ಹೀಗಿದ್ದರು ನಮ್ಮ ಶಾಸ್ತ್ರೀಜಿ...!
ಲಾಲ್ ಬಹಾದ್ದೂರ್ ಶಾಸ್ತ್ರಿ-ಭಾರತದ ಎರಡನೇ ಪ್ರಧಾನಮಂತ್ರಿಗಳು. ಇವರು ತಮ್ಮ ಸರಳತೆ, ಪ್ರಾಮಾಣಿಕತೆ ಮತ್ತು ಧೈರ್ಯಕ್ಕೆ ಬಹಳ ಹೆಸರುವಾಸಿ. ಇವರ ಬದುಕಿನ ಹಲವಾರು ಘಟನೆಗಳನ್ನು ನೀವು ಈಗಾಗಲೇ ಓದಿರುತ್ತೀರಿ. ಅಪರೂಪದ್ದು ಅನಿಸುವಂತಹ ಒಂದು ಘಟನೆಯ ವಿವರ ನನಗೆ ಕೆಲವು ದಿನಗಳ ಹಿಂದೆ ಹಳೆಯ ಪತ್ರಿಕೆಗಳನ್ನು ಹುಡುಕಾಡುವಾಗ ಸಿಕ್ಕಿತು. ‘ವಿಶ್ವವಾಣಿ' ಪತ್ರಿಕೆಯ ಸಂಪಾದಕರ ಸದ್ಯ ಶೋಧನೆ ಅಂಕಣದಲ್ಲಿ ‘ವಜ್ರದ ಮೂಗುತಿಯ ಉಡುಕೊರೆ' ಎಂಬ ಹೆಸರಿನಲ್ಲಿ ಶಾಸ್ತೀಜಿ ಅವರ ಬದುಕಿನ ಒಂದು ಘಟನೆಯನ್ನು ವಿವರಿಸಲಾಗಿದೆ. ಅದನ್ನು ಪತ್ರಿಕೆಯಿಂದ ಸಂಗ್ರಹಿಸಿ ಯಥಾವತ್ತಾಗಿ ಇಲ್ಲಿ ನೀಡಲಾಗಿದೆ. ಈ ಘಟನೆಯನ್ನು ಬರೆದ ವಿಶ್ವವಾಣಿ ಪತ್ರಿಕೆಯ ಸಂಪಾದಕರಿಗೆ ಕೃತಜ್ಞತೆಗಳು ಸಲ್ಲುತ್ತವೆ.
ಒಮ್ಮೆ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅಧಿಕೃತ ಕಾರ್ಯಕ್ರಮ ನಿಮಿತ್ತ ಮದರಾಸಿಗೆ ಹೋಗಿದ್ದರು. ಸಾಮಾನ್ಯವಾಗಿ ಇಂಥ ಪ್ರವಾಸದಲ್ಲಿ ಅವರು ತಮ್ಮ ಪತ್ನಿಯನ್ನು ಜತೆಯಲ್ಲಿ ಕರೆದುಕೊಂಡು ಹೋಗುತ್ತಿರಲಿಲ್ಲ. ಆದರೆ ಆ ಪ್ರವಾಸದಲ್ಲಿ ಅವರ ಪತ್ನಿಯೂ ಜತೆಯಾದರು. ಅದಕ್ಕೆ ಕಾರಣವೂ ಇತ್ತು. ಮದರಾಸಿನ ಮಹಿಳಾ ಸಂಘಟನೆಯೊಂದರ ಕಾರ್ಯಕ್ರಮದಲ್ಲಿ ಶಾಸ್ತ್ರಿಯವರು ಭಾಗವಹಿಸಬೇಕಿತ್ತು. ಸಂಘಟಕರು ಶಾಸ್ತ್ರಿಯವರಿಗೆ ಸಪತ್ನಿಕರಾಗಿ ಬರುವಂತೆ ಕೋರಿದ್ದರು. ಹೀಗಾಗಿ ತಮ್ಮ ಪತ್ನಿಗೂ ಬರುವಂತೆ ಹೇಳಿದ್ದರು. ಕಾರ್ಯಕ್ರಮದಲ್ಲಿ ಲಲಿತಾ ಶಾಸ್ತ್ರಿಯವರಿಗೆ ಕೆಲವು ಮಹಿಳೆಯರು ಉಡುಗೊರೆಗಳನ್ನು ನೀಡಿದರು. ಇದನ್ನು ಶಾಸ್ತ್ರಿಯವರು ತುಸು ದೂರದಲ್ಲಿ ನಿಂತು