ಹಿರಿಯರೆಂದರೆ ಅನುಭವಗಳ ಜ್ಞಾನ ಭಂಡಾರ
ಇಂದು (ಅಕ್ಟೋಬರ್ ೧) ಅಂತರಾಷ್ಟ್ರೀಯ ಹಿರಿಯರ ದಿನ. ಮನೆಯಲ್ಲಿ ಹಿರಿಯರಿದ್ದರೆ ಜ್ಞಾನ ಭಂಡಾರವೇ ಇದ್ದಂತೆ. ಜ್ಞಾನ ತುಂಬಿದ ಕೊಡ, ಅನುಭವಗಳ ಹೊಲ, ಬೇಕು - ಬೇಡಗಳ ವಿಮರ್ಶಕರು, ಚಿಂತಕರು, ಮನೆಯ ಅಮೂಲ್ಯ ಆಸ್ತಿ ಎಂದರೆ ಹಿರಿಯರು. ಕಾನೂನು ಚೌಕಟ್ಟಿನೊಳಗೆ ೬೦ ದಾಟಿದವರನ್ನು 'ಹಿರಿಯರೆಂದು' ಪರಿಗಣಿಸಲಾಗುತ್ತದೆ. ಇತ್ತೀಚೆಗೆ ನಾವು ಕೇಳುವ ಒಂದು ದುರಂತ ಸುದ್ಧಿಯೆಂದರೆ ಹೆಚ್ಚಿನವರಿಗೆ ಮನೆಯ ಹಿರಿಯ ಜೀವಗಳು ಬೇಡ. ತಾವು ತಮ್ಮ ಹೆಂಡತಿ (ಗಂಡ) ಮಕ್ಕಳ ಪುಟ್ಟ ಪ್ರಪಂಚ. ಹಿರಿಯರೇನೋ ಅಡ್ಡಿ ಅವರಿಗೆ. ಇದ್ಯಾಕೆ ಹೀಗೆ? ಸಂಸ್ಕಾರದ ಕೊರತೆಯೇ? ಬೆಳೆಸಿದ ರೀತಿ -ನೀತಿಯೇ? ಹೊಂದಾಣಿಕೆಯಲ್ಲಿ ಎಡವುತ್ತಿದ್ದಾರೆಯೇ? ಒಂದೂ ಅರ್ಥವಾಗುತ್ತಿಲ್ಲ. ಹಣ ಗಳಿಸುವ ಭರಾಟೆಯಲ್ಲಿ ಸಂಬಂಧಗಳ ಕೊಂಡಿ ಕಳಚುತ್ತಿದೆ. ಹೆತ್ತವರು ವೃದ್ಧಾಶ್ರಮದತ್ತ ಮುಖ ಮಾಡುತ್ತಿದ್ದಾರೆ.
ಇರುವ ಒಂದೋ ಎರಡೋ ಮಕ್ಕಳು ಹತ್ತಿರ ಇರುವುದು ಬಿಡಿ, ಬೂದಿಯಾದ ಮೇಲೂ ಬರುವುದು ಕಷ್ಟ. ಒಟ್ಟಿನಲ್ಲಿ ಯಾರೂ ಬೇಡವೆಂಬ ಪರಿಧಿಯನ್ನು ಹಾಕಿಕೊಂಡಿರುತ್ತಾರೆ ಅಥವಾ ಮಕ್ಕಳೊಂದಿಗೆ ಬದುಕಬೇಕೆಂದರೆ ಹಿರಿಯರು ಕಣ್ಣಿದ್ದು ಕುರುಡರು, ಕಿವಿಯಿದ್ದು ಕಿವುಡರು, ಬಾಯಿಯಿದ್ದೂ ಮೂಗರಾಗಬೇಕು. ಇಲ್ಲದಿದ್ದರೆ ಬದುಕಿಲ್ಲ. ಎಲ್ಲಿಯೋ ಬೆರಳೆಣಿಕೆಯ ಒಂದ್ಹತ್ತು ಸಂಸಾರಗಳು ಚಂದದಲ್ಲಿ ಇರಬಹುದಷ್ಟೆ. ಹಿರಿಯರ ಸ್ಪರ್ಶ, ಮಾತು,ಆಟ ಊಟ ಪಾಠದಂತೆ, ಔಷಧಿಯಂತೆ ಪುಟ್ಟ ಮಕ್ಕಳಿಗೆ. ಯುವಪೀಳಿಗೆ ಐಷಾರಾಮಿಯಲ್ಲಿ ಇದನ್ನು ಆಲೋಚಿಸುವುದಿಲ್ಲ.
