ಹಿಮಗಿರಿಯ ಗರ್ಭದಲ್ಲಿ

ಹಿಮಗಿರಿಯ ಗರ್ಭದಲ್ಲಿ

ಪುಸ್ತಕದ ಲೇಖಕ/ಕವಿಯ ಹೆಸರು
ರವಿ ಬೆಳಗೆರೆ
ಪ್ರಕಾಶಕರು
ಭಾವನಾ ಪ್ರಕಾಶನ, ಪದ್ಮನಾಭನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೨೦.೦೦, ಮುದ್ರಣ: ಡಿಸೆಂಬರ್ ೨೦೨೦

ಖ್ಯಾತ ಪತ್ರಕರ್ತ ರವಿ ಬೆಳಗೆರೆ ಅವರ ನಿಧನದ ಬಳಿಕ ಹೊರ ಬಂದ ಪುಸ್ತಕವಿದು. ಬಹಳ ಹಿಂದೊಮ್ಮೆ ಪ್ರಕಟವಾಗಿದ್ದರೂ, ಪ್ರತಿಗಳು ಈಗ ಮುಗಿದಿವೆ ಎಂದು ರವಿ ಬೆಳಗೆರೆಯವರು ಬರೆದಿದ್ದರು. ‘ಹಿಮಗಿರಿಯ ಗರ್ಭದಲ್ಲಿ' ಪುಸ್ತಕವು ಒಂದು ಪ್ರವಾಸ ಕಥನ. ರವಿ ಬೆಳಗೆರೆಯವರು ತಮ್ಮ ಅರುಣಾಚಲ ಪ್ರದೇಶದ ಪ್ರವಾಸದ ಅನುಭವಗಳನ್ನು ತಮ್ಮದೇ ಆದ ಶೈಲಿಯಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಅರುಣಾಚಲ ಪ್ರದೇಶಕ್ಕೆ ಹೋಗುವುದು ಅಷ್ಟೊಂದು ಸುಲಭವಿಲ್ಲ. 

ಲೇಖಕರೇ ಬರೆದಂತೆ “.... ಈ ಮುಂಚೆ ನಾನು ಅರುಣಾಚಲವನ್ನು ಅಭೇಧ್ಯ, ಅಲ್ಲಿಗೆ ನೀವು ಸಲೀಸಾಗಿ ಹೋಗಲಾರಿರಿ ಎಂದದ್ದು ಕೇವಲ ನಿಸರ್ಗದ ಅಭೇದ್ಯತೆಯ ಸಂಬಂಧದಲ್ಲಿ ಅಲ್ಲ. ಅರುಣಾಚಲ ನಿರ್ಭಂಧಿತ ರಾಜ್ಯ. ಒಳಕ್ಕೆ ಪ್ರವೇಶ ಸುಲಭವಲ್ಲ. ಗೋಹಾಟಿ ಅಥವಾ ತೇಜಪುರದಲ್ಲಿರುವ ಅರುಣಾಚಲ ಪ್ರದೇಶದ ಲೇಸನ್ ಆಫೀಸರ್ ನಿಂದ Inner Line Permit ಪಡೆಯಬೇಕು. ಯಥಾಪ್ರಕಾರ ಕಿರಿಕಿರಿ, ಲಂಚಕೋರ ಅಧಿಕಾರಿಗಳು, ಪೀಡಿಸುವ ಪೋಲೀಸರು, ಭಾಲೂಕ್ ಪಾಂಗ್ ನ ಚೆಕ್ ಪೋಸ್ಟ್ ನಲ್ಲಿ ಈ ಪರ್ಮಿಟ್ ನ ತಪಾಸಣೆಯಾಗುತ್ತದೆ. ಚೀಟಿಯಿಲ್ಲದಿದ್ದರೆ ಮುಲಾಜಿಲ್ಲದೇ ಬಸ್ಸಿನಿಂದ ಇಳಿಸಿ ಬಿಡುತ್ತಾರೆ.

