ಹಿಟ್ಟಿನ ಗಿರಣಿಯ ಹಾನ್ಸ್
ನೂರಾರು ವರುಷಗಳ ಹಿಂದೆ ಒಬ್ಬ ಹಿಟ್ಟಿನ ಗಿರಣಿ ಮಾಲೀಕನಿದ್ದ. ಅವನಿಗೆ ಮಕ್ಕಳಿರಲಿಲ್ಲ. ಆದ್ದರಿಂದ ತನ್ನ ಸಹಾಯಕ್ಕಾಗಿ ಅವನು ಮೂವರು ಯುವಕರನ್ನು ಇಟ್ಟುಕೊಂಡಿದ್ದ.
ಅದೊಂದು ದಿನ ಅವನು ಮೂವರನ್ನೂ ಕರೆದು ಹೇಳಿದ, “ನನಗೆ ವಯಸ್ಸಾಗುತ್ತಿದೆ. ನೀವು ಮೂವರೂ ಇಲ್ಲಿಂದ ಹೊರಟು, ಬೇರೇನಾದರೂ ಕೆಲಸ ಮಾಡಿ, ಬದುಕಿನ ಅನುಭವ ಪಡೆಯಿರಿ. ಜಗತ್ತಿನಲ್ಲೇ ಶ್ರೇಷ್ಠ ಕುದುರೆಯನ್ನು ನಿಮ್ಮಲ್ಲಿ ಯಾರು ನನಗೆ ತಂದು ಕೊಡುತ್ತೀರೋ ಅವರಿಗೆ ನನ್ನ ಹಿಟ್ಟಿನ ಗಿರಣಿಯನ್ನು ವಹಿಸಿಕೊಡ್ತೇನೆ.”
ಆ ಮೂವರು ಕೆಲಸಗಾರರಲ್ಲಿ ಅತ್ಯಂತ ಕಿರಿಯನ ಹೆಸರು ಹಾನ್ಸ್. ಉಳಿದಿಬ್ಬರಿಗೆ ಅವನನ್ನು ಕಂಡರಾಗುತ್ತಿರಲಿಲ್ಲ. ಅವರಿಬ್ಬರು ಹಾನ್ಸನಿಗೆ ಹೇಳಿದರು, “ಹಾನ್ಸ್, ನೀನು ಈ ಹಳ್ಳಿಯಲ್ಲೇ ಇದ್ದು ಬಿಡು. ಒಂದು ಕುದುರೆ ಖರೀದಿಸಲು ನಿನ್ನಿಂದ ಸಾಧ್ಯವೇ ಇಲ್ಲ.”
ಆ ದಿನ ರಾತ್ರಿ ಹಾನ್ಸ್ ಮಲಗಿದ್ದಾಗ ಉಳಿದಿಬ್ಬರೂ ಸದ್ದು ಮಾಡದೆ ಗಿರಣಿಯಿಂದ ಹೊರಟರು. ಮರುದಿನ ಹಾನ್ಸ್ ಎದ್ದು ನೋಡಿದಾಗ, ಅಲ್ಲೊಂದು ಕರಿ ಬೆಕ್ಕಿನ ಹೊರತು ಮತ್ತಾರೂ ಇರಲಿಲ್ಲ. “ಹಾನ್ಸ್, ನೀನು ಎಲ್ಲಿಗೆ ಹೋಗುತ್ತಿ?” ಎಂದು ಕರಿ ಬೆಕ್ಕು ಕೇಳಿತು. "ನಿನಗೆ ಅದೆಲ್ಲ ಯಾಕೆ? ನೀನೇನು ನನಗೆ ಸಹಾಯ ಮಾಡ್ತೀಯಾ?" ಎಂದು ಹಾನ್ಸ್ ಮರುಪ್ರಶ್ನೆ ಹಾಕಿದ.