ನಮ್ಮ ಬಂಧುಗಳಲ್ಲಿ ಸತ್ಯ ಘಟನೆ. ವಿದೇಶ ವಾಸದ ಮಗ ಸೊಸೆಯೊಂದಿಗೆ ಹೊಂದಾಣಿಕೆ ಮಾಡದೆ ಆ ಮನೆಯ ಹಿರಿಯರು ಸಮುದ್ರಕ್ಕೆ ಹಾರಿ ಜೀವ ಕಳೆದುಕೊಂಡರು. ಮತ್ತೆ ಮಗ ಬಂದು ಕಣ್ಣೀರಿಟ್ಟರೆ ಏನು ಪ್ರಯೋಜನ? ಆದರೂ ಸೊಸೆ ಬಂದಿಲ್ಲ. 'ಬೇಕಾದರೆ ಬಂದು ನಮ್ಮೊಂದಿಗಿರಿ' ಎನುವ ಸೊಸೆಯ ಮಾತು ಈ ಕೃತ್ಯಕ್ಕೆ ಕಾರಣವಾಯಿತಂತೆ, ಡೈರಿಯಲ್ಲಿ ಬರೆದಿಟ್ಟಿದ್ದರು.
ಇತ್ತೀಚೆಗೆ ನಡೆಯುವ ಕೆಲವು ಹಿರಿಯರ ಇಂತಹ ಯೋಚನೆಗಳಿಗೆ ಮಕ್ಕಳ ತಿರಸ್ಕಾರ ಅಥವಾ ಒಬ್ಬಂಟಿತನ, ಹೊಂದಾಣಿಕೆಯ ಕೊರತೆ, ಎಲ್ಲಾ ಇದ್ದು ಏನೂ ಇಲ್ಲದಂತಿರುವುದು, ಮಾನವೀಯ ಮೌಲ್ಯಗಳ ಕುಸಿತ, ನಾನೇ ಎಂಬ ಅಹಂ, ಬದುಕಿನ ಮಜಲನ್ನು ಉಡಾಫೆಯಾಗಿ ನೋಡುವ ಪ್ರವೃತ್ತಿ, ಹಣವೇ ಮುಖ್ಯವೆಂಬ ಮನೋಭಾವ, ಸಂಬಂಧಗಳ ಬೆಲೆ ಅರಿಯದಿರುವುದು ಕಾರಣವಿರಬಹುದು ಅನ್ನಿಸ್ತದೆ. ಹಿರಿಯರನ್ನು ಜೀವಂತ ಇರುವಾಗಲೇ ಚೆನ್ನಾಗಿ ನೋಡಬೇಕು. ಅಳಿದ ನಂತರ ಗೌಜಿ, ಗಮ್ಮತ್ತು, ಗದ್ದಲ, ವಡೆ ಪಾಯಸ ಮಾಡಿ ಶ್ರಾದ್ಧಮಾಡಿದರೆ ಏನು ಪ್ರಯೋಜನ? ಕೆಲವು ಮನೆಗಳಲ್ಲಿ ಹಿರಿಯರನ್ನು ತಾತ್ಸಾರ ಮಾಡಿ, ಜೀವಂತ ಶ್ರಾದ್ಧ ಮಾಡಿದ್ದೂ ಇದೆ. ತೋರಿಕೆಯ ಯಾವ ಅನುಕಂಪವೂ ಅವರಿಗೆ ಬೇಡ. ನೈಜವಾದ ಕಾಳಜಿಯಿರಲಿ.
ತಮ್ಮ ಕರುಳಿನ ಕುಡಿಗಳನ್ನು ಕೈಹಿಡಿದು ನಡೆಯಲು ಸಹಕರಿಸಿದ ಹೆತ್ತವರನ್ನು ಮುಪ್ಪು ಆವರಿಸಿದಾಗ ಮಕ್ಕಳೇ ಕೈ ಹಿಡಿದು ನಡೆಸಬೇಕಷ್ಟೆ. ಕೈಬಿಟ್ಟರೆ ಅವರು ಎಲ್ಲಿಗೆ ಹೋಗಬೇಕು? ಸ್ವಲ್ಪ ಸಮಯ ಅವರಿಗಾಗಿ ಮೀಸಲಿಡಬೇಕು. ಪಕ್ಕದಲ್ಲಿ ಕುಳಿತು ಮಾತನಾಡಿಸಿದರೆ ಅಷ್ಟೂ ಸಂತೋಷಪಡಬಹುದು. ಹಿರಿಯರನ್ನು ಸಂತಸದಲ್ಲಿಡಲು ಪ್ರಯತ್ನಿಸಬೇಕು. ಆ ವಯಸ್ಸಿಗೆ ಬೇಡವೆಂದರೂ ಹಲವಾರು ಕಾಯಿಲೆಗಳು ಶರೀರವನ್ನು ಸೇರಿ ಕುಗ್ಗಿಸುವುದು ಸಹಜ.
