ಹಿಮಾಲಯದಲ್ಲೂ ಸೆಲ್ ಕಾಟ!

ಹಿಮಾಲಯದಲ್ಲೂ ಸೆಲ್ ಕಾಟ!

ಬರಹ

ಉದಯವಾಣಿ 

(ಇ-ಲೋಕ-49)(20/11/2007) 
 ಹಿಮಾಲಯಕ್ಕೆ ಹೋದರೂ ಸೆಲ್‍ಫೋನ್ ಕಾಟ ತಪ್ಪದೇ?ಚೀನಾದ ಮೊಬೈಲ್ ಕಂಪೆನಿ ಮುಂದಿನ ವರ್ಷದ ಒಲಿಂಪಿಕ್ ಪಂದ್ಯಗಳ ಅಂಗವಾಗಿ ನಡೆಯಲಿರುವ ಒಲಿಂಪಿಕ್ ಪಂಜಿನ ಮೆರವಣಿಗಾಗಿ ಹಿಮಾಲಯ ಪರ್ವತ ಪ್ರದೇಶದಲ್ಲೂ ಮೊಬೈಲ್ ಸೇವೆ ಒದಗಿಸಲೋಸುಗ ಮೊಬೈಲ್ ಸ್ಥಾವರಗಳನ್ನು ಸ್ಥಾಪಿಸಿದೆ.ಹದಿನೇಳು ಸಾವಿರ,ಹತ್ತೊಂಭತ್ತು ಸಾವಿರ ಮತ್ತು ಇಪ್ಪತ್ತೊಂದು ಸಾವಿರ ಅಡಿಗಳ ಎತ್ತರದಲ್ಲಿ ಸ್ಥಾವರಗಳ ಸ್ಥಾಪನೆ ಪೂರ್ಣವಾಗಿ,ಸೇವೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ಪರೀಕ್ಷಿಸಿಯೂ ಆಗಿದೆ.ಸ್ಥಾವರಗಳನ್ನು ಸ್ಥಾಪಿಸಲು ಸಾಧನ ಸಲಕರಣೆಗಳನ್ನು ಯಾಕ್ ಪ್ರಾಣಿಗಳ ಮೇಲೆ ಮತ್ತು ತಲೆಹೊರೆಯ ಮೂಲಕ ಸಾಗಿಸಲಾಯಿತು.ಈಗ ಚಳಿಗಾಲ ಆರಂಭವಾಗಿರುವುದರಿಂದ ಸ್ಥಾವರಗಳನ್ನು ಕಳಚಿ ಸುರಕ್ಷಿತ ಕವಚಗಳಲ್ಲಿ ಮುಚ್ಚಿಡಲಾಗಿದೆಯಂತೆ.ಪಂಜಿನ ಮೆರವಣಿಗೆ ವೇಳೆ ಇದನ್ನು ಮತ್ತೆ ಸ್ಥಾಪಿಸುವ ಉದ್ದೇಶ ಚೀನಾ ಮೊಬೈಲ್ ಕಂಪೆನಿಯದ್ದು.
 

ಜಿರಳೆಯ ಜತೆ ಜಿರಳೆಯಾಗಬಲ್ಲ ರೊಬೋಟ್!
 ಜಿರಳೆಗಳ ಜತೆಯಾಗಿದ್ದುಕೊಂಡು ಅವುಗಳ ವರ್ತನೆಯನ್ನು ಬದಲಿಸುವ ಸಾಮರ್ಥ್ಯವಿರುವ ರೊಬೋಟ್ ಜಿರಳೆಗಳನ್ನು ತಯಾರಿಸಲು ವಿಜ್ಞಾನಿಗಳು ಸಫಲರಾಗಿದ್ದಾರೆ.ಬೆಲ್ಜಿಯಂನ ವಿಶ್ವವಿದ್ಯಾಲಯವೊಂದರ ಸಂಶೋಧಕರು ಸ್ವನಿರ್ಧಾರಗಳನ್ನು ಕೈಗೊಳ್ಳುವ ಸಾಮರ್ಥ್ಯವಿದ್ದು ತನ್ನ ಪರಿಸರಕ್ಕೆ ಸ್ಪಂದಿಸಬಲ್ಲ ರೊಬೋಟ್‍ಗಳನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆ.ಹಾಗೆಂದು ಈ ರೊಬೋ ಜಿರಳೆಗಳ ಆಕಾರ ಜಿರಳೆಗಳಂತಿಲ್ಲ.ಆದರೆ ಅವುಗಳಿಗೆ ಜಿರಳೆಗಳ ವಾಸನೆ ಸವರಿ ಜೀವಂತ ಜಿರಳೆಗಳಿಗೆ ರೊಬೋ ತಮ್ಮವನೇ ಎಂಬ ಭಾವನೆ ಬರಿಸಲಾಗುತ್ತದೆ.ಈ ರೊಬೋ ಜಿರಳೆಗಳು ಇತರ ಜಿರಳೆಗಳ ಜತೆ ಸ್ಪಂದಿಸುತ್ತಾ,ಅವು ಕತ್ತಲಿನ ವಾಸಸ್ಥಾನಗಳ ಬದಲು ಬೆಳಕಿರುವೆಡೆ ವಾಸಿಸುವಂತೆ ಮಾಡಲೂ ಸಫಲವಾಗಿವೆ.ನ್ಯೂರಾನ್ ಹೊಂದಿ,ಯೋಚನಾ ಸಾಮರ್ಥ್ಯವನ್ನು ಹೊಂದಿರುವ ರೊಬೋ ನಿರ್ಮಾಣ ಮಾಡುವ ವಿಜ್ಞಾನಿಗಳ ಗುರಿ ಸಾಧನೆಗೆ ಸದ್ಯದ ಸಾಧನೆ ಮೆಟ್ಟಿಲಾಗಲಿದೆ.
 