"ಹೌದು. ನಿನಗೆ ಹಿಟ್ಟಿನ ಗಿರಣಿ ಮಾಲೀಕ ಏನು ಹೇಳಿದ್ದಾನೆಂದು ನನಗೆ ಗೊತ್ತಿದೆ. ಇನ್ನು ಐದು ವರುಷ ನೀನು ನನ್ನ ವಿಶ್ವಾಸಾರ್ಹ ಸೇವಕನಾಗಿ ದುಡಿದರೆ ನಿನಗೆ ಜಗತ್ತಿನಲ್ಲೇ ಶ್ರೇಷ್ಠ ಕುದುರೆಯನ್ನು ಉಡುಗೊರೆಯಾಗಿ ಕೊಡ್ತೇನೆ” ಎಂದು ಉತ್ತರಿಸಿತು ಕರಿ ಬೆಕ್ಕು.
ಮರುದಿನ ಆ ಕರಿ ಬೆಕ್ಕು ಹಾನ್ಸನನ್ನು ತನ್ನ ಬಂಗಲೆಗೆ ಕರೆದೊಯ್ದಿತು. ಅಲ್ಲಿ ಇತರ ಹಲವಾರು ಬೆಕ್ಕುಗಳಿದ್ದವು. ಹಾನ್ಸ್ ಅಲ್ಲಿ ಸೇವಕನಾಗಿ ಕೆಲಸ ಮಾಡತೊಡಗಿದ. ಆ ಬಂಗಲೆಯನ್ನು ಬೆಚ್ಚಗಿಡಲು ಬೆಂಕಿ ಉರಿಸಲಿಕ್ಕಾಗಿ ಕಟ್ಟಿಗೆ ಒಡೆಯುವುದೇ ಅವನ ಕೆಲಸ. ಕರಿ ಬೆಕ್ಕು ಕೊಟ್ಟ ಕೊಡಲಿ ಮತ್ತು ಗರಗಸದಿಂದ ಅವನು ಕಟ್ಟಿಗೆ ಮಾಡುತ್ತಾ ಪೇರಿಸುತ್ತಿದ್ದ.
ಹೀಗೆ ಮೂರು ವರುಷಗಳು ದಾಟಿದವು. ಆಗ ಕರಿ ಬೆಕ್ಕಿನೊಂದಿಗೆ ಹಾನ್ಸ್ ಕೇಳಿದ, "ನನ್ನ ಉಡುಗೊರೆ ನನಗೆ ಬೇಗನೇ ಸಿಗುವುದೇ?” “ಇಲ್ಲ, ಇಲ್ಲ. ನೀನು ಇನ್ನೂ ಒಂದು ಕೆಲಸ ಮಾಡಬೇಕಾಗಿದೆ” ಎನ್ನುತ್ತಾ ಕರಿ ಬೆಕ್ಕು ಹಲವು ಸಾಧನ - ಸಲಕರಣೆಗಳಿದ್ದ ಒಂದು ಪೆಟ್ಟಿಗೆಯನ್ನು ಹಾನ್ಸನಿಗೆ ಕೊಟ್ಟಿತು; ಅದರಿಂದ ಒಂದು ದೊಡ್ಡ ಮನೆ ಕಟ್ಟಬೇಕೆಂದು ಹೇಳಿತು.
ಅನಂತರ ಹಾನ್ಸ್ ಮನೆ ಕಟ್ಟುವ ಕೆಲಸದಲ್ಲಿಯೇ ತಲ್ಲೀನನಾದ. ಅವನು ದೊಡ್ಡ ಮನೆ ಕಟ್ಟಿ ಮುಗಿಸಿದಾಗ ಐದು ವರುಷಗಳು ದಾಟಿದವು. ಆಗ ಕರಿ ಬೆಕ್ಕು ಹಾನ್ಸನನ್ನು ಕುದುರೆ ಲಾಯಕ್ಕೆ ಕರೆದೊಯ್ದಿತು. ಅಲ್ಲಿ ಸುಂದರವಾದ, ದಷ್ಟಪುಷ್ಟವಾದ ಹನ್ನೆರಡು ಕುದುರೆಗಳಿದ್ದವು. ಅವು ಆ ದೇಶದಲ್ಲಿಯೇ ಶ್ರೇಷ್ಠ ಕುದುರೆಗಳಾಗಿದ್ದವು. “ನೀನೀಗ ಹಿಟ್ಟಿನ ಗಿರಣಿಗೆ ಹಿಂತಿರುಗು. ಇವತ್ತಿನಿಂದ ಮೂರನೆಯ ದಿನಕ್ಕೆ ಇವುಗಳಲ್ಲಿ ಒಂದು ಕುದುರೆ ನೀನಿದ್ದಲ್ಲಿಗೆ ಬರುತ್ತದೆ. ಆ ಕುದುರೆ ನಿನ್ನದೇ” ಎಂದಿತು ಕರಿ ಬೆಕ್ಕು.
