ಹಿರಿಯರ ಕೆಟ್ನಾಲಜಿ ಕಥಾನಕ !

ಹಿರಿಯರ ಕೆಟ್ನಾಲಜಿ ಕಥಾನಕ !

 
ಕೃಷ್ಣರಾವ್ ಪಾರ್ಕ್’ನಲ್ಲಿ ಸಂಜೆ ವೇಳೆ ಹಿರಿಯರು ಕೂಡಿಕೊಂಡು ಕಾಲಕ್ಷೇಪ ಮಾಡುವ ಹೊತ್ತು. ಈಗಲೂ ಕೆಲವೆಡೆ ಇಂಥಾ ಹಿರಿಯರಿಗೆ ಹೊತ್ತು ಕಳೆವ ತಾಣಗಳು ಇರುವುದು ಅಚ್ಚರಿಗಿಂತ ಮೆಚ್ಚತಕ್ಕ ಅಂಶ.
 
ಮಧ್ಯವರ್ಗದ ಪ್ರತೀಕವಾದ ಹಿರಿಯರು. ನನ್ನಂತೆ ನಾನು ಎಂಬ ಧೋರಣೆಯ ಬಿಳೀ ಪಂಚೆ-ಬಿಳೀ ಶರಟಿನ ಮಂದಿ ಕೆಲವರು. ಶಾರ್ಟ್ಸ್-ಟೀ ಷರಟು ತೊಟ್ಟ ಹಿರಿಯರು ಕೆಲವರು. ಶಾರ್ಟ್ಸ್ ಧರಿಸಿಹ ಹಿರಿಯರು ಯಾರು ಎಂದರೆ, ಮೂರು ತಿಂಗಳೋ ಆರು ತಿಂಗಳೋ ವಿದೇಶದಲ್ಲಿದ್ದು ತಾವು ಹುಟ್ಟಿರೋದೇ ಅಲ್ಲಿ ಎಂಬಂತಾಡುವ ಮಕ್ಕಳನ್ನು ಹೊಂದಿರುವವರು. ಇಂಥಾ ಹಿರಿಯರಲ್ಲಿ ಕೆಲವರು ತಮ್ಮನ್ನು ತಾವು ಆ ದಿರಿಸಿಗೆ ಹೊಂದಿಸಿಕೊಂಡಿದ್ದರೂ ಮತ್ತೆ ಕೆಲವರು ಬಲವಂತಕ್ಕೆ ಏರಿಸಿಕೊಳ್ಳುವವರು.  
 
ಹಲವರಿಗೆ ಹೊಸ ತಂತ್ರಜ್ಞ್ನಾನದ ಅರಿವು ತಕ್ಕಮಟ್ತಿಗೆ ಇದ್ದರೂ ಮತ್ತೆ ಹಲವರು ಅದರ ಗಂಧ ಗಾಳಿ ಗೊತ್ತಿಲ್ಲದೇ ಇರುವವರು. ಸಂಜೆ ವೇಳೆ ಹೀಗೆ ಸೇರುತ್ತ ಅದೂ ಇದೂ ಮಾತನಾಡುತ್ತ ಕಲಿಯುವುದು ಮಾಡಿದರೂ, ಹೆಚ್ಚುವರಿ ಸಮಯದಲ್ಲಿ ಲೋಕಲ್ ರಾಜಕೀಯದ ಮಾತು ಮುಗಿಸುವಷ್ಟರಲ್ಲಿ ಧಾರಾವಾಹಿಗಳ ಸಮಯ ಶುರುವಾಗಿರುತ್ತದೆ. ಕೆಲವರಿಗೆ ಆಸಕ್ತಿ ಇರದಿದ್ದರೂ ಸಾಮಾನ್ಯವಾಗಿ ಒಂದಿಬ್ಬರು ಹೊರಡುತ್ತಿದ್ದಂತೆಯೇ ಮಿಕ್ಕವರೂ ಜಾಗ ಖಾಲಿ ಮಾಡುವುದು ಮಾನವ ಸಹಜ ಗುಣ.
 
ನುಡಿದವರಾರು ಎಂಬ ಗೋಜಲಿಗೆ ಮನ ಸಿಲುಕಿಸಿಕೊಳ್ಳದೇ ಅವರ ಜಗತ್ತಿಗೆ ಕಾಲಿರಿಸಿ ಓದುತ್ತಾ ಹೋದರೆ ಬಹುಶ: ಅವರ ಅಳಲು ಅರ್ಥವಾಗಬಹುದು .... ನೋಡೋಣ ಬನ್ನಿ ಅವರಿಗೆ ಎಷ್ಟು ಬಲವಂತದ ಮಾಘಸ್ನಾನ ಮಾಡಿಸುತ್ತೇವೆ ಎಂದು ...
 
