ಹಿತ್ತಲ ಗಿಡ ಮದ್ದಲ್ಲ ಎಂಬ ನಮ್ಮ ಪ್ರಾದೇಶಿಕ ಜ್ಞಾನ

ಹಿತ್ತಲ ಗಿಡ ಮದ್ದಲ್ಲ ಎಂಬ ನಮ್ಮ ಪ್ರಾದೇಶಿಕ ಜ್ಞಾನ

ವಿಜ್ಞಾನವು ಸಾರ್ವತ್ರಿಕ ಮತ್ತು ಸಾರ್ವಕಾಲಿಕ ಎಂಬ ನಂಬಿಕೆ ಇದೆ. ಆದರೆ, ವಿಜ್ಞಾನ ಕೂಡ ಸಮಾಜ ಜೀವನದ ಒಂದು ಭಾಗ ಎಂಬ ಬಗ್ಗೆ ನಮ್ಮಲ್ಲಿ ಅರಿವು ಕಡಿಮೆ. ಆಯಾ ಕಾಲಘಟ್ಟದಲ್ಲಿ ಆಯಾ ಪ್ರದೇಶದ ಜನಜೀವನಕ್ಕೆ ಅನುಗುಣವಾಗಿ, ಆ ಪ್ರದೇಶದ ಕಲೆ-ಸಂಸ್ಕೃತಿ ಮಾತ್ರವಲ್ಲ, ವಿಜ್ಞಾನ ಕೂಡ ಬೆಳೆದು ಬರುತ್ತದೆ. ಈ ಅರ್ಥದಲ್ಲಿ, ವಿಜ್ಞಾನಕ್ಕೆ ಒಂದು ಪ್ರಾದೇಶಿಕ ಆಯಾಮ ಇದೆ ಎಂದರೆ ತಪ್ಪಾಗಲಾರದು. ಸುಮಾರು ಸಾವಿರ ವರ್ಷಗಳ ಹಿಂದೆ ವಿಜ್ಞಾನ ಮತ್ತು ತತ್ವಜ್ಞಾನ ಬೇರೆ ಆಗಿರಲಿಲ್ಲ. ಎಲ್ಲವೂ ಸತ್ಯವನ್ನು ಹುಡುಕುವ ಒಂದು ದಾರಿಯಾಗಿದ್ದವು.

ಇದು, ವಿಜ್ಞಾನವನ್ನು ಶಾಸ್ತ್ರೀಯವಾಗಿ ನೋಡುವ ರೀತಿಯಾದರೆ, ಈ ರೀತಿಯ ಶಾಸ್ತ್ರೀಯ ಆಯಾಮದ ಹೊರಗೆ ಕೂಡ ವಿಜ್ಞಾನದ ಬೆಳವಣಿಗೆ ನಡೆಯುತ್ತದೆ. ಕುಶಲಕರ್ಮಿಗಳು, ಜನಪದರು ಮಾಡಿರುವ ಆವಿಷ್ಕಾರಗಳು ಇದಕ್ಕೆ ಉದಾಹರಣೆ. ಗಾಣದಲ್ಲಿ ಎತ್ತನ್ನು ಬಳಸಿ ಎಣ್ಣೆ ತೆಗೆಯುವುದು, ರಾಗಿ ಬೀಸುವುದು, ಅಣೆಕಟ್ಟು ಕಟ್ಟುವುದು, ಪ್ರಕೃತಿಯಲ್ಲಿ ಲಭ್ಯವಿರುವ ವಸ್ತುಗಳನ್ನು ಉಪಯೋಗಿಸಿ ಸೇತುವೆ ನಿರ್ಮಾಣ– ಇವೆಲ್ಲವೂ ವಿಜ್ಞಾನ ಮತ್ತು ತಂತ್ರಜ್ಞಾನವು ಜನಪದ ಸಂದರ್ಭಗಳಲ್ಲಿ ಹುಟ್ಟಿಕೊಂಡಿರುವುದಕ್ಕೆ ಪುರಾವೆಗಳಾಗಿವೆ. ಹಾಗೆಂದು, ರಾಕೆಟ್‌ ತಂತ್ರಜ್ಞಾನದಿಂದ ಹಿಡಿದು ವಿಜ್ಞಾನ–ತಂತ್ರಜ್ಞಾನದ ಎಲ್ಲವೂ ನಮ್ಮಲ್ಲಿ ಹಿಂದೆಯೇ ಇದ್ದವು ಎಂದು ಹೇಳುವ ಗೊಡ್ಡು ವಾದ ಇದಲ್ಲ.

