'ಹಿಟ್ ಮ್ಯಾನ್' ಅವರಿಗೆ ವಿದಾಯ ಕೋರುತ್ತ...

'ಹಿಟ್ ಮ್ಯಾನ್' ಅವರಿಗೆ ವಿದಾಯ ಕೋರುತ್ತ...

ಕಳೆದ ಜೂನ್ ೨೯ರ ರಾತ್ರಿ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಮರೆಯಾಲಾಗದ ರಾತ್ರಿಯಾಗಿತ್ತು. ಹದಿನೇಳು ವರ್ಷಗಳ ನಂತರ ನಮ್ಮ ಕ್ರಿಕೆಟ್ ತಂಡವು ಅಂತಾರಾಷ್ಟ್ರೀಯ ಟಿ-20 ವಿಶ್ವಕಪ್ ಗೆದ್ದುಕೊಂಡು ಅಮೇರಿಕಾದಲ್ಲಿ ನಮ್ಮ ಕೀರ್ತಿ ಪತಾಕೆ ಹಾರಿಸಿದರು. ಅಂದು ನಮ್ಮ ಶಾಲಾ ದಿವಸಗಳು. ಧೋನಿ ನೇತೃತ್ವದ ಕ್ರಿಕೆಟ್ ತಂಡ ಚೊಚ್ಚಲ ಟಿ-20 ವಿಶ್ವಕಪ್ ಗೆದ್ದುಕೊಂಡ ನೆನಪುಗಳನ್ನು ನೆನಪಿಸಿದರೆ ಇನ್ನೂ ನಮಗೆ ಸಂತಸ ನೀಡುತ್ತಿದೆ. ಯುವರಾಜ್ ಸಿಂಗ್ ಅವರ ಆ ಆರು ಸಿಕ್ಸರ್ ಗಳು, ಬಾಲ್ ಔಟ್ ನಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿದ ಕ್ಷಣ, ಇರ್ಫಾನ್ ಪಠಾಣ್ ಅವರ ಮೂರು ವಿಕೆಟ್ ಗಳು ಇತ್ಯಾದಿ ನೆನಪುಗಳು ಇನ್ನೂ ಮಾಸಲಿಲ್ಲ... ಆದರೆ, ಕಣ್ಣು ಮಿಟುಕಿಸುದರಲ್ಲಿ ಹದಿನೇಳು ವರ್ಷಗಳು ಕಳೆದು ಹೋದವು. ಅಂದಿನ ನಮ್ಮ ಕ್ರಿಕೆಟ್ ತಂಡದಲ್ಲಿದ್ದ ಪರಿಚಯವಿಲ್ಲದ ಒಬ್ಬ ಕಿರಿಯ ಆಟಗಾರನಾಗಿದ್ದ ರೋಹಿತ್ ಶರ್ಮ ಅವರು ಇಂದು ನಮ್ಮ ನೆಚ್ಚಿನ  'ಹಿಟ್ ಮ್ಯಾನ್' ಆಗಿ ನಮಗೆ ಇನ್ನೊಂದು ವಿಶ್ವಕಪ್ ಗೆಲ್ಲಿಸಿ ಸಂತೋಷ ತಂದರು. ಭಾರತೀಯ ಕ್ರಿಕೆಟ್ ಅಭಿಮಾನಿಗಳು ವಿಜಯದ ಸಂಭ್ರಮದಲ್ಲಿರುವಾಗ, ತಂಡದ ನಾಯಕ ರೋಹಿತ್ ಶರ್ಮ ಅವರು ಟಿ-20 ಕ್ರಿಕೆಟಿಗೆ ವಿದಾಯ ಘೋಷಿಸಿ ನಮಗೆ ನಿರಾಸೆ ಮೂಡಿಸಿದರು. ಇನ್ನೂ ಆ ದ್ವಿಶತಕದ ಸಂಭ್ರಮಗಳು ಮತ್ತು ಆ ಲಾಂಗ್ ಶಾಟ್ ಸಿಕ್ಸರ್ ಗಳು ಕೇವಲ ಒಂದು ಕನಸಾಗಿ ಉಳಿಯಲಿದೆ!

ರೋಹಿತ್ ಗುರುನಾಥ್ ಶರ್ಮಾ ಅವರು ಭಾರತೀಯ ಅಂತರಾಷ್ಟ್ರೀಯ ಕ್ರಿಕೆಟಿಗನಾಗಿದ್ದು, ಅವರು ಟೆಸ್ಟ್, T20 ಮತ್ತು ODI ಸ್ವರೂಪಗಳಲ್ಲಿ ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದರು ಮತ್ತು ತಂಡದ ನಾಯಕತ್ವವನ್ನೂ ವಹಿಸಿದ್ದಾರೆ. ಅವರು ತಮ್ಮ ಕಾಲಾವಧಿಯ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಎಂದು ಗಣಿಸಲಾಗಿದೆ ಮತ್ತು ಸಾರ್ವಕಾಲಿಕ ಶ್ರೇಷ್ಠ ಆರಂಭಿಕ ಬ್ಯಾಟರ್‌ಗಳಲ್ಲಿ ಒಬ್ಬರು ಎಂದು ಪರಿಗಣಿಸಲ್ಪಟ್ಟ ಶರ್ಮಾ ಅವರ ಸಿಕ್ಸರ್ ಹೊಡೆಯುವ ಸಾಮರ್ಥ್ಯಗಳು ಮತ್ತು ನಾಯಕತ್ವದ ಕೌಶಲ್ಯಗಳಿಗೆ ಹೆಸರುವಾಸಿಯಾಗಿದ್ದಾರೆ. 

