ಹಿರೋಷಿಮಾ ಅಣುಬಾಂಬ್ ಧಾಳಿಗೆ ೭೫ ವರುಷ

ಹಿರೋಷಿಮಾ ಅಣುಬಾಂಬ್ ಧಾಳಿಗೆ ೭೫ ವರುಷ

ಅವತ್ತು, ೬ ಆಗಸ್ಟ್ ೧೯೪೫ರಂದು ಇಡೀ ಜಗತ್ತೇ ತತ್ತರಿಸಿತ್ತು. ೧,೪೦,೦೦೦ ಜನರು ಸತ್ತಿದ್ದರು - ಜಪಾನಿನ ಹಿರೋಷಿಮಾದ ಮೇಲೆ ಅಮೇರಿಕಾದ ಯುಎಸ್‌ಎ ದೇಶ ಅಣುಬಾಂಬ್ ಧಾಳಿ ನಡೆಸಿದಾಗ. ಹಲವರು ಅಣು ವಿಕಿರಣದಿಂದಾಗಿ ತಕ್ಷಣವೇ ಸತ್ತಿದ್ದರೆ, ಉಳಿದವರು ವಿಕಿರಣದ ಭಯಾನಕ ರೋಗಗಳಿಂದಾಗಿ, ದೇಹದ ಚರ್ಮ ಕಿತ್ತು ಬಂದ ಸುಟ್ಟ ಗಾಯಗಳಿಂದಾಗಿ, ಇತರ ಭಯಂಕರ ಘಾತಗಳಿಂದಾಗಿ ಅನಂತರ ಕೆಲವೇ ವಾರಗಳಲ್ಲಿ ಸಾವಿಗೆ ಬಲಿಯಾಗಿದ್ದರು.

ಮೂರು ದಿನಗಳ ನಂತರ, ಜಪಾನಿನ ನಾಗಸಾಕಿಯ ಮೇಲೆ ಯುಎಸ್‌ಎ ಇನ್ನೊಂದು ಅಣುಬಾಂಬ್ ಧಾಳಿ ನಡೆಸಿತು. ಇದರಿಂದಾಗಿ ಅದೇ ರೀತಿಯ ಚಿತ್ರಹಿಂಸೆ ಅನುಭವಿಸುತ್ತಾ ಇನ್ನೂ ೭೪,೦೦೦ ಜನರು ಪ್ರಾಣ ಕಳಕೊಂಡರು.

ಅದಾಗಿ ೭೫ ವರುಷಗಳು ದಾಟಿವೆ. ಜಪಾನಿನ ಹಿರೋಷಿಮಾದ ಶಾಂತಿ ಸ್ಮಾರಕ ಉದ್ಯಾನದಲ್ಲಿ ೬ ಆಗಸ್ಟ್ ೨೦೨೦ರಂದು ಹಿರೋಷಿಮಾ ಅಣುಬಾಂಬ್ ಧಾಳಿಯ ೭೫ನೇ ವಾರ್ಷಿಕ ಸ್ಮರಣ ದಿನವನ್ನು ಆಚರಿಸಲಾಯಿತು; ಅಣುಬಾಂಬ್ ಧಾಳಿಗೆ ಬಲಿಯಾದವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಜಪಾನಿನ ಪ್ರಧಾನಿ ಶಿಂಜೊ ಅಬೆ, ಅಣುಬಾಂಬ್ ಧಾಳಿಯಿಂದ ಬದುಕಿ ಉಳಿದವರು, ಬಲಿಯಾದವರ ಬಂಧುಗಳು ಮತ್ತು ಕೆಲವು ವಿದೇಶಿ ಪ್ರತಿನಿಧಿಗಳು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು (ಫೋಟೋ ನೋಡಿ).

ಕಪ್ಪು ಉಡುಪು ಧರಿಸಿದ್ದ ಅವರೆಲ್ಲರೂ ಬೆಳಗ್ಗೆ ೮.೧೫ ಗಂಟೆಗೆ ಮೌನ ಪ್ರಾರ್ಥನೆ ಮಾಡಿದರು (ಆ ಭಯಾನಕ ದಿನದಂದು ಅದೇ ಹೊತ್ತಿಗೆ ಮೊದಲನೇ ಅಣುಬಾಂಬನ್ನು ವಿಮಾನದಿಂದ ಎಸೆಯಲಾಗಿತ್ತು.)