ಮೊದಲು ವಿಜ್ಞಾನ, ಆಮೇಲೆ ತಂತ್ರಜ್ಞಾನ ಎನ್ನುವುದು ಕೂಡ ಸರಿಯಲ್ಲ. ಹಲವಾರು ತಂತ್ರಜ್ಞಾನಗಳು ಕೂಡ ವಿಜ್ಞಾನದ ಆವಿಷ್ಕಾರಕ್ಕೆ ಬುನಾದಿಯಾಗಿವೆ. ಖಡ್ಗಗಳಲ್ಲೆಲ್ಲಾ ಗಟ್ಟಿಯಾದ ಖಡ್ಗ ಎಂಬ ಪ್ರತೀತಿ ಪಡೆದಿತ್ತು ದಮಾಸ್ಕಸ್ ಖಡ್ಗ. ಸಿರಿಯಾ ದೇಶದ ರಾಜಧಾನಿ ದಮಾಸ್ಕಸ್. ‘ದಮಾಸ್ಕಸ್ ಉಕ್ಕು’ ಎಂದೇ ಪ್ರಸಿದ್ಧವಾಗಿದ್ದ ಉಕ್ಕಿನಿಂದ ಈ ಖಡ್ಗವನ್ನು ತಯಾರಿಸ

ಲಾಗುತ್ತಿತ್ತು. ಆದರೆ ಈ ಉಕ್ಕು ತಯಾರಾಗುತ್ತಿದ್ದದ್ದು ಕೇರಳದಲ್ಲಿ. ಕಬ್ಬಿಣಕ್ಕೆ ಇಂಗಾಲವನ್ನು ಸೇರಿಸಿದರೆ ಉಕ್ಕು ತಯಾರಾಗುತ್ತದೆ. ಕೇರಳದಲ್ಲಿ ಇದನ್ನು ತಯಾರಿಸುತ್ತಿದ್ದ ರೀತಿ ಅತ್ಯಂತ ಕುತೂಹಲಕರ. ಕುಲುಮೆಯಲ್ಲಿ ಕುದಿದು ಎರಕಗೊಳ್ಳುತ್ತಿದ್ದ ಕಬ್ಬಿಣಕ್ಕೆ, ಕಮ್ಮಾರರು ಹುಲ್ಲನ್ನು ಸೇರಿಸುತ್ತಿದ್ದರು. ಅತಿಯಾದ ಶಾಖಕ್ಕೆ ಹುಲ್ಲು ಭಸ್ಮವಾಗಿ ಕಬ್ಬಿಣದ ಪದರ ಪದರಗಳಲ್ಲಿ ಇಂಗಾಲದ ಕಣಗಳು ಸೇರಿ ಅತ್ಯಂತ ಕಠಿಣವಾದ ಉಕ್ಕು ತಯಾರಾಗುತ್ತಿತ್ತು. ಈ ಖಡ್ಗದ ಮೇಲ್ಮೈಯಲ್ಲಿ ವಿಶಿಷ್ಟವಾದ ವಿನ್ಯಾಸಗಳಿರುತ್ತಿದ್ದವು. ಬಾಗುವ, ಬಳುಕುವ ಗುಣ ಹೊಂದಿದ್ದ ಈ ಖಡ್ಗ ತುಂಡರಿಸುವುದು ಸಾಧ್ಯವೇ ಇಲ್ಲದಷ್ಟು ಕಠಿಣವೂ ಆಗಿತ್ತು. ಈ ಪದರಗಳಲ್ಲಿ ಇಂಗಾಲದ ನ್ಯಾನೊ ಟ್ಯೂಬುಗಳಿವೆ ಎನ್ನಲಾಗುತ್ತದೆ. ಈ ಬಗ್ಗೆ ಕೆಲವು ಸಂಶೋಧನೆಗಳನ್ನು ಮಾಡಲಾಗಿದೆ. ಈ ನ್ಯಾನೊ ಟ್ಯೂಬ್‌ಗಳು ಸಸ್ಯಜನ್ಯ ಎಂಬುದಕ್ಕೆ ಪುರಾವೆ ಇದೆ. ವಿಶ್ವವಿದ್ಯಾಲಯದ ಮೆಟ್ಟಿಲೇರಿದ ಯಾವ ವ್ಯಕ್ತಿಯೂ ಯೋಚನೆ ಮಾಡಲಾಗದ ಈ ತಂತ್ರ ನಮ್ಮನ್ನು ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಾದೇಶಿಕ ಆಯಾಮದ ಬಗ್ಗೆ ಯೋಚನೆ ಮಾಡುವಂತೆ ಪ್ರೇರೇಪಿಸುತ್ತದೆ. ಇಂತಹ ಹಲವಾರು ಉದಾಹರಣೆಗಳನ್ನು ಇತಿಹಾಸದಲ್ಲಿ ಕಾಣಬಹುದು.

