ಹೀಗೂ ಉಂಟೇ! ದ್ರವಗಳ ಸಂಗತಿ (ಭಾಗ 1)
೧.ದಕ್ಷಿಣ ಅಮೇರಿಕಾದ ಅಮೆಜಾನ್ ನದಿ ಎಷ್ಟು ಅಗಲವಾಗಿದೆಯೆಂದರೆ, ಅದು ಭೂಮಿಯಲ್ಲಿ ಚಲಿಸುತ್ತಿರುವ ಒಟ್ಟು ನೀರಿನ ಐದನೆಯ ಒಂದು ಭಾಗದಷ್ಟು ನೀರನ್ನು ಕ್ಷಣಕ್ಷಣವೂ ಅಟ್ಲಾಂಟಿಕ್ ಸಾಗರಕ್ಕೆ ಸುರಿಯುತ್ತಿದೆ! ಜೊತೆಗೆ ಅಮೆಜಾನ್ ಭೂಮಿಯ ಅತ್ಯಂತ ಉದ್ದವಾದ ನದಿಯೂ ಆಗಿದೆ (ಅದರ ಉದ್ದ ೪,೨೦೦ ಮೈಲುಗಳೆಂದು ಅಂದಾಜಿಸಲಾಗಿದೆ.) ಈ ಅಗಾಧ ನದಿ ೨೭,೭೨,೦೦೦ ಚದರ ಮೈಲು ಜಾಗವನ್ನು ಆವರಿಸಿದೆ. ಹಾಗೂ ಅತ್ಯಧಿಕ ನೀರನ್ನು (ಸೆಕೆಂಡಿಗೆ ೭೨,೦೦,೦೦೦ ಘನ ಅಡಿ) ಸಾಗರಕ್ಕೆ ಸೇರಿಸುತ್ತಿದೆ! ಯು.ಎಸ್.ಎ. ದೇಶದ ವಿಸ್ತೀರ್ಣಕ್ಕೆ ಸಮಾನವಾದ ಪ್ರದೇಶದಿಂದ ನೀರನ್ನು ಅಮೆಜಾನ್ ನದಿ ಸಾಗರಕ್ಕೆ ಒಯ್ಯುತ್ತಿದೆ.
೨.ದಕ್ಷಿಣ ರಷ್ಯಾದ ಮರುಭೂಮಿಯ ಬಲ್ಕಾಶ್ ಸರೋವರದ ಉದ್ದ ೩೬೦ ಮೈಲು. ಅದರ ಪಶ್ಚಿಮ ತುದಿಯ ನೀರು ತಾಜಾ ಆಗಿದೆ; ಆದರೆ ಪೂರ್ವ ತುದಿಯ ನೀರು ಉಪ್ಪಾಗಿದೆ. ಸರೋವರದ ಎರಡು ಭಾಗಗಳು ಮರಳಿನ ದಿಬ್ಬದಿಂದ ಪ್ರತ್ಯೇಕಿಸಲ್ಪಟ್ಟಿವೆ. ಪಶ್ಚಿಮ ಭಾಗಕ್ಕೆ “ಲಿ" ಎಂಬ ನದಿ ನೀರು ಸುರಿಯುತ್ತಿದೆ. ಉಳಿದರ್ಧ ಭಾಗದ ವಿಸ್ತೀರ್ಣ ನೀರಿನ ಭಾಷ್ಪೀಭವನದಿಂದಾಗಿ ಕಡಿಮೆಯಾಗುತ್ತಿದೆ; ಖನಿಜಗಳ ಪ್ರಮಾಣ ಹೆಚ್ಚುತ್ತಿರುವುದೂ ನೀರು ಉಪ್ಪಾಗಲು ಒಂದು ಕಾರಣ.
೩.ಅಮೆಜಾನ್ ನದಿಗೆ ೧,೧೦೦ ಉಪನದಿಗಳಿವೆ!
೪.ವೆನಿಜುವೆಲಾ ದೇಶದ ಸಾಲ್ಟೋ ಆಲ್ಟೋ (ಏಂಜೆಲ್ ಜಲಪಾತ) ಭೂಮಿಯ ಅತ್ಯಂತ ಎತ್ತರದ ಜಲಪಾತ. ಇದರ ಎತ್ತರ ಪ್ರಸಿದ್ಧ ನಯಾಗಾರ ಜಲಪಾತದ ಎತ್ತರದ ಇಪ್ಪತ್ತು ಪಟ್ಟು!
೫.ಭೂಮಿಯ ವಾತಾವರಣದಲ್ಲಿರುವ ಎಲ್ಲ ತೇವಾಂಶವನ್ನು ಒಂದೇಟಿಗೆ ನೀರಾಗಿ ಪರಿವರ್ತಿಸಿದರೆ ಎಷ್ಟು ನೀರು ಸಿಕ್ಕೀತು? ಇಡೀ ಯು.ಎಸ್.ಎ. ದೇಶವನ್ನು ೨೫ ಅಡಿ ಆಳದ ನೀರಿನಿಂದ ಆವರಿಸುವಷ್ಟು!
೬.ಆರ್ಕಟಿಕ್ ಸಾಗರದ ತಳವು (೨.೮ ಮೈಲು ಆಳ) ಅತ್ಯಂತ ಆಳವಾದ ಮಿನ್‌ದನಾವೋ ಕಣಿವೆಗಿಂತ (ಇದು ಸಮುದ್ರಮಟ್ಟಕ್ಕಿಂತ ೬.೮ ಮೈಲು ಆಳವಾಗಿದೆ.) ಭೂಮಿಯ ಕೇಂದ್ರಕ್ಕೆ ೯ ಮೈಲು ಹತ್ತಿರವಾಗಿದೆ.
ಫೋಟೋ ೧: ಅಮೆಜಾನ್ ನದಿ
ಫೋಟೋ ೨: ಏಂಜೆಲ್ ಜಲಪಾತ
ಎರಡೂ ಫೋಟೋ ಕೃಪೆ: ಡ್ರೀಮ್ಸ್ ಟೈಮ್ ಡಾಟ್ ಕಾಮ್