ಹೀಗೂ ಉಂಟೇ! ಝಗಮಗಿಸುವ ಸೊತ್ತುಗಳ ಸಂಗತಿ (೧)

ಹೀಗೂ ಉಂಟೇ! ಝಗಮಗಿಸುವ ಸೊತ್ತುಗಳ ಸಂಗತಿ (೧)

-ಒಂದು ಔನ್ಸಿಗಿಂತಲೂ  (೧ ಔನ್ಸ್ = ೨೮.೩೫ ಗ್ರಾಮ್) ಕಡಿಮೆ ತೂಕದ ಚಿನ್ನವನ್ನು ಉತ್ಪಾದಿಸಲು ದಕ್ಷಿಣ ಆಫ್ರಿಕಾದ ಎರಡು ಟನ್ ತೂಕದಷ್ಟು ಶಿಲೆಗಳನ್ನು ಜಾಲಾಡಿಸಬೇಕು.

-ಬೈಬಲಿನ ಕಿಂಗ್ ಜೇಮ್ಸ್ ಅವರ ಅನುವಾದದಲ್ಲಿ ಬೆಲೆಬಾಳುವ ಮುತ್ತುರತ್ನಗಳ ೧,೭೦೦ ಉಲ್ಲೇಖಗಳಿವೆ.

-ಐಸಾಕ್ ನ್ಯೂಟನ್ ಬಹಳಷ್ಟು ಸಮಯ ಮತ್ತು ಶ್ರಮವನ್ನು "ಫಿಲಾಸಫರ್ಸ್ ಸ್ಟೋನ್” ಹುಡುಕಲು ವ್ಯಯಿಸಿದ; ಅದರ ಸಹಾಯದಿಂದ ಚಿನ್ನ ತಯಾರಿಸಬಹುದೆಂಬುದು ಅವನ ಆಸೆಯಾಗಿತ್ತು.

-ಜಗತ್ತಿನ ಅತ್ಯಂತ ದೊಡ್ಡ ವಜ್ರ ಅಕಸ್ಮಾತ್ ಸಿಕ್ಕಿದ್ದು ೧೯೦೫ರಲ್ಲಿ ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದ ಪ್ರೀಮಿಯರ್ ಗಣಿ ಸಂಖ್ಯೆ ೨ರಲ್ಲಿ. ಅದರ ತೂಕ ೩,೧೦೬ ಕ್ಯಾರೆಟ್ ಅಂದರೆ ೧.೭೫ ಪೌಂಡ್, ಆಗಿನ ಬೆಲೆ ೭,೫೦,೦೦೦ ಡಾಲರ್! ಅದನ್ನು ಸಾಮಾನ್ಯ ರಿಜಿಸ್ಟರ್ಡ್ ಅಂಚೆಯಲ್ಲಿ ಇಂಗ್ಲೆಂಡಿಗೆ ಕಳಿಸಲಾಯಿತು. ಆಗಿನ ದೊರೆ ಕಿಂಗ್ ಎಡ್ವರ್ಡ್ VII ಅದನ್ನು ಕಂಡು ಹೀಗೆಂದ: “ನಾನು ಇದನ್ನು ರಸ್ತೆಯಲ್ಲಿ ಕಂಡಿದ್ದರೆ, ಇದೊಂದು ಗಾಜಿನ ತುಂಡೆಂದು ಒದ್ದು ಬಿಡುತ್ತಿದ್ದೆ.” ಕುಲ್ಲಿನಾನ್ ಎಂಬ ಆ ಜಗತ್ಪ್ರಸಿದ್ಧ ವಜ್ರದಿಂದ ೧೦೫ ರತ್ನಗಳನ್ನು ಕತ್ತರಿಸಿ ತೆಗೆಯಲಾಯಿತು. ಅವುಗಳಲ್ಲಿ ಅತ್ಯಂತ ದೊಡ್ಡ ತುಂಡುಗಳು ೫೩೦ ಕ್ಯಾರೆಟಿನ “ಸ್ಟಾರ್ ಆಫ್ ಆಫ್ರಿಕಾ” ಮತ್ತು ೩೧೭ ಕ್ಯಾರೆಟಿನ “ಕುಲ್ಲಿನಾನ್II”  ಇವೆರಡೂ ಬ್ರಿಟಿಷ್ ರಾಜ ಕಿರೀಟದಲ್ಲಿವೆ.

-ಚಿನ್ನ ಅತ್ಯಂತ ಅಪರೂಪದ ಲೋಹ. ಕಳೆದ ಐದು ಶತಮಾನಗಳಲ್ಲಿ ಉತ್ಪಾದಿಸಲಾದ ಎಲ್ಲ ಚಿನ್ನವನ್ನು ಕರಗಿಸಿ ಒಂದು ಘನವಾಗಿ ಮಾಡಿದರೆ ಅದರ ಒಂದು ಬದಿಯ ಉದ್ದ ೫೦ ಅಡಿಗಳಾದೀತು.

-ಮಧ್ಯಕಾಲೀನ ಸಂಶೋಧಕರು ಸೀಸದಿಂದ ಚಿನ್ನ ತಯಾರಿಸುವ ವಿಧಾನ ಕಂಡು ಹಿಡಿದಿದ್ದರೆ, ಅದು ವೈಜ್ನಾನಿಕ ಸಾಧನೆ ಆಗುತ್ತಿತ್ತಾದರೂ ಆರ್ಥಿಕವಾಗಿ ನಷ್ಟವೇ ಆಗುತ್ತಿತ್ತು. ಯಾಕೆಂದರೆ. ಚಿನ್ನದ ದೊಡ್ಡ ಪರಿಮಾಣದ ಪೂರೈಕೆಯಿಂದಾಗಿ ಅದರ ಬೆಲೆ ಕುಸಿಯುತ್ತಿತ್ತು.

