ಹಿರಿಯ ಪಾಂಡವ ಧರ್ಮರಾಯ

ಹಿರಿಯ ಪಾಂಡವ ಧರ್ಮರಾಯ

ಪುಸ್ತಕದ ಲೇಖಕ/ಕವಿಯ ಹೆಸರು
ಜಿ.ಎಂ.ಕೆ.
ಪ್ರಕಾಶಕರು
ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು - ೫೬೦೦೦೯
ಪುಸ್ತಕದ ಬೆಲೆ
ರೂ. ೩೫.೦೦, ಮುದ್ರಣ: ಜೂನ್ ೨೦೨೩

ಸಪ್ನ ಬುಕ್ ಹೌಸ್ ನವರು ‘ಮಹಾಭಾರತದ ಪ್ರಸಿದ್ಧ ಪಾತ್ರಗಳು' ಎನ್ನುವ ಮಾಲಿಕೆಯಲ್ಲಿ ಹೊರತಂದ ಪುಸ್ತಕಗಳಲ್ಲಿ ಹತ್ತನೆಯ ಪುಸ್ತಕ ‘ಹಿರಿಯ ಪಾಂಡವ ಧರ್ಮರಾಯ’. ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಂದಾದ ಧರ್ಮರಾಯ ಅಥವಾ ಯುಧಿಷ್ಟಿರನ ವಿವರಗಳನ್ನು ಪುಟ್ಟದ್ದಾಗಿ ಈ ಪುಸ್ತಕದಲ್ಲಿ ನೀಡಿದ್ದಾರೆ. ೨೦೦೫ರಲ್ಲಿ ಪ್ರಥಮ ಮುದ್ರಣ ಕಂಡ ಈ ಕೃತಿ ಈಗ ನಾಲ್ಕನೇ ಮುದ್ರಣವಾಗಿ ಹೊರಬಂದಿದೆ. 

ಈ ಮಾಲಿಕೆಯ ಬಗ್ಗೆ ಪ್ರಕಾಶಕರು ಬೆನ್ನುಡಿಯಲ್ಲಿ ಹೀಗೆ ಅಭಿಪ್ರಾಯ ಪಟ್ಟಿದ್ದಾರೆ “ಜಗತ್ತಿನ ಮಹಾಕಾವ್ಯಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ‘ಮಹಾಭಾರತದ ಕಥೆ' ಪ್ರಾಚೀನ ಭಾರತದ ಕಥೆಯೂ ಆಗಿದೆ. ಈ ಕಥೆಯನ್ನು ಯಾರು, ಯಾವ ಕಾಲದಲ್ಲಿ ಓದಿದರೂ ಅದು ತಮ್ಮದೇ ಕಥೆ ಎಂಬ ಭಾವ ಗಾಢವಾಗಿ ಕಾಡುತ್ತದೆ. ಏಕೆಂದರೆ ಈ ಮಹಾಕಾವ್ಯದಲ್ಲಿ ಕಾಣಿಸಿಕೊಳ್ಳುವ ಪಾತ್ರಗಳು ಮಾನವ ಸಹಜ ಗುಣಗಳಿಂದ, ಭಾವಗಳಿಂದ ತೊಳಲಾಡುತ್ತ ನಮ್ಮ ಮಧ್ಯೆ ಈಗ ಕೂಡಾ ನಲಿದಾಡುತ್ತಿರುವಂತೆ ಭಾಸವಾಗುತ್ತದೆ. ಅವರ ಸಂಗದಲ್ಲಿ ನಮ್ಮ ವ್ಯಕ್ತಿತ್ವ ಇನ್ನಷ್ಟು ಹಸನಾಗುತ್ತದೆ, ಹಾಗೆಯೇ ದುಷ್ಟತನ, ಮಾತ್ಸರ್ಯದಂತಹ ದುರ್ಗುಣಗಳನ್ನು ತೊರೆಯಬೇಕೆಂಬ ಪ್ರಜ್ಞೆ ಜಾಗೃತವಾಗುತ್ತದೆ. ಮಹಾಭಾರತವನ್ನು ಕೇವಲ ದಾಯಾದಿ ಕಥೆಯೆಂದು ಭಾವಿಸದೇ ಮಾನವ ಜನಾಂಗಕ್ಕೆ ಸದಾ ಬೆಳಕು ತೋರುವ ಮಹಾಕೃತಿಯೆಂದು ವಿದ್ವಾಂಸರು ಪರಿಗಣಿಸಿದ್ದಾರೆ. ಈ ಮಾಲಿಕೆಯಲ್ಲಿ ಮಹಾಭಾರತದಲ್ಲಿ ಬರುವ ಹತ್ತು ಪ್ರಮುಖ ಪಾತ್ರಗಳ ಪರಿಚಯವನ್ನು ಕೊಡಲಾಗಿದೆ. ಕೃತಿಯ ಮಿತಿಯಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ಹೇಳಲು ಪ್ರಯತ್ನಿಸಲಾಗಿದೆ. ಪ್ರತಿ ಪಾತ್ರದ ಕಥೆಯನ್ನು ಮೊದಲಿನಿಂದ ಕಡೆಯವರೆಗೆ ಸಮಗ್ರವಾಗಿ ಆದರೆ ಸಂಕ್ಷಿಪ್ತವಾಗಿ ನಿರೂಪಿಸಲು ಪ್ರಯತ್ನಿಸಲಾಗಿದೆ. ಓದುಗರು ಈ ಕೃತಿಯನ್ನು ಆದರದಿಂದ ಸ್ವೀಕರಿಸುವರೆಂಬ ನಂಬಿಕೆ ನಮ್ಮದು" ಎಂದಿದ್ದಾರೆ. 

