು ಎಂಬ ಭ್ರಮಗೆ ಒಳಗಾಗಿ ತಾವು ವಾಸಿಸುತ್ತಿರುವ ಪ್ರದೇಶಕ್ಕಿಂತ, ಕಾನೂನಿಗಿಂತ ಧರ್ಮಕ್ಕೆ ಹೆಚ್ಚು ಮಹತ್ವ ನೀಡಿ ಅದಕ್ಕಾಗಿ ಯಾವುದೇ ಹಂತದ ಹಿಂಸೆಗೆ ಇಳಿಯುತ್ತಾರೆ. ಅಲ್ಲದೇ ಇನ್ನೊಂದು ಧರ್ಮವನ್ನು ದ್ವೇಷಿಸುತ್ತಾರೆ. ಅದರ ಪರಿಣಾಮ ಸಂಘಟನೆಗಳು ಮತ್ತು ಸಾಂಸ್ಥಿಕ ಹಿಂಸೆಗಳು. ಇದು ಯಾವುದೇ ಒಂದು ಧರ್ಮಕ್ಕೆ ಸೀಮಿತವಲ್ಲ. ಬಹುತೇಕ ಧರ್ಮಗಳ ಅನುಯಾಯಿಗಳ ನಡವಳಿಕೆ ಇದಕ್ಕೆ ಪೂರಕವಾಗಿದೆ. ಏನಾದರಾಗಲಿ ಹಿಂಸೆಯಲ್ಲಿ ನಂಬಿಕೆ ಇರಿಸಿದ ಸಂಘ ಸಂಸ್ಥೆಗಳ ನಿಷೇಧವನ್ನು ಸ್ವಾಗತಿಸಲೇ ಬೇಕು. ಹಾಗೆ ಮುಂದುವರೆದು ಹಿಂಸೆಯ ಹಿಂದಿನ ಪ್ರಚೋದನೆಗಳನ್ನು ತಡೆಗಟ್ಟಬೇಕು. ಇದು ಮೊದಲನೆಯ ಹಂತದ ಜವಾಬ್ದಾರಿ.

ಎರಡನೆಯ ಹಂತದ ಬಹುಮುಖ್ಯ ಜವಾಬ್ದಾರಿ ಈಗ ನಿಷೇಧಕ್ಕೆ ಒಳಗಾಗಿರುವುದು ಮುಸ್ಲಿಂ ಸಂಘಟನೆಗಳು. ಇದು ಆ ಸಮುದಾಯಕ್ಕೆ ಮತ್ತಷ್ಟು ಅನುಮಾನ ಅವಮಾನ ಅಭದ್ರತೆಗೆ ದೂಡಬಾರದು. ಈಗಿನ ಸರ್ಕಾರ ಉದ್ದೇಶಪೂರ್ವಕವಾಗಿ ನಮ್ಮ ಸಮುದಾಯದ ಮೇಲೆ ಮಾತ್ರ ಈ ರೀತಿಯ ಸೇಡಿನ ಕ್ರಮ ಕೈಗೊಳ್ಳುತ್ತಿದೆ  ಎಂಬ ಭಾವನೆ ಮೂಡಬಾರದು. ಅದು ಅತ್ಯಂತ ಅಪಾಯಕಾರಿ. ಈಗ ಎಲ್ಲಾ ಜವಾಬ್ದಾರಿಯುತ ಭಾರತದ ನಾಗರಿಕರು ಮುಸ್ಲಿಂ ಸಮುದಾಯದ ಸಾಮಾನ್ಯ ಜನರನ್ನು ಅತ್ಯಂತ ವಿಶ್ವಾಸದಿಂದ ಪ್ರೀತಿಯಿಂದ ಕಾಣಬೇಕು.

