ಹಿಂಸೆಯನ್ನು ಸಹಿಸುವುದು ಅಹಿಂಸೆಯೇ?

ಹಿಂಸೆಯನ್ನು ಸಹಿಸುವುದು ಅಹಿಂಸೆಯೇ?

    ಒಬ್ಬ ಸಣಕಲ ವ್ಯಕ್ತಿ ಧಡೂತಿ ಪೈಲ್ವಾನನನ್ನು ಕುರಿತು, "ಈ ಸಲ ನಿನ್ನನ್ನು ಸುಮ್ಮನೆ ಬಿಟ್ಟಿದ್ದೇನೆ. ಮತ್ತೊಮ್ಮೆ ನನ್ನ ತಂಟೆಗೆ ಬಂದರೆ ಹುಷಾರ್" ಎಂದರೆ ಪೈಲ್ವಾನ ನಕ್ಕು ಸುಮ್ಮನಿರುತ್ತಾನೆ ಎಂದಿಟ್ಟುಕೊಳ್ಳಿ. ಈಗ ಅಹಿಂಸಾ ತತ್ವವನ್ನು ಪಾಲಿಸಿದವರು ಯಾರು? ಸಣಕಲನೋ, ಪೈಲ್ವಾನನೋ? ನಿಜವಾಗಿ ಹೇಳಬೇಕೆಂದರೆ ಪೈಲ್ವಾನನೇ ಅಹಿಂಸಾ ತತ್ವ ಪಾಲಿಸಿದವನು. ಏಕೆಂದರೆ ಸಣಕಲನ ಮಾತು ಕೇಳಿ ಆತ ಅವನ ಮುಸುಡಿಯ ಮೇಲೆ ಗುದ್ದಿಬಿಡಬಹುದಿತ್ತು. ಹಾಗೆ ಗುದ್ದಿದರೂ ಸಣಕಲ ತಿರುಗಿ ಏನೂ ಮಾಡುವಂತಿರಲಿಲ್ಲ. ಹಿಂಸೆ ಮಾಡಲು ಅವಕಾಶವಿದ್ದರೂ ಮಾಡದಿರುವುದೇ ನಿಜವಾದ ಅಹಿಂಸೆ. ಜಗತ್ತು ಮತ್ತು ಜೀವಗಳ ಉಗಮ ಕಾಲದಿಂದಲೂ ಹಿಂಸೆ, ಅಹಿಂಸೆಗಳ ತಾಕಲಾಟ ಸಾಗುತ್ತಿದೆ, ಸಾಗುತ್ತಲೇ ಇರುತ್ತದೆ.

     ಅಹಿಂಸೆಯಲ್ಲಿ ಪ್ರೀತಿಯ ತತ್ವವಿದೆ. ಪ್ರೀತಿಯಿರುವಲ್ಲಿ ಅಹಿಂಸೆಯಿರುತ್ತದೆ. ಮಾನವನಂತೆ ವಿವೇಚನಾ ಸಾಮರ್ಥ್ಯವಿಲ್ಲದ ಪ್ರಾಣಿಗಳಲ್ಲೂ ಇದನ್ನು ಗುರುತಿಸಬಹುದು. ತಮ್ಮ ಮರಿ, ಸಮೂಹ, ಕುಟುಂಬಗಳನ್ನು ಪ್ರೀತಿಯಿಂದ ಕಾಣುವ ಅವು ಇತರ ಪ್ರಾಣಿಗಳನ್ನು ಕಂಡಾಗ ಕಾದಾಡುತ್ತವೆ, ಬಲಿ ತೆಗೆದುಕೊಳ್ಳುತ್ತವೆ. ಮಾನವರಲ್ಲೂ ಅಷ್ಟೆ, ತಮ್ಮವರು ಅನ್ನುವವರ ಬಗ್ಗೆ ಕೆಡುಕನ್ನು ಅವರು ಬಯಸುವುದಿಲ್ಲ. ವಿಶಾಲವಾಗಿ ನೋಡುತ್ತಾ ಹೋದರೆ ಅಹಿಂಸೆ ಅನ್ನುವುದು ದೇವರ/ದೇವಮಾನವರ ಗುಣ ಅನ್ನುವುದು ಗೊತ್ತಾಗುತ್ತದೆ. ಅಹಿಂಸೆ ಹೃದಯದಿಂದ ಮೆದುಳಿಗೆ ಮೂಡಿ ಬರುವಂತಹದು. ದೇವರಲ್ಲಿ ಮತ್ತು ಜೀವರಲ್ಲಿ ನಂಬಿಕೆ ಇರುವವರಿಗೆ ಅಹಿಂಸೆ ಅರ್ಥವಾಗುತ್ತದೆ. ಅಹಿಂಸೆ ಮತ್ತು ಸತ್ಯಗಳಲ್ಲಿ ಅವಿನಾಭಾವ ಸಂಬಂಧವಿದೆ.