'ಹಿರಿಯ ಪಾಂಡವ ಧರ್ಮರಾಯ’ ಕೃತಿಯಲ್ಲಿ ಧರ್ಮರಾಯನ ಕಥೆ ಆತನ ಹುಟ್ಟು ಮತ್ತು ಬಾಲ್ಯದಿಂದ ಪ್ರಾರಂಭವಾಗುತ್ತದೆ. ಶಾಪಗ್ರಸ್ಥನಾದ ಪಾಂಡು ತನಗೆ ಮಕ್ಕಳಾಗುವ ಯೋಗ ಇಲ್ಲವೆಂದು ಅರಿಯುತ್ತಾನೆ. ಕುಂತಿ ತನಗೆ ಸಿಕ್ಕ ವರವನ್ನು ಬಳಸಿ ಯಮಧರ್ಮನ ಬಳಿ ಪುತ್ರ ಬೇಕೆಂದಾಗ ಯಮನ ಸ್ವರೂಪವೇ ಆದ ಧರ್ಮರಾಯನ್ನು ಪಡೆಯುತ್ತಾಳೆ. ಈತ ಪಾಂಡವರಲ್ಲಿ ಹಿರಿಯವ ಹಾಗೂ ಕೌರವರಿಗೂ ಹಿರಿಯ. ತಾಯಿ ಕುಂತಿಯ ಮಾತಿನಂತೆ ದ್ರೌಪದಿಯನ್ನು ವಿವಾಹವಾಗುವ ಈತ ಧರ್ಮವನ್ನು ಎತ್ತಿ ಹಿಡಿಯುತ್ತಾನೆ. ಈ ಕೃತಿಯಲ್ಲಿ ಅರಗಿನ ಅರಮನೆಯ ಪ್ರಸಂಗ, ಪಗಡೆಯಾಟದ ಪ್ರಸಂಗ, ವನವಾಸದ ಸಂದರ್ಭದಲ್ಲಿ ಅನುಭವಿಸಿದ ಕಷ್ಟಗಳು, ಸೂರ್ಯನಿಂದ ಈತ ಪಡೆದ ಅಕ್ಷಯ ಪಾತ್ರೆ, ಯಕ್ಷ ಪ್ರಶ್ನೆಯ ಸವಾಲನ್ನು ಸ್ವೀಕರಿಸಿ ತನ್ನೆಲ್ಲಾ ತಮ್ಮಂದಿರನ್ನು ಬದುಕಿಸಿದ ಪ್ರಸಂಗ, ವಿರಾಟನಗರದಲ್ಲಿ ಅಜ್ಞಾತವಾಸದ ಸಮಯ, ಕುರುಕ್ಷೇತ್ರ ಯುದ್ಧದಲ್ಲಿ ಜಯಶಾಲಿಯಾಗುವ ಪ್ರಸಂಗ, ಹಸ್ತಿನಾಪುರದ ರಾಜನಾಗಿ ಪಟ್ಟಾಭಿಷೇಕ ಮತ್ತು ಕೊನೆಯಲ್ಲಿ ಪಾಂಡವರ ಸ್ವರ್ಗಾರೋಹಣ. ತನ್ನ ಜೀವಮಾನವನ್ನು ಧರ್ಮಕ್ಕಾಗಿಯೇ ಮೀಸಲಿಟ್ಟ ಧರ್ಮರಾಯನು ಕೊನೆಯಲ್ಲಿ ಸಶರೀರನಾಗಿ ಸ್ವರ್ಗವನ್ನು ಸೇರಿಕೊಳ್ಳುತ್ತಾನೆ. ತನ್ನನ್ನು ನಂಬಿ ತನ್ನ ಜೊತೆ ಬಂದಿದ್ದ ನಾಯಿಯನ್ನೂ ಸ್ವರ್ಗಕ್ಕೆ ತೆಗೆದುಕೊಂಡು ಹೋಗುತ್ತಾನೆ.  