ನಾಲ್ಕನೇ ಸ್ಥಾನದಲ್ಲಿ ಭಾರತದ ಸೂಪರ್ ಕಂಪ್ಯೂಟರ್ ಏಕ
 ಟಾಟಾ ಕಂಪೆನಿಯು ಅಭಿವೃದ್ಧಿ ಪಡಿಸಿದ ಸೂಪರ್ ಕಂಪ್ಯೂಟರ್ ಜಗತ್ತಿನ ಅತಿ ವೇಗದ ಸೂಪರ್ ಕಂಪ್ಯೂಟರುಗಳ ಪೈಕಿ ನಾಲ್ಕನೇ ಸ್ಥಾನ ಪಡೆದಿದೆ.ಬ್ಲೂಜೀನ್ ಎಲ್ ಎನ್ನುವುದು ಅಮೆರಿಕಾದ ಪರಮಾಣು ತ್ಯಾಜ್ಯದ ಮೇಲೆ ಕಣ್ಣಿಡುವ ಸೂಪರ್ ಕಂಪ್ಯೂಟರ್.ಇದು ಸೆಕೆಂಡಿಗೆ ನಾಲ್ಕು ನೂರ ಎಪ್ಪತ್ತೆಂಟು ಟೆರಾಫ್ಲಾಪ್ ಲೆಕ್ಕಾಚಾರಗಳನ್ನು ಸಾಧಿಸಲು ಸಮರ್ಥವಾಗಿರುವ ಕಾರಣ ಅತಿವೇಗದ ಸೂಪರ್ ಕಂಪ್ಯೂಟರ್ ಎನ್ನುವ ಹೆಗ್ಗಳಿಕೆ ಹೊಂದಿದೆ.ಭಾರತದ ಸೂಪರ್ ಕಂಪ್ಯೂಟರ್ ಪುಣೆಯ ಸಂಶೋಧನಾಲಯದಲ್ಲಿದೆ.ಇದು ಸುನಾಮೀ ಮತ್ತು ಭೂಕಂಪದ ವಿಶ್ಲೇಷಣೆ ಮಾಡಲು ಬಳಕೆಯಾಗಲಿದೆಯಂತೆ.ಏಕ ಸೂಪರ್ ಕಂಪ್ಯೂಟರಿನ ವೇಗ ನೂರ ಹದಿನೇಳು ಟೆರಾಫ್ಲಾಪ್.ಅಂದರೆ ಜಗತ್ತಿನ ಮೊದಲ ಸ್ಥಾನದ ಸೂಪರ್ ಕಂಪ್ಯೂಟರಿನ ಕಾಲು ಭಾಗದಷ್ಟು ವೇಗದ್ದು.

ಮಿಥ್ಯಾ ವಾಸ್ತವ ಕಳ್ಳತನ
 ಹಬ್ಬೋ ಹೊಟೇಲ್  ಎನ್ನುವುದು ಸಾಮಾಜಿಕ ಜಾಲ ತಾಣ.ಇಲ್ಲಿ ಜನರು ತಮ್ಮ ಅಂತರ್ಜಾಲ ಅವತಾರಗಳನ್ನು ತಾಳಿ,ಕೋಣೆಗಳನ್ನು ಖರೀದಿಸಿ,ಹಣ ತೆತ್ತು ಪೀಠೋಪಕರಣಗಳನ್ನು ಖರೀದಿಸಿ,ತಮ್ಮ ಕೋಣೆಯನ್ನು ಸಜ್ಜುಗೊಳಿಸುವಂತಹ ಕಾರ್ಯಗಳನ್ನು ಕೈಗೊಳ್ಳಬಹುದು.ಹಣ ತೆತ್ತು ಆಟಗಳನ್ನು ಆಡಲೂ ಸಾಧ್ಯ. ಇಂತಹ ಕೋಣೆಯಿಂದ ಪೀಠೋಪಕರಣಗಳನ್ನು ಕದ್ದದ್ದಕ್ಕಾಗಿ ಹದಿನೇಳು ವರ್ಷ ಪ್ರಾಯದ ಹುಡುಗನನ್ನು ಬಂಧಿಸಲಾಗಿದೆ.ಈತ ಹಬ್ಬೋ ಹೋಟೆಲಿನ ನಕಲಿ ತಾಣಗಳನ್ನು ರಚಿಸಿ,ಅವುಗಳ ಮೂಲಕ ಮುಗ್ಧ ಗ್ರಾಹಕರು ಪ್ರವೇಶ ಪಡೆವಾಗ ನೀಡಿದ ಬಳಕೆದಾರನ ಹೆಸರು ಮತ್ತು ಗುಪ್ತಸಂಕೇತಗಳನ್ನು ಕಂಡುಹಿಡಿದು,ಅವನ್ನು ನೈಜ ತಾಣದಲ್ಲಿ ಬಳಸುವ ಮೂಲಕ ಮಿಥ್ಯಾವಾಸ್ತವ ಪೀಠೋಪಕರಣಗಳನ್ನು ಕದಿದ ಆರೋಪ ಎದುರಿಸುತ್ತಿದ್ದಾನೆ.ಈ ತಾಣಕ್ಕೆ ಆರು ದಶಲಕ್ಷಕ್ಕಿಂತಲೂ ಅಧಿಕ ಗ್ರಾಹಕರಿದ್ದಾರೆ.
 