     ಅಹಿಂಸೆಯ ಮಹತ್ವ ಅರ್ಥವಾಗಬೇಕೆಂದರೆ ಹಿಂಸೆಯ ಪರಿಣಾಮಗಳನ್ನು ತಿಳಿಯಬೇಕು. ಹಿಂಸೆ ಪ್ರತಿಹಿಂಸೆಗೆ ಪ್ರಚೋದಿಸುತ್ತದೆ. ಹಿಂಸೆ, ಮಾನಸಿಕವಿರಬಹುದು, ದೈಹಿಕವಿರಬಹುದು ಅದು ಕೊಟ್ಟವರಿಗೂ, ಪಡೆದವರಿಗೂ ಕೇಡು ಮಾಡದೇ ಇರದು. ಹಿಂಸೆ ಕೊಟ್ಟವರಿಗೆ ತಮಗೆ ಪ್ರತಿಯಾಗಿ ತೊಂದರೆ ಮಾಡಿಯಾರೆಂಬ ಭಯ ಕಾಡುತ್ತಿರುತ್ತದೆ. ಅವರು ವಿಶ್ವಾಸ, ಸ್ನೇಹಗಳನ್ನು ಕಳೆದುಕೊಳ್ಳುತ್ತಾರೆ. ಹಿಂಸೆ ಅನುಭವಿಸಿದವರೂ ಸೇಡು ತೀರಿಸಿಕೊಳ್ಳಲು ಹಪಹಪಿಸುತ್ತಾರೆ. ಹಿಂಸೆ ಕೊಟ್ಟವರು ಬಲಶಾಲಿಯಾಗಿದ್ದರೆ ಹಿಂಸಿಸಲ್ಪಟ್ಟವರು ಅವಮಾನದಿಂದ ಕುದಿಯುತ್ತಾರೆ ಮತ್ತು ಸೂಕ್ತ ಸಂದರ್ಭಕ್ಕಾಗಿ ಕಾಯುತ್ತಾರೆ. ಇದರಿಂದಾಗಿ ದೈನಂದಿನ ಚಟುವಟಿಕೆಗಳು ಏರುಪೇರಾಗುತ್ತವೆ. ಮುಂದುವರೆಯುವುದಕ್ಕೆ ಹಿನ್ನಡೆಯಾಗುತ್ತದೆ. ಹಿಂಸೆ ದುರ್ಬಲರ ಮತ್ತು ಪ್ರೀತಿಯಿಂದ ಗೆಲ್ಲಲು ಸಾಧ್ಯವಾಗದ ಹತಾಶ ವ್ಯಕ್ತಿಗಳ ಆಯುಧ. ಭಯಪಡಿಸಿ ಜನರನ್ನು ಆಳುವುದು ಶಾಶ್ವತದ್ದಾಗಿರುವುದಿಲ್ಲ. ಒಮ್ಮೆ ಆ ರೀತಿ ಆಳಿದವರು ದುರ್ಬಲರಾದರೆಂದರೆ ಅವರೂ ಪ್ರತಿಹಿಂಸೆಯ ಬಲಿಪಶುಗಳಾಗುತ್ತಾರೆ. ಸರ್ವಾಧಿಕಾರಿಗಳಾಗಿ ಭಯಪಡಿಸಿ ದೇಶಗಳನ್ನು ಆಳಿದವರು ಕೊನೆಯಲ್ಲಿ ಅಮಾನುಷ ಅಂತ್ಯ ಕಂಡ ಅನೇಕ ಘಟನೆಗಳಿಗೆ ಇತಿಹಾಸ ಸಾಕ್ಷಿಯಾಗಿದೆ. ಅದೇ ನೈಜ ಕಾಳಜಿಯಿಂದ ಆಳಿದವರು ಸೋತಾಗಲೂ ಗೌರವ ಉಳಿಸಿಕೊಂಡಿರುವ ನಿದರ್ಶನಗಳೂ ಕಣ್ಣ ಮುಂದಿವೆ.