(೨೫ ವರ್ಷಗಳ ಹಿಂದೆ) ನಾನೊಂದು ಮನೆಗೆ ಹೋಗಿದ್ದಾಗ ಅಲ್ಲಿಯ ಹಿರಿಯರಿಬ್ಬರ ಸುಳಿವೇ ಇಲ್ಲ ಕೇಳಿದಾಗ ಆ ಮನೆಯ ಸೊಸೆ ಕೊಟ್ಟ ಉತ್ತರ ಕೇಳಿ ಮನಸ್ಸಿಗೆ ಹಿಂಸೆಯಾಯಿತು. ಮಾವನನ್ನು ಮನೆಯ ಹೊರಭಾಗದ ಸ್ನಾನದ ಮನೆಯ ಸ್ಟೋರ್ ರೂಮಿನ ಕತ್ತಲೆ ಕೋಣೆಯಲ್ಲಿ ಮಲಗಿಸಿದ್ದರು. ಇಷ್ಟು ದೊಡ್ಡ ಮನೆಯಿರುವಾಗ ದೂರದಲ್ಲಿ ಯಾಕೆ ಕೇಳಿದೆ. ದಿನಾ ಸ್ನಾನವಿಲ್ಲ, ವಾಸನೆ ಬರ್ತಾರೆ, ಹತ್ತಿರ ಹೋಗಲಾಗುವುದಿಲ್ಲ ಎಂದರು. ಬೇಕಾದಷ್ಟು ಆಸ್ತಿ ಬದುಕು ಇತ್ತು. ವಾಸನೆಗೆ ಕಾರಣ ಇವರೇ ಅಲ್ವೇ? ಅತ್ತೆಯದು ಅಸಹಾಯಕ ಸ್ಥಿತಿ. ಹೀಗಿದ್ದ ಉದಾಹರಣೆಗಳು ಸಾವಿರ ಸಾವಿರ ಇರಬಹುದು. ಅವರು ಶ್ರಮವಹಿಸಿ ಮಾಡಿದ ಸಂಪತ್ತು ಬೇಕು, ಅವರು ಬೇಡ ಎಂದರೆ ಇದು. ಅನಾಗರೀಕ ವರ್ತನೆಯಲ್ಲವೇ?
ಹಿರಿಯರ ಈ ದುಸ್ಥಿತಿ, ಅನಾಥಪ್ರಜ್ಞೆ, ಸಾಮಾಜಿಕ ಭದ್ರತೆ, ನೆಮ್ಮದಿ, ಆರೋಗ್ಯ ಕಾಳಜಿಗಾಗಿ ಅಕ್ಟೋಬರ್ ಒಂದು ೧೯೯೧ರಂದು ಮೊದಲ ಸಲ ಅಂತರಾಷ್ಟ್ರೀಯ ಹಿರಿಯರ ದಿನ ಆಚರಿಸಿ ಘೋಷಿಸಲಾಯಿತು. ಮಕ್ಕಳ ಮನದಂತಿರುವ ಹಿರಿಯರಿಗೆ ಗೌರವಪೂರ್ವಕ ಅರ್ಪಣೆ ಮಾಡಲಾಯಿತು. ಅವರಿಗಾಗಿಯೇ ಹಲವಾರು ಯೋಜನೆಗಳನ್ನು ಇತ್ತೀಚೆಗೆ ಸರಕಾರ ಮಟ್ಟದಲ್ಲಿ ಸಹ ಜಾರಿಗೆ ತರಲಾಗಿದೆ. ವಂಚನೆಗೆ, ಮೋಸಕ್ಕೆ ಒಳಗಾಗದಂತೆ ಭದ್ರತೆ ನೀಡಲಾಗುತ್ತದೆ. ವೃದ್ಧರ ಕಣ್ಣೀರು ಮನೆಗೆ ಶ್ರೇಯಸ್ಸಲ್ಲ. ಅವರ ಅಸಹಾಯಕತೆಯ ದುರುಪಯೋಗ ಸಲ್ಲದು. ಈ ದಿನದಂದು ಜಗತ್ತಿನ ಎಲ್ಲಾ ಹಿರಿಯರಿಗೂ ಗೌರವಪೂರ್ವಕ ನಮನಗಳು.
-ರತ್ನಾ ಕೆ ಭಟ್ ತಲಂಜೇರಿ, ಪುತ್ತೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