ಹಿಮಾಲಯದ ಜುಟ್ಟಿನ ಹಕ್ಕಿ - ಬ್ಲಾಕ್ ಬಾಝಾ

ಹಿಮಾಲಯದ ಜುಟ್ಟಿನ ಹಕ್ಕಿ - ಬ್ಲಾಕ್ ಬಾಝಾ

ನಮ್ಮ ಸುತ್ತ ಮುತ್ತ ಇರುವ ಹಲವಾರು ಪಕ್ಷಿಗಳನ್ನು ನಾವು ದಿನಂಪ್ರತಿ ನೋಡುತ್ತಾ ಇರುತ್ತೇವೆ. ಕೆಲವೊಂದು ಹಕ್ಕಿಗಳನ್ನು ಟಿವಿಯಲ್ಲೂ, ಪುಸ್ತಕಗಳಲ್ಲೋ ನೋಡಿ ಆನಂದ ಪಡುತ್ತೇವೆ. ಪ್ರತಿಯೊಂದು ಹಕ್ಕಿಗೆ ಅದರದ್ದೇ ಆದ ವಿಶೇಷತೆ, ಬಣ್ಣ, ಆಕಾರ ಹಾಗೂ ಜೀವನ ಕ್ರಮ ಇದೆ. ಹಿಮಾಲಯದಲ್ಲಿ ಅಧಿಕವಾಗಿ ಕಂಡು ಬರುವ ಬ್ಲಾಕ್ ಬಾಝಾ ಅಥವಾ ಕಪ್ಪು ಬಾಝಾ ಹಕ್ಕಿಗಳೂ ತಮ್ಮ ತಲೆಯ ಮೇಲಿರುವ ವಿಶೇಷ ಜುಟ್ಟಿನ ಕಾರಣದಿಂದ ಖ್ಯಾತಿ ಪಡೆದಿದೆ. ಈ ಹಕ್ಕಿಗೆ ಕರಿಗ್ರದ್ಧ ಎಂದೂ ಕರೆಯುತ್ತಾರೆ. ಈ ಹಕ್ಕಿಯ ವೈಜ್ಞಾನಿಕ ಹೆಸರು ಅವಿಸೆಡಾ ಲಿಫೋಟೆಸ್ (Aviceda Liuphotes). 

ಮೊದಲೇ ಹೇಳಿದಂತೆ ಹಿಮಾಲಯದ ಭಾಗಗಳಲ್ಲಿ ಕಂಡು ಬರುವ ಬ್ಲಾಕ್ ಬಾಝಾಗಳು ಚಳಿಗಾಲದ ಸಮಯದಲ್ಲಿ ಪಶ್ಚಿಮಘಟ್ಟಗಳ ಕಡೆಗೆ ವಲಸೆ ಹೋಗುತ್ತವೆ. ಇವುಗಳು ವಲಸೆ ಬಂದು ಕೇರಳ ರಾಜ್ಯದ ಹಲವಾರು ಕಡೆಗಳಲ್ಲಿ ಎಲ್ಲೆಲ್ಲಿ ದಟ್ಟ ಕಾಡುಗಳು ಇವೆಯೋ ಅಲ್ಲಿ ಕಾಣಿಸಿಕೊಳ್ಳುತ್ತವೆ. ಈ ಹಕ್ಕಿಗಳು ಭಾರತದಲ್ಲಷ್ಟೇ ಅಲ್ಲ ಹಾಂಗ್ ಕಾಂಗ್, ಮಲೇಷಿಯಾ, ಥಾಯಿಲ್ಯಾಂಡ್ ಮೊದಲಾದ ದೇಶಗಳ ಎಲೆ ಉದುರುವ ಕಾಡುಗಳಲ್ಲಿ ಹಾಗೂ ಬಿದಿರು ಸಸ್ಯಗಳು ಹೆಚ್ಚಾಗಿರುವ ನಿತ್ಯಹರಿದ್ವರ್ಣಗಳ ಕಾಡುಗಳಲ್ಲಿ ಕಂಡು ಬರುತ್ತವೆ. ಹಗಲಲ್ಲಿ ಸೋಮಾರಿಯಂತೆ ಇರುವ ಇವುಗಳು ಮುಸ್ಸಂಜೆ ಸಮಯದಲ್ಲಿ ಅತ್ಯಂತ ಚುರುಕಾಗುತ್ತವೆ. ಕಾಡಿನಲ್ಲಿರುವ ದೊಡ್ಡ ದೊಡ್ಡ ಬೋಳು ಮರಗಳ ಮೇಲೆ ಕುಳಿತು ಸಮಯ ಕಳೆಯುವುದೆಂದರೆ ಈ ಹಕ್ಕಿಗಳಿಗೆ ಭಾರೀ ಖುಷಿ.