     ಅಹಿಂಸೆಯ ಶತ್ರು ಕೋಪ ಮತ್ತು ದುರಭಿಮಾನಗಳು. ಅವು ಅಹಿಂಸೆಯನ್ನು ನುಂಗಿ ನೀರು ಕುಡಿಯುತ್ತವೆ. ಕೋಪ ಮತ್ತು ದುರಭಿಮಾನಗಳು ಸಾಮಾನ್ಯರ ಆಸ್ತಿಗಳು. ಅಸಾಮಾನ್ಯರಷ್ಟೇ ಅವನ್ನು ಗೆಲ್ಲಬಲ್ಲರು. ಹಾಗಾಗಿ ಅಹಿಂಸೆ ಸಾಧಕರ/ಸಜ್ಜನರ ಸ್ವತ್ತು, ಬೆಳವಣಿಗೆಯ ಸಂಕೇತ. ಎಲ್ಲಿಯವರೆಗೆ ಇತರರನ್ನು ಹಿಂಸಿಸುತ್ತಿರುತ್ತೇವೆಯೋ ಅಲ್ಲಿಯವರೆಗೆ ನಾವು ಅಸುರರಾಗಿರುತ್ತೇವೆ. ಅಹಿಂಸಾತ್ಮಕರಾಗಿರಲು ಹೆಚ್ಚು ಶಕ್ತಿ, ಅಗಾಧ ಮಾನಸಿಕ ಬಲ ಇರಬೇಕಾಗುತ್ತದೆ. ಅಹಿಂಸಾತತ್ವ ಪಾಲಿಸುವವರಿಂದಾಗಿ ಜಗತ್ತು ಸ್ವಲ್ಪವಾದರೂ ಶಾಂತಿಯಿಂದಿದೆ. ಇಲ್ಲವಾದಲ್ಲಿ ಜಗತ್ತು ನಿರಂತರ ರಣಾಂಗಣವಾಗಿರುತ್ತಿತ್ತು!

     ಅಯೋಧ್ಯೆಯ ಜ್ವಲಂತ ಉದಾಹರಣೆಯನ್ನೇ ನೋಡೋಣ. ಅಯೋಧ್ಯೆ, ಮಥುರೆ ಮತ್ತು ವಾರಣಾಸಿಗಳಲ್ಲಿದ್ದ ಹಿಂದೂ ದೇವಾಲಯಗಳನ್ನು ಹಿಂದೊಮ್ಮೆ ಮುಸ್ಲಿಮ್ ಆಕ್ರಮಣಕಾರರು ಕೆಡವಿ ಮಸೀದಿಗಳನ್ನು ಕಟ್ಟಿದ್ದರು. ಅಯೋಧ್ಯೆಯಲ್ಲಿ ರಾಮಮಂದಿರ ಕೆಡವಿ ಬಾಬರಿ ಮಸೀದಿ ತಲೆಯೆತ್ತಿತ್ತು. ಬಾಬರಿ ಮಸೀದಿ ಸಹ ಹಲವು ವರ್ಷಗಳ ಹಿಂದೆ ಧ್ವಂಸಗೊಂಡಿತು. ವಿವಾದ ಮಾತ್ರ ನಿಲ್ಲದೆ ಮುಂದುವರೆದಿದೆ. ಇತರ ಧರ್ಮ/ಮತ/ವಿಚಾರಗಳ ಬಗೆಗಿನ ಅಹನೆಯೇ ಸಮಸ್ಯೆಯ ಮೂಲವಾಗಿದೆ. ಇದು ನಿಲ್ಲುವುದೆಂದಿಗೆ? ರಾಜಕಾರಣಿಗಳು ಇದನ್ನೇ ಬಂಡವಾಳ ಮಾಡಿಕೊಂಡು ಸಮಸ್ಯೆ ಇತ್ಯರ್ಥವಾಗದಿರುವಂತೆ ನೋಡಿಕೊಂಡು ಲಾಭ ಪಡೆಯುವುದಕ್ಕೆ ಮಾತ್ರ ಗಮನ ಹರಿಸುತ್ತಿರುವುದರಿಂದ ಪರಿಹಾರ ಸುಲಭವಲ್ಲ.

