ಹಿಮರಾಜ ಮತ್ತು ಮರೆಲ್ಲಾ

ಹಿಮರಾಜ ಮತ್ತು ಮರೆಲ್ಲಾ

ನೂರಾರು ವರುಷಗಳ ಮುಂಚೆ ಒಬ್ಬ ಪ್ರಾಮಾಣಿಕ ಮತ್ತು ಶ್ರಮಜೀವಿ ರೈತನಿದ್ದ. ಅವನ ಪತ್ನಿ ತೀರಿಕೊಂಡಿದ್ದು, ಅವನು ತನ್ನ ಚಂದದ ಮಗಳೊಂದಿಗೆ ತನ್ನ ಪುಟ್ಟ ಮನೆಯಲ್ಲಿ ವಾಸ ಮಾಡುತ್ತಿದ್ದ.

ಆ ಹುಡುಗಿಯ ಹೆಸರು ಮರೆಲ್ಲಾ. ಆಕರ್ಷಕ ಕಣ್ಣುಗಳ ಮರೆಲ್ಲಾ ಮನೆಯ ಎಲ್ಲ ಕೆಲಸಗಳನ್ನೂ ಮಾಡುತ್ತಿದ್ದಳು. ಮನೆ ಗುಡಿಸುವುದು, ಪಾತ್ರೆ ತೊಳೆಯುವುದು, ಅಡುಗೆ ಮಾಡುವುದು ಇತ್ಯಾದಿ. ಕೆಲವೊಮ್ಮೆ ಕೋಮಲಾಂಗಿ ಮರೆಲ್ಲಾಳಿಗೆ ಇವೆಲ್ಲವನ್ನು ಮಾಡುವುದು ಬಹಳ ಕಷ್ಟವಾಗುತ್ತಿತ್ತು. ಕಟ್ಟಿಗೆ ಒಡೆಯುವುದಂತೂ ಅವಳಿಂದಾಗದ ಕೆಲಸ.

ಮಗಳ ಕಷ್ಟವನ್ನು ನೋಡಲಾಗದೆ ಅವಳ ತಂದೆ ಎರಡನೆಯ ಮದುವೆಯಾಗಲು ನಿರ್ಧರಿಸಿದ. ಅಂತೂ ಎರಡು ಹೆಣ್ಣು ಮಕ್ಕಳ ತಾಯಿಯಾದ ವಿಧವೆಯೊಬ್ಬಳನ್ನು ಮದುವೆಯಾದ. ಈ ಮಲತಾಯಿಗೆ ಸೌಂದರ್ಯವತಿ ಮರೆಲ್ಲಾಳನ್ನು ಕಂಡು ಹೊಟ್ಟೆಯುರಿಯಿತು. ಯಾಕೆಂದರೆ ಅವಳ ಇಬ್ಬರು ಮಗಳಂದಿರೂ ಸಾಧಾರಣ ರೂಪದವರು.

ದಿನಗಳೆದಂತೆ ಮರೆಲ್ಲಾ ಮೇಲಿನ ಮಲತಾಯಿಯ ಅಸೂಯೆ ಹೆಚ್ಚಾಗುತ್ತಾ ಬಂತು. ಅವಳು ಮರೆಲ್ಲಾಳಿಂದ ಹೆಚ್ಚೆಚ್ಚು ಕಷ್ಟದ ಕೆಲಸಗಳನ್ನು ಮಾಡಿಸತೊಡಗಿದಳು. ಮರೆಲ್ಲಾ ಮುಂಜಾನೆಯೇ ನಿದ್ದೆಯಿಂದ ಏಳ ಬೇಕಾಗುತ್ತಿತ್ತು. ಎಲ್ಲರಿಗೂ ಬೆಳಗ್ಗಿನ ಉಪಾಹಾರ ಅವಳೇ ತಯಾರು ಮಾಡಬೇಕಿತ್ತು. ಕಾಡಿನಿಂದ ಕಟ್ಟಿಗೆ ತರುವುದು, ದನಗಳಿಗೆ ಮೇವು ಹಾಕುವುದು, ಮನೆ ಗುಡಿಸಿ ಒರಸುವುದು - ಇವೆಲ್ಲವೂ ಮರೆಲ್ಲಾಳ ಕೆಲಸಗಳು.