ಗಮನಿಸುತ್ತಿದ್ದರು. ಇಬ್ಬರು ಮಹಿಳೆಯರು ಬಂದು ತಮ್ಮ ಪತ್ನಿಗೆ ಮೂಗುತಿಯನ್ನು ನೀಡಲು ಮುಂದಾಗಿದ್ದನ್ನು ಶಾಸ್ತ್ರಿಯವರು ಫಕ್ಕನೆ ನೋಡಿದರು. ಅದು ವಜ್ರದ ಮೂಗುತಿಯಾಗಿತ್ತು. ಆ ಇಬ್ಬರು ಮಹಿಳೆಯರನ್ನು ಮೆಲ್ಲಗೆ ಕರೆದ ಪ್ರಧಾನಿ, “ನನ್ನ ಪತ್ನಿ ಯಾವ ಕಾರಣಕ್ಕೂ ವಜ್ರದ ಮೂಗುತಿಯನ್ನು ಉಡುಗೊರೆಯಾಗಿ ಸ್ವೀಕರಿಸುವುದಿಲ್ಲ. ನೀವು ಯಾವ ಕಾರಣಕ್ಕೂ ಬೇಸರಿಸಿಕೊಳ್ಳಬೇಡಿ. ನೀವು ಈಗಾಗಲೇ ಅವಳಿಗೆ ಸಾಕಷ್ಟು ಉಡುಗೊರೆಗಳನ್ನು ನೀಡಿದ್ದೀರಿ. ನಾವು ಅವನ್ನೆಲ್ಲಾ ಸಂತಸದಿಂದ ಸ್ವೀಕರಿಸಿದ್ದೇವೆ. ಆದರೆ ವಜ್ರದ ಮೂಗುತಿ ಬೇಡ.” ಎಂದು ಶಾಸ್ತ್ರಿಯವರು ಖಡಕ್ಕಾಗಿ ಹೇಳಿದರು. ಆದರೆ ಅವರ ಪತ್ನಿಗೆ ಆ ಮೂಗುತಿ ಮೇಲೆ ಆಸೆಯಾಗಿತ್ತು. ತಮ್ಮ ಪತಿ ಅದನ್ನು ನಿರಾಕರಿಸಿದ್ದು ಅವರಿಗೆ ಇಷ್ಟವಾಗಲಿಲ್ಲ. ಕಾರ್ಯಕ್ರಮ ಮುಗಿದ ಬಳಿಕ, ಶಾಸ್ತ್ರಿಯವರು ಒಬ್ಬರೇ ಇದ್ದಾಗ, ಅದನ್ನು ಪ್ರಕಟ ಪಡಿಸಿದರು. “ಆ ಮೂಗುತಿಯನ್ನು ಅವರು ತುಂಬಾ ಸಂತಸದಿಂದ ನನಗೆ ಉಡುಗೊರೆಯಾಗಿ ನೀಡಲು ತಂದಿದ್ದರು. ನೀವು ಅದನ್ನು ನಿರಾಕರಿಸಿ ಅವರಿಗೆ ಬೇಸರವನ್ನುಂಟು ಮಾಡಿದಿರಿ. ಅಷ್ಟಕ್ಕೂ ನಾನು ಅದನ್ನು ತೆಗೆದುಕೊಂಡಿದ್ದರೆ ಏನಾಗುತ್ತಿತ್ತು?” ಎಂದು ಕೇಳಿದರು. “ಲಲಿತಾ, ನಿನ್ನ ಮನಸ್ಸಿನಲ್ಲಿ ಚಿನ್ನ ಮತ್ತು ವಜ್ರದ ಭಾವನೆ ಸುಳಿದಿದ್ದಾದರೂ ಹೇಗೆ?” ಎಂದು ಕೇಳಿದರು. ತಕ್ಷಣ ಲಲಿತಾ ಶಾಸ್ತ್ರಿಯವರಿಗೆ ತಮ್ಮ ತಪ್ಪಿನ ಅರಿವಾಯಿತು. ಅದಾದ ಬಳಿಕ ಶಾಸ್ತ್ರಿಯವರು ಏನನ್ನೂ ಹೇಳಲಿಲ್ಲ. ಆದರೆ ಅವರ ಪತ್ನಿಗೆ ಮಾತ್ರ ತಾನು ವಜ್ರದ ಮೂಗುತಿಗೆ ಆಸೆ ಪಡಬಾರದಿತ್ತು. ಇದರಿಂದ ಪತಿಗೆ ಮುಜುಗರವಾಗಿರಬಹುದು ಎಂದು ಅಂದುಕೊಂಡು ಸುಮ್ಮನಾದರು.