     ಅಹಿಂಸಾತತ್ವ ವೈಯಕ್ತಿಕ ಸಾಧನೆಗೆ ಅತ್ಯುನ್ನತ ಸಾಧನ. ಇದನ್ನು ಅಳವಡಿಸಿಕೊಂಡವನು ಅಜಾತಶತ್ರುವೆನಿಸುತ್ತಾನೆ. ಹೆಚ್ಚಿನ ಧರ್ಮ, ಮತಗಳು ಅಹಿಂಸೆಗೆ ಮಹತ್ವ ನೀಡಿವೆ. ಆದರೆ ಆಯಾ ಧರ್ಮದ ತಿರುಳನ್ನು ಸರಿಯಾಗಿ ಗ್ರಹಿಸದ, ತಮ್ಮ ಧರ್ಮ/ಮತವೇ ಶ್ರೇಷ್ಠ ಎಂದು ಭಾವಿಸುವುದರೊಂದಿಗೆ ಇತರ ಧರ್ಮ/ಆದರ್ಶಗಳನ್ನು ದ್ವೇಷಿಸುವ ಮನೋಭಾವದ ಕೆಳಸ್ತರದ ಧರ್ಮಾನುಯಾಯಿಗಳು ಹಿಂಸೆಗೆ ಎಳಸುವುದನ್ನು ಕಾಣುತ್ತಿದ್ದೇವೆ. ಹಿಂದೂ, ಬೌದ್ಧ, ಜೈನ ಧರ್ಮಗಳಲ್ಲಿ ಅಹಿಂಸೆಗೆ ಉನ್ನತ ಸ್ಥಾನ ನೀಡಿವೆ. ಇಸ್ಲಾಮ್ ಮತದಲ್ಲೂ ಅಹಿಂಸೆಗೆ ಪ್ರಾಧಾನ್ಯತೆ ಇದ್ದರೂ, ಇತರ ಧರ್ಮೀಯರ ಕುರಿತ ಅಸಹನೆ ಅಶಾಂತಿಗೆ ಎಡೆ ಮಾಡಿಕೊಟ್ಟಿದೆ. ಗಡಿನಾಡ ಗಾಂಧಿ ಖಾನ್ ಅಬ್ದುಲ್ ಗಫಾರ್‌ಖಾನರ ಈ ಮಾತು ಮನನೀಯವಾಗಿದೆ: "ಯಾರನ್ನೇ ಆಗಲಿ, ಮಾತಿನಿಂದಾಗಲೀ, ಕೃತಿಯಿಂದಾಗಲೀ ನೋಯಿಸದಿರುವ ಮತ್ತು ದೇವರ ಸೃಷ್ಟಿಯ ಜೀವಗಳ ಅನುಕೂಲ ಮತ್ತು ಸಂತೋಷಕ್ಕಾಗಿ ಶ್ರಮಿಸುವ ಮನುಷ್ಯನೇ ಮುಸ್ಲಿಮ. ಸಹಮನುಷ್ಯರನ್ನು ಪ್ರೀತಿಸುವುದೇ ದೇವರ ಮೇಲಿನ ನಂಬಿಕೆ". ಇದನ್ನು ಅನುಸರಿಸಿದರೆ ಸಮಸ್ಯೆ ಎಲ್ಲಿ ಬಂದೀತು? ಆದರೆ . . .?

     ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಗಾಂಧೀಜಿಯ ನೇತೃತ್ವದಲ್ಲಿ ನಡೆದ ಅಹಿಂಸಾತ್ಮಕ ಹೋರಾಟಗಳು ಉಲ್ಲೇಖನೀಯವಾಗಿವೆ. ಅಹಿಂಸಾತ್ಮಕ ಹೋರಾಟಗಳನ್ನು ನ್ಯಾಯ, ನೀತಿ, ಮೌಲ್ಯಗಳಿಗೆ ಬೆಲೆ ಕೊಡುವಂತಹವರು ಮಾತ್ರ ಪರಿಗಣಿಸಿಯಾರು. ಕುಟಿಲತೆ, ಕುತಂತ್ರಗಳಿಗೆ ಹೆಸರಾದ ಬ್ರಿಟಿಷರು ಅಹಿಂಸಾತ್ಮಕ ಹೋರಾಟಕ್ಕೆ ಹೆದರಿ ಕಾಲ್ಕಿತ್ತರು ಎಂದು ಹೇಳುವುದು ಸ್ವಾತಂತ್ರ್ಯ ಹೋರಾಟಕ್ಕೆ ಮಾಡುವ ಅಪಚಾರ.  ಅವರು ಅಹಿಂಸೆಗೆ ಬೆಲೆ ಕೊಡುವವರಾಗಿದ್ದರೆ ಜಲಿಯನ್‌ವಾಲಾಬಾಗಿನಲ್ಲಿ ಅಹಿಂಸಾತ್ಮಕವಾಗಿ ನಡೆಸಲಾಗುತ್ತಿದ್ದ ಸಭೆಯನ್ನು ಸುತ್ತುವರೆದು ನಿರ್ದಯವಾಗಿ ಗುಂಡಿನ ಸರಿಮಳೆಗೈದು ಮಕ್ಕಳು, ಮುದುಕರೆನ್ನದೆ ಸಾವಿರಾರು ಭಾರತೀಯರನ್ನು ಹತ್ಯೆ ಮಾಡುತ್ತಿರಲಿಲ್ಲ. ಗಂಡುಗಲಿಗಳಾದ ಸುಭಾಷಚಂದ್ರ ಬೋಸ್, ಚಂದ್ರಶೇಖರ ಆಜಾದ್, ಭಗತ್‌ಸಿಂಗ್, ಸಾವರ್ಕರ್, ವಾಸುದೇವ ಬಲವಂತ ಫಡಕೆ, ಶಿವಾಜಿ, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ದೊಂಡಿಯವಾಘನಂತಹ ಅಸಂಖ್ಯ ವೀರ ಶೂರರ ಕೆಚ್ಚೆದೆಯ ಹೋರಾಟಗಳು, ಬಲಿದಾನಗಳನ್ನು ಕಡೆಗಣಿಸಿದರೆ ದ್ರೋಹವಾಗುತ್ತದೆ. ಇಂತಹವರನ್ನು ಎದುರಿಸಿ ಹಣ್ಣಾಗಿದ್ದ, ಎರಡನೆಯ ವಿಶ್ವಯುದ್ಧದ ಪರಿಣಾಮಗಳನ್ನು ಎದುರಿಸಬೇಕಾಗಿದ್ದ ಸಂದರ್ಭದಲ್ಲಿ ಈ ಸತ್ಯಾಗ್ರಹಗಳೂ ಸೇರಿಕೊಂಡು ಬ್ರಿಟಿಷರು ದೇಶ ಬಿಟ್ಟು ಹೊರಡಬೇಕಾಯಿತು. ಇಂದು ಗಾಂಧಿಯ ಅನುಯಾಯಿಗಳೆಂದು ಹೇಳಿಕೊಳ್ಳುತ್ತಿರುವವರು ಮೇಲೆ ಹೆಸರಿಸಿದಂತಹ ದೇಶಪ್ರೇಮಿಗಳನ್ನು ಕಡೆಗಣಿಸುತ್ತಿರುವುದು ನಿಜಕ್ಕೂ ಅಕ್ಷಮ್ಯ. ಕೆಲವು ಅನಿವಾರ್ಯ ಸಂದರ್ಭಗಳಲ್ಲಿ ಶತ್ರುಗಳ ವಿರುದ್ಧ ತಕ್ಕ ರೀತಿಯಲ್ಲಿ ವರ್ತಿಸಬೇಕಾಗುತ್ತದೆ. ನೆರೆ ದೇಶ ನಮ್ಮ ಸೈನಿಕರ ರುಂಡಗಳನ್ನು ಕಡಿದು ಚೆಲ್ಲುವಾಗ, ಅಹಿಂಸೆಯ ಮಂತ್ರ ಜಪಿಸಿದರೆ ಅದು ಹೇಡಿತನವೆನಿಸುತ್ತದೆ.