ಬ್ಲಾಕ್ ಬಾಝಾಗಳು ಹಕ್ಕಿಗಳು ಅಧಿಕವಾಗಿ ಗುಂಪಿನಲ್ಲೇ ಕಾಲ ಕಳೆಯುತ್ತವೆ. ಸುಮಾರು ೧೦೦ಕ್ಕೂ ಅಧಿಕ ಹಕ್ಕಿಗಳನ್ನು ಹೊಂದಿರುವ ಗುಂಪುಗಳಲ್ಲಿರುತ್ತವೆ. ಹಾರಾಡುವಾಗ ಬ್ಲಾಕ್ ಬಾಝಾಗಳು ಕಾಗೆಯಂತೆಯೇ ಕಾಣುತ್ತವೆ. ಏಕೆಂದರೆ ಇವುಗಳ ಗಾತ್ರವು ಹೆಚ್ಚು ಕಮ್ಮಿ ಕಾಗೆಗಳಂತೆಯೇ ಇವೆ. ಮೈಬಣ್ಣವೂ ಬಹುಪಾಲು ಕಪ್ಪು. ತಲೆ, ಕತ್ತು ಹಾಗೂ ದೇಹದ ಬಹುಭಾಗ ಕಪ್ಪು ವರ್ಣದಲ್ಲೇ ಇರುತ್ತವೆ. ಆದರೆ ಎದೆಯ ಪ್ರದೇಶದಲ್ಲಿ ಮಾತ್ರ ಕಪ್ಪುಬಣ್ಣದ ಹಿನ್ನಲೆಯಲ್ಲಿ ಬಿಳಿ ಪಟ್ಟಿಗಳಿರುವುದನ್ನು ನಾವು ಗಮನಿಸಬಹುದು. ಇದರ ಕೊಕ್ಕು ಕೊಂಡಿಯಂತಿದ್ದು, ತೆಳುನೀಲಿ ಬಣ್ಣ ಮಿಶ್ರಿತ ಕಪ್ಪಾಗಿರುತ್ತದೆ. ಕಣ್ಣುಗಳ ಬಣ್ಣ ಕಂದು. ಮೇಲ್ಮುಖವಾಗಿ ಗರಿಗಳ ಬಣ್ಣ ಕಪ್ಪಾಗಿದ್ದರೂ ಕೆಳಗಡೆ ಬೇರೆ ಬಣ್ಣದಲ್ಲಿರುತ್ತದೆ. ಕಾಲುಗಳು ಕಪ್ಪಾಗಿದ್ದು ಗಿಡ್ಡವಾಗಿರುತ್ತವೆ. ಇವು ಸಾಮಾನ್ಯವಾಗಿ ವಲಸೆ ಹಕ್ಕಿಗಳಾಗಿರುವುದರಿಂದ ಚಳಿಗಾಲದಲ್ಲಿ ಸಿಂಗಾಪುರ, ಮಲೇಶಿಯಾ ಮುಂತಾದ ದೇಶಗಳ ಕಡೆಗೆ ವಲಸೆ ಹೋಗುತ್ತವೆ. 