---
 
"ಮಗ ಸೊಸೆ ಎಲ್ಲ ಕ್ಷೇಮವೇ?"
 
"ಅವರವರ ಪಾಡಿಗೆ ಅವರು ಚೆನ್ನಾಗಿದ್ದಾರೆ. ನಾವು ಎಲ್ಲಿಯವರೆಗೆ ಒಬ್ಬರ ವಿಷಯದಲ್ಲಿ ತಲೆ ಹಾಕೋದಿಲ್ವೊ, ಮೂಗು ತೂರಿಸೋದಿಲ್ವೋ ಅಲ್ಲಿಯವರೆಗೂ ಸಂಬಂಧಗಳು ದಿವಿನಾಗೇ ಇರುತ್ವೆ. ಮಕ್ಕಳ ವಿಷಯದಲ್ಲೂ ಇದು ಸತ್ಯ. ಅಲ್ವೇ?" 
 
"ಬಿಳೀ ಮೀಸೆಗೆ ತಕ್ಕ ಮಾತು ಆಡಿದ್ರಿ ಬಿಡಿ"
 
"ಹೆ ಹೆ ಹೆ .. ಏನ್ ಡೈಲಾಗ್’ರೀ ಅದೂ ... ಭಟ್ಟರ ಸಿನಿಮಾ ಡೈಲಾಗೋ ಹೇಗೆ?"
 
"ಹಂಗೆಲ್ಲಾ ಏನೂ ಇಲ್ರೀ ... ನಮ್ ರಾಯರು ಆಡಿದ ಮಾತು ಹಾಗಿತ್ತು. ಅನುಭವಕ್ಕೆ ತಕ್ಕ ಮಾತು ಅಂದೆ"
 
"ಅದೂ ನಿಜಾ ಅನ್ನಿ ... ನಮ್ಮ ಮನೆಯಲ್ಲೂ ಇದೇ ಕಥೇನೇ!. ರಾಯರು ಹೇಳಿದ ಹಾಗೆ ನಮ್ಮ ಆಚಾರ ವಿಚಾರ ನಮಗೆ. ಅವರ ನಂಬುಗೆ ಅವರಿಗೆ. ಅಲ್ವೇ ರಾಯರೇ? "
 
"ಹೌದು ನೋಡಿ. ನಾವು ಹೇಳೋದು ಅವರಿಗೆ ಕಂದಾಚಾರ. ಅವರದು ಮಾತ್ರ ಅದೇನೋ ಕೆಟ್ನಾಲಜಿ ಅಂತೆ. ಗಟ್ಟಿಯಾಗಿ ನಿಂತು ಇನ್ನೊಬ್ಬರಿಗೆ ಆಶ್ರಯವಾಗ್ತಾರೆ ಅಂದುಕೊಂಡರೆ, ಬರೀ ಕೆಟ್ನಾಲಜಿಗೆ ಜೋತು ಬಿದ್ದು ಪಡವಲಕಾಯಿಗಳಾಗಿದ್ದಾರೆ."
 
"ರಾಯರೇ ಅದು ಟೆಕ್ನಾಲಜಿ ... ಅಂದ್ರೆ ತಂತ್ರಜ್ಞ್ನಾನ ಅಂತ"
 
"ತಂತ್ರಜ್ಞ್ನಾನ ಇದ್ರೇನೇ ಬದುಕೇ? ನಮ್ಮದು ಪೌರೋಹಿತ್ಯ ವಂಶ. ಆದರೇನಾಯ್ತು ಇವಕ್ಕೆ ಮಂತ್ರಜ್ಞ್ನಾನವೇ ಇಲ್ಲ ಬರೀ ತಂತ್ರಜ್ಞ್ನಾನ ಅಷ್ಟೇ! ಒಂದು ಸಣ್ಣ ಗಣೇಶನ ಪೂಜೆ ಮಾಡೋದಕ್ಕೂ ಅದೇನೋ ಟ್ಯೂಬ್ ಬೇಕು ಅವರಿಗೆ. ಆ ಮುಂದಿನ ಪೀಳಿಗೆಗೆ ಅದೂ ನಿಂತು ಹೋಗುತ್ತೆ! "
 