ಅಲ್ಲಿ ಜಪಾನಿನ ಪ್ರಧಾನಿ ಶಿಂಜೊ ಅಬೆ, ತನ್ನ ಉಪನ್ಯಾಸದಲ್ಲಿ “ಅಣ್ವಸ್ತ್ರಗಳು ಇಲ್ಲದ ಜಗತ್ತನ್ನು ಸಾಕಾರಗೊಳಿಸಲಿಕ್ಕಾಗಿ ಮತ್ತು ಸಾರ್ವಕಾಲಿಕ ಶಾಂತಿಗಾಗಿ ತನ್ನಿಂದಾದ ಎಲ್ಲವನ್ನೂ ಮಾಡುತ್ತೇನೆ” ಎಂದು ವಾಗ್ದಾನ ಮಾಡಿದರು. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೊನಿಯೋ ಗುಟೆರೆಸ್ ಅವರು ವಿಡಿಯೋ ಸಂದೇಶದ ಮೂಲಕ "ಜಗತ್ತಿಗೆ ಅಣ್ವಸ್ತ್ರಗಳ ಅಪಾಯ ಪೂರ್ತಿ ಇಲ್ಲವಾಗಿಸಲು ಒಂದೇ ಒಂದು ದಾರಿಯೆಂದರೆ ಅಣ್ವಸ್ತ್ರಗಳನ್ನೇ ಇಲ್ಲವಾಗಿಸುವುದು" ಎಂದು ಎಚ್ಚರಿಸಿದರು.

"ಯಾರೂ ಬಚಾವಾಗಲು ಸಾಧ್ಯವಿಲ್ಲ”
ಹಿರೋಷಿಮಾ ಅಣುಬಾಂಬ್ ಧಾಳಿಯ ೭೫ನೇ ವಾರ್ಷಿಕ ಸ್ಮರಣ ದಿನದ ಹಲವಾರು ಕಾರ್ಯಕ್ರಮಗಳನ್ನು ಕೊರೊನಾ ವೈರಸ್ (ಕೊವಿಡ್ ೧೯) ಮಹಾಮಾರಿಯ ಹರಡುವಿಕೆಯಿಂದಾಗಿ ರದ್ದು ಪಡಿಸಲಾಯಿತು. ಈ ವೈರಸಿನ ಪ್ರಚಂಡ ಧಾಳಿ, ಪ್ರಪ್ರಥಮ ಅಣುಬಾಂಬ್ ಧಾಳಿಯಲ್ಲಿ ಬದುಕುಳಿದ ಕೆಲವರಿಗೆ, ಅಂದಿನ ಭಯ ಮರುಕಳಿಸುವಂತೆ ಮಾಡಿದೆ.

ಅವರಲ್ಲಿ ಒಬ್ಬರಾದ ಕಿಕೊ ಒಗುರಾ ಎಂಬಾಕೆಗೆ ಈಗ ೮೩ ವರುಷ ವಯಸ್ಸು. ಕಳೆದ ತಿಂಗಳು ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದಾಗ, ಕೊರೊನಾ ವೈರಸಿನ ಜಾಗತಿಕ ಧಾಳಿ ಪ್ರಸ್ತಾಪಿಸಿದ ಅವರು ಹೇಳಿದ ಮಾತು ಹೀಗಿದೆ: “ಅಣುಬಾಂಬ್ ಧಾಳಿಯ ತಕ್ಷಣವೇ ನಾನು ಅನುಭವಿಸಿದ ಭಯ ಈಗ ಮತ್ತೆ ನೆನಪಾಗುತ್ತಿದೆ …. ಇಂತಹ ಧಾಳಿಗಳಿಂದ ಯಾರೂ ಬಚಾವಾಗಲು ಸಾಧ್ಯವಿಲ್ಲ.” ಇಂತಹ ಜಾಗತಿಕ ಸವಾಲುಗಳನ್ನು ಜಗತ್ತಿನ ಜನರೆಲ್ಲರೂ ಒಗ್ಗಟ್ಟಿನಿಂದ ಎದುರಿಸಿಬೇಕೆಂದು ಅವರು ಆಗ್ರಹಿಸಿದರು.