ಶರ್ಮಾ ಅವರು T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ರನ್, ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳು, ODI ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ದ್ವಿಶತಕಗಳು, ಕ್ರಿಕೆಟ್ ವಿಶ್ವಕಪ್‌ಗಳಲ್ಲಿ ಹೆಚ್ಚಿನ ಶತಕಗಳು ಮತ್ತು ಟ್ವೆಂಟಿ 20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳನ್ನು ಒಳಗೊಂಡ ಹಲವಾರು ಬ್ಯಾಟಿಂಗ್ ದಾಖಲೆಗಳನ್ನು ತಮ್ಮ ಹೆಸರಿನಲ್ಲಿ ದಾಖಲಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ T20 ಪಂದ್ಯಗಳಲ್ಲಿ ಐದು ಶತಕಗಳನ್ನು ಗಳಿಸಿದ ಮೊದಲ ಆಟಗಾರ ಎಂಬ ಹೆಮ್ಮೆಯೂ ಅವರ ಹೆಸರಿನಲ್ಲಿದೆ.

ಶರ್ಮ ಅವರ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡವು 2024 ಐಸಿಸಿ ಪುರುಷರ T20 ವಿಶ್ವಕಪ್ ಗೆದ್ದಿತು, ಶರ್ಮಾ ಎರಡು T20 ವಿಶ್ವಕಪ್ ಗೆದ್ದ ಏಕೈಕ ಭಾರತೀಯ ಆಟಗಾರರಾಗಿದ್ದಾರೆ. ಟಿ-20ಯಲ್ಲಿ ನಾಯಕತ್ವದ ಜವಾಬ್ದಾರಿ ವಹಿಸಿ 50 ಪಂದ್ಯಗಳನ್ನು ಗೆದ್ದ ಮೊದಲ ಮತ್ತು ಏಕೈಕ ಆಟಗಾರ ಶರ್ಮಾ ಅವರು ಆಗಿದ್ದಾರೆ. ಶರ್ಮಾ ಪ್ರಸ್ತುತ ಏಕದಿನ ಅಂತಾರಾಷ್ಟ್ರೀಯ (ODI) ಪಂದ್ಯಗಳಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ (264) ಗಳಿಸಿದ ವಿಶ್ವ ದಾಖಲೆಯನ್ನು ಹೊಂದಿದ್ದಾರೆ; ಮತ್ತು ODIಗಳಲ್ಲಿ ಮೂರು ದ್ವಿಶತಕಗಳನ್ನು ಗಳಿಸಿದ ಏಕೈಕ ಆಟಗಾರರಾಗಿದ್ದಾರೆ; ಮತ್ತು ಒಂದೇ ವಿಶ್ವಕಪ್ ಸರಣಿಯಲ್ಲಿ ಅತಿ ಹೆಚ್ಚು ಶತಕಗಳನ್ನು (ಐದು) ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. ಈ ದಾಖಲೆಗಳಿಗಾಗಿ ಅವರು 2019ರಲ್ಲಿ ICC ಪುರುಷರ ODI ವರ್ಷದ ಕ್ರಿಕೆಟಿಗ ಪ್ರಶಸ್ತಿಯಿಂದ ಗೌರವಿಸಲಾಯಿತು.

2007ರ ICC ವಿಶ್ವಕಪ್ ಟಿ-20ಗಾಗಿ ಭಾರತೀಯ ತಂಡದಲ್ಲಿ ಶರ್ಮಾ ಅವರನ್ನು ಸೇರಿಸಲಾಗಿತ್ತು; ಅವಕಾಶದ ಸದುಪಯೋಗಪಡಿಸುತ್ತ ಅವರು ಕ್ವಾರ್ಟರ್-ಫೈನಲ್‌ನಲ್ಲಿ ಅತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ 40 ಎಸೆತಗಳಲ್ಲಿ ಅಜೇಯ 50 ರನ್ ಗಳಿಸುವ ಮೂಲಕ ತಮ್ಮ ಛಾಪು ಮೂಡಿಸಿದರು. ಶರ್ಮ ಅವರ ಈ ಪ್ರದರ್ಶನದಿಂದ ಭಾರತ ತಂಡಕ್ಕೆ ಪಂದ್ಯವನ್ನು 37 ರನ್‌ಗಳಿಂದ ಗೆಲ್ಲಲು ಸಾಧ್ಯವಾಯಿತು; ಹಾಗೆಯೇ, ಶರ್ಮಾ ಅವರ 16 ಎಸೆತಗಳಲ್ಲಿ 30 (ಔಟಾಗದೆ)ಗಳಿಸಿ ಅವರು ಫೈನಲ್‌ನಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿದರು.