ವೈಜ್ಞಾನಿಕ ರಂಗದಲ್ಲಿ ಬಹಳ ಬೆಳವಣಿಗೆಯನ್ನು ಸಾಧಿಸಿರುವ ಫ್ರಾನ್ಸ್‌, ಜರ್ಮನಿ, ಚೀನಾ ಮತ್ತು ರಷ್ಯಾದಂತಹ ದೇಶಗಳಲ್ಲಿ ಪ್ರಾದೇಶಿಕ ಭಾಷೆಗಳ ಮೂಲಕ ವಿಜ್ಞಾನವನ್ನು ಕಲಿಯುವುದು ಮತ್ತು ಕಲಿಸುವುದನ್ನು ಗಮನಿಸಬಹುದು. ಭಾಷೆ, ಸಂಸ್ಕೃತಿ ಮತ್ತು ವಿಜ್ಞಾನ ಎಲ್ಲವೂ ಒಂದಕ್ಕೊಂದು ಅವಿನಾಭಾವ ಸಂಬಂಧ ಹೊಂದಿರುವುದನ್ನು ಗುರುತಿಸಬಹುದು. ವೈಜ್ಞಾನಿಕ ಯೋಚನಾ ಕ್ರಮವನ್ನು ಕಟ್ಟಿಕೊಡುವಲ್ಲಿ ನಮ್ಮ ಭಾಷೆ, ಕಲೆ-ಸಂಸ್ಕೃತಿ, ಜನಪದದ ಅರಿವಿಗೆ ಇರುವ ಪಾತ್ರ ಬಹಳ ಮಹತ್ವದ್ದಾಗಿದೆ.

ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಅತ್ಯುನ್ನತ ಮಟ್ಟದಲ್ಲಿ ಬೆಳೆಯುವ ಸಾಧ್ಯತೆಗಳೆಲ್ಲ ಇದ್ದವು. ಆದರೆ, ಅದು ಸಾಕಾರಗೊಳ್ಳಲಿಲ್ಲ. ಈ ಬಗ್ಗೆ ಗಂಭೀರವಾಗಿ ಯೋಚನೆ ಮಾಡುವ ಅವಶ್ಯಕತೆ ಇದೆ. ಒಂದು ಕಾಲಘಟ್ಟ