ಸುಮಾರು ೩೦-೩೫ ಸೆಂ,ಮೀ ಉದ್ದವಿರುವ ಬ್ಲಾಕ್ ಬಾಝಾಗಳು ತಮ್ಮ ರೆಕ್ಕೆಯನ್ನು ಬಿಚ್ಚಿದಾಗ ೭೦ ರಿಂದ ೮೦ ಸೆಂ. ಮೀ. ಅಗಲವಾಗುತ್ತದೆ. ಇವುಗಳ ತೂಕ ಸರಾಸರಿ ೨೦೦ ಗ್ರಾಂಗಳು. ಇವುಗಳ ದೇಹದ ಆಕಾರ ಗರುಡ ಅಥವಾ ಗಿಡುಗ ಹಕ್ಕಿಯನ್ನು ಹೋಲುತ್ತಿದ್ದರೂ, ಇವುಗಳ ತಲೆಯ ಮೇಲಿರುವ ಒಂದು ವಿಶೇಷ ಜುಟ್ಟಿನ ಕಾರಣದಿಂದ ಅವುಗಳಿಂದ ಪ್ರತ್ಯೇಕವಾಗಿ ಗುರುತಿಸಲ್ಪಡುತ್ತದೆ. ಈ ಹಕ್ಕಿಗಳಲ್ಲಿ ಹೆಣ್ಣು ಮತ್ತು ಗಂಡು ಹಕ್ಕಿಗಳಲ್ಲಿ ವಿಶೇಷ ವ್ಯತ್ಯಾಸಗಳು ಕಂಡು ಬರುವುದಿಲ್ಲ. 

ಬ್ಲಾಕ್ ಬಾಝಾವು ತನ್ನ ಆಹಾರವಾಗಿ ದೊಡ್ಡ ದೊಡ್ಡ ಕೀಟಗಳನ್ನು, ಕೀಟಗಳ ಲಾರ್ವಾಗಳನ್ನೂ, ಮಿಡತೆ, ಜೀರುಂಡೆ, ಪತಂಗಗಳನ್ನು ಹಿಡಿದು ತಿನ್ನುತ್ತವೆ. ಕೆಲವೊಮ್ಮೆ ಮರಕಪ್ಪೆಗಳು ಹಾಗೂ ಹಲ್ಲಿಗಳನ್ನೂ ತಿನ್ನುತ್ತವೆ. ಮನಸ್ಸಾದಾಗ ಕಾಡಿನ ಕೆಲವು ಹಣ್ಣುಗಳನ್ನು ಇವು ತಿನ್ನುತ್ತವೆ. ಈ ಹಕ್ಕಿಗಳು ಸಂಗಾತಿಯನ್ನು ಆಯ್ದುಕೊಂಡ ಬಳಿಕ ಮೊಟ್ಟೆಯನ್ನಿಡಲು ಜೊತೆಯಾಗಿ ಗೂಡನ್ನು ಕಟ್ಟಲು ಪ್ರಾರಂಭಿಸುತ್ತವೆ. ಸಣ್ಣ ಸಣ್ಣ ಕಡ್ಡಿಗಳು ಸೇರಿಸಿ ಗೂಡು ಕಟ್ಟುವ ಇವುಗಳು ಒಳಗಡೆ ಮೆತ್ತನೆಯ ಹುಲ್ಲು ಅಥವಾ ಹಸಿರು ಎಲೆಗಳ ಹೊದಿಕೆಯನ್ನು ತಯಾರು ಮಾಡುತ್ತವೆ. ಮೊಟ್ಟೆಗಳನ್ನು ಇಟ್ಟ ಬಳಿಕ ಅವುಗಳು ಸುಮಾರು ೨೬-೨೭ ದಿನಗಳಲ್ಲಿ ಒಡೆದು ಮರಿಗಳು ಹೊರ ಬರುತ್ತವೆ. ಮರಿಗಳು ಹುಟ್ಟಿದಾಗ ಕಪ್ಪು ಬಣ್ಣವಿರುವುದಿಲ್ಲ. ಅವು ಬೂದು ಬಣ್ಣದ್ದಾಗಿರುತ್ತವೆ. ಗರಿಗಳು ಬೆಳೆದಂತೆ ಅವುಗಳ ಬಣ್ಣ ಕಪ್ಪು ಆಗುತ್ತದೆ.