2 ಅಕ್ಟೋಬರ್ 2015ರಂದು, ಭಾರತ ತಂಡದ ದಕ್ಷಿಣ ಆಫ್ರಿಕಾ ಪ್ರವಾಸದ ಸಮಯದಲ್ಲಿ, ಧರ್ಮಶಾಲಾದ HPCA ಸ್ಟೇಡಿಯಂನಲ್ಲಿ ನಡೆದ ಮೊದಲ ಟಿ-20 ಅಂತರಾಷ್ಟ್ರೀಯ ಪಂದ್ಯದಲ್ಲಿ ಶರ್ಮಾ 106 ರನ್ ಗಳಿಸಿದರು. ಈ ಶತಕದೊಂದಿಗೆ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮೂರು ಮಾದರಿಗಳಲ್ಲಿ ಶತಕಗಳನ್ನು ಗಳಿಸಿದ ಎರಡನೇ ಭಾರತೀಯ ಕ್ರಿಕೆಟಿಗರಾದರು. ಡಿಸೆಂಬರ್ 2017ರಲ್ಲಿ, ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ, ಶರ್ಮಾ 35 ಎಸೆತಗಳಲ್ಲಿ T20I ಶತಕವನ್ನು ಗಳಿಸಿದರು; ಕೇವಲ 43 ಎಸೆತಗಳಲ್ಲಿ 118 ರನ್ ಗಳೊಂದಿಗೆ ಡೇವಿಡ್ ಮಿಲ್ಲರ್ ಅವರ ದಾಖಲೆಯನ್ನು ಸರಿಗಟ್ಟಿದರು. 8 ಜುಲೈ 2018 ರಂದು, ಇಂಗ್ಲೆಂಡ್‌ನಲ್ಲಿ ನಡೆದ ಸರಣಿಯಯಲ್ಲಿ, ಶರ್ಮಾ ವಿರಾಟ್ ಕೊಹ್ಲಿ ನಂತರ ಟಿ-20 ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ 2,000 ರನ್ ಗಳಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಅವರು ವಿಶ್ವಾದ್ಯಂತ ಈ ಸಾಧನೆ ಮಾಡಿದ ಐದನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

27 ಅಕ್ಟೋಬರ್ 2022ರಂದು, ಸಿಡ್ನಿ ಕ್ರಿಕೆಟ್ ಗ್ರೌಂಡಿನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ತಮ್ಮ 34ನೇ ಸಿಕ್ಸರ್ ಸಿಡಿಸುವ ಮೂಲಕ ಈ ಹಿಂದೆ ಯುವರಾಜ್ ಸಿಂಗ್ ದಾಖಲಿಸಿದ್ದ ಟಿ-20 ವಿಶ್ವಕಪ್‌ ನಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ನಿಂದ ಅತಿ ಹೆಚ್ಚು ಸಿಕ್ಸರ್‌ಗಳ ದಾಖಲೆಯನ್ನು ಶರ್ಮಾ ಮುರಿದರು. ಮೇ 2024 ರಲ್ಲಿ, ಅವರು 2024 ರ ICC ಪುರುಷರ T20 ವಿಶ್ವಕಪ್ ಪಂದ್ಯಾವಳಿಗಾಗಿ ಭಾರತದ ತಂಡದಲ್ಲಿ ನಾಯಕರಾಗಿ ಹೆಸರಿಸಲ್ಪಟ್ಟರು. ಜೂನ್ 2024ರಲ್ಲಿ, ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ, ರೋಹಿತ್ ಶರ್ಮಾ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 600 ಸಿಕ್ಸರ್‌ಗಳನ್ನು ಬಾರಿಸಿದ ಮೈಲಿಗಲ್ಲನ್ನು ಸಾಧಿಸಿದರು.

ಜುಲೈ 2022ರಲ್ಲಿ, ಶರ್ಮಾ ಅವರು ಅಂತಾರಾಷ್ಟ್ರೀಯ ಟಿ-20 ಇತಿಹಾಸದಲ್ಲಿ ತಮ್ಮ ತಂಡವನ್ನು ಸತತ 14 ಗೆಲುವಿನತ್ತ ಮುನ್ನಡೆಸಿದ ಮೊತ್ತಮೊದಲ ನಾಯಕವೆಂಬ ಗೌರವಕ್ಕೆ ಪಾತ್ರರಾದರು. ಶ್ರೀಯುತರನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಮತ್ತು ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ!!

-ಶಿಕ್ರಾನ್ ಶರ್ಫುದ್ದೀನ್ ಎಂ, ಮಂಗಳೂರು.

ಚಿತ್ರ ಕೃಪೆ: ಇಂಟರ್ನೆಟ್ ತಾಣ