"ಎರಡು ವರ್ಷಕ್ಕೆ ಒಮ್ಮೆ ಬಂದು ಹೋಗೋ ವೈಭವಕ್ಕೆ ನನ್ ಅಳಿಯ ನಮ್ ಮನೇಲಿ ಅದೆಂಥದ್ದೋ ನಿಂತ್ ಕಡೆ ಓಡೋ ಮೆಷೀನ್ ತಂದಿಟ್ಟಿದ್ದಾನೆ. ಪಕ್ಕಕ್ಕೆ ಇಡೋಕ್ಕಾಗಲ್ಲ, ಜರುಗಿಸೋದಂತೂ ಬಿಡಿ. ಒಂದು ಸಾರಿ ಪಕ್ಕಕ್ಕೆ ಇಡೋಣಾ ಅಂತ ಹೋಗಿ ಸೊಂಟ ಹಿಡ್ಕೊಂಡು ಮೂರು ದಿನ ಮೇಲಕ್ಕೇ ಏಳೋಕ್ಕಾಗಲಿಲ್ಲ. ಅದರ ಕೆಳಗೆ ಏಳಾಳುದ್ದ ಧೂಳು. ನಮಗೆ ಇದು ಬೇಡ ನಿಮ್ಮ ಮನೆಯಲ್ಲೇ ಇಟ್ಟಿರಿ ಅಂದೆ. ಅಲ್ಲೂ ಒಂದಿದೆ ಅನ್ನೋದೇ?"
 
"ಅವರು ಲಂಡನ್’ನಲ್ಲಿ ಇದ್ದಾಗ ಈ ಮೆಷೀನ್ ಕಥೆ ಏನು? ಸುಮ್ಮನೆ ಬಿದ್ಗೊಂಡಿರುತ್ತೋ?"
 
"ಅಷ್ಟು ದೊಡ್ಡ ಮೆಷೀನು ಜಾಗ ತೊಗೊಳ್ತು ಅಂತ ನಾನು ಸುಮ್ಮನಿರೋಕ್ಕೆ ಆಗುತ್ತೋ? ಒಂದು ಬೆಡ್ಶೀಟ್ ಅದರ ಮೇಲೆ ಹಾಸಿ, ನನ್ ಮೊಮ್ಮಕ್ಕಳ ಮೂರು ಚಕ್ರದ ಸೈಕಲ್ ನಿಲ್ಲಿಸಿದ್ದೀನಿ. ಮಳೆ ಬಂದಾಗ ಬಟ್ಟೆ ಒಣಗಿ ಹಾಕೋದಕ್ಕೂ ಆಗುತ್ತೆ ಬಿಡಿ ... ಹ ಹ ಹ"
 
"ನೆಲದ ಮೇಲೆ ಮಲಗಿರೋದಕ್ಕೆ ಬೆಡ್ಶೀಟ್ ಬೇರೆ ಹೊದ್ದಿಸಿರ್ತೀರ ಅಂದ್ರೆ ಅದು ಮಲಗದೇ ಇನ್ನೇನ್ ಮಾಡುತ್ತೆ? ಹ ಹ ಹ"
 
"ನೋಡಿ ಶರ್ಮ ಬಂದರು ... ಏನ್ ಸ್ವಾಮೀ ಇಷ್ಟು ತಡ?"
 
"ನೆನ್ನೆ ಹೇಳಿದ್ನಲ್ಲ ಉಪ್ಪುಸದ್ ಮೆಷೀನ್ ಕಥೆ ... ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಹೋಗೋ ಟೈಮ್’ಗೆ ನಿಮ್ಮ ಮನೆಗೆ ಬಂದು ಕೆಟ್ಟಿರೋ ಮೆಷೀನು ರಿಪೇರಿ ಮಾಡ್ತೀನಿ ಅಂದಿದ್ದ ಆ ತಿಪ್ಪೇಶಿ ಮಗ. ಅದಕ್ಕೇ ತಡ ಆಯ್ತು"
 
"ಉಬ್ಬಸದ ಮೇಷೀನೇ? ಅದೇನು ಉಬ್ಬಸ ಬರಿಸುತ್ತೋ ಅಥವಾ ನಿಲ್ಲಿಸುತ್ತೋ?"
 