ಅರುಣಾಚಲ ಪ್ರದೇಶ್ - ಭಾರತ ಚೀನಾ, ಭೂತಾನ್ ಗಳ ಗಡಿಗಳಲ್ಲಿ ಉದ್ದಕ್ಕೆ ಮೈಚೆಲ್ಲಿ ಮಲಗಿರುವ ರಾಜ್ಯವಾದುದರಿಂದ ಈ ನಿಯಮ, ನಿರ್ಭಂಧನೆ. ಸರಿ, ಹೇಗೋ ಮಾಡಿ Inner Line Permit ಗಿಟ್ಟಿಸಿಕೊಂಡು ರಾಜ್ಯದೊಳಗೆ ಹೊಕ್ಕಿರಿ ಎಂದೇ ಇಟ್ಟುಕೊಳ್ಳಿ: ಮುಂದಕ್ಕೆ ಹೋಗಲು ಯಾವ ಸೌಕರ್ಯವಿದೆ? ಅಲ್ಲಿ ನಿತ್ಯ ಬಸ್ಸುಗಳು ಓಡಾಡುವುದಿಲ್ಲ. ನಾನು ಹೋಗಬೇಕಾದ ತವಾಂಗ್ ಜಿಲ್ಲೆಯ ‘ಲುಮ್ಲಾ’ ಪ್ರದೇಶಕ್ಕೆ ವಾರಕ್ಕೊಂದೋ, ಎರಡು ವಾರಕ್ಕೊಂದೋ ಸಾರಿಗೆ ಸಂಸ್ಥೆಯ ಬಸ್ಸುಗಳು ಹೋಗುತ್ತವೆ. ಅದರದೇನೂ ನೆಚ್ಚಿಗೆಯಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಬೋಮ್ ಡೀಲಾ ನಗರದಿಂದ ಮುಂದೆ ೧೪,೦೦೦ ಅಡಿ ಎತ್ತರದ ‘ಸೇಲಾ ಪಾಸ್' ಹಿಮಶಿಖರವನ್ನು ಈ ವಾಹನಗಳು ಹಾಯ್ದುಹೋಗಬೇಕು. ಹಿಮಪಾತ ಹೆಚ್ಚಾದರೆ, ಬಸ್ಸು ಕೆಟ್ಟು ನಿಂತರೆ, ಲ್ಯಾಂಡ್ ಸ್ಲೈಡಿಂಗ್ ಆಗಿ ಬಿಟ್ಟರೆ ನಮ್ಮ ಬದುಕು ನಾಯಿಪಾಡು. ಹಿಮದಲ್ಲಿ ಸುಟ್ಟು ಕಮರಿಹೋಗುತ್ತೇವೆ. ಬೆಂಕಿ ಸುಟ್ಟಷ್ಟೇ ಪ್ರಖರವಾಗಿ, ಚುರುಕಾಗಿ ಹಿಮವೂ ಸುಡುತ್ತದೆ. ಬೆಂಕಿಗೆ ಬೆಂದ ಕೈ-ಕಾಲು ರಿಪೇರಿ ಮಾಡಬಹುದು. ಹಿಮದಿಂದಾಗುವ ಫ್ರಾಸ್ಟ್ ಬೈಟ್ ಗೆ ಕಾಲು ಕತ್ತರಿಸುವುದೊಂದೇ ದಾರಿ. 

ಲೇಖಕರು ಮುಂದುವರೆದು ಅರುಣಾಚಲ ಪ್ರದೇಶದ ಜನರ ರೀತಿ ರಿವಾಜುಗಳ ಬಗ್ಗೆಯೂ ತಿಳಿಸಿಕೊಡುತ್ತಾರೆ. ಅರುಣಾಚಲದ ಮೂಲನಿವಾಸಿಗಳನ್ನು ‘ಮೊನ್ ಪಾ’ಗಳು ಎಂದು ಕರೆಯುತ್ತಾರೆ. ಯಾವುದೇ ಸರಕಾರ ಆಡಳಿತ ನಡೆಸಲಿ, ಮೊನ್ ಪಾಗಳು ತಮ್ಮದೇ ಆದ ಮುಖಂಡರನ್ನು ನೇಮಿಸುವ ಸಂಪ್ರದಾಯವನ್ನು ಇಟ್ಟುಕೊಂಡಿದ್ದಾರೆ. ಮೊದಲು ‘ಗೋಮಿ' ಎಂದು ಕರೆಯುತ್ತಿದ್ದ ಈ ಮುಖಂಡರನ್ನು ಈಗ ‘ಗಾಂವ್ ಬೂಢ' ಎಂದು ಕರೆಯುತ್ತಾರೆ. ಸರಕಾರದ ಉಸ್ತುವಾರಿಯಲ್ಲೇ ಈ ಕಾರ್ಯ ನಡೆಯುತ್ತದೆ. ಹೀಗೆ ನೇಮಕವಾದ ವ್ಯಕ್ತಿ ಜಿಲ್ಲಾಡಳಿತದ ವತಿಯಿಂದ ನೇಮಕಾತಿ ಪತ್ರ ಹಾಗೂ ಒಂದು ಕೆಂಪು ಉಣ್ಣೆಯ ಕೋಟು ಪಡೆಯುತ್ತಾನೆ. ಇವರಿಗೆ ಸಂಬಳವೇನೂ ಇರುವುದಿಲ್ಲ. ಅಧಿಕಾರಾವಧಿ ಮೂರು ವರ್ಷವಾದರೂ ಕೆಲವೊಮ್ಮೆ ದಶಕಗಳು ಸಂದರೂ ಇವರು ಬದಲಾಗುವುದಿಲ್ಲ. ಇಲ್ಲಿಯ ಗ್ರಾಮ ಸಭೆಗಳೀಗೆ ‘ಮಂಗ್ಮಾ’ಗಳೆಂದು ಕರೆಯುತ್ತಾರೆ. 

