ಹೀಗೂ ಉಂಟೇ! ಝಗಮಗಿಸುವ ಸೊತ್ತುಗಳ ಸಂಗತಿ (2)

ಹೀಗೂ ಉಂಟೇ! ಝಗಮಗಿಸುವ ಸೊತ್ತುಗಳ ಸಂಗತಿ (2)

-ಜಪಾನಿನ ನಾರಾ ಎಂಬಲ್ಲಿರುವ ತೊಡೈಜಿ ಬೌದ್ಧ ಗುರುಕುಲದ ವಿಶಾಲ ಸಭಾಂಗಣವನ್ನು ಎಂಟನೆಯ ಶತಮಾನದ ಮಧ್ಯಕಾಲದಲ್ಲಿ ನಿರ್ಮಿಸಲಾಯಿತು. ಐವತ್ತಮೂರು ಅಡಿ ಎತ್ತರದ ಬುದ್ಧನ ಭವ್ಯ ಕಂಚಿನ ಮೂರ್ತಿ ಅಲ್ಲಿದೆ. ಹತ್ತು ಲಕ್ಷ ಪೌಂಡುಗಳಿಗಿಂತ ಅಧಿಕ ತೂಕದ ಈ ಮೂರ್ತಿಗೆ ಕಾಲು-ಟನ್ ತೂಕದ ಚಿನ್ನದಿಂದ ಲೇಪ ನೀಡಲಾಗಿದೆ.

-“ವೆಲ್‌ಕಮ್ ಸ್ಟ್ರೇಂಜರ್” ಎಂಬ ಹೆಸರಿನ ಚಿನ್ನದ ತುಂಡು ಈ ವರೆಗೆ ಸಿಕ್ಕಿದ ಅತ್ಯಧಿಕ ತೂಕದ ಚಿನ್ನದ ತುಂಡು. ಅದರ ತೂಕ ೨೦೦ ಪೌಂಡುಗಳಿಗಿಂತ ಜಾಸ್ತಿ. ಆಸ್ಟ್ರೇಲಿಯಾದ ಬಲ್ಲಾರಾಟ್ ಎಂಬಲ್ಲಿ ೧೮೬೯ರಲ್ಲಿ ಇದನ್ನು ಪತ್ತೆ ಮಾಡಿದವರು ಜಾನ್ ಡೀಸನ್ ಮತ್ತು ರಿಚರ್ಡ್ ಓಟ್ಸ್.

-ಈಗ ಸಿಕ್ಕಿರುವ ಪ್ರತಿಯೊಂದು ಔನ್ಸ್ ಚಿನ್ನಕ್ಕಾಗಿ ಗಣಿಗಾರರು ೨.೫ ಮೈಲು ಆಳದ ವರೆಗೂ ಭೂಮಿಯನ್ನು ಅಗೆದಿದ್ದಾರೆ!

-ಬ್ರಿಟಿಷ್ ಪರ್ಯಟನಗಾರ ಮಾರ್ಟಿನ್ ಫ್ರೊಬಿಷರ್ ೧೫೭೮ರಲ್ಲಿ ಬಾಫಿನ್ ದ್ವೀಪದಿಂದ ೨೦೦ ಟನ್ ಹೊಳೆಯುವ ಚಿನ್ನದ ಅದಿರಿನೊಂದಿಗೆ ಹಿಂತಿರುಗಿದಾಗ, ಅವನಿಂದಾಗಿ ಬ್ರಿಟನಿನಲ್ಲಿ "ಚಿನ್ನದ ಹುಚ್ಚು” ಹಬ್ಬಿತು. ಅದರಿಂದ ಹೆಚ್ಚೆಚ್ಚು ಚಿನ್ನ ಪಡೆಯಲಿಕ್ಕಾಗಿ ಭಾರೀ ಪ್ರಯತ್ನ ಮಾಡಲಾಯಿತು. ಆದರೆ ಆ ಅದಿರು ಕಬ್ಬಿಣದ ಪೈರೈಟ್ (“ಮೂರ್ಖರ ಚಿನ್ನ”) ಆಗಿತ್ತು. ಕೊನೆಗೆ ಅದನ್ನು ಪುಡಿಪುಡಿ ಮಾಡಿ ರಸ್ತೆಗಳ ರಿಪೇರಿಗೆ ಬಳಸಲಾಯಿತು.