ದಲ್ಲಿ, ನಮ್ಮ ದೇಶದಲ್ಲಿ ಇದ್ದ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಕಡೆಗಣಿಸಿ, ಪಾಶ್ಚಿಮಾತ್ಯ ಯೋಚನಾ ಕ್ರಮ, ಪಶ್ಚಿಮದಿಂದ ಬೆಳೆದುಬಂದ ವಿಜ್ಞಾನವನ್ನು ಮಾತ್ರವೇ ವಿಜ್ಞಾನ ಎಂದು ಪರಿಗಣಿಸಿ ಪ್ರಾದೇಶಿಕ ಜ್ಞಾನವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿತ್ತು. 64 ವಿದ್ಯೆಗಳನ್ನು ಪ್ರಪಂಚಕ್ಕೆ ನೀಡಿದ ನಮ್ಮ ದೇಶದಲ್ಲಿ ಅವುಗಳನ್ನು ಕಲಿಸುತ್ತಿದ್ದ ಶಾಲೆಗಳನ್ನು ಬ್ರಿಟಿಷರು ಕ್ರಮಬದ್ಧವಾಗಿ ಧ್ವಂಸಗೊಳಿಸಿದರು. ಅವುಗಳ ಬದಲಿಗೆ, ಕಾರಕೂನರನ್ನಷ್ಟೇ ತಯಾರಿಸುವ ಶಾಲೆಗಳನ್ನು ತೆರೆದರು (ಬ್ರಿಟಿಷ್‌ ದಾಖಲೆಗಳಲ್ಲಿ ಇದರ ಉಲ್ಲೇಖ ಇದೆ). ಹಲವಾರು ಯೋಚನಾ ಕ್ರಮಗಳು, ಜನಪದ ಕಲೆಗಳು, ವಿಜ್ಞಾನ, ಕುಶಲಕರ್ಮಿಗಳ ಜ್ಞಾನ ಹೀಗೆ ನಾಶವಾಯಿತು.

ನಮ್ಮ ದೇಶದಲ್ಲಿ ಜ್ಞಾನಶಾಖೆಗಳನ್ನು ದಾಖಲಿಸುವ ಪದ್ಧತಿಯಾಗಲೀ ಮಾಧ್ಯಮವಾಗಲೀ ಇರಲಿಲ್ಲ. ಸಾರ್ವತ್ರಿಕ, ಸಾರ್ವಕಾಲಿಕ ಎಂಬ ಶೋಕಿಯಲ್ಲಿ ಪ್ರಾದೇಶಿಕತೆ ಬಡವಾಯಿತು. ಇದನ್ನು ನಂಬಿದ ಜನ, ವಿಶ್ಲೇಷಣಾತ್ಮಕ ಜ್ಞಾನ ಮಾತ್ರ ವಿಜ್ಞಾನಕ್ಕೆ ಮುಖ್ಯ ಎಂಬ ನಂಬಿಕೆಯಲ್ಲಿ ತಮ್ಮ ಜನಪದ ಯೋಚನಾ ಕ್ರಮಗಳನ್ನು ಮರೆತು ಪಾಶ್ಚಿಮಾತ್ಯ ಯೋಚನಾ ಕ್ರಮವನ್ನು ತಮ್ಮದಾಗಿಸಿಕೊಳ್ಳುವ ಮತ್ತು ಅವರ ರೀತಿಗಳನ್ನು ನಕಲು ಮಾಡುವ ಕೆಲಸದಲ್ಲಿ ನಿರತರಾದರು. ಈ ಪ್ರಯತ್ನದಲ್ಲಿ ಹಲವಾರು ವಿಜ್ಞಾನಿಗಳು ಪಾಶ್ಚಿಮಾತ್ಯ ಶಿಕ್ಷಣವನ್ನು ಪಡೆದು, ಅದನ್ನು ತಕ್ಕಷ್ಟು ಮಟ್ಟಿಗೆ ಅರ್ಥೈಸಿಕೊಂಡು, ತಮ್ಮ ಜ್ಞಾನದಿಂದ ಆವಿಷ್ಕಾರಗಳನ್ನು ಮಾಡಿ ಪ್ರಸಿದ್ಧರಾದರು. ತಂತ್ರಜ್ಞಾನ ಮತ್ತು ವಿಜ್ಞಾನ ರಂಗಗಳಲ್ಲಿ ಹಲವಾರು ಕೊಡುಗೆಗಳನ್ನು ನೀಡಿದರು. ಆದರೆ, ವಿಶಾಲವಾದ ಈ ದೇಶದ ಕುಶಲ ಕರ್ಮಿಗಳಲ್ಲಿ, ಜನಸಾಮಾನ್ಯರಲ್ಲಿ ಹಾಸುಹೊಕ್ಕಾಗಿದ್ದ ಜನಪದ ಜ್ಞಾನ, ತಂತ್ರಜ್ಞಾನದ ಯೋಜನೆಗಳನ್ನು, ಪದ್ಧತಿಗಳನ್ನು ಆಮೂಲಾಗ್ರವಾಗಿ ಕಡೆಗಣಿಸಲಾಯಿತು. ಪ್ರಾದೇಶಿಕ ಕೌಶಲಗಳನ್ನು ಮಲತಾಯಿ ಧೋರಣೆಯಿಂದ ನೋಡುವಂತಾಗಿ, ಅವಕ್ಕೆ ಈ ಹೊಸ ಯೋಚನಾಕ್ರಮದಲ್ಲಿ ಯಾವುದೇ ಆಸ್ಪದವಾಗಲೀ ಅವಕಾಶವಾಗಲೀ ಸಿಗದೆ, ಅವು ಕ್ರಮೇಣ ಮುಖ್ಯವಾಹಿನಿಯ ಆಚೆಗೆ