ಅದಾಗಿ ಸುಮಾರು ಹದಿನೈದು-ಇಪ್ಪತ್ತು ದಿನಗಳು ಕಳೆದಿರಬಹುದು. ಒಂದು ಮದ್ಯಾಹ್ನ ಶಾಸ್ತ್ರಿಯವರು ಊಟ ಮಾಡಿದ ಬಳಿಕ ವಿಶ್ರಾಂತಿಗೆ ಹೋಗುವ ಮುನ್ನ, ಪತ್ನಿಯನ್ನು ಕರೆದರು. ಅಡುಗೆ ಮನೆಯಲ್ಲಿದ್ದ ಪತ್ನಿಗೆ ಕೈ-ಕಾಲು ತೊಳೆದುಕೊಂಡು ಬರುವಂತೆ ಸೂಚಿಸಿದರು. ಪತ್ನಿ ಬರುತ್ತಿರುವಂತೆ, ತಮ್ಮ ಜೇಬಿನಿಂದ ಒಂದು ಸಣ್ಣ ಪೊಟ್ಟಣವನ್ನು ಪತ್ನಿಗೆ ನೀಡಿದರು. ತೆರೆದು ನೋಡಿದರೆ, ವಜ್ರದ ಮೂಗುತಿ ! ಲಲಿತಾ ಶಾಸ್ತ್ರಿ ನಿರೀಕ್ಷಿಸಿರಲಿಲ್ಲ. ಅವರ ಆನಂದಕ್ಕೆ ಪಾರವೇ ಇರಲಿಲ್ಲ. “ನನಗ್ಯಾಕೆ ಇದು? ಅಂದು ನೀವು ವಜ್ರದ ಮೂಗುತಿ ಬೇಡ ಎಂದ ದಿನವೇ ನಾನು ಅದರ ಆಸೆಯನ್ನು ಬಿಟ್ಟುಬಿಟ್ಟಿದ್ದೆ. ಈಗ್ಯಾಕೆ ತಂದಿರಿ?” ಎಂದು ಕೇಳಿದರು. ಆಗ ಶಾಸ್ತ್ರಿಯವರು “ಅಂದು ನೀನು ವಜ್ರದ ಮೂಗುತಿಯನ್ನು ಸ್ವೀಕರಿಸಿದ್ದರೆ, ಪ್ರಧಾನಿಯ ಪತ್ನಿ ವಜ್ರದ ಮೂಗುತಿ ಸ್ವೀಕರಿಸಿದರು ಎಂದು ದೊಡ್ದ ಸುದ್ದಿಯಾಗುತ್ತಿತ್ತು. ಆದರೆ ಅದು ನಿನಗೆ ಬಹಳ ಇಷ್ಟ ಎಂದು ಗೊತ್ತಾಯಿತು. ಪತಿಯಾಗಿ ಪತ್ನಿಯ ಈ ಕೋರಿಕೆಯನ್ನು ಈಡೇರಿಸದಿದ್ದರೆ ಹೇಗೆ? ಎಂದು ನಾನು ನನ್ನ ಸ್ವಂತ ಹಣದಲ್ಲಿ ಇದನ್ನು ಮದರಾಸಿನಲ್ಲೇ ಮಾಡಿಸಿ ತರಿಸಿದೆ.” ಎಂದು ಹೇಳಿದರು. ಶಾಸ್ತ್ರಿಯವರ ನಿಧನದ ನಂತರ ಅವರ ಪತ್ನಿ ಮಾಂಗಲ್ಯ, ಬಳೆಗಳನ್ನೆಲ್ಲಾ ತೆಗೆದಿಟ್ಟರು. ಕುಂಕುಮವನ್ನು ಅಳಿಸಿ ಹಾಕಿದರು. ಆದರೆ ಶಾಸ್ತ್ರಿಯವರು ಪ್ರೀತಿಯ ಉಡುಗೊರೆಯಾಗಿ ಕೊಟ್ಟ ಆ ವಜ್ರದ ಮೂಗುತಿಯನ್ನು ಕೊನೆಯ ತನಕ ಧರಿಸಿದ್ದರು.
ಹೀಗಿದ್ದರು ನೋಡಿ ಶಾಸ್ತ್ರೀಜಿ. ಅವರು ವಜ್ರದಂತೆಯೇ ತಮ್ಮ ನಿರ್ಧಾರಗಳಲ್ಲಿ ಧೃಢವಾಗಿದ್ದರು. ಪಾಕಿಸ್ತಾನವು ಭಾರತದ ಮೇಲೆ ಆಕ್ರಮಣ ಮಾಡಿದಾಗ ಕೇವಲ ಏಳು ನಿಮಿಷದಲ್ಲಿ ಅವರ ವಿರುದ್ಧ ಪ್ರತಿ ಯುದ್ಧ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದ್ದರು. ಯುದ್ಧದಲ್ಲಿ ಭಾರತ ಗೆದ್ದರೂ ನಂತರ ನಡೆದ ಶಾಂತಿ ಒಪ್ಪಂದದ ಬಳಿಕ ಅನುಮನಾಸ್ಪದ ರೀತಿಯಲ್ಲಿ ಶಾಸ್ತ್ರೀಜಿಯವರು ನಿಧನರಾದರು. ಭಾರತವು ತನ್ನ ಹೆಮ್ಮೆಯ ಸುಪುತ್ರನನ್ನು ಹೀಗೆ ಕಳೆದುಕೊಂಡದ್ದು ನಿಜಕ್ಕೂ ದುಃಖದ ಸಂಗತಿ. ಆದರೆ ಶಾಸ್ತ್ರೀಜಿಯವರ ಸರಳತೆ ಮತ್ತು ಪ್ರಾಮಾಣಿಕತೆಯನ್ನು ಈ ದೇಶವು ಸದಾ ಕಾಲ ನೆನಪಿನಲ್ಲಿಡುತ್ತದೆ.
ಚಿತ್ರ ಕೃಪೆ: ಅಂತರ್ಜಾಲ ತಾಣ