     ಇಂದು ಆಡಳಿತದಲ್ಲಿ ಇರುವ ಹೆಚ್ಚಿನ ಜನಪ್ರತಿನಿಧಿಗಳಾದರೂ ಎಂತಹವರು? ಕೋಟಿ ಕೋಟಿ ಹಣವನ್ನು ಅಕ್ರಮ ರೀತಿಯಲ್ಲಿ ಸಂಗ್ರಹಿಸಿದವರು, ದೇಶದ ಸಂಪತ್ತನ್ನು ಲೂಟಿ ಮಾಡಿದವರು, ಭೂಗತ ದೊರೆಗಳು/ಅವರ ಕೃಪಾಪೋಷಿತರು. ಎಲ್ಲೋ ಅಲ್ಲೊಬ್ಬರು, ಇಲ್ಲೊಬ್ಬರು ಕರಿ ಕಾರ್ಮೋಡದಲ್ಲಿನ ಬೆಳ್ಳಿಮಿಂಚಿನಂತೆ ಸಜ್ಜನ ರಾಜಕಾರಣಿಗಳೂ ಇದ್ದರೂ, ಅವರು ಮೂಲೆಗೆ ಒತ್ತರಿಸಲ್ಪಟ್ಟಿದ್ದಾರೆ. ಇಂತಹ ಬಲಾಢ್ಯರುಗಳು ಎಂತಹ ಪ್ರಬಲ ಜನಹೋರಾಟವನ್ನೂ ಹತ್ತಿಕ್ಕುವ ಸಾಮರ್ಥ್ಯ ಹೊಂದಿದ್ದಾರೆ. ಸಿ.ಬಿ.ಐ., ಪೋಲಿಸ್, ಅಧಿಕಾರಿಗಳನ್ನು ದಾಳಗಳಾಗಿ ಬಳಸಿಕೊಂಡು ವಿರೋಧಿಗಳನ್ನು ಹತ್ತಿಕ್ಕುತ್ತಾರೆ, ಸಾಧ್ಯವಾದರೆ ಕೊಂಡುಕೊಂಡೂಬಿಡುತ್ತಾರೆ. ಭಂಡತನವನ್ನು ಎಗ್ಗಿಲ್ಲದೆ ಪ್ರದರ್ಶಿಸಿ ತಮ್ಮ ವಿರುದ್ಧ ಯಾರಾದರೂ ಮಾತನಾಡಿದರೆ ಹುಷಾರ್ ಎಂಬ ಸಂದೇಶವನ್ನು ರವಾನಿಸುತ್ತಾರೆ. ಸಾಮಾನ್ಯ ಜನರು ಹೋರಾಡುವುದಿರಲಿ, ಮಾತನಾಡಲೂ ಹಿಂಜರಿಯುವ ಪರಿಸ್ಥಿತಿ ಇದೆ. ಇದನ್ನು ಅಹಿಂಸಾ ಮಾರ್ಗದಿಂದ ಸರಿದಾರಿಗೆ ತರಬಹುದೆ? ಹಾಗೆಂದು ಹಿಂಸಾಮಾರ್ಗದಿಂದಲೂ ಪರಿಹಾರ ಸಾಧ್ಯವಿಲ್ಲ. ಹಿಂಸಾಮಾರ್ಗದಿಂದ ಬದಲಾವಣೆ ತರಬಯಸುವ ನಕ್ಸಲರು, ಕಮ್ಯೂನಿಸ್ಟರು ಜನರಿಂದಲೂ ದೂರವಾಗುವುದಲ್ಲದೆ, ಇತರರ ಪ್ರಾಣಹರಣದ ಜೊತೆಗೆ ತಮ್ಮ ಜೀವಗಳನ್ನೂ ಪಣಕ್ಕಿಡಬೇಕಾಗುತ್ತದೆ. ಜನರಿಂದ ಸ್ವತಃ ದೂರವಾಗಿ, ತಾವೂ ಒಂದೊಮ್ಮೆ ಹತರಾಗಿ ಸಾಧಿಸುವುದಾದರೂ ಏನನ್ನು?