-ಮಧ್ಯಕಾಲೀನ ಚಿನ್ನದ ಅನ್ವೇಷಕರು ಅಗ್ಗದ ಲೋಹಗಳಿಂದ ಚಿನ್ನವನ್ನು ತಯಾರಿಸುವ ವಿಧಾನಗಳನ್ನು ಹುಡುಕಲು ಹೆಣಗಾಡಿದರು. ಅವರು ತಮ್ಮ ಪ್ರಯತ್ನಗಳಲ್ಲಿ ಯಶಸ್ವಿಯಾಗಲಿಲ್ಲ. ಅದಕ್ಕಾಗಿ ಅವರನ್ನು ಗೇಲಿ ಮಾಡಲಾಯಿತು. ಅದೇನಿದ್ದರೂ ತಮ್ಮ ಪ್ರಯತ್ನಗಳಿಂದಾಗಿ ಅವರು ಗಂಧಕದ ಆಮ್ಲ, ನೈಟ್ರಿಕ್ ಆಮ್ಲ ಮತ್ತು ಹೈಡ್ರೋಕ್ಲೋರಿಕ್ ಆಮ್ಲ -ಇವನ್ನು ಸಂಶೋಧಿಸಿದರು. ಆಧುನಿಕ ಕೈಗಾರಿಕೆಗಳಿಗೆ ಈ ತೀಕ್ಷ್ಣ ಆಮ್ಲಗಳು ಬಹಳ ಪ್ರಯೋಜನಕಾರಿ - ಚಿನ್ನಕ್ಕಿಂತಲೂ ಹೆಚ್ಚು ಪ್ರಯೋಜನಕಾರಿ. ಇದಕ್ಕಾಗಿ ಅವರನ್ನು ಅಭಿನಂದಿಸುವವರು ಯಾರೂ ಇಲ್ಲ!

-ಸಾಗರಗಳ ನೀರಿನಲ್ಲಿ ಕರಗಿರುವ ಚಿನ್ನದ ಪರಿಮಾಣ ೯ ದಶಲಕ್ಷ ಟನ್ ಎಂದು ಅಂದಾಜಿಸಲಾಗಿದೆ. ಇದು ಮಾನವನ ಚರಿತ್ರೆಯಲ್ಲಿ ಅಗೆದು ತೆಗೆಯಲಾದ ಚಿನ್ನದ ಪರಿಮಾಣದ ೧೮೦ ಪಟ್ಟು! ಆದರೆ, ಸಾಗರಗಳಲ್ಲಿರುವ ಚಿನ್ನ ನೀರಿನಲ್ಲಿ ಎಷ್ಟು ತೆಳುವಾಗಿ ಕರಗಿದೆಯೆಂದರೆ, ಅದನ್ನು ಬೇರ್ಪಡಿಸುವುದು ಲಾಭದಾಯಕವಲ್ಲ.

-ಒಂದೇ ರಾಸಾಯನಿಕ ಮೂಲವಸ್ತುವಿನಿಂದ (ಇಂಗಾಲದಿಂದ) ನಿರ್ಮಿತವಾಗಿರುವ ಬೆಲೆಬಾಳುವ ಕಲ್ಲು ವಜ್ರ. ಇದು ಸ್ಫಟಿಕಶುದ್ಧವಾಗಿದ್ದರೂ ಬೆಂಕಿಯಿಂದ ಸುಟ್ಟು ಧೂಳಾದಾಗ ಇದರ ಬಣ್ಣ ಕಪ್ಪು. ೧,೪೦೦ ಡಿಗ್ರಿಯಿಂದ ೧,೬೦೭ ಡಿಗ್ರಿ ಫ್ಯಾರನ್-ಹೀಟ್ ಉಷ್ಣತೆಯಲ್ಲಿ ವಜ್ರ ಸುಟ್ಟು ಹೋಗುತ್ತದೆ. ಹಾಗಂತ ನಿಮ್ಮ ವಜ್ರಗಳ ಬಗ್ಗೆ ಚಿಂತೆ ಮಾಡಬೇಡಿ. ಯಾಕೆಂದರೆ, ಬೆಂಕಿ ಬಿದ್ದ ಕಟ್ಟಡಗಳಲ್ಲಿ ಇಷ್ಟು ತೀವ್ರ ಉಷ್ಣತೆ ಉಂಟಾಗುವುದಿಲ್ಲ. ಭಯಂಕರ ಬೆಂಕಿ ಅವಘಡ ಆದಾಗ ಮಾತ್ರ (ಉದಾಹರಣೆಗೆ ೧೯೦೬ರಲ್ಲಿ ಸ್ಯಾನ್-ಫ್ರಾನ್ಸಿಸ್ಕೋದಲ್ಲಿ ಆದಂತೆ) ಉಷ್ಣತೆ ತೀವ್ರವಾಗಿ ಏರುತ್ತಾ ೨,೨೦೦ ಡಿಗ್ರಿ ಫ್ಯಾರನ್-ಹೀಟ್ ತಲಪಬಹುದು.