ಕೃತಿಗೆ ಪುಟಗಳ ಮಿತಿ ಇರುವುದರಿಂದ ಸಂಕ್ಷಿಪ್ತವಾಗಿ ಧರ್ಮರಾಯನ ಮಾಹಿತಿಯನ್ನು ನೀಡಲಾಗಿದೆ. ಇದು ಮಕ್ಕಳಿಗೆ ಅದರಲ್ಲೂ ವಿದ್ಯಾರ್ಥಿಗಳಿಗೆ ಪೌರಾಣಿಕ ಪ್ರಬಂಧ, ಭಾಷಣ, ನಾಟಕ ರಚನೆಗೆ ಸಹಕಾರಿಯಾಗಬಲ್ಲದು. ಪುಸ್ತಕದ ಒಳಪುಟಗಳಲ್ಲಿ ಅಲ್ಲಲ್ಲಿ ಸೊಗಸಾದ ರೇಖಾಚಿತ್ರಗಳನ್ನು ನೀಡಲಾಗಿದೆ. ೫೦ ಪುಟಗಳ ಈ ಪುಟ್ಟ ಕೃತಿಯು ‘ಹಿರಿಯ ಪಾಂಡವ ಧರ್ಮರಾಯ'ನ ಬಗ್ಗೆ ಬಹಳಷ್ಟು ವಿಷಯಗಳನ್ನು ಚುಟುಕಾಗಿ ತಿಳಿಸುವಲ್ಲಿ ಸಹಕಾರಿಯಾಗಿದೆ. ಇದು ಈ ಮಹಾಭಾರತದ ಪ್ರಸಿದ್ಧ ಪಾತ್ರಗಳು ಸರಣಿಯ ಕೊನೆಯ ಪುಸ್ತಕ. ಇನ್ನೂ ಹಲವಾರು ಖ್ಯಾತ ಪಾತ್ರಗಳು ಮಹಾಭಾರತದ ಕಥೆಯಲ್ಲಿವೆ. ಅವುಗಳನ್ನೂ ಮುಂದಿನ ದಿನಗಳಲ್ಲಿ ಪುಸ್ತಕ ರೂಪದಲ್ಲಿ ಹೊರತಂದರೆ ಉತ್ತಮ ಎನ್ನುವುದು ಓದುಗರ ಅಭಿಮತ.