ಹೀಗೂ ಉಂಟೇ! ದುರಂತಗಳು (ಭಾಗ ೧)

ಹೀಗೂ ಉಂಟೇ! ದುರಂತಗಳು (ಭಾಗ ೧)

೧.ಇಪ್ಪತ್ತನೆಯ ಶತಮಾನದಲ್ಲಿ ಎರಡು ಬೃಹತ್ ಕಾಯಗಳು ಆಕಾಶದಿಂದ ಭೂಮಿಗೆ ಬಿದ್ದವು. ಅವುಗಳ ಆಘಾತ ಒಂದು ನಗರವನ್ನೇ ಧ್ವಂಸ ಮಾಡಲು ಸಾಕಾಗಿತ್ತು. ೧೯೦೮ರಲ್ಲಿ ಮತ್ತು ೧೯೪೭ರಲ್ಲಿ ಸೈಬೀರಿಯಾದ ನಿರ್ಜನ ಪ್ರದೇಶಕ್ಕೆ ಅವು ಅಪ್ಪಳಿಸಿದ ಕಾರಣ ಯಾವ ಮನುಷ್ಯನೂ ಸಾಯಲಿಲ್ಲ.

೨.ಹಿಮಪರ್ವತಗಳಲ್ಲಿ ರೂಪುಗೊಂಡಿರುವ ಹಿಮಪಾತವು, ಒಂದು ದೊಡ್ಡ ಶಬ್ದದಿಂದುಂಟಾಗುವ ವಾಯುಕಂಪನಗಳಿಂದಾಗಿ ತಕ್ಷಣವೇ ಸಂಭವಿಸಬಹುದು. ಮೊದಲ ಮಹಾಯುದ್ಧದಲ್ಲಿ  ೧೯೧೬ರಲ್ಲಿ ಹೀಗಾಯಿತು: ಆಲ್ಫ್ ಪರ್ವತಗಳಲ್ಲಿ ಠಿಕಾಣಿ ಹೂಡಿದ್ದ ಆಸ್ಟ್ರಿಯನ್ ಸೈನ್ಯ ಫಿರಂಗಿಗಳನ್ನು ಉಡಾಯಿಸಲು ಶುರು ಮಾಡಿದಾಗ ಭಾರೀ ಹಿಮಪಾತವಾಯಿತು. ಇದರಿಂದಾಗಿ ಸಾವಿರಾರು ಸೈನಿಕರು ಹಿಮದಲ್ಲಿ ಹೂತು ಸತ್ತು ಹೋದರು.

೩.ಸರಾಸರಿ ವೇಗದಲ್ಲಿ ಸಾಗುತ್ತಿರುವ, ಪೂರ್ಣ ಭಾರ ಹೊತ್ತಿರುವ ಒಂದು ಸೂಪರ್ ಟ್ಯಾಂಕರನ್ನು ನಿಲ್ಲಿಸಲು ಎಷ್ಟು ಸಮಯ ತಗಲುತ್ತದೆ? ಕನಿಷ್ಠ ೨೦ ನಿಮಿಷಗಳು ಬೇಕು. ಈ ಅವಧಿಯಲ್ಲಿ, ಅತ್ತಿತ್ತ ದಿಕ್ಕು ಬದಲಾಯಿಸಲು ಅವಕಾಶ ಇಲ್ಲದಿದ್ದರೆ ಮತ್ತು ಫಕ್ಕನೆ ಸಮುದ್ರದಲ್ಲಿ ಶಿಲೆಯಂತಹ ವಸ್ತುವೊಂದು ಮೂರು ಮೈಲು ದೂರದಲ್ಲಿ ಕಾಣಿಸಿಕೊಂಡರೂ ಟ್ಯಾಂಕರ್ ಮುನ್ನುಗ್ಗಿ ಅದಕ್ಕೆ ಬಡಿಯುತ್ತದೆ. ಚರಿತ್ರೆಯಲ್ಲಿ ಇಂತಹ ಹಲವಾರು ಅವಘಡಗಳು ಘಟಿಸಿವೆ.

೪.ಮೊದಲ ಜಲಜನಕ ಬಾಂಬನ್ನು ಪ್ರಯೋಗಾತ್ಮಕವಾಗಿ ಸ್ಫೋಟಿಸಿದ್ದು ೧೯೫೨ರಲ್ಲಿ. ಇದರ ಪರಿಣಾಮ ಹೇಗಿತ್ತು? ಎರಡನೇ ಮಹಾಯುದ್ಧದಲ್ಲಿ ಜರ್ಮನಿ ಮತ್ತು ಜಪಾನಿನ ಸುರಿದ ಎಲ್ಲ ಬಾಂಬುಗಳ (ಹಿರೋಷಿಮಾ ಮತ್ತು ನಾಗಸಾಕಿಗಳ ಮೇಲೆ ಸ್ಫೋಟಿಸಿದ ಅಣುಬಾಂಬುಗಳ ಸಹಿತ) ಪರಿಣಾಮಕ್ಕೆ ಸಮಾನವಾಗಿತ್ತು.

೫.ಉತ್ತರ ಫ್ರಾನ್ಸಿನಲ್ಲಿ ೧೯೦೬ರಲ್ಲಿ ಘಟಿಸಿದ ಕೊರಿಯರ್ಸ್ ಕಲ್ಲಿದ್ದಲು ಗಣಿ ದುರಂತದಲ್ಲಿ ೧,೦೦೦ಕ್ಕಿಂತ ಅಧಿಕ ಗಣಿ ಕಾರ್ಮಿಕರು ಬಲಿಯಾದರು. ಆ ದುರಂತದಲ್ಲಿ ಬದುಕಿ ಉಳಿದ ಗಣಿ ಕಾರ್ಮಿಕರು ತಾವು ನಾಲ್ಕೈದು ದಿನ ಕುಸಿದ ಗಣಿಯೊಳಗೆ ಸಿಕ್ಕಿ ಬಿದ್ದಿದ್ದೇವೆ ಎಂದು ಭಾವಿಸಿದ್ದರು. ನಿಜವಾಗಿ ಅವರು ಮೂರು ವಾರ ಗಣಿಯೊಳಗೆ ಸಿಕ್ಕಿ ಬಿದ್ದಿದ್ದರು!

ಫೋಟೋ ೧: ತೈಲ ಟ್ಯಾಂಕರ್ ಹಡಗು .... ಕೃಪೆ: ಡೆಪಾಸಿಟ್ ಫೋಟೋಸ್.ಕಾಮ್

ಫೋಟೋ ೨: ಕಲ್ಲಿದ್ದಲು ಗಣಿ .... ಕೃಪೆ: ಅನ್ ಸ್ಪ್ಲಾಷ್.ಕಾಮ್