ಕಿಕೊ ಒಗುರಾ ಅವರಂತಹ ಅಣುಬಾಂಬ್ ಧಾಳಿಯಿಂದ ಬದುಕಿ ಉಳಿದವರ ಸಂಖ್ಯೆ ವರುಷದಿಂದ ವರುಷಕ್ಕೆ ಕಡಿಮೆಯಾಗುತ್ತಿದೆ. ಅಣುಬಾಂಬ್ ಧಾಳಿಯಿಂದಾಗಿ ದೈಹಿಕ ಹಿಂಸೆ ಮತ್ತು ಮಾನಸಿಕ ಆಘಾತ ಅನುಭವಿಸಿದ ಇಂಥವರನ್ನು ಜಪಾನಿನಲ್ಲಿ “ಹಿಬಕುಷ" ಎಂದು ಕರೆಯುತ್ತಾರೆ. ಇವರಲ್ಲಿ ಬಹುಪಾಲು ಜನರು, ೭೫ ವರುಷ ಮುಂಚೆ ಅಣುಬಾಂಬ್ ಧಾಳಿ ಆದಾಗ ಎಳೆಯ ಮಕ್ಕಳಾಗಿದ್ದರು. ಅವರ ಭಯಾನಕ ನೆನಪುಗಳನ್ನು ಜೀವಂತವಾಗಿಡುವುದು ಹಿಂದೆಂದಿಗಿಂತಲೂ ಇಂದು ತುರ್ತಿನ ಕೆಲಸವಾಗಿದೆ - ನೆನಪುಗಳ ಆಡಿಯೋ/ ವಿಡಿಯೋ ಮುದ್ರಣಗಳು, ಕವನಗಳು ಹಾಗೂ ಚಿತ್ರಗಳ ಮೂಲಕ.

“ನೋ ಮೊರ್ ಹಿಬಕುಷ” ಪ್ರಾಜೆಕ್ಟಿನ ಪ್ರಧಾನ ಕಾರ್ಯದರ್ಶಿ ಕಝಹಿಸ ಹೀಗೆನ್ನುತ್ತಾರೆ: "ಒಂದಷ್ಟು ದಾಖಲೆಗಳನ್ನು ಪೇರಿಸಿಡುವುದು ಅರ್ಥವಿಲ್ಲದ ಕೆಲಸ. ಈಗ ಆಗಬೇಕಾಗಿರುವ ಕೆಲಸ ಏನೆಂದರೆ, ಇಡೀ ಜಗತ್ತಿನ ಯುವಜನತೆಯನ್ನು ಈ ಸಂಗತಿಯಲ್ಲಿ ತೊಡಗಿಸುವುದು ಮತ್ತು ಅವರ ಜೊತೆ ಅಭಿಪ್ರಾಯ ವಿನಿಮಯ ಮಾಡುವುದು." (ಆ ಪ್ರಾಜೆಕ್ಟಿನದು ಅಣುಬಾಂಬ್ ಧಾಳಿಯಿಂದ ಬದುಕಿ ಉಳಿದವರ ಎಲ್ಲ ದಾಖಲೆಗಳನ್ನು ಸಂರಕ್ಷಿಸುವ ಕೆಲಸ.)

ಮಾನವ ಹತ್ಯಾಕಾಂಡಕ್ಕೆ ಅಣುಬಾಂಬುಗಳೇ ಬೇಕೆಂದಿಲ್ಲ
ಯುಎಸ್‌ಎ ದೇಶದ ಅಣುಬಾಂಬ್ ಧಾಳಿಗೆ ೨,೧೪,೦೦೦ ನಿರಪರಾಧಿ ಜಪಾನಿ ನಾಗರಿಕರು ಬಲಿಯಾಗಿದ್ದರೂ, ಅದಕ್ಕಾಗಿ ಈ ವರೆಗೆ ಜಪಾನಿನ ಕ್ಷಮೆಯನ್ನು ಆ ದೇಶ ಕೇಳಿಲ್ಲ. ಅಂದರೆ, ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಮಾನವ ಹತ್ಯಾಕಾಂಡ ಮಾಡಿದಾಗಲೂ ಅದರ ಹೊಣೆಗಾರ ದೇಶ ತನ್ನ ತಪ್ಪು ಒಪ್ಪಿಕೊಳ್ಳಲು ತಯಾರಿರುವುದಿಲ್ಲ.