     ಮಾರ್ಟಿನ್ ಲೂಥರ್ ಕಿಂಗ್ ಹೇಳುತ್ತಾರೆ: "ಹಿಂಸೆಯಿಂದ ವರ್ಣಭೇದವನ್ನು ಹತ್ತಿಕ್ಕುವುದು ಅವ್ಯವಹಾರಿಕ ಮತ್ತು ಅನೈತಿಕ. ಅದು ಅನುಭವಿಸಿದವರಲ್ಲಿ ಕಹಿಯನ್ನು, ನಾಶ ಮಾಡುವವರಲ್ಲಿ ಕ್ರೂರತೆಯನ್ನು ಉಂಟುಮಾಡುತ್ತದೆ".  ಇದನ್ನು ಒಪ್ಪದ ಜಾರ್ಜ್ ಜಾಕ್ಸನ್ ಹೇಳುತ್ತಾರೆ: "ಅಹಿಂಸಾ ವಿಧಾನ ಒಂದು ಸುಳ್ಳು ಆದರ್ಶ. ಅದು ವಿರೋಧಿಗಳು ನ್ಯಾಯ, ನೀತಿಗಳನ್ನು ಮಾನ್ಯ ಮಾಡುವರೆಂದು ಆಶಿಸುತ್ತದೆ. ಅವರು ಅಂತಹ ಮನೋಭಾವದವರಾಗಿರದಿದ್ದರೆ ಮತ್ತು ನ್ಯಾಯ, ನೀತಿ, ಧರ್ಮ ಪಾಲಿಸಿದರೆ ಪ್ರಯೋಜನವಿಲ್ಲವೆಂದಾದರೆ, ಅವರ ಪ್ರತಿಕ್ರಿಯೆ ಸಕಾರಾತ್ಮಕವಾಗಿರುವುದಿಲ್ಲ". ಎರಡೂ ಹೇಳಿಕೆಗಳು ಪರಸ್ಪರ ವಿರುದ್ಧವಾಗಿದ್ದರೂ ಎರಡರಲ್ಲೂ ಸತ್ಯಾಂಶವಿದೆ. ಹಾಗಾದರೆ ಏನು ಮಾಡಬೇಕು? ಮಧ್ಯಮ ಮಾರ್ಗ ಅತ್ಯುತ್ತಮವಾಗಿದೆ. ಜಾಣನಿಗೆ ಮಾತಿನ ಪೆಟ್ಟಾದರೆ ಕೋಣನಿಗೆ ದೊಣ್ಣೆಯ ಪೆಟ್ಟೇ ಬೀಳಬೇಕು. ಸಮಯ, ಸಂದರ್ಭ, ಪರಿಸ್ಥಿತಿಗೆ ಅನುಗುಣವಾಗಿ ನಿರ್ಧರಿಸುವುದೇ ಒಳ್ಳೆಯದು. ಅಹಿಂಸೆ ಸಮಸ್ಯೆಯನ್ನು ಇತ್ಯರ್ಥಪಡಿಸದೆ ಕೇವಲ ಮುಂದೂಡುವದಕ್ಕಾಗಿ ಬಳಸುವ ಅಸ್ತ್ರವಾದರೆ, ವೈಯಕ್ತಿಕವಾಗಿ ನಾನು ಅಂತಹ ಸಂದರ್ಭದಲ್ಲಿ ಹಿಂಸೆಯನ್ನು ಬೆಂಬಲಿಸುತ್ತೇನೆ. ಭ್ರಷ್ಠರನ್ನು ದಾರಿಯಲ್ಲಿ ತಡೆದು ನಿಲ್ಲಿಸಿ ಪ್ರಶ್ನಿಸುವ ಎದೆಗಾರಿಕೆಯನ್ನು ಜನರು ಬೆಳೆಸಿಕೊಳ್ಳಬೇಕಿದೆ. ಇಂತಹ ಕೆಲಸ ಮಾಡುವವರನ್ನು ಇದೆಲ್ಲಾ ನಮಗೇಕೆ ಎಂದು ಸುಮ್ಮನಿರದೆ ಬೆಂಬಲಿಸುವ ಕನಿಷ್ಠ ಕಾರ್ಯವನ್ನಾದರೂ ನಾವು ಮಾಡಬೇಕಿದೆ. ದುಷ್ಟರು, ಭ್ರಷ್ಠರು ಪೆಟ್ಟು ತಿನ್ನುವ ಸಂದರ್ಭದಲ್ಲಿ ಸಜ್ಜನರೆನಿಸಿಕೊಂಡವರೂ ಮೂಕಪ್ರೇಕ್ಷಕರಾಗಿರದೆ ತಮ್ಮ ಪಾಲಿನ ಪೆಟ್ಟನ್ನೂ ಕೊಡಲು ಹಿಂಜರಿಯಬಾರದು. ಅಹಿಂಸೆ ಅತ್ಯುತ್ತಮವಾದ ಜೀವನವಿಧಾನ. ಆದರೆ, ಅದನ್ನು ಭಂಡರು, ನೀಚರು, ಸ್ವಾರ್ಥಿಗಳ ವಿರುದ್ಧ ಬಳಸುವುದು ಕಷ್ಟ. ಅವರಿಗೆ ಅವರ ರೀತಿಯಲ್ಲೇ ಉತ್ತರಿಸಬೇಕಾಗುತ್ತದೆ. ಕೃಷ್ಣನಂತಹ ಶ್ರೇಷ್ಠ ರಾಜನೀತಿಜ್ಞ, ಚಾಣಕ್ಯನಂತಹ ಮೇಧಾವಿಗಳು ಬೋಧಿಸಿರುವುದು ಇದನ್ನೇ. ಅಹಿಂಸಾಮಾರ್ಗ ನಮ್ಮ ಜೀವನವಿಧಾನವಾಗಲಿ. ಆದರೆ ಹಿಂಸೆಯನ್ನು ವಿನಾಕಾರಣ ಸಹಿಸದಿರುವ ಮನೋಭಾವವೂ ನಮ್ಮದಿರಲಿ.

-ಕ.ವೆಂ. ನಾಗರಾಜ್.