ಅವಳ ಮಲತಾಯಿಯ ಇಬ್ಬರು ಮಗಳಂದಿರು ಮನೆಯಲ್ಲಿ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಬೆಳಗ್ಗೆ ತಡವಾಗಿ ಎದ್ದು, ಮರೆಲ್ಲಾ ತಯಾರಿಸಿದ ಉಪಾಹಾರ ತಿನ್ನುತ್ತಿದ್ದರು. ಅನಂತರ ಇಡೀ ದಿನ ಅತ್ತಿತ್ತ ಅಡ್ಡಾಡುತ್ತಾ ಹೊತ್ತು ಕಳೆಯುತ್ತಿದ್ದರು ಮತ್ತು ತಾವು ಹೇಳಿದ ಕೆಲಸಗಳನ್ನು ಮರೆಲ್ಲಾ ಮಾಡುವಾಗ ತಡವಾದರೆ ಬಾಯಿಗೆ ಬಂದಂತೆ ಬಯ್ಯುತ್ತಿದ್ದರು.

ಮರೆಲ್ಲಾಳ ತಂದೆ ಇದೆಲ್ಲವನ್ನೂ ನೋಡುತ್ತಿದ್ದ. ಆದರೆ ಅವನು ಸಾಧು ಮನುಷ್ಯ. ತನ್ನ ಮಗಳು ಮರೆಲ್ಲಾಳನ್ನು ಇವೆಲ್ಲಾ ಕಷ್ಟಗಳಿಂದ ಪಾರು ಮಾಡಲು ಏನು ಮಾಡಬೇಕೆಂದು ಅವನಿಗೆ ಗೊತ್ತಾಗುತ್ತಿರಲಿಲ್ಲ. ತಾನು ಮರೆಲ್ಲಾಳ ಪರವಾಗಿ ಮಾತನಾಡಿದರೆ ಎರಡನೆಯ ಹೆಂಡತಿಗೆ ಸಿಟ್ಟು ಬರಬಹುದೆಂದು ಅವನು ಎಲ್ಲವನ್ನೂ ನೋಡುತ್ತಾ ನಿಟ್ಟುಸಿರು ಬಿಡುತ್ತಿದ್ದ. ಕ್ರಮೇಣ ಎಲ್ಲವೂ ಸರಿಹೋಗಬಹುದೆಂದು ಯೋಚಿಸುತ್ತಿದ್ದ.

ಮರೆಲ್ಲಾ ಕಟ್ಟಿಗೆ ತರಲಿಕ್ಕಾಗಿ ಕಾಡಿಗೆ ಹೋದಾಗೆಲ್ಲ ತನ್ನ ಪಾಡು ನೆನೆದು ಕಣ್ಣೀರು ಹಾಕುತ್ತಿದ್ದಳು. ಅಲ್ಲಿದ್ದ ಹಕ್ಕಿಗಳಿಗೂ, ಹಿಮಬೆಕ್ಕು ಇತ್ಯಾದಿ ಪ್ರಾಣಿಗಳಿಗೂ ತನ್ನ ಸಂಕಟ ಹೇಳುತ್ತಿದ್ದಳು. ಅಲ್ಲಿನ ಮರಗಳೂ ಅವಳ ಗೋಳು ಕೇಳುತ್ತಿದ್ದವು; ಕನಿಕರದಿಂದ ತಮ್ಮ ರೆಂಬೆಗಳನ್ನು ಜೋರಾಗಿ ಅಲ್ಲಾಡಿಸುತ್ತಿದ್ದವು.

ಕೆಲವು ವರುಷಗಳು ಸರಿದವು. “ನನ್ನ ಹೆಣ್ಣು ಮಕ್ಕಳು ಮದುವೆಯ ವಯಸ್ಸಿಗೆ ಬಂದಿದ್ದಾರೆ. ಆದರೆ ಅವರು ರೂಪವತಿಯರಲ್ಲ.   ಈ ಚಂದದ ಮುಖದ ಮರೆಲ್ಲಾ ಮನೆಯಲ್ಲಿದ್ದರೆ, ಹೆಣ್ಣು ನೋಡಲು ಬಂದ ಯುವಕರೆಲ್ಲ ಅವಳಿಗೇ ಮನಸೋಲುತ್ತಾರೆ” ಎಂದು ಮರೆಲ್ಲಾಳ ಮಲತಾಯಿ ಯೋಚಿಸಿದಳು. ಆದ್ದರಿಂದ, ಹೇಗಾದರೂ ಮಾಡಿ ಮರೆಲ್ಲಾಳನ್ನು ಮನೆಯಿಂದ ಓಡಿಸಬೇಕೆಂದು ಅವಳು ನಿರ್ಧರಿಸಿದಳು.

