ಹೀ(ಈ)ಗೇಕೆ ಹೊಸವರುಷ…?
ಕವನ
ಈಗೇಕೆ ಹೊಸವರುಷ
ಹೂವ ಮೊಗ್ಗಿನ ಘಮವಿಲ್ಲ
ವಸಂತ ಕಾಲದ ಕಳೆಯಿಲ್ಲ
ಮುಂಗಾರ ಆಗಮನದ ಸುಳಿವಿಲ್ಲ..
ಈಗೇಕೆ ಹೊಸವರುಷ
ಧೂಳು ತುಂಬಿದ ದಾರಿಯಲ್ಲಿ
ನಡೆಯಲಾಗದೆ ನಿಂತು
ಬಿಸಿಲಿಗೆ ಶಾಪವಿಕ್ಕಿ ನೆರಳು ಬಯಸಿ
ಮರವ ಹುಡುಕುವಾಗ..
ಹೀಗೇಕೆ ಹೊಸವರುಷ
ಬಡಜನರ ಭವಣೆಗಳು ದೂರವಾದೀತೇ
ಸೂರಿನ ಸೆರೆಯಲ್ಲಿ ಚಂದ್ರಮ ಉದಿಸೀತೆ
ಕತ್ತಲಿನ ಕ್ರೌರ್ಯಕ್ಕೆ ನಲುಗಿದ ಮಾನಿನಿಯ
ಮೊಗದಲ್ಲಿ ಮಂದಹಾಸವ ಮೂಡಿಸಿತೇ?..
ಕೇಕುಗಳ ಕತ್ತರಿಸಿ ಕುಣಿದು ಕುಪ್ಪಳಿಸಿ
ರಾತ್ರಿ ಕಳೆದರೆ ಹೊಸವರುಷ.
ನಿನ್ನೆಯ ಚಿಂತೆಗಳ ದೂರಮಾಡೀತೆ
ಹೊಸಬದುಕು ನಿನ್ನೊಳಗೆ ಕಳೆಗಟ್ಟೀತೆ..
ಅಂಕಿಯಲಿ ಬದಲು ಪ್ರಕೃತಿಯಲ್ಲಲ್ಲ
ತಿರುಗುವ ಕಾಲುಗಳಿಗೂ ಹೊಸತನದ ಅರಿವಿಲ್ಲ
ಉರಿಬಿಸಿಲಿನ ಸೂರ್ಯ ಅಗೋ ಬಂದಾಯ್ತು
ಎದ್ದು ಗದ್ದೆಯಲಿ ಬಿತ್ತಬೇಕು..
-‘ಮೌನರಾಗ’ ಶಮೀರ್ ನಂದಿಬೆಟ್ಟ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್