 

Comments

Submitted by vishu7334 Sun, 07/15/2018 - 15:18

ಸರ್, ನೀವು ಹೇಳಿರುವಂತೆ ಸದಾಕಾಲ ಅಹಿಂಸೆಯನ್ನು ಜಪಿಸುತ್ತ ಕೂರುವುದು ಸಮಾಜಕ್ಕೆ ಒಳ್ಳೆಯದಲ್ಲ. ಸಮಯಕ್ಕೆ ಸೂಕ್ತವಾದ ಆಚರಣೆಗಳನ್ನು ಪ್ರಯೋಗ ಮಾಡಲೇಬೇಕು. ಮಹಾಭಾರತವನ್ನು ತೆಗೆದುಕೊಂಡರೆ ಕೃಷ್ಣ ಎಲ್ಲ ರಾಜತಾಂತ್ರಿಕ ಮಾತುಕತೆಗಳು ಸೋತಾಗಲೇ ಯುದ್ಧಕ್ಕೆ ಪಾಂಡವರನ್ನು ಕರೆದೊಯ್ದಿದ್ದು. ಅಂತಾಗಿಯೂ ಅರ್ಜುನ ಯುದ್ಧದಲ್ಲಿ ತನ್ನ ಬಳಗದವರನ್ನು ಕೊಂದು ರಾಜ್ಯ ಪಡೆದರೆ ರಾಜ್ಯದಾಹಿಯಾಗುತ್ತೇನೆ, ಅಧರ್ಮಿಯಾಗುತ್ತೇನೆ ಎಂದಾಗ ಕೃಷ್ಣ ಧರ್ಮದಿಂದ ಒದಗಿಬಂದ ಯುದ್ಧವನ್ನು ಮಾಡದೆ ಕೈಚೆಲ್ಲಿ ಕೂತರೆ ಮಾತ್ರ ಆತ ಅಧರ್ಮಿಯಾಗುತ್ತಾನೆ ಎಂದು ಬುದ್ಧಿ ಹೇಳುತ್ತಾನೆ. ಇಂತಹ ಅಗತ್ಯವಿಲ್ಲದ ಅಹಿಂಸೆ, ಕರುಣೆಯನ್ನು ತೋರಿಸಲು ಹೋಗಿ ಈಗ ಅನೇಕ ಯುರೋಪಿಯನ್ ದೇಶಗಳು ತಮ್ಮ ಸಂಸ್ಕೃತಿಗೆ ಒಪ್ಪಿಕೊಳ್ಳದ ಅನೇಕ ನಿರಾಶ್ರಿತರನ್ನು ಒಮ್ಮೆಲೆ ದೊಡ್ಡ ಸಂಖ್ಯೆಯಲ್ಲಿ ಒಳಬಿಟ್ಟುಕೊಂಡು ಸಮಸ್ಯೆ ಅನುಭವಿಸುತ್ತಿದ್ದಾರೆ. ಅವರೆಲ್ಲರಿಗೂ ಅವರದೇ ದೇಶಗಳಲ್ಲಿ ಅಗತ್ಯ ಸಹಾಯ ಮಾಡಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ. ಈಗ ಈ ತಪ್ಪು ನಡೆಯಿಂದಾಗಿ ಯುರೋಪ್ ನಲ್ಲಿ ಅಪರಾಧ ಪ್ರಕರಣಗಳು ಹಿಂದೆಂದಿಗಿಂತಲೂ ಹೆಚ್ಚಾಗಿ, ಪೊಲೀಸರು ನಿರಾಶ್ರಿತರ ಕ್ಯಾಂಪ್ ಗೆ ಹೋಗಲೂ ಹೆದರುವಂತ ಪರಿಸ್ಥಿತಿ ಉಂಟಾಗಿದೆ. ಇಂತಹದ್ದೇ ಸಮಸ್ಯೆ ನಮ್ಮ ದೇಶದಲ್ಲೂ. ಬಾಂಗ್ಲಾದೇಶದಿಂದ ಮತ್ತು ಮ್ಯನ್ಮಾರ್ ನಿಂದ ಬರುವ ಅನೇಕ ನಿರಾಶ್ರಿತರಿಗೆ ಎಲ್ಲ ಸೌಕರ್ಯ ಮಾಡಿಕೊಡಲಾಗುತ್ತಿದೆ. ಹೀಗೆ ಬರುವ ಜನರಿಗೆ ಯಾವುದೇ ಜವಾಬ್ದಾರಿಯಿಲ್ಲದೆ ಎಲ್ಲ ಸೌಲಭ್ಯ ಕೊಡುವುದರಿಂದ, ಸ್ವಾಭಾವಿಕವಾಗಿ ಇಲ್ಲಿನ ಕಾನೂನು ಗೌರವಿಸಬೇಕು ಎನ್ನುವ ಬದ್ಧತೆ ಇರುವುದಿಲ್ಲ. ಅದರಲ್ಲೂ ನಮ್ಮ ನಾಗರಿಕರನ್ನು ಕಡೆಗಣಿಸಿ ಅವರನ್ನು ಪೋಷಿಸುವ ಅಗತ್ಯವೇನಿದೆ ಎಂಬುದೇ ಅರ್ಥವಾಗದ್ದು.