ಜನವರಿ ತಿಂಗಳು ಬಂತು. ಮೈಮರಗಟ್ಟುವ ಚಳಿ ಶುರುವಾಯಿತು. ಹಿಮಪಾತವೂ ಆರಂಭವಾಯಿತು. ಅದೊಂದು ದಿನ  ಮರೆಲ್ಲಾಳ ತಂದೆಯ ಬಳಿ ಮಲತಾಯಿ ಹೀಗೆಂದಳು: "ನಮ್ಮ ಹೆಣ್ಣು ಮಕ್ಕಳೆಲ್ಲ ವಯಸ್ಸಿಗೆ ಬಂದಿದ್ದಾರೆ. ಅವರಿಗೆ ಬೇಗನೇ ಮದುವೆ ಮಾಡಬೇಕು. ನಿನ್ನೆ ಹಿಮರಾಜನ ಸಂದೇಶವಾಹಕ ಬಂದಿದ್ದ. ಮರೆಲ್ಲಾಳನ್ನು ಹಿಮರಾಜ ನೋಡಿದ್ದಾರಂತೆ. ಅವರಿಗೆ ಚಂದದ ಇವಳು ಇಷ್ಟವಾಗಿದ್ದಾಳೆ. ಹಿಮರಾಜ ಬಹಳ ದೂರದ ಕಾಡಿನಲ್ಲಿ ವೈಭವದ ಅರಮನೆಯಲ್ಲಿ ವಾಸ ಮಾಡುತ್ತಿದ್ದಾರೆ."

ಮರೆಲ್ಲಾಳ ತಂದೆ ಅಮಾಯಕ ಮನುಷ್ಯ. ತನ್ನ ಹೆಂಡತಿ ಹೇಳುತ್ತಿರುವುದೆಲ್ಲ ನಿಜವೆಂದೇ ಅವನು ನಂಬಿದ. "ನಾಳೆ ಬೆಳಗ್ಗೆ ನೀವು ಮರೆಲ್ಲಾಳನ್ನು ಚಕ್ರವಿಲ್ಲದ ಗಾಡಿಯಲ್ಲಿ ಕೂರಿಸಿಕೊಂಡು, ಕಾಡಿನಲ್ಲಿ ಒಂದು ಗಂಟೆ ಪ್ರಯಾಣಿಸಿ, ದೂರದಲ್ಲಿ ಬಿಟ್ಟು ಬನ್ನಿ. ಅಲ್ಲಿಗೆ ಹಿಮರಾಜ ಸ್ವತಃ ಬಂದು ಮರೆಲ್ಲಾಳನ್ನು ಕರೆದೊಯ್ಯುತ್ತಾರಂತೆ. ಆದರೆ, ಅವರು ಬರುವಾಗ ಅಲ್ಲಿ ಮರೆಲ್ಲಾಳ ಹೊರತಾಗಿ ಬೇರೆ ಯಾರೂ ಇರಬಾರದಂತೆ” ಎಂದು ಮಲತಾಯಿ ತಾಕೀತು ಮಾಡಿದಳು.

ಇದೆಲ್ಲವನ್ನು ಕೇಳಿ ಮರೆಲ್ಲಾಳಿಗೆ ಬಹಳ ಸಂತೋಷವಾಯಿತು. ಹಿಮರಾಜನನ್ನು ಮದುವೆಯಾಗುವ ಕನಸು ಕಾಣುತ್ತಾ ಅವಳು ಅವತ್ತು ರಾತ್ರಿ ನಿದ್ದೆ ಮಾಡಿದಳು. ಮರುದಿನ ಬೇಗನೇ ಎದ್ದು, ತನ್ನ ಚಂದದ ಉಡುಗೆ ಮತ್ತು ಫರ್ ಟೋಪಿ ತೊಟ್ಟು ಮರೆಲ್ಲಾ ಹೊರಡಲು ತಯಾರಾದಳು. ಅವಳ ತಂದೆ ಅವಳನ್ನು ಚಕ್ರವಿಲ್ಲದ ಗಾಡಿಯಲ್ಲಿ ಕೂರಿಸಿಕೊಂಡು, ಕಾಡಿನಲ್ಲಿ ದೂರಕ್ಕೆ ಪ್ರಯಾಣಿಸಿದ. ಒಂದು ಗಂಟೆ ಪ್ರಯಾಣದ ನಂತರ, ಮರೆಲ್ಲಾಳನ್ನು ಗಾಡಿಯಿಂದ ಇಳಿಸಿದ. ಅವಳ ಹಣೆಗೆ ಮುತ್ತು ಕೊಟ್ಟು, ವಿದಾಯ ಹೇಳಿ, ಹಿಂತಿರುಗಿದ.