ಅವತ್ತು ಸಂಜೆ ಹಿಟ್ಟಿನ ಗಿರಣಿಗೆ ಹಾನ್ಸ್ ಹಿಂತಿರುಗಿದಾಗ ಉಳಿದಿಬ್ಬರು ಕೆಲಸಗಾರರು ಅಲ್ಲಿದ್ದರು. ಬರಿಗೈಯಲ್ಲಿ ಬಂದ ಹಾನ್ಸನನ್ನು ನೋಡಿ ಅವರು ಹೇಳಿದರು, “ನೀನು ಕುದುರೆಯಿಲ್ಲದೆ ಬರಿಗೈಯಲ್ಲಿ ವಾಪಾಸು ಬರುತ್ತಿ ಎಂದು ನಮಗೆ ಗೊತ್ತಿತ್ತು.” ಹಾನ್ಸ್ ಅವರಿಗೆ ಕಳೆದ ಐದು ವರುಷಗಳಲ್ಲಿ ತಾನೇನು ಮಾಡಿದೆನೆಂದು ತಿಳಿಸಿದ; ಮೂರನೇ ದಿನದಂದು ಅವನ ಕುದುರೆ ಬರಲಿದೆ ಎಂದೂ ಹೇಳಿದ. ಅದನ್ನು ಕೇಳಿ ಅವರು ನಕ್ಕು ಬಿಟ್ಟರು.
ಅದಾಗಿ ಮೂರನೆಯ ದಿನದಂದು ಬೆಳಗ್ಗೆ ಸುಂದರವಾದ ಬಲಿಷ್ಠ ಕುದುರೆಗಳು ಎಳೆಯುತ್ತಿದ್ದ ಒಂದು ಮಜಬೂತಾದ ಸಾರೊಟು ಹಿಟ್ಟಿನ ಗಿರಣಿಯ ಮುಂದೆ ಬಂದು ನಿಂತಿತು. ರೂಪವತಿ ರಾಜಕುಮಾರಿಯೊಬ್ಬಳು ಆ ಸಾರೋಟಿನಿಂದ ಕೆಳಗಿಳಿದಳು. "ಹಾನ್ಸನನ್ನು ಕಾಣಬಹುದೇ?” ಎಂದವಳು ಗಿರಣಿ ಮಾಲೀಕನ ಬಳಿ ಕೇಳಿದಳು. ಮಾಲೀಕ ಹಾನ್ಸನನ್ನು ಕರೆದ.
ಹಾನ್ಸ್ ಗಿರಣಿಯಿಂದ ಹೊರಬಂದಾಗ, ಆ ರಾಜಕುಮಾರಿ ತನ್ನ ಸಾರೋಟನ್ನು ಎಳೆಯುತ್ತಿದ್ದ ಒಂದು ಶ್ರೇಷ್ಠ ಕುದುರೆಯನ್ನು ಹಾನ್ಸನಿಗೆ ಕೊಟ್ಟಳು. “ನೀನು ವಿಶ್ವಾಸಾರ್ಹ ಸೇವಕನಾಗಿ ಐದು ವರುಷ ಕೆಲಸ ಮಾಡಿದ್ದಕ್ಕೆ ಇದು ಉಡುಗೊರೆ” ಎಂದಳು ರಾಜಕುಮಾರಿ.
ಇದನ್ನೆಲ್ಲ ನೋಡುತ್ತಿದ್ದ ಹಿಟ್ಟಿನ ಗಿರಣಿ ಮಾಲೀಕ ಹೇಳಿದ, “ಹಾನ್ಸ್, ಈ ಹಿಟ್ಟಿನ ಗಿರಣಿಯೂ ನಿನ್ನದೇ.” ಯಾಕೆಂದರೆ ಆ ಕುದುರೆ ದೇಶದಲ್ಲೇ ಶ್ರೇಷ್ಠ ಕುದುರೆಯಾಗಿತ್ತು.
