ಹಿಮಾಲಯದ ಮಡಿಲಲ್ಲಿ
![](https://saaranga-aws.s3.ap-south-1.amazonaws.com/s3fs-public/styles/medium/public/IMG_20250127_121643~2.jpg?itok=6Tz9wMIe)
ಶ್ರೀ ರಾಮಕೃಷ್ಣ ಪರಮಹಂಸರ ನೇರ ಶಿಷ್ಯರಾದ ಸ್ವಾಮಿ ಅಖಂಡಾನಂದ ಇವರು ಬಂಗಾಳಿ ಭಾಷೆಯಲ್ಲಿ ಬರೆದ ಪುಸ್ತಕವನ್ನು ಡಾ. ನರೇಂದ್ರನಾಥ ಬಿ. ಪಾಟೀಲ್ ಆಂಗ್ಲಭಾಷೆಗೆ (In the Lap of the Himalayas) ಅನುವಾದ ಮಾಡಿದ್ದರು. ಆ ಕೃತಿಯ ಮಹತ್ವ ಹಾಗೂ ಸಾರವನ್ನು ಕನ್ನಡ ಬಲ್ಲ ಓದುಗರಿಗಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಡಾ. ಹೆಚ್. ರಾಮಚಂದ್ರಸ್ವಾಮಿ. ಸ್ವಾಮಿ ಅಖಂಡಾನಂದ ಅವರ ಹಿಮಾಲಯದ ಅನುಭವಗಳನ್ನು ನಿರೂಪಿಸುವ ಕೃತಿ ಇದು.
ಗಂಗಾಧರ ಮಹಾರಾಜ್ ಎಂದೂ ಬಾಬಾ ಎಂದೂ ಆಪ್ತವಲಯದಲ್ಲಿ ಪ್ರಸಿದ್ಧರಾಗಿರುವ ಸ್ವಾಮಿ ಅಖಂಡಾನಂದರು ಮಹಾ ಗುರು ಶ್ರೀರಾಮಕೃಷ್ಣ ಪರಮಹಂಸರ ನೇರ ಸನ್ಯಾಸಿ ಶಿಷ್ಯರಲ್ಲಿ ಒಬ್ಬರು. ಮಹಾ ಗುರು ಇನ್ನಿಲ್ಲವಾದ ಸ್ವಲ್ಪ ಕಾಲಾನಂತರ, ೧೮೮೭ರಿಂದ, ಸ್ವಾಮಿ ವಿವೇಕಾನಂದರು ಪಶ್ಚಿಮ ದೇಶಗಳಿಂದ ೧೮೯೭ರಲ್ಲಿ ಹಿಂದಿರುಗುವ ತನಕ, ಸುಮಾರು ಹತ್ತು ವರ್ಷಗಳ ಕಾಲ ಅವರು ಪವಿತ್ರ ತೀರ್ಥ ಕ್ಷೇತ್ರಗಳನ್ನು ಸಂದರ್ಶಿಸುವ ಪರಿವ್ರಾಜಕ ಯಾತ್ರಿಕರಾಗಿದ್ದರು. ಕೆಚ್ಚೆದೆಯ ಯಾತ್ರಿಯಾಗಿದ್ದ ಅವರು, ಹಿಮಾಲಯದ ಪ್ರತಿಯೊಂದು ಮುಖ್ಯವಾದ ಪವಿತ್ರಕ್ಷೇತ್ರವನ್ನೂ ಸಂದರ್ಶಿಸಿದುದಲ್ಲದೆ. ಹಿಮಾಲಯವನ್ನು ದಾಟಿ ಟಿಬೆಟ್ ಗೆ ಮೂರು ಬಾರಿ ಭೇಟಿಕೊಟ್ಟಿದ್ದಾರೆ. ೧೮೯೦ರಿಂದ ಅವರು ರಾಜಪುಟಾಣ, ಗುಜರಾತ್ ಮತ್ತು ಕ್ಷಾಮದಿಂದ ಬಳಲುತ್ತಿದ್ದ ಪಶ್ಚಿಮ ಬಂಗಾಳದ ಭಾಗಗಳು ಮುಂತಾದ ಕಡೆಗಳಲ್ಲಿ ಪ್ರವಾಸ ಮಾಡಿ ಸಮಾಜದ ಎಲ್ಲ ಸ್ತರಗಳ ಜನಗಳ ಆಪ್ತ ಸಂಪರ್ಕಕ್ಕೆ ಬರುವಂತಾದರು.