ಅಲ್ಲಿ ಭಯಂಕರ ಚಳಿಗಾಳಿ ಬೀಸುತ್ತಿತ್ತು. ಮರೆಲ್ಲಾಳ ಉಸಿರೇ ಹಿಮಗಟ್ಟಿತು! ಅವಳಿಗೆ ತನ್ನನ್ನು ಬಿಟ್ಟು ದೂರ ಹೋಗುತ್ತಿದ್ದ ತಂದೆಯನ್ನು ಕಾಣುತ್ತಿದ್ದಂತೆ ಕಣ್ಣೀರು ಧಾರೆಯಾಗಿ ಹರಿಯಿತು. ಆ ಕಣ್ಣೀರೂ ಹಿಮಗಟ್ಟಿತು! ಅಲ್ಲಿ ಹಕ್ಕಿಗಳೂ ಇರಲಿಲ್ಲ. ಯಾಕೆಂದರೆ ಅವುಗಳಿಗೆ ತಿನ್ನಲು ಅಲ್ಲಿ ಏನೂ ಇರಲಿಲ್ಲ ಮತ್ತು ಕುಡಿಯಲು ನೀರೂ ಇರಲಿಲ್ಲ. ಅಲ್ಲಿ ಎತ್ತಕಂಡರತ್ತ ಹಿಮ. ಮರೆಲ್ಲಾಳಿಗೆ ರಕ್ತವೇ ಹೆಪ್ಪುಗಟ್ಟುತ್ತಿದೆ ಅನಿಸಿತು. ಪಾಪದ ಮರೆಲ್ಲಾಳಿಗೆ ಭಯವಾಗಲು ಶುರುವಾಯಿತು.

ಅಷ್ಟರಲ್ಲಿ, ಅವಳ ಹಿಂಬಂದಿಯಿಂದ “ಈ ಚಳಿಯಲ್ಲಿ ನೀನೇನು ಮಾಡುತ್ತಿದ್ದಿ?” ಎಂಬ ಮಾತು ಕೇಳಿ ಬಂತು. ಮರಗಟ್ಟಿದ್ದ ಮರೆಲ್ಲಾ ಹಿಂದೆ ತಿರುಗಿ ನೋಡಲಿಕ್ಕೆ ಸಾಧ್ಯವಾಗದಿದ್ದರೂ ನಿಂತಲ್ಲಿಯೇ ನಿಂತು ಉತ್ತರಿಸಿದಳು, "ನಾನು ಹಿಮರಾಜನಿಗಾಗಿ ಕಾಯುತ್ತಿದ್ದೇನೆ. ನನ್ನನ್ನು ಪ್ರೀತಿಸುತ್ತಿರುವ ಹಿಮರಾಜ ಇಲ್ಲಿಗೆ ಬಂದು ನನ್ನನ್ನು ಅವರ ಮದುಮಗಳಾಗಿ ಕರೆದೊಯ್ಯುತ್ತಾರೆ.”

"ನಾನೇ ಹಿಮರಾಜ. ಒಂದು ಹಿಮಬೆಕ್ಕು ನನ್ನ ಅರಮನೆಗೆ ಬಂದಿತ್ತು. ಅದು ನಿನ್ನ ಮಿತ್ರ. ಆ ಹಿಮಬೆಕ್ಕು ನಿನ್ನ ಸಂಗತಿಯನ್ನೆಲ್ಲ ನನಗೆ ಹೇಳಿದೆ. ನಿನ್ನ ಮಲತಾಯಿ ನಿನಗೆ ಮೋಸ ಮಾಡಿದ್ದಾಳೆ. ನೀನು ಚಳಿಯಿಂದ ಸಾಯಬೇಕೆಂದು ಅವಳು ನಿನ್ನನ್ನು ಇಲ್ಲಿಗೆ ಕಳಿಸಿದ್ದಾಳೆ ವಿನಃ ನಾನು ನಿನ್ನನ್ನು ಮದುವೆಯಾಗಬೇಕು ಎಂದಲ್ಲ. ಅದೇನಿದ್ದರೂ ನಾನೀಗ ನಿನ್ನನ್ನು ನೋಡಿದ್ದೇನೆ. ನೀನು ರೂಪವತಿ ಮತ್ತು ಗುಣವತಿ. ನಿನ್ನನ್ನು ನನ್ನ ಅರಮನೆಗೆ ಕರೆದೊಯ್ದು ಮದುವೆಯಾಗುತ್ತೇನೆ. ಇನ್ನು ನೀನೇ ಹಿಮರಾಣಿ” ಎನ್ನುತ್ತಾ ಹಿಮರಾಜ ಮರೆಲ್ಲಾಳ ಎದುರು ಬಂದ.