ಮರಿ ಹಕ್ಕಿಯು ಸ್ವತಂತ್ರವಾಗಿ ಬೇಟೆಯಾಡುವವರೆಗೆ ಪಾಲಕ ಹಕ್ಕಿಗಳು ಇವುಗಳ ಪಾಲನೆ ಮಾಡುತ್ತವೆ. ಒಮ್ಮೆ ಸ್ವತಂತ್ರವಾಗಿ ಆಹಾರ ಅರಸಲು ಪ್ರಾರಂಭಿಸಿದ ಕೂಡಲೇ ಮರಿ ಹಕ್ಕಿಗಳು ತಮ್ಮ ಪಾಲಕರ ಗುಂಪನ್ನು ಅಥವಾ ಬೇರೆ ಗುಂಪನ್ನು ಆಯ್ಕೆ ಮಾಡಿಕೊಳ್ಳುತ್ತವೆ. 

ಬ್ಲಾಕ್ ಬಾಝಾಗಳು ಪ್ರಸ್ತುತ ಅಧಿಕ ಸಂಖ್ಯೆಯಲ್ಲಿರುವುದರಿಂದ ಇವುಗಳನ್ನು ಅಪಾಯದ ಅಂಚಿನಲ್ಲಿರುವ ಜೀವಿಗಳ ಗುಂಪಿಗೆ ಸೇರಿಸಲಾಗಿಲ್ಲ. ಇವುಗಳ ಸಂತತಿಗೆ ಸದ್ಯಕ್ಕೆ ಯಾವುದೇ ಅಪಾಯ ಇಲ್ಲವೆಂದು ಹೇಳಲಾಗುತ್ತಿದ್ದರೂ ಮುಂದಿನ ದಿನಗಳಲ್ಲಿ ಅರಣ್ಯ ನಾಶ ಹಾಗೂ ಪರಿಸರ ಮಾಲಿನ್ಯದ ಕಾರಣದಿಂದ ಹಕ್ಕಿಗಳ ಸಂತತಿಗೆ ಹಾನಿಯಾಗಬಹುದಾಗಿದೆ. ಆದುದರಿಂದ ಈಗಲೇ ನಾವು ಈ ಅಪರೂಪದ ತಳಿಯ ಬ್ಲಾಕ್ ಬಾಝಾಗಳ ಸಂರಕ್ಷಣೆಯ ಹೊಣೆಯನ್ನು ಹೊತ್ತುಕೊಳ್ಳಲೇ ಬೇಕಾಗಿದೆ. ಭವಿಷ್ಯದಲ್ಲಿ ಮುಂದೊಂದು ದಿನ ಇವುಗಳ ಸಂಖ್ಯೆ ಕ್ಷೀಣಿಸಿದಾಗ ಎಚ್ಚೆತ್ತು ಕೊಂಡರೆ ಏನೂ ಪ್ರಯೋಜನವಿಲ್ಲ. ಈಗಾಗಲೇ ಹಲವಾರು ಹಕ್ಕಿ ಪ್ರಭೇಧಗಳು ವಿನಾಶದ ಅಂಚಿಗೆ ಬಂದು ತಲುಪಿವೆ. ಈಗಲೇ ನಾವು ಎಚ್ಚೆತ್ತುಕೊಳ್ಳೋಣ ಬ್ಲಾಕ್ ಬಾಝಾ ಹಕ್ಕಿಗಳನ್ನು ಉಳಿಸಿ ರಕ್ಷಿಸೋಣ.

ಚಿತ್ರ ಕೃಪೆ: ಅಂತರ್ಜಾಲ ತಾಣ