ಸರಿಯಲೇಬೇಕಾಯಿತು. ವಿಜ್ಞಾನವು ವಿಶ್ವವಿದ್ಯಾಲಯಗಳಿಗೆ ಸೀಮಿತವಾಗತೊಡಗಿತು.

ವೈಜ್ಞಾನಿಕ ತರಬೇತಿಯೂ ಇಲ್ಲದ, ಪ್ರಾದೇಶಿಕ ಜ್ಞಾನದ ಅರಿವೂ ಇಲ್ಲದ ನಮ್ಮ ಎಡಬಿಡಂಗಿತನದಿಂದಾಗಿ ದೇಶದ ವೈಜ್ಞಾನಿಕ ಪ್ರಗತಿಗೆ ಯಾವ ನೆರವೂ ದೊರೆಯದಂತಾಗಿದೆ. ಶಾಲೆಗಳಲ್ಲಿ ಉರು ಹೊಡೆಯುವುದಷ್ಟೇ ಮುಖ್ಯವಾಗಿರುವ, ಪರೀಕ್ಷೆಗಾಗಿ ಮಾತ್ರ ಓದು ಎಂಬ ಶಿಕ್ಷಣವನ್ನು ನೆಚ್ಚಿಕೊಂಡಿರುವ, ಮಗನಿಗೆ ಶೇ 99ರಷ್ಟು ಅಂಕ ಬಂದರೆ ಆತ ಜ್ಞಾನಿ ಎಂದು ನಂಬಿದವರೇ ನಮ್ಮಲ್ಲಿ ಹೆಚ್ಚು. ಹೀಗಾಗಿಯೇ, ನಮ್ಮ ದೇಶದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬೆಳೆಸುವ ಕುರಿತು ಯೋಚನೆ ಮಾಡುವುದೇ ಕಷ್ಟವಾಗುತ್ತಿದೆ.

ದೇಶದ ಹಲವಾರು ಕಂಪನಿಗಳು ಮಾರುಕಟ್ಟೆಯ ಉತ್ಪನ್ನಗಳನ್ನು ನಕಲು ಮಾಡಿ ತಯಾರಿಸುತ್ತಿವೆಯೇ ವಿನಾ ಆವಿಷ್ಕಾರಗಳಾಗಲೀ ಸ್ವಂತಿಕೆಯ ಉತ್ಪನ್ನಗಳಾಗಲೀ ಕಂಡುಬರುತ್ತಿಲ್ಲ. ಸಾಧಾರಣವಾದ ಒಂದು ಸ್ಕ್ರೂವಿನಿಂದ ಪ್ರಾರಂಭಗೊಂಡು ಅತ್ಯಂತ ಕ್ಲಿಷ್ಟವಾದ ವೈದ್ಯಕೀಯ ಉಪಕರಣಗಳನ್ನು ಕೂಡ ಆಮದು ಮಾಡಿಕೊಳ್ಳಲಾಗುತ್ತದೆ. ನಾವೇ ಆವಿಷ್ಕರಿಸಿ ತಯಾರಿಸಬಹುದಾದ ಯೋಚನಾ ಕ್ರಮಗಳಿಗೆ ತರಬೇತಿ ನೀಡಲಾಗುತ್ತಿಲ್ಲ.