ಇಲ್ಲಿನ ದುರ್ಗಾ ಮಂದಿರ ಮತ್ತು ನಾಗಾ ಮಂದಿರಗಳ ಪ್ರಾಮುಖ್ಯತೆಯನ್ನು ಪುಸ್ತಕ ಓದಿಯೇ ತಿಳಿಯಬೇಕು. ಅರುಣಾಚಲ ಪ್ರದೇಶದಲ್ಲಿರುವ ಕನ್ನಡಿಗರ ಬಗ್ಗೆ, ಮೊನ್ ಪಾದ ಮಾಟಗಾತಿಯರ ಬಗ್ಗೆ, ನಾಗಮಂದಿರದ ಸುತ್ತಲಿನ ನಾಗರ ಹಾವುಗಳ ಬಗ್ಗೆ ಓದುವಾಗ ಮೈ ಜುಮ್ಮೆನಿಸುತ್ತದೆ. ಮೊನ್ ಪಾ ಜನಾಂಗದಲ್ಲಿ ಇರುವ ಹುಡುಗಿಯರು ಮದುವೆಯಾಗಲು ಒಂದು ವಿಚಿತ್ರ ಸಂಪ್ರದಾಯವಿದೆ. ಬನ್ನಿ ಲೇಖಕರ ಮಾತಿನಲ್ಲೇ ಅರಿಯುವ..

“....... ಮೊನ್ ಪಾಗಳ ನಡುವೆ ಪ್ರೀತಿ ಮಿಂಚಿನಂತೆ ಮೂಡಿ ಬಿಡುತ್ತದೆ. ಯಾವುದೇ ಪೀಠಿಕೆ, ಪ್ರಸ್ತಾವನೆ, ನಖರೆ-ನಾಜೂಕುಗಳಿಲ್ಲದೆ ಹಿಮಶಿಖರದಲ್ಲಿ ಪುಟಿಯುವ ಸಣ್ಣ ಝರಿಯಂತೆ ಇಲ್ಲಿ ಪ್ರೀತಿ ಮೂಡುತ್ತದೆ. ಕಣ್ಣಲ್ಲೇ ಮಾತನಾಡುವ ಹುಡುಗಿಯರು, ಹುಡುಗರ ಕೂದಲಿಲ್ಲದ ಎದೆಗೆ ಒರಗಿ ನಿಂತು, ನಿಂತಲ್ಲೇ ದ್ರವಿಸಿ ತಾಯಿಯಾಗುತ್ತಾರೆ. ಮಕ್ಕಳು ಹೆತ್ತ ನಂತರವೇ ಅವರ ಮದುವೆ! ಆ ಮಗುವಿನ ಜನನಕ್ಕೆ ಕಾರಣನಾದವನೇ ಅವಳನ್ನು ಮದುವೆಯಾಗಬೇಕೆಂದಿಲ್ಲ. ಯಾರಾದರೂ ಆಗಬಹುದು. ಯಾರೂ ಆಗದಿದ್ದರೂ ಅದು ವಿಶೇಷವಲ್ಲ. ಅಪ್ಪನ ಹೆಸರೇ ಗೊತ್ತಿಲ್ಲದೇ ಹುಟ್ಟುವ ಮಗು, ಎಂದಿಗೂ ಅವಮಾನ ಅನುಭವಿಸುವುದಿಲ್ಲ. ಎಲ್ಲ ಮಕ್ಕಳಂತೆ ಬೆಳೆದು ಅರಳಿಕೊಳ್ಳುವ ಈ ಮಗುವಿಗೆ ಎಲ್ಲರಿಂದಲೂ ಪ್ರೀತಿ ದೊರೆಯುತ್ತದೆ. ಹೀಗೆ ತಂದೆಯ ಹೆಸರಿಲ್ಲದೇ ಹುಟ್ಟಿದ ಮಗುವನ್ನು ತೋರಿಸಿ ‘ಇಸ್ ಬಚ್ಚೇ ಕಾ ಬಾಪ್ ಕೈನ್ ಹೈ?’ ಎಂದು ಕೇಳಿದರೆ, ಅದರ ತಾಯಿ ಬಟ್ಟಲುಗಣ್ಣು ರಪರಪನೆ ಬಡಿದು ಅಡ್ಡಡ್ಡ ತಲೆಯಾಡಿಸುತ್ತಾಳೆ. ಒತ್ತಾಯಿಸಿ ಕೇಳಿದರೆ, ‘ಏ ಹವಾ ಕಾ ಬಚ್ಚಾ ಹೈ! (ಗಾಳಿಯ ಮಗು?) ‘ ಅನ್ನುತ್ತಾಳೆ.”