"ತಾನು ಮಾಡಿದ್ದೇ ಸರಿ" ಎಂಬ ಸೊಕ್ಕಿನಲ್ಲಿ, ದರ್ಪದಲ್ಲಿ ಅಂತಹ ಮಾನವ ಹತ್ಯಾಕಾಂಡವನ್ನು ದೇಶವೊಂದು ಪುನರಾವರ್ತಿಸುವ ಸಂಭವ ಇದ್ದೇ ಇದೆ, ಅಲ್ಲವೇ? ಈ ನಿಟ್ಟಿನಲ್ಲಿ ಮೊನ್ನೆಯಷ್ಟೇ ರಷ್ಯಾ ದೇಶ ನೀಡಿದ ಈ ಹೇಳಿಕೆ ಗಮನಿಸಿ: "ನಮ್ಮ ದೇಶದ ಮೇಲೆ ಯಾವುದೇ ಕ್ಷಿಪಣಿ ಧಾಳಿ ನಡೆದರೂ, ಅದನ್ನು ಅಣು-ಕ್ಷಿಪಣಿ ಧಾಳಿ ಎಂದೇ ಪರಿಗಣಿಸಿ ಪ್ರತಿಕ್ರಿಯಿಸಲಾಗುವುದು."

ಈಗ, ಮಾನವ ಹತ್ಯಾಕಾಂಡ ನಡೆಸಲು ಅಣುಬಾಂಬುಗಳೇ ಬೇಕೆಂದಿಲ್ಲ. ಕೊರೊನಾ ವೈರಸಿನಂತಹ ಮಾರಕ ರೋಗಾಣುಗಳೇ ಸಾಕು. ಯಾಕೆಂದರೆ, ಇಂದಿನ ತನಕ ಜಗತ್ತಿನಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಎರಡು ಕೋಟಿಗೆ ಹತ್ತಿರವಾಗಿದೆ ಮತ್ತು ಅದರಿಂದ ಸತ್ತವರ ಸಂಖ್ಯೆ ೭,೩೦,೦೦೦ ದಾಟಿದೆ!

ಜಗತ್ತಿನ ಯುವಜನತೆಯಲ್ಲಿ ಎಷ್ಟು ಜನರಿಗೆ ಹಿರೋಷಿಮಾ ಮತ್ತು ನಾಗಸಾಕಿಯ ಅಣುಬಾಂಬ್ ಧಾಳಿ ನೆನಪಿದೆ? ವರುಷಗಳು ಸರಿದಂತೆ, ಆ ಮಾನವ ಹತ್ಯಾಕಾಂಡದ ದಾರುಣ ನೋವು ಅನುಭವಿಸಿದವರ ನೆನಪಿನಿಂದ ಮರೆಯಾಗಿ, ಅದು ಕೇವಲ ಚರಿತ್ರೆಯಾಗಿ ಉಳಿಯುತ್ತದೆ. ಜಗತ್ತನ್ನೇ ತಲ್ಲಣಗೊಳಿಸುವ ಇಂತಹ ರಕ್ಕಸ ವಿದ್ಯಮಾನಗಳು ಮರುಕಳಿಸದೆ ಇರಬೇಕಾದರೆ, ನಾನೇನು ಮಾಡಬೇಕೆಂದು ಪ್ರತಿಯೊಬ್ಬರೂ ಚಿಂತಿಸಬೇಕಾಗಿದೆ, ಅಲ್ಲವೇ?

ಫೋಟೋ ಕೃಪೆ: "ದ ಹಿಂದೂ” ವಾರ್ತಾ ಪತ್ರಿಕೆ