“ಈಗ ನಿನ್ನ ಕಣ್ಣುಗಳನ್ನು ಮುಚ್ಚಿಕೋ. ನನ್ನ ಸೋದರರು ಬೆಳ್ಳಿ ರಥದಲ್ಲಿ ಬಂದು ನಿನ್ನನ್ನು ನನ್ನ ಹಿಮದ ಅರಮನೆಗೆ ಕರೆದೊಯ್ಯುತ್ತಾರೆ” ಎಂದ ಹಿಮರಾಜ. ಮರೆಲ್ಲಾ ಹಾಗೆಯೇ ಕಣ್ಣು ಮುಚ್ಚಿಕೊಂಡು ನಿದ್ದೆಗೆ ಜಾರಿದಳು. ಬೆಳ್ಳಿ ರಥ ಬಂದದ್ದು, ಅವಳನ್ನು ಎತ್ತಿ ಅದರಲ್ಲಿ ಕುಳ್ಳಿರಿಸಿದ್ದು, ರಥ ವೇಗವಾಗಿ ಅರಮನೆಗೆ ಸಾಗಿದ್ದು ಯಾವುದೂ ಅವಳಿಗೆ ಗೊತ್ತಾಗಲಿಲ್ಲ.

ಮರೆಲ್ಲಾ ಕಣ್ಣು ತೆರೆದು ಸುತ್ತಲೂ ನೋಡಿ ದಂಗಾದಳು. ಅಂತಹ ಕೋಣೆಯನ್ನು ಅವಳು ತನ್ನ ಜೀವಮಾನದಲ್ಲೇ ನೋಡಿರಲಿಲ್ಲ. ಅಲ್ಲಿನ ಎಲ್ಲ ಪೀಠೋಪಕರಣಗಳನ್ನು ಆನೆಯ ದಂತ ಮತ್ತು ಮುತ್ತುಮಾಣಿಕ್ಯಗಳಿಂದ ತಯಾರಿಸಲಾಗಿತ್ತು. ಅಲ್ಲಿದ್ದ ಹಾಸಿಗೆಯನ್ನು ಕಾಡುಬೆಕ್ಕುಗಳ ಮೃದು ತುಪ್ಪಳದಿಂದ ಮಾಡಲಾಗಿತ್ತು.

ಆಗ ಆ ಕೋಣೆಗೆ ಹಿಮರಾಜ ಬಂದ. ಆಜಾನುಬಾಹು ಹಾಗೂ ಸುಂದರಾಂಗ ಹಿಮರಾಜ ಹಿಮಬೆಕ್ಕುಗಳ ತುಪ್ಪಳದಿಂದ ಮಾಡಿದ್ದ ಮಜಬೂತಾದ ಫರ್-ಕೋಟು ಧರಿಸಿದ್ದ. "ನೀನೀಗ ಹಿಮರಾಣಿಯಾಗಲಿರುವೆ. ಇಲ್ಲಿರುವ ಎಲ್ಲವೂ ನಿನ್ನದೇ. ಇನ್ನು ಯಾವತ್ತೂ ನೀನು ಕೆಲಸ ಮಾಡಬೇಕಾಗಿಲ್ಲ. ಎಲ್ಲ ಕೆಲಸಗಳನ್ನೂ ಕಾಡಿನ ಪ್ರಾಣಿಗಳು ಮತ್ತು ಸೇವಕರು ಮಾಡುತ್ತಾರೆ. ನಿನಗೇನು ಬೇಕೆಂದು ನೀನು ಹೇಳಿದರೆ ಸಾಕು; ತಕ್ಷಣವೆ ನಿನ್ನ ಆದೇಶವನ್ನು ಅವರು ಪಾಲಿಸುತ್ತಾರೆ" ಎಂದ ಹಿಮರಾಜ.

ಆ ದಿನವೇ ಮರೆಲ್ಲಾ ಮತ್ತು ಹಿಮರಾಜನ ಮದುವೆಯಾಯಿತು. ಬಡರೈತನ ಮಗಳಾದ ಮರೆಲ್ಲಾ ಅಂದಿನಿಂದ ಹಿಮರಾಣಿಯಾಗಿ ವೈಭವದ ಹಿಮದ ಅರಮನೆಯಲ್ಲಿ ಸುಖಸಂತೋಷದಿಂದ ಬಾಳಿದಳು.