-ಸ್ಪೇಯ್ನ್ ದೇಶದವರು ದಕ್ಷಿಣ ಅಮೇರಿಕಾವನ್ನು ಆಕ್ರಮಿಸುವ ತನಕ ಅಲ್ಲಿನ ಇಂಕಾ ಜನಾಂಗದವರಿಗೆ ಕಬ್ಬಿಣ ಎಂದರೇನೆಂದು ಗೊತ್ತಿರಲಿಲ್ಲ. ಅವರ ಬಳಿ ದೊಡ್ಡ ಪರಿಮಾಣದಲ್ಲಿ ಚಿನ್ನವಿತ್ತು. ಅದನ್ನೇ ಅಲಂಕಾರಕ್ಕಾಗಿ ಮತ್ತು ದಿನನಿತ್ಯದ ಬಳಕೆಯ ವಸ್ತುಗಳ ತಯಾರಿಗಾಗಿ ಬಳಸುತ್ತಿದ್ದರು - ಮೊಳೆಗಳು, ಪಾತ್ರೆಗಳು, ಬಾಚಣಿಗೆಗಳು ಇತ್ಯಾದಿ.

-ಈಜಿಪ್ಟಿನ ಜನರು ತಮ್ಮ ಆರ್ಥಿಕತೆ ಕುಸಿಯಲು ತಾವೇ ಕಾರಣರಾಗುತ್ತಿದ್ದರು - ತಮ್ಮ ನಾಯಕರು ಸತ್ತಾಗ ಅವರ ಹೆಣದೊಂದಿಗೆ ಚಿನ್ನ ಮತ್ತು ಬೆಳ್ಳಿ ಹುಗಿಯುವ ಮೂಲಕ (ಮರಣಾನಂತರ ಅವರ ಬಳಕೆಗೆ ಬೇಕೆಂಬ ನಂಬಿಕೆಯಿಂದ). ಆದರೆ ಸಮಾಧಿಗಳನ್ನು ಅಗೆಯುವ ಕಳ್ಳರು, ಹಾಗೆ ಹುಗಿದ ಚಿನ್ನ ಮತ್ತು ಬೆಳ್ಳಿಯ ಬಹುಪಾಲನ್ನು ಕದ್ದು ಮಾರುವ ಮೂಲಕ ಆರ್ಥಿಕತೆಗೆ ಬಲ ನೀಡುತ್ತಿದ್ದರು!

-ದಕ್ಷಿಣ ಆಫ್ರಿಕಾದ ರಾಂಡ್ ಗ್ರೂಪ್ ಗಣಿಗಳಲ್ಲಿ, ಪ್ರತಿ ವರುಷ ೪೦೦ ಟನ್ ಚಿನ್ನ ಪಡೆಯಲಿಕ್ಕಾಗಿ ೬೦ ದಶಲಕ್ಷ ಟನ್ನುಗಳಿಗೂ ಅಧಿಕ ಅದಿರನ್ನು ಎತ್ತ ಸಂಸ್ಕರಿಸುತ್ತಾರೆ. ಆ ಅದಿರಿನ ಗಾತ್ರ ಈಜಿಪ್ಟಿನ ಗೀಜಾದ ಗ್ರೇಟ್ ಪಿರಮಿಡ್ಡಿಗೆ ಸಮಾನ! ಅಷ್ಟೆಲ್ಲ ಹೆಣಗಾಡಿ ಪಡೆಯುವ ಚಿನ್ನದ ಗಾತ್ರ ಕೇವಲ ಒಂಭತ್ತು ಅಡಿ ಅಳತೆಯ ಘನ!