-ಫ್ರಾನ್ಸಿಸ್ಕೋ ಪಿಝಾರೊ ೧೫೩೨ರಲ್ಲಿ ಪೆರು ದೇಶಕ್ಕೆ ಸ್ಪೇಯ್ನಿನಿಂದ ಪರ್ಯಟನೆ ಹೋಗಿದ್ದ. ಅವನ ಸೈನಿಕರಿಗೆ  ಪಾರಿವಾಳ ಮೊಟ್ಟೆ ಗಾತ್ರದ ಪಚ್ಚೆಕಲ್ಲುಗಳು ಸಿಕ್ಕಿದವು. ಅವರಿಗೊಂದು ನಂಬಿಕೆ: ನಿಜವಾದ ಪಚ್ಚೆಕಲ್ಲುಗಳನ್ನು ಒಡೆಯಲು ಸಾಧ್ಯವಿಲ್ಲ ಎಂದು. ಆದ್ದರಿಂದ ಅವರು ಆ ಪಚ್ಚೆಕಲ್ಲುಗಳನ್ನು ಸುತ್ತಿಗೆಯಿಂದ ಬಡಿದರು. ಅವು ಚೂರುಚೂರಾದಾಗ ಆ ಪಚ್ಚೆಕಲ್ಲುಗಳು ಹಸುರು ಬಣ್ಣದ ಗಾಜಿನ ತುಂಡುಗಳೆಂದು ತಪ್ಪು ತಿಳಿದರು!

-ಚಿನ್ನವನ್ನು ಬಡಿದುಬಡಿದು ಎಷ್ಟು ತೆಳು ಪದರವಾಗಿ ಮಾಡಬಹುದು ಗೊತ್ತೇ? ಒಂದು ಔನ್ಸ್ ಚಿನ್ನವನ್ನು ಒಂದು ಇಂಚಿನ ೧/೨,೮೨,೦೦೦ ಭಾಗಕ್ಕಿಂತ ತೆಳುವಾದ ಪದರವಾಗಿ ಮಾಡಿದಾಗ ಅದು ಒಂದು ನೂರು ಚದರಡಿ ಜಾಗದಲ್ಲಿ ಹರಡುತ್ತದೆ! ಚಿನ್ನವನ್ನು ಎಷ್ಟು ಸಪುರ ಸರಿಗೆ (ತಂತಿ)ಯಾಗಿ ಎಳೆಯಬಹುದು ಗೊತ್ತೇ? ಒಂದು ಔನ್ಸ್ ಚಿನ್ನವನ್ನು ೫೦ ಮೈಲು ಉದ್ದದ ಸರಿಗೆಯಾಗಿ ಎಳೆಯಬಹುದು!

-“ಟಿಶ್ಯೂ ಪೇಪರ್” ಎಂಬ ಹೆಸರು ಬಳಕೆಗೆ ಬರಲು ಕಾರಣ ಅದರ ಅನಾದಿ ಕಾಲದ ಬಳಕೆ. ಸೂಕ್ಷ್ಮ ಚಿನ್ನದ ನೂಲುಗಳಿಂದ ಹೆಣೆಯಲಾದ ಬಟ್ಟೆಯ ಪದರಗಳ ನಡುವೆ ಇಡಲಿಕ್ಕಾಗಿ “ಗೋಲ್ಡ್ ಟಿಶ್ಯೂ” ಎಂಬ ತೆಳುಕಾಗದ ಬಳಕೆಯಾಗುತ್ತಿತ್ತು.

-ಆಫ್ರಿಕಾದ ಸಾಮ್ರಾಜ್ಯ ಮಾಲಿಯ ರಾಜ ಮಾನ್ಸಾ ಮೂಸ (೧೩೧೨ - ೩೭) ಮಕ್ಕಾ ಯಾತ್ರೆಗೆ ಹೋಗುವಾಗ ತನ್ನ ಹಾದಿಯಲ್ಲಿ ಕೆಲವು ವಿಚಿತ್ರ ಸಮಸ್ಯೆಗಳಿಗೆ ಕಾರಣನಾದ. ಅವನ ೬೦,೦೦೦ ಸೈನಿಕರು, ರಾಜಮನೆತನದವರು ಮತ್ತು ಭಟರಿಗೆ ಆಹಾರ ಒದಗಿಸುವುದೇ ಬೃಹತ್ ಸಮಸ್ಯೆಯಾಗಿತ್ತು. ಅವನು ಕೈರೋದಲ್ಲಿ ಭಾರೀ ಪರಿಮಾಣದ ಚಿನ್ನವನ್ನು ದಾನವಾಗಿ ಕೊಟ್ಟ ಮತ್ತು ಖರ್ಚು ಮಾಡಿದ. ಇದರಿಂದಾಗಿ ಅಲ್ಲಿನ “ಗೋಲ್ಡ್ ಸ್ಟಾಂಡರ್ಡ್” ಸಮತೋಲನ ತಪ್ಪಿ ಹೋಗಿ, ಅಲ್ಲಿನ ಆರ್ಥಿಕತೆಯೇ ಕುಸಿಯಿತು!

ಫೋಟೋ ಕೃಪೆ: ಕೋರಾ.ಕಾಮ್ ಜಾಲತಾಣ