"ಎರಡೂ ಅಲ್ರೀ ... ಕರೆಂಟ್ ಹೋದಾಗ ಕಂಪ್ಯೂಟರ್ ಕೂಡ ನಿಂತು ಹೋಗದೇ ಇರಲಿ ಅಂತ ಮಗ ತಂದಿಟ್ಟಿರೋ ಉಪ್ಪುಸದ ಮೆಷೀನು"
 
"ಅಯ್ಯೋ ಕರ್ಮ! ಅದು ಯು.ಪಿ.ಎಸ್ಸು !"
 
"ಕರೆಂಟ್ ಹೋದಾಗ ಬೇರೆಲ್ಲ ಕೈ ಎತ್ತೋ ಮುಂಚೆ ಇದು ಸತ್ತಿರುತ್ತೆ. ಸಮಯಕ್ಕೆ ಸರಿಯಾಗಿ ಮಂತ್ರ ಮರೆಯೋ ಕರ್ಣನ ಹಾಗೆ"
 
"ಅಬ್ಬಬ್ಬ ... ಈ ಮಕ್ಕಳು ಮಾಡೋ ಅವಾಂತರಕ್ಕೆ ನನ್ ಹತ್ತಿರೋ ಇರೋ ಫೋನೂ ಒಂದು ... ಅಲ್ಲಿಂದ ಬರೋವಾಗ ಒಂದು ಐ-ಫೋನ್ ತಂದು ನನ್ನಾಕೆಗೆ ಕೊಟ್ಟಳು ಮಗಳು. ನನಗೆಂತಕೇ ಫೋನು ಅಂತ ಇವಳು ಕೇಳಿದ್ದಕ್ಕೆ ಇದು ಸ್ಮಾರ್ಟ್ ಫೋನು ಅಂತ ಏನೇನೋ ಹೇಳೋಕ್ಕೆ ಹೊರಟಲು ... ನಮ್ಮೋಳು ಅದಕ್ಕೆ ಹೇಳಿದ್ ಮಾತು ಕೇಳಿ ಬಿದ್ದೂ ಬಿದ್ದು ನಕ್ಕಿದ್ದೆ ನಾನು. ಅವಳು ಅದಕ್ಕೆ ರಾತ್ರಿ ಅಡುಗೇನೇ ಮಾಡ್ಲಿಲ್ಲ ಬಿಡಿ, ಅದು ಬೇರೇ ಕಥೆ"
 
"ಏನಾಯ್ತು ಅಂಥದ್ದು"
 
"ಮಗಳು ಸ್ಮಾರ್ಟ್ ಫೋನು ಅಂದಿದ್ದಕ್ಕೆ ನಮ್ಮೋಳು ಸ್ಮಾರ್ತರ ಫೋನೇ? ಶೃಂಗೇರೀ ಮಠದ್ದೇ? ಅಂದಳು"
 
"ಏನು ಕಥೆಯೋ ಏನೋ? ಇವರ ತಾಳಕ್ಕೆ ನಮ್ಮನ್ನೂ ಕುಣಿಸ್ತಾರೆ. ಅನ್ನೋ ಹಾಗಿಲ್ಲ ಅನುಭವಿಸೋ ಹಾಗಿಲ್ಲ"
 
"ಅದ್ಯಾವುದೋ ಯೂ-ಟ್ಯೂಬಂತೆ. ಸಿನಿಮಾ, ಹರಟೆ, ಸೀರಿಯಲ್ಲು ಅದೂ ಇದೂ ಏನೆಲ್ಲ ನೋಡಬಹುದು ಅಂತ ಹೇಳ್ತಾ ಇರ್ತಾನೆ ಮೊಮ್ಮಗ. ಅವತ್ತೊಂದು ಭಾನುವಾರ ಮಧ್ಯಾನ್ನ ಸಿನಿಮಾ ಶುರು ಮಾಡಿದ್ದಕ್ಕೆ ಸಂಜೆ ದೀಪಾ ಹೊತ್ತಿಸೋ ಹೊತ್ತಿಗೆ ಇದನ್ನು ಆರಿಸಿದ್ವಿ. ಮಧ್ಯೆ ಮಧ್ಯೆ ಪಾನೀಯಮ್ ಸಮರ್ಪಯಾಮಿ ಅನ್ನೋ ಹಾಗೆ ಜಾಹೀರಾತುಗಳು. ಜಾತ್ರೆ ಬೀದೀಲಿ ರಥ ಹೋದ ಹಾಗೆ ಮುಂದೆ ಹೋಗೋಕ್ಕಿಂತ ನಿಲ್ಲೋದೇ ಜಾಸ್ತಿ. ಚೇರ್ ಮೇಲೆ ಕೂತು ಬೆನ್ನು ನೋವು ಬಂತು ಅಂತ ಆ ಕರೀ ತಟ್ಟೆ ಲ್ಯಾಪ್ಟಾಪ್’ನ ತೊಡೇ ಮೇಲೆ ಇಟ್ಕೊಂಡ್ರೆ ಪಂಚೆ ಸುಡೋದೊಂದು ಬಾಕಿ ನೋಡಿ."
 
