ಹೀಗೂ ಉಂಟೇ! ದುರಂತಗಳು (ಭಾಗ 3)

ಹೀಗೂ ಉಂಟೇ! ದುರಂತಗಳು (ಭಾಗ 3)

೧೧.ಯು.ಎಸ್.ಎ. ದೇಶದ ಚರಿತ್ರೆಯಲ್ಲಿ ಅತ್ಯಂತ ಜಾಸ್ತಿ ನಷ್ಟ ಆದದ್ದು ೧೮ ಎಪ್ರಿಲ್ ೧೯೦೬ರ ಭೂಕಂಪದಿಂದ. ಆಗ ಭೂಮಿ ಕಂಪಿಸಿದ್ದು ಕೇವಲ ೪೭ ಸೆಕುಂಡು! ಅನಂತರ ಭುಗಿಲೆದ್ದ ಬೆಂಕಿ ಸಾನ್‌ಫ್ರಾನ್ಸಿಸ್ಕೋ ನಗರಕ್ಕೆ ಅಪಾರ ಹಾನಿ ಮಾಡಿತು. ಈ ಅನಾಹುತದಿಂದ ಸತ್ತವರು ಮತ್ತು ಕಾಣೆಯಾದವರು ೫೦೦ಕ್ಕಿಂತ ಅಧಿಕ. ಇದರಿಂದಾದ ಸೊತ್ತು ಹಾನಿ ೨೫೦ - ೩೦೦ ಮಿಲಿಯನ್ ಡಾಲರ್!

೧೨.ಇಪ್ಪತ್ತನೆಯ ಶತಮಾನದ ಅತ್ಯಂತ ದೊಡ್ಡ ಪ್ರಾಕೃತಿಕ ವಿಕೋಪ ಘಟಿಸಿದ್ದು ನವಂಬರ ೧೯೭೦ರಲ್ಲಿ - ಬಂಗಾಳ ಕೊಲ್ಲಿಯಿಂದ ನುಗ್ಗಿದ ಬಿರುಗಾಳಿ ಪೂರ್ವ ಪಾಕಿಸ್ಥಾನಕ್ಕೆ ಅಪ್ಪಳಿಸಿದಾಗ. ಇದಕ್ಕೆ ಬಲಿಯಾದವರು ಐದು ಲಕ್ಷಕ್ಕಿಂತ ಅಧಿಕ!

೧೩.ಟೈಟಾನಿಕ್ ಎಂಬ ದೈತ್ಯ ಹಡಗು ೧೯೧೨ರಲ್ಲಿ ಮುಳುಗಿದಾಗ ಪ್ರಾಣ ಕಳೆದುಕೊಂಡವರು ೧,೫೧೩ ಜನರು. (ಈ ದುರಂತದ ಚಲನಚಿತ್ರ "ಟೈಟಾನಿಕ್" ಭಾರೀ ಸುದ್ದಿ ಮಾಡಿತು.) ಬಹಳ ಜನರು ಸಮುದ್ರದಲ್ಲಿ ಘಟಿಸಿದ ಅತಿ ದೊಡ್ಡ ದುರಂತ ಇದು ಎಂದು ಭಾವಿಸಿದ್ದಾರೆ. ಅದು ಸರಿಯಲ್ಲ. ಸಮುದ್ರದ ಅತಿ ದೊಡ್ಡ ದುರಂತ ೨೨ ವರುಷಗಳ ನಂತರ ಘಟಿಸಿತು:  ವಿಲ್ಹೆಲ್ಮ್ ಗುಸ್ಟ್‌ಲೊಫ್ ಹೆಸರಿನ ಜರ್ಮನ್ ಹಡಗು ಬಾಲ್ಟಿಕ್ ಸಮುದ್ರದಲ್ಲಿ ಮುಳುಗಿದಾಗ - ರಷ್ಯನ್ ಜಲಾಂತರ್ಗಾಮಿ ಎಸ್-೧೩ರಿಂದ ಉಡಾಯಿಸಿದ ಟಾರ್ಪೆಡೋದಿಂದಾಗಿ. ಈ ಹಡಗಿನಲ್ಲಿದ್ದ ಸುಮಾರು ೮,೦೦೦ ಜನರು ಸತ್ತರು (ಟೈಟಾನಿಕ್ ದುರಂತದಲ್ಲಿ ಬಲಿಯಾದವರ ನಾಲ್ಕು ಪಟ್ಟು) - ಅವರಲ್ಲಿ ಬಹುಪಾಲು ಮಹಿಳೆಯರು ಮತ್ತು ಮಕ್ಕಳು.