ಹಾನ್ಸ್ ದಂಗು ಬಡಿದು ನಿಂತಿದ್ದ. ದೀರ್ಘ ಉಸಿರೆಳೆದುಕೊಂಡು ಅವನು ಹೇಳಿದ, “ಇದೇನಿದು? ನಾನು ಒಂದು ಕರಿ ಬೆಕ್ಕಿಗಾಗಿ ಐದು ವರುಷ ಕೆಲಸ ಮಾಡಿದೆ ಹೊರತು ನಿಮ್ಮಂತಹ ಸುಂದರಿ ರಾಜಕುಮಾರಿಗಾಗಿ ಕೆಲಸ ಮಾಡಿಲ್ಲ."
“ಹಾನ್ಸ್, ನೀನು ಹೇಳೋದು ನಿಜ. ನಾನೇ ಆ ಕರಿ ಬೆಕ್ಕು ಆಗಿದ್ದೆ. ಯಾಕೆಂದರೆ ನನಗೊಂದು ಶಾಪವಿತ್ತು. ಈಗ ಶಾಪ ವಿಮೋಚನೆಯಾಗಿದೆ. ನನ್ನ ಜೊತೆ ಬಂದು ಬಿಡು ಹಾನ್ಸ್. ಯಾಕೆಂದರೆ ನೀನು ಕಟ್ಟಿದ ಮನೆ ಈಗ ಅದ್ಭುತ ಅರಮನೆಯಾಗಿ ಬದಲಾಗಿದೆ. ಈ ಹಿಟ್ಟಿನ ಗಿರಣಿಯನ್ನು ಅದರ ಮಾಲೀಕನೇ ಇಟ್ಟುಕೊಳ್ಳಲಿ” ಎಂದಳು ರಾಜಕುಮಾರಿ.
ಹಿಟ್ಟಿನ ಗಿರಣಿ ಮಾಲೀಕನಿಗೂ ಇತರ ಇಬ್ಬರು ಕೆಲಸಗಾರರಿಗೂ ವಿದಾಯ ಹೇಳಿದ ಹಾನ್ಸ್, ರಾಜಕುಮಾರಿಯ ಸಾರೋಟಿನಲ್ಲಿ ಕುಳಿತು ಆಕೆಯ ಅರಮನೆಗೆ ಬಂದ. ಅನಂತರ ಅವರು ಮದುವೆಯಾಗಿ ಬಹುಕಾಲ ಸುಖಸಂತೋಷದಿಂದ ಬಾಳಿದರು.
Comments
ಅರ್ಥಪೂರ್ಣ ಕಥೆ 'ಹಿಟ್ಟಿನ…
ಅರ್ಥಪೂರ್ಣ ಕಥೆ
'ಹಿಟ್ಟಿನ ಗಿರಣಿಯ ಹಾನ್ಸ್' ಎಂಬ ಪುಟ್ಟ ಕಥೆಯು ಮಕ್ಕಳ ಕಥೆಯೇ ಆಗಿದ್ದರೂ, ದೊಡ್ದವರೂ ಓದಿ ಅದರಲ್ಲಿನ ನೀತಿಯನ್ನು ಅರ್ಥೈಸಿಕೊಳ್ಳಬೇಕು. ಪ್ರಾಮಾಣಿಕ ಮತ್ತು ಶ್ರಮವಹಿಸಿ ದುಡಿಯುವ ಯಾರಿಗೂ ಅಂತ್ಯದಲ್ಲಿ ನಿರಾಶೆಯಾಗುವುದಿಲ್ಲ ಎಂಬ ಸತ್ಯ ಈ ಕಥೆಯಲ್ಲಿ ಅಡಗಿದೆ. ಹಾನ್ಸ್ ನ ಪ್ರಾಮಾಣಿಕತೆ ಮತ್ತು ಸ್ವಾಮಿನಿಷ್ಟೆ ಎಲ್ಲರಿಗೂ ಪ್ರೇರಣದಾಯಕ. ಕಥೆಯ ಲೇಖಕರಿಗೆ ಅಭಿನಂದನೆಗಳು.