ಜಾಹೀರಾತು ಮೂಲಕ ಕಂಪ್ಯೂಟರಿಗೆ ಕನ್ನ!
 ಅಂತರ್ಜಾಲ ಪುಟಗಳಲ್ಲಿನ ಬ್ಯಾನರ್ ಜಾಹೀರಾತು ಪುಟವು ಕಾಣಿಸಿಕೊಳ್ಳುವುದನ್ನು ನಿಧಾನಗೊಳಿಸುತ್ತವೆ.ಅದರ ಜತೆಗೆ ಅವೀಗ ಕಂಪ್ಯೂಟರನ್ನು ಕೆಡಿಸಲೂ ಕಾರಣವಾಗುವುದು ಕಂಡು ಬಂದಿದೆ.ಹೀಗಾಗಲು ಜಾಹೀರಾತಿನ ಮೇಲೆ ಕ್ಲಿಕ್ಕಿಸುವ ಅಗತ್ಯವೂ ಇರುವುದಿಲ್ಲವೆನ್ನುವುದು ಮತ್ತಹ್ಟು ಕಳವಳಕಾರಿ ವಿಷಯ.ಇಂತಹ ಜಾಹೀರಾತುಗಳು ಜನಪ್ರಿಯ ಅಂತರ್ಜಾಲದ ಪುಟಗಳಲ್ಲೂ ಕಾಣಿಸಿಕೊಳ್ಳುತ್ತವೆ.ಇವಿದ್ದ ಪುಟಗಳು ದಿಡೀರ್‍ಅನೆ ಮುಚ್ಚಿ,ಇನ್ನೊಂದು ಪುಟ ತೆರೆದುಕೊಳ್ಳುತ್ತದೆ.ಅಲ್ಲಿ ವೈರಸ್ ನಿರೋಧಕ ತಾಣವೊಂದು ಕಾಣಿಸಿಕೊಳ್ಳುತ್ತವೆ. "ನಿಮ್ಮ ಕಂಪ್ಯೂಟರ್ ವೈರಸ್ ಪೀಡಿತವಾಗಿದೆ.ಅದನ್ನು ಸ್ಕ್ಯಾನ್ ಮಾಡಲಾಗುತ್ತಿದೆ.",ಎನ್ನುವ ಸಂದೇಶ ಕಾಣಿಸಿಕೊಳ್ಳುತ್ತದೆ.ಇದೆಲ್ಲಾ ಜಾಹೀರಾತು ಇಳಿಸಿಕೊಳ್ಳುವ ಸಣ್ಣ ತಂತ್ರಾಂಶದ ಕರಾಮತ್ತು.ಇಂತಹ ಜಾಹೀರಾತುಗಳ ಕಾಟದಿಂದ ಮುಕ್ತರಾಗುವುದು ಸುಲಭವಲ್ಲ.ಈ ಜಾಹೀರಾತುಗಳು ಅಂತರ್ಜಾಲ ಜಾಹೀರಾತು ಸಿಂಡಿಕೇಟುಗಳ ಮೂಲಕ ಅಂತರ್ಜಾಲ ತಾಣಗಳನ್ನು ತಲುಪುತ್ತವೆ.ಮಾತ್ರವಲ್ಲ ಜಾಹೀರಾತುಗಳು ಗುಪ್ತಭಾಷೆಯಲ್ಲಿ ಇದ್ದು,ಅವುಗಳ ಉದ್ದೇಶ ಏನು ಎನ್ನುವುದು ಅವನ್ನು ಪ್ರಕಟಿಸುವ ತಾಣಗಳವರಿಗೆ ಅರಿವಿರುವುದಿಲ್ಲ.
*ಅಶೋಕ್‍ಕುಮಾರ್ ಎ