೧೪.”ಗ್ರೇಟ್ ಚಿಕಾಗೋ ಫೈರ್" ೧೮೭೧ರಲ್ಲಿ ೩೦೦ ಜನರನ್ನು ಬಲಿ ತೆಗೆದುಕೊಂಡು, ಜಗತ್ತಿನಲ್ಲೆಲ್ಲ ಭಾರೀ ಸುದ್ದಿಯಾಯಿತು. . ಅದೇ ಸಮಯದಲ್ಲಿ ಉತ್ತರ ದಿಕ್ಕಿನಲ್ಲಿ ೨೦೦ ಮೈಲುಗಳ ದೂರದಲ್ಲಿ ವಿಸ್ಕೋನ್‌ಸಿನ್ನಿನ ಪೆಶ್ಟಿಗೋದಲ್ಲಿ ಇದಕ್ಕಿಂತಲೂ ದೊಡ್ಡ ಬೆಂಕಿ ೬೦೦ ಜನರನ್ನು ಕೊಂದಿತು. ಆದರೆ ಇದು ದೊಡ್ಡ ಸುದ್ದಿಯಾಗಲೇ ಇಲ್ಲ!

೧೫.ಕ್ರಕಟೋವಾ ಎಂಬ ಅಗ್ನಿಪರ್ವತ ದ್ವೀಪ ೧೮೮೩ರಲ್ಲಿ ಸ್ಫೋಟಿಸಿದಾಗ, ೫೦ರಿಂದ ೧೦೦ ಅಡಿ ಎತ್ತರದ ಸಾಗರದ ಅಲೆಗಳು ಪಕ್ಕದ ದ್ವೀಪಗಳ ಕರಾವಳಿಯ ನಗರಗಳಿಗೆ ನುಗ್ಗಿ ೩೬,೦೦೦ಕ್ಕಿಂತ ಅಧಿಕ ಜನರ ಸಾವಿಗೆ ಕಾರಣವಾದವು. ಈ ಸ್ಫೋಟದಲ್ಲಿ ಆಕಾಶಕ್ಕೆ ಚಿಮ್ಮಿದ ಧೂಳು ಭೂಮಿಯ ಬಹುಭಾಗದಲ್ಲಿ ಹರಡಿತು. ಸ್ಫೋಟಕ್ಕಿಂದ ಮುಂಚೆ, ಸಮುದ್ರಮಟ್ಟಕ್ಕಿಂತ ೧,೪೦೦ ಅಡಿ ಎತ್ತರದ ಪರ್ವತವಿದ್ದ ಜಾಗದಲ್ಲಿ, ಈಗ ೧,೦೦೦ ಅಡಿಗಿಂತ ಆಳದ ಕುಳಿಯಿದೆ.

ಫೋಟೋ ೧: ಟೈಟಾನಿಕ್ ನೌಕೆ .... ಕೃಪೆ: ವಿಕಿಪೀಡಿಯಾ

ಫೋಟೋ ೨: ಕ್ರಕಟೋವಾ ಅಗ್ನಿಪರ್ವತ .... ಕೃಪೆ: ಸಿಂಪಲ್ ವಿಕಿಪೀಡಿಯಾ