ಶಿಕ್ಷಣದ ಆರಂಭಿಕ ಹಂತದಲ್ಲಿಯೇ ಮಕ್ಕಳಲ್ಲಿ ಕುತೂಹಲ ಮೂಡಿಸುವ, ವಿಜ್ಞಾನ ಕಲಿಕೆಯನ್ನು ಉತ್ತೇಜಿಸುವ, ಪ್ರಶ್ನಿಸುವ ಮನೋಭಾವ ಬೆಳೆಸುವ ಪದ್ಧತಿಯನ್ನು ನಾವು ಅಳವಡಿಸಿಕೊಳ್ಳಬೇಕಿದೆ. ಯೋಚನಾಶಕ್ತಿಯ ಬೆಳವಣಿಗೆಗೆ ಪೂರಕವಾದ ಓದು, ಕ್ರಮಬದ್ಧವಾದ ವೈಜ್ಞಾನಿಕ ಅಧ್ಯಯನ ಮತ್ತು ತರಬೇತಿ, ಪ್ರಾದೇಶಿಕ ಜ್ಞಾನ ಮತ್ತು ಯೋಚನಾ ಕ್ರಮಕ್ಕೆ ಮನ್ನಣೆ, ಮಾತೃಭಾಷೆಯಲ್ಲಿ ಕಲಿಕೆ ಈಗ ನಮಗೆ ಬೇಕಿರುವ ವಿಚಾರಗಳು. ಅತ್ಯುತ್ತಮ ತರಬೇತಿ ಪಡೆದ ಶಿಕ್ಷಕರು, ಸ್ಥಳೀಯವಾಗಿ ತಯಾರಾದ ಉತ್ಪನ್ನಗಳಿಗೆ ಬೆಂಬಲ, ಇಂತಹ ಉತ್ಪನ್ನ ತಯಾರಿಸಲು ಬೇಕಿರುವ ವಿಜ್ಞಾನ, ತಂತ್ರಜ್ಞಾನ ಮತ್ತು ಕೌಶಲದ ತರಬೇತಿಯು ಈ ದಿಸೆಯಲ್ಲಿ ಬಹುದೊಡ್ಡ ಬದಲಾವಣೆ ತರಬಲ್ಲದು.

ಉದ್ಯೋಗ ಮತ್ತು ಶಿಕ್ಷಣ ರಂಗದ ನಡುವಣ ಕೃತಕ ಅಂತರವನ್ನು ನಿವಾರಿಸುವ ಕೆಲಸವೂ ಆಗಬೇಕಿದೆ. ಬೃಹತ್‌ ಯೋಜನೆಗಳು ಅಥವಾ ಅಂತಹ ಯೋಜನೆಗಳ ಘೋಷಣೆಯ ಮೂಲಕ ವಿಜ್ಞಾನವಾಗಲೀ ತಂತ್ರಜ್ಞಾನ

ವಾಗಲೀ ಬೆಳೆಯುವುದು ಸಾಧ್ಯವಿಲ್ಲ. ಪ‍್ರಾಥಮಿಕ ಹಂತದಲ್ಲಿಯೇ ಶಿಕ್ಷಣದಲ್ಲಿ ತರುವ ಬದಲಾವಣೆಯಿಂದ ದೇಶದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಗೆ ಅಡಿಪಾಯ ಹಾಕಬಹುದು.

ಲೇಖನ ಕೃಪೆ: ಶಿವಯೋಗಿ ಎಂ.ಬಿ. 

ಸಹ ಪ್ರಾಧ್ಯಾಪಕ,

ಅಮೃತ ವಿಶ್ವ ವಿದ್ಯಾಪೀಠಂ, ಕೊಯಮತ್ತೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