"ಹೋದ ವಾರ ನಮ್ಮ ಮನೆಯಲ್ಲಿ ಆದ ಕಥೆ ಕೇಳಿ. ಅದು ನೆಡೆದ ಮೂರು ದಿನ ಮಗನಿಂದ ಫೋನಿಲ್ಲ, ಈ-ಮೈಲ್ ಇಲ್ಲ. ಸಿಟ್ಟು ಬಂದಿತ್ತು ಅವನಿಗೆ"
 
"ಏನಾಯ್ತು ಅಂಥದ್ದು?"
 
"ಫೋನ್ ಮಾಡಿದೋನು ’ಎಲ್ಲ ಆರೋಗ್ಯಾನಾ? ಚ್ಯಾಟ್’ಗೆ ಬನ್ನಿ ಅಂತ ಮೆಸೇಜ್ ಹಾಕಿದ್ರೆ ಪತ್ತೇನೇ ಇಲ್ಲ ಹಂಗೆ ಹಿಂಗೆ ಅಂದ. ನಾನು ಇಲ್ಲಪ್ಪ ಲ್ಯಾಪ್ಟಾಪು ಕೆಲಸ ಮಾಡ್ತಿಲ್ಲ ಅಂದೆ. ಹೊಸಾದು ತಂದಿಟ್ಟಿದ್ದೆ, ಕೆಡೋಕ್ಕೆ ಏನಾಯ್ತು ಅಂದ. ನಾನು ಕಾರಣ ಹೇಳ್ದೆ, ಅದಕ್ಕೆ ಅವನಿಗೆ ಸಿಟ್ಟು"
 
"ಸ್ವಾಮೀ ನೀವು ಧಾರಾವಾಹಿ ನೋಡೋದು ಜಾಸ್ತಿ ಆಯ್ತು ಅನ್ನಿಸುತ್ತೆ. ಬೇಗ ಹೇಳಿ ಆ ಕಾರಣ"
 
"ನನ್ ಹೆಂಡ್ತಿ ಅರಿಶಿನ-ಕುಂಕುಮಕ್ಕೆ ಹೋಗಿದ್ಲು. ಅಲ್ಲಿಂದ ತಂದಿದ್ದ ಕೋಸಂಬರಿ ಕವರನ್ನ ನಾನು ತೆರೆದು ಇಟ್ಟಿದ್ದ ಲ್ಯಾಪ್ಟಾಪ್ ಮೇಲಾ ಇಡೋದು.  ಅದೇನು ಕವರ್ರು ತೂತಾಗಿತ್ತೋ ಏನೋ? ಸೌತೇಕಾಯಿ ನೀರು ಲ್ಯಾಪ್ಟಾಪ್ ಒಳಗೆ ನುಗ್ಗಿತು. ಇನ್ನೆಲ್ಲಿಂದ ಕೆಲಸ ಮಾಡುತ್ತೆ ಹೇಳಿ?"
 
"ಬಿಡಿ, ಇದ್ದಿದ್ದೇ ಗೋಳು. ಮಳೆ ಬರೋ ಹಾಗಿದೆ, ಹೊರಡೋಣ ನಡೀರಿ. ಈ ಕೆಟ್ನಾಲಜಿ ಕಥೆ ಇವತ್ತಿಗೆ ಮುಗಿಯೋಲ್ಲ ..."
 

Comments

Submitted by H A Patil Tue, 01/10/2017 - 20:17

ಶ್ರೀನಾಥ ಭಲ್ಲೆಯವರಿಗೆ ವಂದನೆಗಳು
ಸರ್‍ ಮನೊಲ್ಲಾಸಗೊಳಿಸುವ ಲೇಖನ ಓದಿ ಸಂತಸವಾಯಿತು ಈ ಧಾಟಿಯ ಬರವಣಿಗೆಯಲ್ಲಿ ನೀವು ಸಿದ್ಧಹಸ್ತರು ಧನ್ಯವಾದಗಳು.