ಸ್ವಾಮಿಗಳು ತಮ್ಮ ಮಾತೃಭಾಷೆಯಾದ ಬಂಗಾಳಿಯಲ್ಲಿ ಪ್ರತಿಭಾನ್ವಿತ ಬರಹಗಾರರು ಮತ್ತು ಭಾಷಣಕಾರರಾಗಿದ್ದರು. ನಂತರದ ವರ್ಷಗಳಲ್ಲಿ, ಶಿಷ್ಯರ ಮತ್ತು ಆಸಕ್ತ ಅಭಿಮಾನಿಗಳ ಕೋರಿಕೆಯ ಮೇರೆಗೆ, ತಮ್ಮ ಪ್ರವಾಸದ ನೆನಹುಗಳನ್ನು ಬರೆದರು. ಇವು ಭಾಗಶಃ ಬಂಗಾಳಿ ಮಾಸಪತ್ರಿಕೆ ಬಸುಮತಿಯಲ್ಲೂ, ರಾಮಕೃಷ್ಣ ಮಹಾಸಂಘದ ಬಂಗಾಳಿ ಪತ್ರಿಕೆಯಾದ ‘ಉದ್ಭೋದನ್’ ನಲ್ಲೂ ಧಾರಾವಾಹಿಯಾಗಿ ಪ್ರಕಟವಾದವು. ನಂತರ ಸ್ಮೃತಿಕಥಾ ಎಂಬ ಹೆಸರಿನಲ್ಲಿ ಪುಸ್ತಕರೂಪದಲ್ಲೂ ಪ್ರಕಟವಾದವು. ಹೆಚ್ಚು ಜನರಿಗೆ ಗ್ರಾಹ್ಯವಾಗುವ ಹಾಗೆ ತಮ್ಮ ಬರಹಗಳು ಇಡಿಯಾಗಿ ಅಥವಾ ಭಾಗಶಃ ಇಂಗ್ಲಿಷಿಗೆ ಅನುವಾದಿತವಾಗಬೇಕೆಂಬುದು ಸ್ವಾಮಿಗಳ ಆಶಯವಾಗಿದ್ದಿತು. ಸ್ವಾಮಿಗಳ ಕೆಲವು ಶಿಷ್ಯರುಗಳ ನೆರವಿನಿಂದ ಪ್ರಕಾಶಕರು ೧೯೭೯ರಲ್ಲಿ ಅವರ ರಾಜಪುಟಾಣ, ಗುಜರಾತ್ ಮತ್ತು ಪಶ್ಚಿಮ ಬಂಗಾಳ ಪ್ರವಾಸಕಥನದ ಮುಖ್ಯ ಭಾಗಗಳನ್ನು ‘ಪವಿತ್ರ ಪವಿವ್ರಜನೆಯಿಂದ ಮಾನವರೂಪಿ ದೇವರ ಸೇವೆಯವರೆಗೆ’ (From Holy Wanderings to Service of God in Man) ಎಂಬ ಹೆಸರಿನಲ್ಲಿ ಪ್ರಕಟಿಸಿದ್ದಾರೆ. ಇಂಗ್ಲಿಷ್ ಬಲ್ಲ ಸಾರ್ವಜನಿಕರಿಂದ ಇದು ಉತ್ಸಾಹಿತ ಸ್ವಾಗತವನ್ನು ಗಳಿಸಿತು. ಏಕೆಂದರೆ, ಸ್ವಾಮಿಗಳ ಬರಹಗಳು ಪ್ರದೇಶಗಳ, ಘಟನೆಗಳ ಮತ್ತು ಜನರ ಮೈನವಿರೇಳಿಸುವ ವಿವರಗಳನ್ನು ಮಾತ್ರವಲ್ಲದೆ, ಭಗವಂತನ, ಪ್ರಕೃತಿಯ ಮತ್ತು ಮಾನವನ ಪ್ರೇಮಿ ಮತ್ತು ತತ್ವಜ್ಞಾನಿಯೊಬ್ಬರ ಚಿಂತನೆಗಳನ್ನು ಕೂಡ ನೀಡುತ್ತವೆ ; ಹಾಗೆ ಅವು ಉತ್ತಮಾರ್ಥದಲ್ಲಿಯೂ ಬೋಧಪ್ರದವಾಗಿದೆ.
ಸ್ವಾಮಿ ಅಖಂಡಾನಂದರು ಶತಮಾನಗಳ ಹಿಂದೆ ಆಧುನಿಕ ಸೌಲಭ್ಯಗಳಿಲ್ಲದ ಸಮಯದಲ್ಲಿ ಹೃಷಿಕೇಶ, ತೆಹರಿ, ಯಮುನೋತ್ರಿ, ಗಂಗೋತ್ರಿ, ಚಂದ್ರವದನ, ಶ್ರೀನಗರ, ರುದ್ರಪ್ರಯಾಗ, ಗುಪ್ತಕಾಶಿ, ಊಖೀ ಮಠ, ಗೌರೀಕುಂಡ, ಕೇದಾರನಾಥ ಮೊದಲಾದ ಸ್ಥಳಗಳಿಗೆ ಹೋಗಿರುವುದು ಅಚ್ಚರಿಯ ಸಂಗತಿಯೇ ಸರಿ. ಈ ಬಗ್ಗೆ ಸ್ವಾಮೀಜಿಯವರು ಬಹಳ ಸೊಗಸಾದ ವರ್ಣನೆ ಮಾಡಿದ್ದಾರೆ. ಸುಮಾರು ೧೨೦ ಪುಟಗಳ ಈ ಪ್ರವಾಸ ಕಥಾನಕವು ಓದಲು ಬಹು ಸೊಗಸಾಗಿಯೂ, ರೋಚಕವಾಗಿಯೂ ಇದೆ.