ಲೇಖಕರು ಈ ಪುಸ್ತಕದಲ್ಲಿ ನಾವರಿಯದ ಅರುಣಾಚಲದ ಬಗ್ಗೆ ಕುತೂಹಲ ಮತ್ತು ಆಸಕ್ತಿಯನ್ನು ಹುಟ್ಟಿಸುತ್ತಾ ಹೋಗುತ್ತಾರೆ. ಸೇಲಾ ಪಾಸ್ ನೆತ್ತಿಯ ಮೇಲಿನ ವಿವರಗಳು, ಪಹರೆ ಕಾಯುವ ಪ್ರೇತಾತ್ಮ ‘ಜಸ್ವಂತ್ ಸಿಂಗ್' ಬಗ್ಗೆ, ಮೊನ್ ಪಾ ಸುಂದರಿಯರ ಬಗ್ಗೆ, ಆ ಜನಾಂಗದಲ್ಲಾಗುವ ಸಾವುಗಳ ಬಗ್ಗೆ, ಭೀಕರವಾದ ಅಂತಿಮ ಸಂಸ್ಕಾರದ ಬಗ್ಗೆ, ಸನ್ಯಾಸಿಯರ, ಮಾಟ ಮದ್ದುಗಳ ಬಗ್ಗೆ ಬರೆಯುತ್ತಾ ಹೋಗುತ್ತಾರೆ. 

ಲೇಖಕ ರವಿ ಬೆಳಗೆರೆಯವರನ್ನು ಅರುಣಾಚಲಕ್ಕೆ ಕರೆದುಕೊಂಡು ಹೋದವರು ಕನ್ನಡಿಗರೇ ಆದ ಸೈನ್ಯದಲ್ಲಿ ವೈದ್ಯರಾಗಿದ್ದ ಡಾ. ಮುರಳಿಯವರು. ಇವರಿಬ್ಬರು ಸೇರಿ ಒಂದು ವಿದ್ಯುತ್ ಇಲ್ಲದ ರಾತ್ರಿಯಲ್ಲಿ ಹೆರಿಗೆ ಮಾಡಿಸಿದ ಸಂಗತಿ ಮನಕಲುಕುತ್ತದೆ. ಬುಡಕಟ್ಟು ಜನಾಂಗದವರ ವಿಚಿತ್ರ ಆಚರಣೆ, ನಂಬಿಕೆಗಳು ಹೆದರಿಕೆ ಹುಟ್ಟಿಸುತ್ತವೆ. ಲೇಖಕರು ಬೆಂಗಳೂರಿಗೆ ಹಿಂದೆ ಬರುವ ಸಂದರ್ಭದಲ್ಲಿ ಅಚಾನಕ್ ಆಗಿ ಅಲ್ಲಿಯ ಮುಖ್ಯಮಂತ್ರಿಯ ಸಂಗಡ ಮೂರು ದಿನಗಳನ್ನು ಕಳೆಯ ಬೇಕಾದ ಸಂಗತಿಯನ್ನು ಬರೆದಿದ್ದಾರೆ. ಈ ಸಣ್ಣ ಪುಸ್ತಕ (೯೪ ಪುಟಗಳು) ಓದುವಾಗ ಇನ್ನಷ್ಟು ವಿವರಗಳಿದ್ದರೆ ಚೆನ್ನಾಗಿತ್ತು. ಅರುಣಾಚಲವನ್ನು ಇನ್ನಷ್ಟು ತಿಳಿಯುವ ಆಶೆ ನಮ್ಮಲ್ಲಿ ಮೂಡುತ್ತದೆ. ಪುಸ್ತಕವನ್ನು ಲೇಖಕರು ಛಲಗಾತಿ ಪರ್ವತಾರೋಹಿ ಅರುಣಿಮಾ ಸಿನ್ಹಾ ಗೆ ಅರ್ಪಿಸಿದ್ದಾರೆ. ಪ್ರವಾಸ ಕಥನ ಓದುವ ಆಸಕ್ತಿ ಇದ್ದವರು ಓದಲೇ ಬೇಕಾದ ಪುಸ್ತಕವಿದು.