ನಮ್ಮ ವಿರೋಧ ಹಿಂಸೆ ಮತ್ತು ಅಪರಾಧಿಗಳಿಗೆ ಮಾತ್ರವೇ ಹೊರತು ಮುಸ್ಲಿಂ ಧರ್ಮ ಮತ್ತು ಸಮುದಾಯದ ವಿರುದ್ಧ ಅಲ್ಲ ಎಂದು ಮನವರಿಕೆ ಮಾಡಿಕೊಡಬೇಕು. ಇಲ್ಲದಿದ್ದರೆ ಒಳಗೊಳಗೆ ಭುಗಿಲೇಳುವ ಆಕ್ರೋಶ ಮುಂದೆ ಕೆಟ್ಟ ಪರಿಣಾಮ ಬೀರುತ್ತದೆ. ಏಕೆಂದರೆ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅನವಶ್ಯಕ ಚರ್ಚೆಗಳು, ವಿಜಯೋತ್ವವ, ಇನ್ನೊಬ್ಬರ ನಿಂದನೆ, ಕೇವಲ ಕೆಲವರ ಹಿಂಸೆಯನ್ನು ಮಾತ್ರ ವೈಭವೀಕರಿಸಿ ತಮ್ಮ ಇದೇ ರೀತಿಯ ಹಿಂಸಾತ್ಮಕ ಕೃತ್ಯಗಳ ಸಮರ್ಥನೆಯಂತ ಅತಿರೇಕದ ವರ್ತನೆ ಬಾಲಿಶ ಎನಿಸುತ್ತದೆ.

ಜೊತೆಗೆ ನೆನಪಿಡಿ. ಅಪರಾಧಗಳ ನಿಗ್ರಹ ಕೇವಲ ಪೋಲೀಸರಿಂದ ಮಾತ್ರ ಅಸಾಧ್ಯ. ಅದು ಈ ಕ್ಷಣದ ಪ್ರತಿಕ್ರಿಯೆ ಮಾತ್ರ. ನಮ್ಮ ಸಾಮಾಜಿಕ ರಾಜಕೀಯ ಮತ್ತು ಧಾರ್ಮಿಕ ವ್ಯವಸ್ಥೆ ಅತ್ಯಂತ ಜವಾಬ್ದಾರಿಯಿಂದ ಪ್ರೀತಿಯಿಂದ ಸೌಹಾರ್ದತೆಯಿಂದ ನಡೆದುಕೊಂಡಾಗ ಮಾತ್ರ ಶಾಂತಿ ನೆಲೆಸಲು ಸಾಧ್ಯ. 

ಕೇವಲ ದಾಳಿ - ನಿಷೇಧಗಳು ತಾತ್ಕಾಲಿಕ. ಈಗಿನ ತಂತ್ರಜ್ಞಾನದ ಆಧುನಿಕ ಕಾಲದಲ್ಲಿ ಅನಧಿಕೃತವಾಗಿ ಸಹ ಸಂಘಟನಾತ್ಮಕ ಕೆಲಸಗಳನ್ನು ಮಾಡಬಹುದು ಮತ್ತು ಪ್ರಚೋದಿಸಬಹುದು. ಆದ್ದರಿಂದ ದೇಶದ ಶಾಂತಿ ಅಭಿವೃದ್ಧಿ ಕೇವಲ ರಾಜಕೀಯ ಮತ್ತು ಪೋಲೀಸ್ ವ್ಯವಸ್ಥೆಯ ಜವಾಬ್ದಾರಿಯಲ್ಲ. ಅದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ.  ಭಾವನಾತ್ಮಕವಾಗಿ ಯೋಚಿಸದೆ ವಿವೇಚನೆಯಿಂದ ಯೋಚಿಸಬೇಕು. ಶಿಕ್ಷೆಗಿಂತ ಶಿಕ್ಷಣ ಮುಖ್ಯವಾಗಬೇಕು. ಅದೇ ಭಾರತದ ಮಣ್ಣಿನ ಗುಣ ಮತ್ತು ಈ ನೆಲದ ಮೂಲ ಸಂಸ್ಕೃತಿ.

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